ಓಂ ಘಂಟಾನಾದಂ, ಝೇಂಕಾರ ಸ್ವರಂ
ಸಪ್ತಸ್ವರ ದೇವನಾದಂ
ಓಂ ಸೂರ್ಯೋದಯಂ, ಸುಪ್ರಭಾತ ಪೂಜಾ ಸಮಯಂ
ಸುಮಧುರ ನಾದಂ ಓಂ ದೇವಸುತನಂ
ಸ್ನೇಹಪರ ಪೂಜಿಪ ಸಮಯಂ
ಅಭಿಷಕ್ತಂ, ಅನಂತಂ, ಓಂ ಶಾಂತಿ, ಶಾಂತಿ ಶಾಂತಿಃ...
ಅರುಣೋದಯಕ್ಕೆ ಮುನ್ನವೇ ಶಿವಾಜಿನಗರದ ಸಂತ ಮೇರಿ ಚರ್ಚ್‌ನಲ್ಲಿ ಝೇಂಕರಿಸುವ ಘಂಟೆಯ ನಿನಾದವು ಭಕ್ತರನ್ನು ಪ್ರಾತಃಕಾಲದ ಪೂಜಾರಾಧನೆಗೆ ಆಹ್ವಾನಿಸುತ್ತದೆ.ಆಗಸ್ಟ್ 29ರಂದು ಸಂಜೆ ಸಂತ ಆರೋಗ್ಯಮಾತೆಯ ಧ್ವಜವನ್ನು ಹಾರಿಸುವ ಮೂಲಕ ಸಂತ ಮೇರಿ ಜಯಂತಿ ಆರಂಭವಾಯಿತು. ಸೆ.7ರವರೆಗೆ ಅಂದರೆ ಒಟ್ಟು 9 ದಿನ ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರ ಪೂಜೆ ಹಾಗೂ ವಿಶೇಷ ಪ್ರಾರ್ಥನೆಗಳು ನಡೆದುವು.
ಇಂದು (ಸೆ.8) ಮೇರಿ ಜಯಂತಿ ವಿಜೃಂಭಣೆಯಿಂದ ನಡೆಯಲಿದೆ. ಈ ಉತ್ಸವದಲ್ಲಿ ಕ್ರೈಸ್ತರಷ್ಟೇ ಅಲ್ಲದೇ, ಬೇರೆ ಧರ್ಮ –ಜಾತಿಯ ಜನರೂ ಸಂಭ್ರಮದಿಂದ ಪಾಲ್ಗೊಳ್ಳುವುದು ವಿಶೇಷ. ಮೇರಿ ಪ್ರತಿಮೆಯ ಮುಂದೆ ಮೊಂಬತ್ತಿ ಬೆಳಗಿಸುವುದು, ಕಾವಿ ಬಟ್ಟೆ ತೊಟ್ಟು ಹರಕೆ, ಕಾಣಿಕೆಗಳನ್ನು ಸಲ್ಲಿಸುವುದು ಸೇರಿದಂತೆ ಹಲವು ಬಗೆಯ ಸಾಂಪ್ರದಾಯಿಕ ಆಚರಣೆಗಳು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿವೆ.
ಜಗತ್ತಿನಾದ್ಯಂತ ಹರಡಿರುವ ಭಕ್ತ ಸಮೂಹವು ಸಂತ ಮೇರಿಯನ್ನು ವಿವಿಧ ರೂಪ ಮತ್ತು ಹೆಸರಿನಲ್ಲಿ ಪೂಜಿಸಿ ಗೌರವಿಸುತ್ತದೆ. ಸೆ.8ರಂದು ಮೇರಿ ಮಾತೆಯ ಜಯಂತಿಯನ್ನು ಆಚರಿಸಲಾಗುತ್ತದೆ.
ಕ್ರಿ.ಶ. 475ರಲ್ಲಿ ಕಾನ್ಸ್‌ಸ್ಟಾಂಟಿನೋಪಲ್‌ನಲ್ಲಿ ಮೇರಿ ಜಯಂತಿ ಮೊದಲು ಆಚರಣೆಗೆ ಬಂತು ಎಂಬ ಪ್ರತೀತಿ ಇದೆ. ಮುಂದಿನ ಶತಮಾನಗಳಲ್ಲಿ ಈ ಹಬ್ಬದ ಬಗ್ಗೆ ಚರಿತ್ರೆ ಅನೇಕ ನಿದರ್ಶನಗಳನ್ನು ಕೊಡುತ್ತದೆ. 13ನೇ ಶತಮಾನದಲ್ಲಿ ಪೂರ್ವ ಹಾಗೂ ಪಶ್ಚಿಮ ದೇಶಗಳಲ್ಲಿ ಮೇರಿ ಮಾತೆ ಜಯಂತಿಯ ಆಚರಣೆಗೆ ಸಾಂಪ್ರದಾಯಕ ಮುನ್ನುಡಿ ಸಿಕ್ಕಿತು. ಪೋರ್ಚುಗೀಸರ ಆಗಮನದೊಂದಿಗೆ ಭಾರತದ ಕ್ರೈಸ್ತರಲ್ಲೂ ಮೇರಿ ಮಾತೆಯ ಜಯಂತಿ ‘ಮೊಂತ್ ಮರಿಯ’ ಅಥವಾ ‘ಬೆಟ್ಟದ ಮರಿಯಮ್ಮ’ ಎಂಬ ಹೆಸರಿನಿಂದ ಆಚರಣೆಗೆ ಬಂತು.
ಗೋವಾ, ಮಹಾರಾಷ್ಟ್ರ ಮತ್ತು ದಕ್ಷಿಣ ಕನ್ನಡದ ಕ್ರೈಸ್ತರಲ್ಲಿ ಇದು ಸುಗ್ಗಿ ಹಬ್ಬದ ಆಚರಣೆ. ಕರಾವಳಿ ಕ್ರೈಸ್ತರು ತಾವು ಬೆಳೆದ ಬೆಳೆಗಳನ್ನು ಮೇರಿ ಮಾತೆಯ ಮುಂದೆ ಅರ್ಪಿಸಿ ಕುಟುಂಬದಲ್ಲಿ ಶಾಂತಿ ಸಮಾಧಾನ ನೆಲೆಸಲು ಅನುಗ್ರಹ ಕೋರುತ್ತಾರೆ. ಧಾನ್ಯದ ತೆನೆಗಳನ್ನು ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಹಂಚಿ ಅವರೊಡನೆ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಅಂದು ಮನೆಗಳಲ್ಲಿ ಶುದ್ಧ ಸಸ್ಯಾಹಾರವನ್ನಷ್ಟೇ ಸೇವಿಸುವುದು ಪದ್ಧತಿ. ಒಂಬತ್ತು ದಿನಗಳವರೆಗೆ ಹರಡಿರುವ ಭಕ್ತಿಯ ಸಿದ್ಧತಾ ಕಾರ್ಯದಲ್ಲಿ ಪುಷ್ಪಾರ್ಪಣೆ, ಗೀತಾರ್ಚನೆ ಪ್ರಮುಖ ಆಕರ್ಷಣೆ. ಈ ದಿನಗಳಲ್ಲಿ ಭಕ್ತರು ಹೂಗಳನ್ನು, ಮೊಂಬತ್ತಿಗಳನ್ನು ದೇವಾಲಯಕ್ಕೆ ತಂದು ಹಾಡುತ್ತಾ, ಪ್ರಾರ್ಥಿಸುತ್ತಾ ಮರಿಯ ಪ್ರತಿಮೆಗೆ ಅರ್ಪಿಸುತ್ತಾರೆ.
ಶಿವಾಜಿನಗರದ ಸಂತ ಮೇರಿ ಚರ್ಚ್ ಇತಿಹಾಸ
ಶಿವಾಜಿನಗರದಲ್ಲಿ ಪ್ರಸ್ತುತ ‘ಸಂತ ಮೇರಿ ಕಿರು ಮಹಾ ದೇವಾಲಯ’ ಎಂದು ಕರೆಸಿಕೊಳ್ಳುವ ಈ ಚರ್ಚ್, ಕಾಲ ಕಾಲಕ್ಕೆ ಅನೇಕ ರೂಪಾಂತರಗಳನ್ನು ಹೊಂದಿ ಈಗ ‘ಪುಣ್ಯಕ್ಷೇತ್ರ’ ಎಂದು ಕರೆಸಿಕೊಂಡಿದೆ.
18ನೇ ಶತಮಾನದ ಆರಂಭದಲ್ಲಿ ‘ಅಮಲೋದ್ಭವ ಮಾತೆ’ ಎಂಬ ಹೆಸರಿನೊಂದಿಗೆ ಆರಂಭಗೊಂಡ ಚರ್ಚ್ 19ನೇ ಶತಮಾನದ ಆದಿಯಲ್ಲಿ ‘ಕಾಣಿಕ್ಯಮಾತೆ’ ಎಂಬ ಹೆಸರಿನೊಂದಿಗೆ ಪ್ರವರ್ಧಮಾನಕ್ಕೆ ಬಂತು.
19ನೇ ಶತಮಾನದ ಮಧ್ಯಭಾಗದಲ್ಲಿ ‘ಪ್ಲೇಗ್’ ಎಂಬ ಭಯಂಕರ ಕಾಯಿಲೆ ಕಾಣಿಸಿಕೊಂಡು ಮನುಕುಲದ ಸಾವಿಗೆ ಕರಾಳ ಭಾಷ್ಯ ಬರೆಯಿತು. ಸಹಸ್ರಾರು ಮಾನವ ಜೀವಿಗಳನ್ನು ಬಲಿ ತೆಗೆದುಕೊಂಡ ಈ ಕಾಯಿಲೆಯಿಂದ ಬೆಂಗಳೂರಿನ ಅರ್ಧದಷ್ಟು ಜನ ಸಂಖ್ಯೆ ಕುಗ್ಗಿತು ಎಂದು ದಾಖಲೆಗಳು ಹೇಳುತ್ತವೆ. ಪ್ಲೇಗ್ ಕಾಯಿಲೆ ನಿವಾರಣೆಗೆ ಸೂಕ್ತ ಔಷಧಿಗಳು ಆವಿಷ್ಕಾರಗೊಳ್ಳದ ಆ ಕಾಲದಲ್ಲಿ ಜನರು ದಿಕ್ಕುತೋಚದೆ ತಮ್ಮ ನಡುವೆಯೇ ನೆಲೆಸಿದ್ದ ‘ಕಾಣಿಕ್ಯ ಮಾತೆ’ಯ ಬಳಿಗೆ ತಮ್ಮನ್ನು ಸಾವಿನ ದವಡೆಯಿಂದ ಕಾಪಾಡುವಂತೆ ಮೊರೆಯಿಟ್ಟರು. ಮೇರಿ ಮಾತೆ ಭಕ್ತರ ನೆರವಿಗೆ ಬಂದು ಜನರನ್ನು ‘ಪ್ಲೇಗ್ ಮಾರಿ’ಯ ಹಿಡಿತದಿಂದ ಪಾರುಮಾಡಿದಳು ಎಂಬ ಪ್ರತೀತಿ ಇದೆ.
ಹೀಗೆ ಮಾರಕ ರೋಗದಿಂದ ತಮ್ಮನ್ನು ಕಾಪಾಡಿ ಹೊಸ ಬದುಕನ್ನು ಕರುಣಿಸಿ, ತಮಗೆಲ್ಲ ಉತ್ತಮ ಆರೋಗ್ಯವನ್ನು ನೀಡಿದ್ದಕ್ಕಾಗಿ, ಅಸ್ವಸ್ಥರಿಗೆ ಸ್ವಾಸ್ಥ್ಯ ಕರುಣಿಸುವ ‘ಕಾಣಿಕ್ಯ ಮಾತೆ’ ಯನ್ನು ಮುಂದೆ ಭಕ್ತರು ‘ಆರೋಗ್ಯ ಮಾತೆ’ ಎಂದು ಕರೆಯಲಾರಂಭಿಸಿದರು. ಹೀಗೆ ಅಂದಿನಿಂದ ಭಕ್ತರ ಪಾಲಿಗೆ ಮೇರಿ, ‘ಆರೋಗ್ಯ ಮಾತೆ’ ಎನಿಸಿಕೊಂಡಳು.
ಬೆಂಗಳೂರಿನ ಆರೋಗ್ಯ ಮಾತೆ ದೇವಾಲಯವು ಇಂದು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದ್ದು, ಜಾತಿ ಮತ ಭಾಷೆಗಳ ಅಂತರವಿಲ್ಲದೆ ಎಲ್ಲರೂ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿ ‘ಆರೋಗ್ಯ ಮಾತೆ’ಯ ದರ್ಶನ ಪಡೆಯುವುದು ವಿಶೇಷ.
ಚರ್ಚ್ ಸಮೀಪ ನೆಲೆಸಿರುವ ಮುಸ್ಲಿಮರು ಆರೋಗ್ಯ ಮಾತೆ ಹಬ್ಬದ ಗೌರವಾರ್ಥ ಜಯಂತಿಗೆ ಆಗಮಿಸುವ ಭಕ್ತರಿಗೆ ಉಚಿತ ಆಹಾರ ನೀಡುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ವಾಡಿಕೆ.
ಸೆ.8ರಂದು ಸಂಜೆ ಜರುಗುವ ಮೇರಿ ಪ್ರತಿಮೆಯ ಅಲಂಕೃತ ತೇರಿನ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿ ಭಕ್ತಿಯಿಂದ ಪ್ರಾರ್ಥನೆ ಪಟಿಸುತ್ತ ಮೆರವಣಿಗೆಯಲ್ಲಿ ಸಾಗಿ ಮೇರಿಗೆ ತಮ್ಮ ಅಂತಿಮ ಗೌರವ ಸಲ್ಲಿಸುತ್ತಾರೆ. ಮೆರವಣಿಗೆ ದೇವಾಲಯಕ್ಕೆ ಮರಳಿದ ಮೇಲೆ ಜಯಂತಿಗೆ ತೆರೆ ಬೀಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.