ನಾಲ್ಕೈದು ಎಕರೆ ಒಣ ಜಮೀನಿನಿಂದ ಸಿಗುವ ಹತ್ತು ಸಾವಿರ ರೂಪಾಯಿಗಳಲ್ಲಿ ವರ್ಷವಿಡೀ ಕುಟುಂಬ ತಕ್ಕಮಟ್ಟಿಗೆ ನೆಮ್ಮದಿಯಿಂದ ಇರುವ ಹಲವು ಉದಾಹರಣೆಗಳು ಈಗಲೂ ಹಳ್ಳಿಗಳಲ್ಲಿ ಕಾಣಸಿಗುತ್ತವೆ. ಅದೇ ನೂರು ಕಿಲೋಮೀಟರ್ ದೂರದಲ್ಲಿನ ಪಟ್ಟಣಗಳಲ್ಲಿ ತಿಂಗಳಿಗೆ ಅರ್ಧ ಲಕ್ಷ ಗಳಿಸಿದರೂ ನೆಮ್ಮದಿಗೆ ಪರದಾಡುವ, ಹುಡುಕಾಟ ನಡೆಸುವವರ ನಿದರ್ಶನಗಳೆಷ್ಟು ಬೇಕು?
ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರನ್ನು ಈ ಲೆಕ್ಕಾಚಾರ ಹಲವು ಸಲ ಕಾಡಿರುತ್ತದೆ. ಉತ್ತರ ಸಿಕ್ಕರೂ ತೀರಾ ಅಸ್ಪಷ್ಟ. ಬದುಕಿಗೆ ಹಣ ಮುಖ್ಯವೆಂಬುದು ಸೂರ್ಯನಷ್ಟೇ ಸತ್ಯ. ಹಣವಿದ್ದವರು ಶಾಂತಿ– ನೆಮ್ಮದಿಗಾಗಿ ತೊಳಲಾಡುವುದನ್ನು ನೋಡಿಯೂ ಆ ಹಣಕ್ಕಾಗಿ ಹುಡುಕಾಟ ನಡೆಸುತ್ತಿರುವವರು ಎಷ್ಟಿಲ್ಲ? ಇದೊಂಥರ ಲೆಕ್ಕವಿಲ್ಲದ ಲೆಕ್ಕಾಚಾರ!
ಈ ಲೆಕ್ಕಾಚಾರದ ಹಿಂದಿನ ‘ರಹಸ್ಯ’ವನ್ನು ಅಲ್ಪ ಪ್ರಮಾಣದಲ್ಲಾದರೂ ಭೇದಿಸುವಲ್ಲಿ ಕೆಲವರು ಸಫಲರೂ ಆಗಿದ್ದಾರೆ. ಪ್ರಕೃತಿಯಿಂದ ದೂರ ಸಾಗಿದಷ್ಟೂ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ನಿಸರ್ಗದ ಜತೆ ಹೆಜ್ಜೆ ಹಾಕಿದಂತೆಲ್ಲ ನೆಮ್ಮದಿ ಆತನ ಸಮೀಪ ಬರುತ್ತದೆ ಎಂಬ ಸರಳ ಪರಿಹಾರವನ್ನು ಅವರು ಮುಂದಿಟ್ಟಿದ್ದಾರೆ. ಇದು ಬೇರೆ ಯಾರೂ ಅಲ್ಲ, ಗಾಂಧೀಜಿ ಹೇಳಿದ್ದೇ ಅಲ್ಲವೇ?
ಜಾಗತಿಕ ಮಟ್ಟದಲ್ಲಿ ಹಲವು ಕ್ಷೇತ್ರಗಳಲ್ಲಿ ಖ್ಯಾತರಾದ ತಜ್ಞರು, ವಿಚಾರವಂತರು ಒಂದೆಡೆ ಸೇರಿ ನಡೆಸುವ ‘ಎಕನಾಮಿಕ್ಸ್ ಆಫ್ ಹ್ಯಾಪಿನೆಸ್’ ಸಮಾವೇಶದ ತಿರುಳು ಇದು. ಇಂಗ್ಲೆಂಡಿನ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಎಕಾಲಜಿ ಅಂಡ್ ಕಲ್ಚರ್ಸ್ (ಇಎಸ್‌ಇಸಿ) ಸಹಯೋಗದೊಂದಿಗೆ ಉದಯಪುರದ ಶಿಕ್ಷಾಂತರ ಹಾಗೂ ಬೆಂಗಳೂರಿನ ಭೂಮಿ ನೆಟ್‌ವರ್ಕ್ ಇದೇ ೧೫ರಂದು ನಗರದಲ್ಲಿ ಮೂರನೇ ಅಂತರರಾಷ್ಟ್ರೀಯ ಮಟ್ಟದ ‘ಎಕನಾಮಿಕ್ಸ್ ಆಫ್ ಹ್ಯಾಪಿನೆಸ್’ ಸಮಾವೇಶ ಹಮ್ಮಿಕೊಂಡಿದೆ. ಈ ‘ಖುಷಿ ಲೆಕ್ಕಾಚಾರ’ದ ಹಿಂದಿನ ಮರ್ಮವನ್ನು ತಿಳಿಸಲು ಹಲವು ದೇಶಗಳ ಚಿಂತಕರು ಇಲ್ಲಿಗೆ ಬರಲಿದ್ದಾರೆ. ಅಂದಹಾಗೆ, ಇದಕ್ಕಿಂತ ಮುನ್ನ ಈ ಸಮಾವೇಶ ಕ್ಯಾಲಿಫೋರ್ನಿಯಾ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದಿತ್ತು.
ಗುಂಪಿನಲ್ಲಿ ಎಲ್ಲರೂ ಸುಮ್ಮನಿದ್ದು ಒಬ್ಬರೇ ನಗುತ್ತಿದ್ದರೆ, ಅದರ ಬದಲಿಗೆ ಎಲ್ಲರೂ ನಗುತ್ತಿದ್ದರೆ ಅಲ್ಲಿನ ವಾತಾವರಣ ಹೇಗಿರಬಹುದು? ಅದೇ ರೀತಿ ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗುವ ಬದಲಿಗೆ ಹಂಚಿಕೆಯಾದರೆ ಆ ಸಮಾಜಕ್ಕೆ ನೆಮ್ಮದಿ ಸಿಕ್ಕೀತಲ್ಲವೇ? ಭೂಮಿಯ ಮೇಲಿನ ಎಲ್ಲ ಸಂಪತ್ತನ್ನೂ ಕಾರ್ಪೊರೇಟ್ ಜಗತ್ತು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ಬದಲಾಗಿ ಸಂಪನ್ಮೂಲಗಳು ಎಲ್ಲರಿಗೂ ಹಂಚಿಕೆಯಾದರೆ ಅದರಿಂದ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಬಹುರಾಷ್ಟ್ರೀಯ ಕಂಪೆನಿಗಳು ಸರ್ಕಾರಗಳನ್ನೇ ನಿಯಂತ್ರಿಸುವ ಇಂದಿನ ಕಾಲದಲ್ಲಿ ಇದೆಲ್ಲ ಸಾಧ್ಯವಾದೀತೆ? ‘ಖುಷಿ ಲೆಕ್ಕಾಚಾರ’ದ ಸಮಾವೇಶ ಅಂಥದೊಂದು ವಿಭಿನ್ನ ಸಾಧ್ಯತೆಯನ್ನು ತೋರಿಸುತ್ತದೆ.
‘ಮನುಷ್ಯನ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಸ್ಥಳೀಯ ಮಟ್ಟದಲ್ಲೇ ಇರುವವರೆಗೆ ಸಮಾಜ ನೆಮ್ಮದಿಯಿಂದ ಇತ್ತು. ಯಾವಾಗ ಜಾಗತೀಕರಣ ಕಾಲಿಟ್ಟಿತೋ, ಅಲ್ಲಿಗೆ ‘ಸ್ಥಳೀಯ’ ಎಂಬ ನೆಲೆಗಟ್ಟು ಹೋಗಿ ವಿಶ್ವವೇ ಒಂದು ಹಳ್ಳಿ ಎಂಬಂತಾಯಿತು. ಭಾರತದಂಥ ದೇಶ ಇದರಿಂದ ಅನುಭವಿಸುತ್ತಿರುವ ಕಷ್ಟನಷ್ಟಗಳು ಸರಿಯಾಗಿ ಲೆಕ್ಕಕ್ಕೆ ಸಿಗುತ್ತಿಲ್ಲ. ಸಾಂಪ್ರದಾಯಿಕ ನೆಲೆಗಟ್ಟಿನಿಂದ ಈ ದೇಶಗಳು ದೂರವಾಗುತ್ತಿವೆ’ ಎಂಬ ಆತಂಕ ಐಎಸ್‌ಇಸಿ ಸಂಸ್ಥಾಪಕಿ ಹೆಲೆನಾ ನೊರ್‌ಬರ್ಗ್ ಅವರದ್ದು.
ಈ ಅಪಾಯವನ್ನು ಗ್ರಹಿಸಿರುವ ಭಾರತದಂಥ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಪ್ರಭಾವಶಾಲಿಯಾದ ಜನಪರ ಚಳವಳಿಗಳು ಈಗ ಶುರುವಾಗಿವೆ. ಜಾಗತೀಕರಣ ತಂದೊಡ್ಡಿರುವ ಸಮಸ್ಯೆಗಳಿಗೆ ಸಮುದಾಯಗಳನ್ನು ಗಟ್ಟಿಗೊಳಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಈ ದೇಶದಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತಿವೆ. ಅತ್ತ ಉದಾರೀಕರಣ ತಂದುಕೊಡುವ ಭೌತಿಕ ಲಾಭವನ್ನೂ ಇತ್ತ ಸ್ಥಳೀಯ ಸಮುದಾಯದ ಜ್ಞಾನ– ಸಂಸ್ಕೃತಿ ಕೊಡುವ ನೆಮ್ಮದಿಯನ್ನೂ ಏಕಕಾಲಕ್ಕೆ ನೋಡಬಹುದಾದ ವಿಚಿತ್ರ ಸನ್ನಿವೇಶ ಭಾರತದಲ್ಲಿದೆ. ‘ಖುಷಿ ಲೆಕ್ಕಾಚಾರ’ ಹೇಗಿರಬೇಕು ಎಂಬುದನ್ನು ಅಳೆಯಲು ಭಾರತಕ್ಕಿಂತ ಸೂಕ್ತ ದೇಶ ಇನ್ನೊಂದು ಸಿಗಲಿಕ್ಕಿಲ್ಲ.
ಸಮುದಾಯಗಳನ್ನು ಬಲಿಷ್ಠಗೊಳಿಸುವುದು, ಅದರಿಂದ ಸಿಗುವ ಲಾಭವನ್ನು ಇನ್ನೊಬ್ಬನಿಗೆ ಮನಗಾಣಿಸುವುದು, ಇನ್ನೊಬ್ಬರ ಖುಷಿ ನಮ್ಮದೂ ಆಗಿದೆ ಎಂದು ತಿಳಿದು ನೆರವು ನೀಡುವುದು, ನಮ್ಮ ನೆಮ್ಮದಿ ಮುಂದಿನ ಪೀಳಿಗೆಗೂ ಉಳಿಸಬೇಕು ಎಂಬುದರ ಹಿಂದೆ ಪಕ್ಕಾ ಲೆಕ್ಕಾಚಾರ ಇದೆ. ಈ ‘ಖುಷಿ ಲೆಕ್ಕಾಚಾರ’ದಲ್ಲಿ ತಮ್ಮ ವಿಚಾರ ಮಂಡಿಸಲು ಬಾಯೊ ಅಕೊಮೊಲೇಫ್ (ನೈಜಿರಿಯಾ), ಗಾವೊ ಮಿಂಗ್ (ಚೀನಾ), ಸಂಧೋನೆ ರಿನ್‌ಪೋಚೆ (ಟಿಬೆಟ್), ಚಾರ್ಲ್ಸ್ ಐನ್‌ಸ್ಟೀನ್ (ಅಮೆರಿಕ), ಬಪೆ ಗ್ರಿಲೊ (ಇಟಲಿ), ಯೋಜಿ ಕಮಟಾ, ಕಿಯೋ ಒಯಿವಾ (ಜಪಾನ್), ದೇವಿಂದರ್ ಶರ್ಮಾ, ಕ್ಲಾಡ್ ಅಲ್ವಾರಿಸ್, ಆಶಿಶ್ ಕೊಠಾರಿ, ಮನಿಶ್ ಜೈನ್ (ಭಾರತ) ಬರಲಿದ್ದಾರೆ.
ಸ್ಥಳ: ಕನ್ವೆನ್ಶನ್ ಸೆಂಟರ್, ನಿಮ್ಹಾನ್ಸ್, ಬೆಂಗಳೂರು.
ಹೆಸರು ನೋಂದಾಯಿಸಲು : ಭೂಮಿ ನೆಟ್‌ವರ್ಕ್, ಬೆಂಗಳೂರು.
ಫೋನ್: ೦೮೦ ೨೮೪೪೧೧೭೩.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.