ADVERTISEMENT

ಇರುವದೆಲ್ಲವ ಬಿಟ್ಟು...

ಆಶಾ ಹೆಗಡೆ
Published 22 ಅಕ್ಟೋಬರ್ 2012, 19:30 IST
Last Updated 22 ಅಕ್ಟೋಬರ್ 2012, 19:30 IST

ಕೆಂಗೇರಿ ಉಪನಗರದ ಹೊಸಕೆರೆಗೆ ಹಲವು ವರ್ಷಗಳ ಇತಿಹಾಸವಿದೆ. ನಿಸರ್ಗದತ್ತ ತಿಳಿನೀರಿನಿಂದ ಮೈದುಂಬಿ ಸುತ್ತ ಮುತ್ತಲ ನಿವಾಸಿಗಳ ನೀರಿನ ದಾಹ ಹಿಂಗಿಸುತ್ತಿತ್ತು. ಗಣೇಶ ವಿಸರ್ಜನೆಯ ತಾಣ, ಯುವಕರಿಗೆ ಈಜು-ಮೋಜಿನ ಸ್ಥಳ, ಹೆಂಗೆಳೆಯರಿಗೆ  ಬಟ್ಟೆ ಒಗೆಯುವ ಜಾಗ- ಹೀಗೆ ಎಲ್ಲವೂ ಆಗಿ ಒಂದು ರೀತಿಯಲ್ಲಿ ಎಲ್ಲರ ಜೀವನದಿಯಾಗಿತ್ತು.

ಇದು ಕೆರೆಯೇ ಅಲ್ಲ. ಒಬ್ಬ ವ್ಯಕ್ತಿಗೆ ಸೇರಿದ ಜಾಗ ಎಂದು ಒಬ್ಬರೆಂದರೆ, ಇದು ಬಂಡೆ ಮಠದ ಹಳ್ಳ ಅಲ್ಲಿ ನೀರು ತುಂಬಿದೆ ಎಂದು ಇನ್ನೊಬ್ಬರು ಹೇಳುತ್ತಾರೆ. ಆದರೆ ಸಚಿವೆ ಶೋಭಾ ಕರಂದ್ಲಾಜೆ ಇದನ್ನು ಕೆರೆ ಎಂದು ದಾಖಲಿಸಿ ಬಿಡಿಎಗೆ ನೀಡುವಂತೆ ಆದೇಶಿಸಿದರು.
 
ಈ ವಿವಾದಗಳ ನಡುವೆಯೇ ರಾಜಕೀಯ ಮುಖಂಡರ ದಿವ್ಯ ದೃಷ್ಟಿ ಈ ಕೆರೆಯ ಮೇಲೆ ಬಿತ್ತು. ಸರ್ವರೂ ಪಕ್ಷ ಭೇದ ಮರೆತು ಓಟಿನ ಭರವಸೆ ಪಡೆದು ಬಡವರ ಉದ್ಧಾರದ ಉದಾರತೆಯನ್ನು ತೋರಿದರು. ಕೆರೆಯ ಸುತ್ತ ಮುತ್ತ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟರು.

ಕೆರೆಯ ಬಗ್ಗೆ ಕಾಳಜಿ ಇಲ್ಲದೆ ಕ್ರಮೇಣ ಹುಲ್ಲು ಹಾವಸೆ ಬೆಳೆದು ಕೆರೆ ಬಯಲಿನಂತಾಯ್ತು. ಸುತ್ತ ಮುತ್ತ ಕಸ ಕಡ್ಡಿ ಹೊಲಸು ತುಂಬಿ ತಿಪ್ಪೆ ಗುಂಡಿಯಾಯ್ತು. ಕೆರೆಯ ನೀರಿನ ಅಂತರ್ಜಲದಿಂದ ಸಮೃದ್ಧವಾಗಿದ್ದ ಸಮೀಪದ ಕೊಳವೆ ಬಾವಿಗಳು ಒಣಗಿಹೋದವು.

ಇತ್ತ ಕೆರೆ ಒತ್ತುವರಿ ಎಂಬ ಸುದ್ದಿ ಹಬ್ಬಿ ಸುತ್ತಲೂ ಜೋಪಡಿ ಕಟ್ಟಿಕೊಂಡಿದ್ದ ಕೆಳಸ್ತರದ ಜನ ಭೀತರಾದಾಗ ಮತ್ತೆ ರಾಜಕೀಯ ನಾಯಕರು ಬಂದರು. ಒತ್ತುವರಿ ಮಾಡಲು ಬಿಡುವದಿಲ್ಲ ನಿಮ್ಮನ್ನೆಂದೂ ನಿರ್ಗತಿಕರನ್ನಾಗಿಸುವದಿಲ್ಲ ಎಂದು ದುರ್ನಾತದ ನಡುವೆ ಮೂಗು ಮುಚ್ಚಿಕೊಂಡೇ ಭರವಸೆಯ ಮಹಾಪೂರವನ್ನೇ ಹರಿಸಿದರು.

ಈ ನಡುವೆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಉಲ್ಬಣ ಗೊಂಡಿತು. ಅಲ್ಲಲ್ಲೇ ಕೊಳವೆ ಬಾವಿಗಳನ್ನು ಕೊರೆಯುವ ಪ್ರಕ್ರಿಯೆ ಆರಂಭವಾಯ್ತು.ಈ ಬಡಾವಣೆ ಪುರಸಭೆ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ  ಐದಾರು ವರ್ಷಗಳಲ್ಲಿ 80 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅದರಲ್ಲಿ 56 ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು 12 ಬಾವಿಗಳು ಒಣಗಿಹೋಗಿವೆ.

ಇಷ್ಟೆಲ್ಲ ಮಾಡುವದರ ಬದಲು ಕೆರೆಯ ಹೋಳೆತ್ತಿಸಿದರೆ ತಿಳಿನೀರ ಬುಗ್ಗೆ ಮತ್ತೆ ಪುಟಿದೇಳುತ್ತದೆ. ಸಾಕಷ್ಟು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಸೊಳ್ಳೆ ವಿಷ ಜಂತುಗಳು ಕಡಿಮೆಯಾಗಿ ಸುತ್ತಮುತ್ತಲಿನ ಜನರಿಗೆ ಕಾಯಿಲೆ ಕಸಾಲೆಗಳಿಂದ ಮುಕ್ತಿ ದೊರಕುತ್ತದೆ.

ಆದರೆ ಯಾರಿಗೂ ಈ ಯಾವುದೂ ಬೇಡ. ಬಿಡಿಎ ಅಧಿಕಾರಿಗಳು, ಮಹಾನಗರ ಪಾಲಿಕೆ ವಕ್ತಾರರು, ರಾಜಕೀಯ ಮುಖಂಡರು ಕೆರೆಗೆ ಸಂಬಂಧಪಟ್ಟ ಯಾವ ವಿಚಾರಕ್ಕೆ ಮಹತ್ವ ಕೊಡಬೇಕೊ ಅದಕ್ಕೆ ಕೊಡುತ್ತಿಲ್ಲ. ಅದು ಅವರಿಗೆ ಬೇಕಾಗಿಲ್ಲ. ಅದರ ಹೆಸರಿನಲ್ಲಿ ಸದಾ ಸುದ್ದಿ ಮಾಡಿ ಸಂಭ್ರಮಿಸುವುದೊಂದೇ ಬೇಕು.

ಇತ್ತೀಚೆಗೆ ಆದ ಮಳೆಯಿಂದಾಗಿ ನೀರು ಸ್ವಲ್ಪ ಹೆಚ್ಚಿತ್ತು. ಆದರೆ ಈಗ ಮತ್ತೆ ಒಣಗುತ್ತಿದೆ. ಇರುವ ನೀರನ್ನು ಬಿಟ್ಟು ಇರದಿರುವ ನೀರಿನ ಅರಸುವಿಕೆಯಲ್ಲಿ ಕೊಳವೆ ಬಾವಿ ಕೊರೆಯುವ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ. ಜೊತೆಗೆ ನೀರಿಗಾಗಿ ಹಾಹಾಕಾರ ಕೂಡಾ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.