ADVERTISEMENT

ಇಲ್ಲಿಗೂ ಬಂತು ಟ್ರೇಲ್ ವಾಕರ್

ಸುಮಲತ ಬಿ., ದಾವಣಗೆರೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST
ಇಲ್ಲಿಗೂ ಬಂತು ಟ್ರೇಲ್ ವಾಕರ್
ಇಲ್ಲಿಗೂ ಬಂತು ಟ್ರೇಲ್ ವಾಕರ್   

ಇಷ್ಟು ದಿನ ವಿದೇಶಗಳಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ `ಟ್ರೇಲ್ ವಾಕರ್~ ಇದೀಗ ಮೊಟ್ಟ ಮೊದಲ ಬಾರಿಗೆ ಭಾರತಕ್ಕೂ ಕಾಲಿಟ್ಟಿದೆ. ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆ ಇದೇ ಪ್ರಥಮ ಬಾರಿಗೆ ಭಾರತದಲ್ಲಿ ಟ್ರೇಲ್‌ವಾಕರ್ ನಡೆಸಲು ಸಜ್ಜಾಗಿದೆ.

ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಿಂದ ನಿಧಿ ಸಂಗ್ರಹಿಸುತ್ತಿರುವ ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆ ಈ ಮ್ಯಾರಥಾನನ್ನು ಹಮ್ಮಿಕೊಂಡಿದೆ.

ಮೈಸೂರು ಮತ್ತು ಬೆಂಗಳೂರು ನಡುವಿನ ಮಾರ್ಗ-ಮೇಕೆದಾಟುವಿನ ಸಂಗಮದಿಂದ ಆರಂಭಗೊಂಡು ಈಗಲ್ಟನ್ ಗಾಲ್ಫ್ ರೆಸಾರ್ಟ್, ಬಿಡದಿಯಲ್ಲಿ ಈ ಮ್ಯಾರಥಾನ್ 48 ಗಂಟೆ ಅವಧಿ ನಡೆಯಲಿದೆ. ಸ್ಪರ್ಧೆಯಲ್ಲಿ 100 ಕಿ.ಮೀ ಮಾರ್ಗ ಕ್ರಮಿಸುವ ಸವಾಲು ಸ್ಪರ್ಧಿಗಳಿಗಿದೆ.

12 ಪಾಲುದಾರರ ಸಹಯೋಗದಲ್ಲಿ ವಿಶ್ವದೆಲ್ಲೆಡೆಯಿಂದ 65 ತಂಡಗಳು ಈ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳಲಿವೆ. ಅವುಗಳಲ್ಲಿ 30 ತಂಡಗಳು ಬೆಂಗಳೂರಿನದ್ದೇ ಆಗಿರುವುದು ವಿಶೇಷ. ಇದರಲ್ಲಿ ಮಹಿಳೆಯರ ನಾಲ್ಕು ತಂಡಗಳು ಭಾಗವಹಿಸಲಿವೆ. ಐದು ಅಂತರಾಷ್ಟ್ರೀಯ ತಂಡಗಳು ಇವೆ.

ಬಡತನ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡುವ ಸಲುವಾಗಿ ಆಕ್ಸ್‌ಫಾಮ್ ಇಂಡಿಯಾ ನಿಧಿ ಸಂಗ್ರಹಿಸುತ್ತಿದ್ದು, ಈ ಕಾರ್ಯದಲ್ಲಿ ಸಮಾಜವನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಟ್ರೇಲ್‌ವಾಕರ್ ಹಮ್ಮಿಕೊಳ್ಳಲಾಗಿದೆ ಎಂದು ಆಕ್ಸ್‌ಫಾಮ್ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದ ನಿರ್ದೇಶಕ ಕುನಾಲ್ ವರ್ಮಾ ತಿಳಿಸಿದರು.

ಮ್ಯಾರಥಾನ್‌ನಲ್ಲಿ ಖ್ಯಾತ ಜಾದೂಗಾರ ಉಗೇಶ್ ಸರ್ಕಾರ್, ಅರ್ಜುನ ಪ್ರಶಸ್ತಿ ವಿಜೇತ ಮತ್ತು ಅಂತರರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಭಾಗವಹಿಸಲಿದ್ದಾರೆ. ಈಗಾಗಲೇ ಈ ಮ್ಯಾರಥಾನ್‌ನ ನಕಾಶೆ ಪುಸ್ತಕ (ಮ್ಯಾಪ್ ಬುಕ್) ಕೂಡ ಬಿಡುಗಡೆಯಾಗಿದೆ.

`ಟೀಂ ಅಪ್ ಅಗೇನ್ಸ್ಟ್ ಪಾವರ್ಟಿ~ ಎಂಬ ಘೋಷಣೆಯೊಂದಿಗೆ ಈ ಮ್ಯಾರಥಾನ್ ಮುನ್ನಡೆಯಲಿದೆ. ಬಡತನದ ನಿರ್ಮೂಲನೆ ಆಶಯದೊಂದಿಗೆ ಈ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಸಂಗ್ರಹವಾದ ಒಟ್ಟು ಮೊತ್ತವನ್ನು ನಿರ್ಗತಿಕರ ಕಲ್ಯಾಣಕ್ಕಾಗಿ ಉಪಯೋಗಿಸಿಕೊಳ್ಳುವುದು ಟ್ರೇಲ್ ವಾಕರ್‌ನ ಮುಖ್ಯ ಉದ್ದೇಶ. ಇದೇ (ಫೆಬ್ರುವರಿ) 10ರಿಂದ 12ರವರೆಗೆ ಮ್ಯಾರಥಾನ್ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಗೆ ಕಾಲ್ನಡಿಗೆ ಆರಂಭವಾಗಲಿದೆ.

ಈ ಹಿಂದೆ ಹಾಂಕಾಂಗ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮುಂತಾದೆಡೆ ಅನೇಕ ಟ್ರೇಲ್ ವಾಕರ್‌ಗಳಲ್ಲಿ ಭಾಗವಹಿಸಿ ಅನುಭವ ಇದ್ದವರು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಾರ್ಗದಲ್ಲಿ ಒಟ್ಟು 9 ಚೆಕ್ ಪಾಯಿಂಟ್‌ಗಳಿವೆ. ನಡಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಔಷಧೋಪಚಾರ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳೂ ಲಭ್ಯವಾಗಲಿದೆ.

ನಡಿಗೆ ದೇಹವನ್ನು ಹೆಚ್ಚು ಸಧೃಡಗೊಳಿಸುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಮಾಜಕ್ಕೆ ಒಳಿತಾಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷ ಎನ್ನುವುದು ಅಂತಾರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಅವರ ಅಭಿಪ್ರಾಯ.

ಅಷ್ಟೇ ಅಲ್ಲ, ದೈನಂದಿನ ಜಂಜಡಗಳಿಂದ ಮುಕ್ತಿ ಪಡೆಯಲು ಎರಡು ದಿನದ ನಡಿಗೆಯಲ್ಲಿ ಪಾಲ್ಗೊಂಡರೆ ಮನಸ್ಸು, ದೇಹ ಎರಡೂ ಕೂಡ ಉಲ್ಲಸಿತವಾಗುತ್ತದೆ, ವಿವಿಧ ಅನುಭವಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ಟ್ರೇಲ್‌ವಾಕರ್ ನಿಜಕ್ಕೂ ಅವಿಸ್ಮರಣೀಯ ನೆನಪು. ದಿನವೂ ಕೆಲಸಗಳಲ್ಲಿಯೇ ಯಾಂತ್ರಿಕವಾಗಿ ಮುಳುಗಿಹೋಗುವ ನಮಗೆ ನಮ್ಮ ಪ್ರಕೃತಿ, ವಿವಿಧ ಸಂಸ್ಕೃತಿ, ಜನ ಸಮುದಾಯ, ಜೀವನ ಶೈಲಿ ಎಲ್ಲವನ್ನೂ ಪರಿಚಯ ಮಾಡಿಕೊಡುವ ಉತ್ತಮ ಅವಕಾಶ ಒದಗಿಸಿಕೊಡುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡರು ಈ ಹಿಂದೆ ಆಕ್ಸ್‌ಫಾಮ್ ಟ್ರೇಲ್ ವಾಕರ್‌ನಲ್ಲಿ ಭಾಗವಹಿಸಿದ್ದ ಅರ್ಜುನ್‌ಪೆರಾಕಲ್.

ಟ್ರೇಲ್‌ವಾಕರ್‌ನಲ್ಲಿ ಹೆಚ್ಚು ಅನುಭವ ಪಡೆದುಕೊಂಡಿರುವ ಕಾರ್ಲ್‌ಲಂಗ್, ಪೀಟರ್ ವ್ಯಾಗನ್, ಸ್ಪಾರ್ಟನ್, ಜ್ಯಾಫಾ ಕೇಕ್ಸ್ ಮತ್ತು ಜೆಲ್ಲಿ ಬೇಬೀ, ಪೌಲ್ ರೆವೇರೇಸ್ ಮಿಡ್‌ನೈಟ್ ವಾಕ್ ಹೀಗೆ ಅನೇಕ ತಂಡಗಳು ಪಾಲ್ಗೊಳ್ಳಲಿವೆ.

ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ ಎಂಬುದನ್ನು ಸಾರುವುದು ಮತ್ತು ಅದಕ್ಕೆ ಪೂರಕ ಸಹಾಯ ಒದಗಿಸುವುದು ಸಂಸ್ಥೆಯ ಉದ್ದೇಶ. ಶಿಕ್ಷಣ, ಆರೋಗ್ಯ, ಸಾಮಾಜಿಕ ಸಂರಕ್ಷಣೆ, ಆರ್ಥಿಕ ಸಮತೋಲನ ಮುಂತಾದ ವಿಷಯಗಳಲ್ಲಿ ಆಸಕ್ತಿ ಮೂಡಿಸಿ ಜನರನ್ನು ತೊಡಗಿಸುವ ಕಾರ್ಯ ಇದಾಗಿದೆ. ಟ್ರೇಲ್ ವಾಕರ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು 12000 ಶುಲ್ಕವನ್ನು ವಿಧಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.