ADVERTISEMENT

ಉಪವಾಸದ ವೇಳೆ ಹೀಗಿರಲಿ ಪಥ್ಯ...

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಉಪವಾಸದ ವೇಳೆ ಹೀಗಿರಲಿ ಪಥ್ಯ...
ಉಪವಾಸದ ವೇಳೆ ಹೀಗಿರಲಿ ಪಥ್ಯ...   

ರಂಜಾನ್‌ ಮಾಸ ಉಪವಾಸದಲ್ಲಿ 14ರಿಂದ 16 ಗಂಟೆಗಳ ಕಾಲ ಊಟ–ನೀರು ಸೇವಿಸುವುದಿಲ್ಲ. ಆರೋಗ್ಯವಂತರಿಗೂ ಇದು ಸ್ವಲ್ಪ ಕಷ್ಟವೇ. ಇನ್ನು ಮಧುಮೇಹ, ಅಧಿಕ ರಕ್ತದೊತ್ತಡ, ಗ್ಯಾಸ್ಟ್ರಿಕ್‌ ಸಮಸ್ಯೆ ಎದುರಿಸುತ್ತಿರುವವರು ಉಪವಾಸ ಮಾಡುವುದು ಹೇಗೆ? ಯಾವ ಪಥ ಅನುಸರಿಸಿದರೆ, ಒಳ್ಳೆಯದು? ಎಂಬುದರ ಕುರಿತು ಡಾ.ಖ್ವಾಜಾ ಮೈನುದ್ದೀನ್(ಅಷ್ಫಾಕ್‌) ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಅವುಗಳು ಕೆಳಗಿನಂತಿವೆ.

ರಕ್ತದೊತ್ತಡ (ಬಿ.ಪಿ.)
ಅಧಿಕ ರಕ್ತದೊತ್ತಡ ಇರುವವವರಿಗೆ ಉಪವಾಸ ಒಂದರ್ಥದಲ್ಲಿ ತುಂಬಾ ಸಹಕಾರಿ. ಏಕೆಂದರೆ, 15–16 ಗಂಟೆಗಳ ಉಪವಾಸದಿಂದ ಬಿ.ಪಿಯ ಮಟ್ಟ ಸಜಹವಾಗಿ ಕಡಿಮೆಯಾಗುತ್ತದೆ. ಇನ್ನು, ಹೆಚ್ಚಿನ ಬಿ.ಪಿ ಇರುವವರು ಉಪ್ಪು, ಕರಿದ ಪದಾರ್ಥಗಳು ಹಾಗೂ ಖಾರದ ಪದಾರ್ಥಗಳನ್ನು ಸಹರಿ, ಇಫ್ತಾರ್‌ ಸಮಯದಲ್ಲಿ ತ್ಯಜಿಸುವುದು ಒಳಿತು. ಅದರಲ್ಲೂ ಇಫ್ತಾರ್‌ ನೆಚ್ಚಿನ ವಸ್ತುಗಳಾದ ಸಮೋಸಾ, ಕಬಾಬ್‌ನಂಥ ಪದಾರ್ಥಗಳು ಬೇಡ.

ಅವರು ಸಾಧ್ಯವಾದಷ್ಟು ಸೊಪ್ಪು–ತರಕಾರಿಗೆ ಆದ್ಯತೆ ನೀಡಬೇಕು.ಅದರೊಂದಿಗೆ ಅನ್ನ, ಮಾಂಸದ ಭಕ್ಷ್ಯಗಳನ್ನು ತಿನ್ನಬಹುದು.

ADVERTISEMENT

ಮಧುಮೇಹ (ಶುಗರ್‌)
ಮಧುಮೇಹ ಇರುವವರಿಗೆ ಉಪವಾಸ ಸ್ವಲ್ಪ ಕಷ್ಟ. ರೋಜಾ ಸಮಯದಲ್ಲಿ ಹೊಟ್ಟೆ ಖಾಲಿ ಇರುವುದರಿಂದ ಸಕ್ಕರೆ ಮಟ್ಟ ಸಹಜವಾಗಿಯೇ ಕಡಿಮೆ ಆಗುತ್ತದೆ. ಜೊತೆಗೆ ರೋಜಾ ದಿನಗಳಲ್ಲಿ ಬೆಳಗ್ಗಿನ ಇನ್ಸುಲಿನ್‌ ಡೋಸ್‌ ಅನ್ನು ಇಫ್ತಾರ್‌ ಬಳಿಕ ಹಾಗೂ ಸಂಜೆಯ ಇನ್ಸುಲಿನ್‌ ಡೋಸ್‌ ಅನ್ನು ಸಹರಿ ಸಮಯದಲ್ಲಿ ತೆಗೆದುಕೊಳ್ಳುವುದು ಉತ್ತಮ. ಸಕ್ಕರೆ ಮಟ್ಟ 250ಎಂಜಿ/ಡಿಎಲ್‌ ಆಸುಪಾಸಿನಲ್ಲಿ ಇರುವವರು ಉಪವಾಸ ಸಮಯದಲ್ಲಿ ಬೆಳಿಗ್ಗಿನ ಇನ್ಸುಲಿನ್‌ ಡೋಸ್‌ ಅನ್ನು ಅರ್ಧದಷ್ಟು ತೆಗೆದುಕೊಳ್ಳಬಹುದು.

ಸಕ್ಕರೆಯ ಮಟ್ಟ 300ಎಂಜಿ/ಡಿಎಲ್‌ ಆಸುಪಾಸು ಇರುವವರು,  ಬೆಳಿಗ್ಗಿನ ಡೋಸ್‌ನ 25ರಷ್ಟು ಕಡಿಮೆ ತೆಗೆದುಕೊಳ್ಳುವುದು ಒಳಿತು.

ಇನ್ನು, ಸಕ್ಕರೆ ಕಾಯಿಲೆ ಇರುವವರು ಆಹಾರದ ಪಥ್ಯ ಎಂದಿನಂತೆಯೇ ಇರಲಿ. ಅವರೂ ಆದಷ್ಟು ಸಮೋಸಾ, ಕಬಾಬ್‌ನಂಥ ಕರಿದ ತಿಂಡಿ–ತಿನಿಸುಗಳನ್ನು ವರ್ಜಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಜೊತೆಗೆ ಖಾರ ಪದಾರ್ಥಗಳೂ ಬೇಡ. ಸಹರಿ, ಇಫ್ತಾರ್‌ನಲ್ಲಿ ಕಿತ್ತಳೆ, ಸೇಬು ಹಣ್ಣುಗಳ ಸೇವನೆ ಹೆಚ್ಚಾಗಿರಲಿ.

ಗ್ಯಾಸ್ಟ್ರಿಕ್‌
ಗ್ಯಾಸ್ಟ್ರಿಕ್‌ ಇರುವವರಿಗೆ ಬ್ಲಾಂಡ್‌ ಡಯಟ್‌ ಸಲಹೆ ಮಾಡುವೆ. ಗ್ಯಾಸ್ಟ್ರಿಕ್‌ ಸಮಸ್ಯೆ ತುಂಬಾ ಹೆಚ್ಚಾಗಿದ್ದರೆ, ‘ಪೆಂಟೊಪ್ರೊಜಾಲ್‌’ ಅಥವಾ ‘ರ‍್ಯಾಂಟಾಕ್‌’ ಮಾತ್ರೆ ತೆಗೆದುಕೊಳ್ಳಬಹುದು. ಯಾವುದೇ ಮಾತ್ರೆಗಳನ್ನು ಇಫ್ತಾರ್‌ ಸಮಯದಲ್ಲಿ ತೆಗೆದುಕೊಳ್ಳುವುದು ಉತ್ತಮ. ಇನ್ನು, ಈ ಸಮಸ್ಯೆ ಇರುವವರು ಸಹರಿ, ಇಫ್ತಾರ್‌ ಸಮಯದಲ್ಲಿ ಸಂಪೂರ್ಣವಾಗಿ ಖಾರ ತ್ಯಜಿಸಿದರೂ ಒಳ್ಳೆಯದೇ. ಆದಷ್ಟು ಹಾಲು, ಹಾಲಿನ ಉತ್ಪನ್ನಗಳು, ಮಾಂಸವನ್ನು ತಿನ್ನಬಹುದು.

ನೀರು ಕುಡಿಯಿರಿ

ಯಾವುದೇ ಸಮಯದಲ್ಲಿ ದೇಹಕ್ಕೆ ನೀರು ಮುಖ್ಯ. ಉಪವಾಸ ಆಚರಿಸುವ ಸಮಯದಲ್ಲೂ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಸಹರಿ, ಇಫ್ತಾರ್‌ ಸಮಯದಲ್ಲಿ ನೀರನ್ನು ಯಥೇಚ್ಛವಾಗಿ ಕುಡಿಯಬೇಕು.  ಒತ್ತಾಯ ಪೂರ್ವಕವಾಗಿ ನೀರು ಕುಡಿಯದಿದ್ದರೂ, 2–3 ಲೀಟರ್‌ಗಳಷ್ಟು ನೀರಿನ ಕುಡಿಯುವುದು ಅಗತ್ಯ. ಅದರಿಂದ ದೇಹದಲ್ಲಿ ತೇವಾಂಶ ಕಾಯ್ದುಕೊಳ್ಳಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.