ADVERTISEMENT

ಉಬ್ಬುಶಿಲ್ಪದಲ್ಲಿ ಗೀತಗೋವಿಂದ

ಕಲಾಪ

ಹೇಮಾ ವೆಂಕಟ್
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ರ್ನಾಟಕ ಶಿಲ್ಪ ಕಲಾ ಅಕಾಡೆಮಿ ಆಶ್ರಯದಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಒಂದು ವಾರಗಳ ಕಾಲ ಜಯದೇವ ಮಹಾಕವಿಯ `ಗೀತ ಗೋವಿಂದ' ಮಹಾಕಾವ್ಯದ ದೃಶ್ಯಗಳ ಸುಮಾರು 14 ಉಬ್ಬು ಶಿಲ್ಪಗಳ ಪ್ರದರ್ಶನ ನಡೆಯಿತು.

ಕನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ.ಜಿ. ಜ್ಞಾನಾನಂದ ಅವರು ಶಿಬಿರದ ಮಾರ್ಗದರ್ಶಕರಾಗಿದ್ದರು. ಶಿಲ್ಪಗುರು ಎಂ.ರಾಮಮೂರ್ತಿ  ಅವರ ನೇತೃತ್ವದಲ್ಲಿ ಒಂಬತ್ತು ಕಲಾವಿದರು ಈ ಕಲಾಕೃತಿಗಳನ್ನು ರಚಿಸಿದ್ದಾರೆ.

ಗೀತ ಗೋವಿಂದ ಕಾವ್ಯವು ಮಧುರ ಭಕ್ತಿಯ ಸಂಪ್ರದಾಯಕ್ಕೆ ಸೇರಿದ್ದು. ಶೃಂಗಾರರಸ ಪ್ರಧಾನವಾದದ್ದು. ಎಲ್ಲಾ ರಸಗಳ ಮಿಶ್ರಣವೇ ಈ ಕಾವ್ಯ. ಹೀಗಾಗಿಯೇ ಪ್ರಬಂಧ ಕಾವ್ಯವಾಗಿ ಇದು ಪ್ರಖ್ಯಾತಿ ಪಡೆದಿದೆ. ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಿಗೆ ಇದು ಭಾವಾನುವಾದಗೊಂಡಿದೆ.

ಕಾವ್ಯದ ಉದ್ದೇಶ ರಾಧಾಕೃಷ್ಣರ ಪ್ರಣಯಗಾಯನ. ಮಧುರ ಭಕ್ತಿಯ ಪರಾಕಾಷ್ಠೆ ಇಲ್ಲಿದೆ. ಕಾಳಿದಾಸನ ಋತು ಸಂಹಾರ ಮತ್ತು ಮೇಘದೂತಕ್ಕೆ ಸರಿಸಮವಾದ ಕಾವ್ಯ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ. ನಾಯಕ-ನಾಯಕಿಯರ ಪ್ರಣಯ ಪ್ರಸಂಗವನ್ನು ಇಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

ಇಲ್ಲಿ ಗೀತಗೋವಿಂದದಿಂದ ಆಯ್ಕೆ ಮಾಡಿರುವ `ಕೇತಕೀ ಗಂಧ ಬಂಧು, ಸಜಲ ನಳಿನೀದಳ ಜಾಲಂ, ಶ್ಲಿಷ್ಯತಿ ಚುಂಬತಿ ತಿಮಿರಂ, ರಸ ಜಲಧಿ ನಿಮಗ್ನಾ, ಭೀತ ಹರಿಣೇಕ್ಷಣ, ಸ್ಮಿತ ಸುಧಾ ಮುಗ್ಧಾನನಂ, ಕರತಲ ತಾಳ ಮೇಳನಂ, ಅಮೋಘ ಧನುಃ, ಅಬಲ ಕಬಳಯ, ನಖಕ್ಷತ ರೇಖಂ, ವಿಪರೀತ ಕಾರಿಣಿ, ಚರಣ ಕಮಲಂ, ಸ್ಮರಗರಳ ಖಂಡನಂ, ಕುಸುಮ ರಚನಂ' ಮುಂತಾದ ಹದಿನಾಲ್ಕು ಶ್ಲೋಕಗಳನ್ನು ಮರದ ಮಾಧ್ಯಮದಲ್ಲಿ ಉಬ್ಬುಶಿಲ್ಪ ರೂಪದಲ್ಲಿ ಚಿತ್ರಿಸಲಾಗಿದೆ.

ಒಂದೊಂದು ಶ್ಲೋಕದಲ್ಲೂ ಋತುವಿಗೆ ಸಂಬಂಧಿಸಿದಂತೆ ಅರಳುವ ಹೂಗಳ ವರ್ಣನೆ ಇದೆ. ಸುಂದರ ಉದ್ಯಾನದಲ್ಲಿ ಹೂಬಳ್ಳಿಗಳ ನಡುವೆ ರಾಧಾಕೃಷ್ಣರ ಪ್ರಣಯ ಲೀಲೆಗಳ ಚಿತ್ರಣ ಆಕರ್ಷಕವಾಗಿ ಮೂಡಿಬಂದಿದೆ.

ರಚನೆಗೂ ಮುನ್ನ

ಗೀತಗೋವಿಂದ ಒಂದು ಸಂಸ್ಕೃತ ಮಹಾಕಾವ್ಯ. ಇದರ ದೃಶ್ಯಗಳನ್ನು ರಚಿಸಬೇಕಾದರೆ ಅದರ ಹಿಂದೆ  ಅನೇಕ ಜನರ ಶ್ರಮವಿದೆ. ಮೊದಲಿಗೆ ನೃತ್ಯ ಕಲಾವಿದೆ ಶ್ರೀರಂಜಿನಿ ಉಮೇಶ್ ಅವರಿಂದ ಗೀತಗೋವಿಂದದ ಶ್ಲೋಕಗಳಿಗೆ ಅಭಿನಯ ಮಾಡಿಸಿ ಛಾಯಾಚಿತ್ರಗಳನ್ನು ತೆಗೆದು, ನಂತರ ಚಿತ್ರ ಕಲಾವಿದ ರಾ.ಸೂರಿ ಅವರಿಂದ ರೇಖಾಚಿತ್ರಗಳನ್ನು ರಚನೆ ಮಾಡಿಸಿ ಅದರ ಆಧಾರದ ಮೇಲೆ ಈ ಉಬ್ಬು ಶಿಲ್ಪಗಳನ್ನು ರೂಪಿಸಲಾಗಿದೆ.

ಶಿಲ್ಪ ರಚನೆಗೆ 12 ದಿನ
ಏಳು ಶಿಲ್ಪಿಗಳು ಎರಡೆರಡು ಶಿಲ್ಪ ರಚನೆ ಮಾಡಿದ್ದು ಒಂದೊಂದು ಶಿಲ್ಪ ರಚನೆಗೆ 12 ದಿನ ಬೇಕಾಗಿತ್ತು. ಒಂದೊಂದು ಶಿಲ್ಪಕ್ಕೂ ಸುಮಾರು 50ಸಾವಿರದಂತೆ ಖರ್ಚಾಗಿದೆ. ಒಟ್ಟು 7 ಲಕ್ಷ ರೂಪಾಯಿ ವ್ಯಯವಾಗಿದೆ. ಹಣದ ಖರ್ಚನ್ನು ಕಡಿಮೆ ಮಾಡಲು ಉಬ್ಬು ಚಿತ್ರ ರಚನೆಗೆ ಮಾತ್ರ ಸಾಗುವಾನಿ ಮರವನ್ನು ಬಳಸಿದ್ದು, ಉಳಿದಂತೆ ಹಿಂಬದಿಯಲ್ಲಿ ಪ್ಲೈವುಡ್ ಬಳಸಲಾಗಿದೆ.

ADVERTISEMENT

ಸಾಮಾನ್ಯವಾಗಿ ಸಾಂಪ್ರದಾಯಿಕ ಶಿಲ್ಪದಲ್ಲಿ ದೇವರ ಚಿತ್ರಗಳನ್ನು ಮಾತ್ರ ರಚಿಸಬೇಕು ಎಂಬ ತಪ್ಪು ಕಲ್ಪನೆ ಇದೆ. ಸಂಪ್ರದಾಯವಾದಿಗಳು ಇದನ್ನು ಶಿಲ್ಪ ಎಂದು ಒಪ್ಪಿಕೊಳ್ಳುತ್ತಿಲ್ಲ. ಕ್ರಾಫ್ಟ್ ಎಂದು ಪರಿಗಣಿಸಿದ್ದಾರೆ. ಅದನ್ನು ಹೋಗಲಾಡಿಸಲು ಪ್ರಯೋಗಾತ್ಮಕವಾಗಿ ಈ ಪ್ರಯತ್ನ ಮಾಡಲಾಗಿದೆ.                     -ಜ್ಞಾನಾನಂದ, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.