ADVERTISEMENT

ಎದುರು ಬಂದು ಮಾತಾಡು

ಮಲ್ಲಿಗೆ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಎದುರು ಬಂದು ಮಾತಾಡು
ಎದುರು ಬಂದು ಮಾತಾಡು   

‘ನಿಂಗೆ ಕಳಿಸಿದ ಯಾವುದೇ ವಾಟ್ಸ್‌ಆ್ಯಪ್ ಮೆಸೇಜ್‌ ಡೆಲಿವರಿ ಆಗ್ತಿಲ್ಲ. ನನ್ನ ಯಾವುದೇ ಫೇಸ್‌ಬುಕ್‌ ಪೋಸ್ಟ್‌ಗೆ ನೀನು ಲೈಕ್‌ ಹೊಡೀತಿಲ್ಲ. ಏನಾಗಿದ್ಯೇ ನಿಂಗೆ? ಭೂಮಿ ಮೇಲೆ ಇದ್ದೀಯೋ ಇಲ್ವೋ...?’

‘ನಂಗೇನೂ ಆಗಿಲ್ಲಾ ಕಣೋ. ಫೇಸ್‌ಬುಕ್‌ ಜಾಸ್ತಿ ಆಗಿ ಫೇಸ್‌ ಟು ಫೇಸ್ ಕಡಿಮೆ ಆಗ್ತಿದೆ ಅನಿಸ್ತು. ವಾಟ್ಸ್‌ಆ್ಯಪ್‌ ಜಾಸ್ತಿ ಆಗಿ ಮಾತು ಕಡಿಮೆ ಆಗ್ತಿದೆ ಅನಿಸ್ತು. ಅದಕ್ಕೆ ಅವೆರಡನ್ನೂ ಮೊಬೈಲ್‌ನಿಂದ ಅನ್‌ಇನ್‌ಸ್ಟಾಲ್ ಮಾಡಿಬಿಟ್ಟೆ. ಈಗ ನೀನು ನನ್ನ ಜೊತೆಗೆ ಮಾತನಾಡಬೇಕು ಅಂದ್ರೆ ಫೋನ್ ಮಾಡಬೇಕು. ಇಲ್ಲದಿದ್ರೆ ಆಫೀಸಿನ ಹೊರಗೆ ಕಾದು ನಿಲ್ಲಬೇಕು. ಹೇಗಿದೆ ಐಡಿಯಾ?’

‘ಅಯ್ಯೋ ನಿನ್ನ’ ಹುಡುಗಿಯ ತಲೆಗೆ ಹುಡುಗ ಮೆಲ್ಲಗೆ ಮೊಟಕಿದ. ಅವಳು ‘ಅಮ್ಮಾ...’ ಎಂದಳಾದರೂ ಆ ದನಿಯಲ್ಲಿ ನೋವು ಇನಿತೂ ಇರಲಿಲ್ಲ. ಇಷ್ಟೆಲ್ಲಾ ಹೇಳಿದ ಮೇಲೆ ಈ ಕಥಾನಾಯಕಿಯ ಪರಿಚಯವನ್ನೂ ನಾನು ಮಾಡಿಕೊಡಲೇಬೇಕು.

ADVERTISEMENT

ನೀತಾ ಖಾಸಗಿ ಕಂಪನಿ ಉದ್ಯೋಗಿ. ಭವಿಷ್ಯದ ಬಗ್ಗೆ ಬಣ್ಣದ ಕನಸು ಕಾಣುವ ಅವಳಿಗೆ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ಒಲವು. ಸದಾ ಫೇಸ್‌ಬುಕ್, ಟ್ವಿಟರ್‌, ವಾಟ್ಸ್‌ಆ್ಯಪ್‌ಗಳಲ್ಲೇ ಬ್ಯುಸಿ. ಇದೇ ಕಾರಣಕ್ಕೆ ಆಫೀಸಿನಲ್ಲಿ ಅನೇಕ ಬಾರಿ ತನ್ನ ಬಾಸ್‌ನಿಂದ ಬೈಸಿಕೊಂಡಿದ್ದಳು. ರಸ್ತೆ ಮೇಲೆ ನಡೆದು ಹೋಗುವಾಗ, ಬಸ್ಸಿನಲ್ಲಿ ಕುಳಿತಿರುವಾಗಲೆಲ್ಲಾ ಅವಳು ಕೈ ಮೊಬೈಲ್‌ ಪರದೆಯ ಮೇಲೆ ಹರಿದಾಡುತ್ತಿತ್ತು.

‘ಮೊಬೈಲ್‌ ನೆಟ್‌ವರ್ಕ್‌ ಕಂಪೆನಿಗಳು ದಿನಕ್ಕೆ ಒಂದು ಜಿಬಿ ಡೇಟಾ ಕೊಟ್ಟಿವೆ. ಮುಗಿಸಿಯೇ ತೀರಬೇಕು’ ಎಂದು ಜಿದ್ದಿಗೆ ಬಿದ್ದವಳಂತೆ ಇಂಟರ್ನೆಟ್‌ ಬಳಸುತ್ತಿದ್ದಳು. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳೇ ಬೆಸ್ಟ್‌ಫ್ರೆಂಡ್ಸ್‌. ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಚೆಕ್ ಮಾಡುವುದರಿಂದ ದಿನ ಆರಂಭಿಸುತ್ತಿದ್ದ ಅವಳಿಗೆ ವಾಟ್ಸ್‌ಆ್ಯಪ್‌ ನೋಡಿದ ನಂತರವೇ ದಿನ ಮುಗಿಯುತ್ತಿದ್ದುದು. ಫೇಸ್‌ಬುಕ್‌ನಲ್ಲಿ ಯಾರ ಪ್ರೊಫೈಲ್ ಅಪ್‌ಡೇಟ್ ಆದರೂ, ಸ್ಟೇಟಸ್ ಬದಲಾದರೂ, ಫೋಟೊ ಪೋಸ್ಟ್‌ ಆದರೂ ಇವಳದ್ದೊಂದು ಲೈಕ್– ಕಾಮೆಂಟ್ ಇದ್ದೇ ಇರುತ್ತಿತ್ತು.

ಇಂತಿಪ್ಪ ನೀತಾ ಒಂದು ದಿನ ವ್ಯಾಟ್ಸ್‌ಆ್ಯಪ್–ಫೇಸ್‌ಬುಕ್‌ಗಳಿಂದ ಹೊರಗೆ ಬಂದಳು.

‘ನಾನು ಕಾಲೇಜು ದಿನಗಳಲ್ಲಿ ಚೆನ್ನಾಗಿ ಓದುತ್ತಿದ್ದೆ. ಅದೇ ಕಾರಣಕ್ಕೆ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಕೆಲಸ ಸಿಕ್ಕ ನಂತರವೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇದ್ದೆ. ಆದರೆ ಒಂದರಲ್ಲೂ ಪಾಸಾಗಲು ಸಾಧ್ಯವಾಗಲಿಲ್ಲ. ಆತ್ಮವಿಮರ್ಶೆ ಮಾಡಿಕೊಂಡಾಗ ದಿನದ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣಗಳು ನುಂಗುತ್ತಿರುವುದು ಅವಳ ಅರಿವಿಗೆ ಬಂತು. ಒಂದು ರಾತ್ರಿ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಮೊಬೈಲ್ ದೂರ ಇರಿಸಿ ಮಲಗಿದೆ’ ಎಂದು ನಂತರ ತನ್ನ ಆಪ್ತರ ಬಳಿ ಹೇಳಿಕೊಂಡಳು.

ನೀತಾಳ ಬಗ್ಗೆ ಯೋಚಿಸಿದಾಗಲೆಲ್ಲಾ ನನ್ನ ಮನಸಿನಲ್ಲಿ ಇನ್ನೂ ಕೆಲವರ ಚಿತ್ರ ಮೂಡುತ್ತದೆ. ಅನೇಕ ಬಾರಿ ನಾನೂ ಆ ಚಿತ್ರದ ಒಂದು ಭಾಗವೇ ಆಗಿಬಿಟ್ಟಿರುತ್ತೇನೆ. ಕೆಲವರಂತೂ ಊಟ ಮಾಡುವಾಗ, ಮಲಗುವಾಗ, ಬಸ್‌ನಲ್ಲಿ ಓಡಾಡುವಾಗ, ಟಾಯ್ಲೆಟ್‌ನಲ್ಲಿ ಕೂತಾಗಲೂ ಸ್ಮಾರ್ಟ್‌ಫೋನ್‌ ಕೈಲಿ ಹಿಡಿದಿರುತ್ತಾರೆ. ಯಾವುದಾದರೂ ಪುಸ್ತಕವನ್ನು ಓದುವಾಗ ಅಥವಾ ಉಪನ್ಯಾಸ ಆಲಿಸುವಾಗಲೂ ನಮ್ಮ ಮನಸಿನಲ್ಲಿ ವಾಟ್ಸ್‌ಆ್ಯಪ್ ಮೆಸೇಜು, ಫೇಸ್‌ಬುಕ್‌ ಸ್ಟೇಟಸ್‌ಗಳೇ ತುಂಬಿಕೊಂಡಿರುತ್ತವೆ.

ರಾತ್ರಿ ನಿದ್ದೆ ಬರದೇ ಒದ್ದಾಡುವ ಮಂದಿ, ಗರ್ಲ್‌ಪ್ರೆಂಡ್‌–ಬಾಯ್‌ಪ್ರೇಂಡ್‌ ಜೊತೆ ಜಗಳವಾಡಿದ ಪ್ರೇಮಿಗಳು, ನೈಟ್‌ಶಿಪ್ಟ್‌ನಲ್ಲಿ ತೂಕಡಿಸುವ ಮಹಾನುಭಾವರು ಬಿಸಾಡುವ ಸ್ಟೇಟಸ್‌ಗಳನ್ನು ನಾನೇಕೆ ಓದಬೇಕು ಎನ್ನುವುದು ನನ್ನನ್ನು ಕಾಡಿದ ಪ್ರಶ್ನೆ. ಕೆಲ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿಯೂ ಇಂಥದ್ದೇ ಸಂದೇಶಗಳು. ಈ ಜನರು ಖಾಸಗಿ ಬದುಕನ್ನೇಕೆ ಹೀಗೆ ಖುಲ್ಲಂಖುಲ್ಲ ತೆರೆದಿಡುತ್ತಾರೆ.

ಗ್ರೂಪ್‌ಗಳಲ್ಲಿ ಊಟ ಆಯ್ತಾ, ಇವತ್ತು ದಿನ ಹೇಗಿತ್ತು? ಗುಡ್‌ನೈಟ್‌ನಂಥ ಮೆಸೇಜ್‌ಗಳನ್ನು ಹಾಕಬೇಕೇಕೆ. ಹೀಗೆ ಬರುವ ಎಲ್ಲ ಮೆಸೇಜುಗಳನ್ನೂ ಓದಿಓದಿ ದಣಿಯುತ್ತಿದ್ದೆ. ಈಗ ನಾನೂ ನೀತಾಳಂತೆಯೇ ಫೇಸ್‌ಬುಕ್‌–ವಾಟ್ಸ್‌ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ ಆ ಕಿರಿಕಿರಿಯಿಂದ ಪಾರಾಗಿದ್ದೇನೆ.

ಫೇಸ್‌ಬುಕ್‌ನಲ್ಲಿ ಯಾರೋ ಒಬ್ಬರೋ ನೋವಿಗೂ, ಬೇಸರಕ್ಕೋ, ಖುಷಿಗೋ ಹಾಕಿದ ಸ್ಟೇಟಸ್‌ಗೆ ನಮ್ಮದೂ ಒಂದು ಇರಲಿ ಎಂದು ಕಾಮೆಂಟ್ ಮಾಡುತ್ತೇವೆ. ಅದಕ್ಕೆ ಯಾರೇ ಕಾಮೆಂಟ್‌ ಮಾಡಿದರೂ ನಮಗೊಂದು ನೋಟಿಫಿಕೇಶನ್ ಬರುವುದು ಸಾಮಾನ್ಯ. ಅದನ್ನು ಮತ್ತೆಮತ್ತೆ ತೆರೆದು ನೋಡುತ್ತೇವೆ. ಅದರಿಂದ ನಮಗೆ ಬಿಟ್ಟಿ ಮನರಂಜನೆ ಸಿಗುತ್ತೆ ಎನ್ನುವುದನ್ನು ಬಿಟ್ಟರೆ ಬೇರೆನು ಲಾಭವಿದೆ? ವಾಟ್ಸ್‌ಆ್ಯಪ್‌ನ ಚರ್ಚೆಗಳು ಎಂದಾದರೂ ದಡಮುಟ್ಟಿದ್ದು ಉಂಟೇ?

ನಾವು ಏನೋ ಓದಬೇಕು, ಏನೋ ಕೆಲಸ ಮಾಡಬೇಕು ಎಂದು ದೃಢ ಮನಸ್ಸಿನಿಂದ ಕುಳಿತಿರುತ್ತೇವೆ. ಹೀಗೆ ಕುಳಿತ 5ನಿಮಿಷಕ್ಕೆ ಮೊಬೈಲ್‌ನಲ್ಲಿ ಟಣ್ ಎಂದು ನೋಟಿಫಿಕೇಶನ್ ಬರುತ್ತದೆ. ಬೇಡವೆಂದರೂ ಮನಸ್ಸು ಅದರತ್ತ ವಾಲುತ್ತದೆ. ಒಮ್ಮೆ ಏನು ಎಂದು ನೋಡಿ ತೆಗೆದಿಡುತ್ತೇನೆ ಎಂದುಕೊಂಡು ಮೊಬೈಲ್ ಹಿಡಿದುಕೊಂಡರೆ ಮತ್ತೆ ಮೊಬೈಲ್ ಬದಿಗಿಡುವ ಹೊತ್ತಿಗೆ ಗಂಟೆಗಳು ಉರುಳಿರುತ್ತವೆ. ನಮ್ಮ ಮನಸ್ಸಿನ ಏಕಾಗ್ರತೆಯನ್ನು ಹಾಳುಗಡೆವುದಲ್ಲದೇ ಮನಸ್ಸಿನ ಮೇಲೆ ನಿಯಂತ್ರಣವನ್ನೂ ತಪ್ಪಿಸಿಬಿಡುವ ಇವುಗಳದು ಮಾಯಕ ಸೆಳೆತ.

ನಾನಂತೂ ಪಾರಾದೆ. ನೀವೂ ಪ್ರಯತ್ನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.