ADVERTISEMENT

ಎಲ್ಲಿಂದಲೋ ಬಂದವರ ಬಾಡಿಗೆ ಲೋಕ

ಹೇಮಾ ವೆಂಕಟ್
Published 4 ಜೂನ್ 2015, 19:30 IST
Last Updated 4 ಜೂನ್ 2015, 19:30 IST
ಎಲ್ಲಿಂದಲೋ ಬಂದವರ ಬಾಡಿಗೆ ಲೋಕ
ಎಲ್ಲಿಂದಲೋ ಬಂದವರ ಬಾಡಿಗೆ ಲೋಕ   

ಊರಿಗೊಬ್ಬ ಹೊಸಬ ಬಂದರೆ ಸಾಕು ಮುಖ ನೋಡಿಯೇ ಊರು, ದೇಶ, ರಾಜ್ಯ, ಭಾಷೆ... ಹೀಗೆ ಇಡೀ ಜಾತಕವನ್ನೇ ಹೇಳಿಬಿಡುವ ಜನರಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ವ್ಯಾಪಾರಿಗಳು, ಆಟೊ- ಟ್ಯಾಕ್ಸಿ ಚಾಲಕರು ಲಾಭದ ಲೆಕ್ಕಾಚಾರದ ಕನ್ನಡಿಯಲ್ಲೇ ಅವರನ್ನು ನೋಡುತ್ತಾರೆ. 

ಗ್ರಾಹಕರು ಬೇರೆ ಊರಿನವರು ಎಂದು ಗೊತ್ತಾದ ಕೂಡಲೇ ಕೆಲವು ಆಟೊ ಚಾಲಕರಿಗಾದರೂ ಸ್ವಲ್ಪ ಹೆಚ್ಚು ಹಣ ವಸೂಲಿ ಮಾಡುವ ಯೋಚನೆ ಬಾರದಿರದು. ಹೊರಗಿನವರನ್ನು ಕಂಡ ಕೂಡಲೇ ಮನೆ ಬಾಡಿಗೆ ಮೂರು ನಾಲ್ಕುಪಟ್ಟು ಏರಿಸಿ ಹೇಳುವುದು ವಾಸ್ತವ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳಲ್ಲಿ ದುಡಿಯುವ  ಮಂದಿ ಅಪಾರ್ಟ್‌ಮೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಕೈತುಂಬ ಸಂಪಾದನೆಯೂ ಇರುತ್ತದೆ. ಆದರೆ   ಶಿಕ್ಷಣ, ಉದ್ಯೋಗ, ಸಂಶೋಧನೆ ಎಂದು ಬರುವವರಿಗೆ ಮನೆಯನ್ನು ಬಾಡಿಗೆಗೆ ಪಡೆಯುವುದು ಸಾಹಸವೇ ಸರಿ.

ಯಾವ ಬಡಾವಣೆಯ ರಸ್ತೆಗಳಿಗೆ ಹೋದರೂ ‘ಮನೆ ಬಾಡಿಗೆಗೆ, ಲೀಸಿಗೆ ಕೊಡಿಸಲಾಗುವುದು’ ಎಂಬ ಬೋರ್ಡ್‌   ಕಾಣಸಿಗುತ್ತದೆ. ಮನೆ ಬಾಡಿಗೆ ನೀಡುವವರೂ ಬಾಡಿಗೆದಾರರನ್ನು ಹುಡುಕುವ ಕೆಲಸವನ್ನು ಬ್ರೋಕರ್‌ಗಳಿಗೆ ಒಪ್ಪಿಸಿಬಿಡುತ್ತಾರೆ.  ಕೆಲವು ಕಡೆ ಬ್ರೋಕರ್‌ಗಳ ಮೂಲಕವೇ ಮನೆ ಪಡೆಯುವ ಅನಿವಾರ್ಯತೆ ಇದೆ.

ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳ ಬಳಿ ಪಿಜಿ ಹಾಸ್ಟೆಲ್, ಬಾಡಿಗೆ ಮನೆಗಳನ್ನು  ಕಟ್ಟಿಕೊಂಡು ಮನಸೋಇಚ್ಛೆ ಬಾಡಿಗೆ ವಸೂಲಿ ಮಾಡುವವರಿಗೆ ವಿದೇಶದಿಂದ ಬರುವ ವಿದ್ಯಾರ್ಥಿಗಳೇ ಬಂಡವಾಳ.  ಕಾಲೇಜು ಆಡಳಿತ ಮಂಡಳಿ ಹಾಸ್ಟೆಲ್‌ ಒದಗಿಸಿದರೂ ಇಲ್ಲಿನ ಊಟ ಹಿಡಿಸದೆಯೋ ಅಥವಾ ಹಾಸ್ಟೆಲಿನ  ಶಿಸ್ತು ಒಲ್ಲದೆಯೋ ಸ್ವತಂತ್ರವಾಗಿ ಇರಬಯಸುತ್ತಾರೆ. ಇದು ಸ್ಥಳೀಯರಿಗೆ ಅನುಕೂಲವಾಗಿ ಪರಿಣಮಿಸಿದೆ. ಬಾಡಿಗೆ ಮನೆಗಳಿಗೆ ಬೇಡಿಕೆ ಬರಲು ಇದೂ ಒಂದು ಕಾರಣವಾಗಿದೆ.

ನಗರದ ಕೆಲ ಪ್ರದೇಶಗಳಲ್ಲಿ ಕೇರಳೀಯರು, ಈಶಾನ್ಯ ರಾಜ್ಯದವರು, ಟಿಬೆಟಿಯನ್ನರು, ಚೀನೀಯರು, ಉಗಾಂಡ ಪ್ರಜೆಗಳು, ಇರಾನಿಗಳು ಹೀಗೆ ವಿವಿಧ ಭಾಗಗಳ ಜನರು ಕಾಣಸಿಗುತ್ತಾರೆ.  ಸೇಂಟ್‌ ಜಾನ್ಸ್‌, ಕ್ರೈಸ್ಟ್‌ ಕಾಲೇಜಿನ ಬಳಿ ಹೋದರೆ ಮಲಯಾಳಿಗಳು, ಮಾಗಡಿ ರಸ್ತೆಯಲ್ಲಿರುವ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಈಶಾನ್ಯ ರಾಜ್ಯದವರು ಹೆಚ್ಚು ಕಾಣಸಿಗುತ್ತಾರೆ. ಈಸ್ಟ್‌ವೆಸ್ಟ್‌ ಇನ್‌ಸ್ಟಿಟ್ಯೂಟ್‌ ಬಳಿ ಹೋದರೆ ಇರಾನಿಗಳು ಕಾಣಸಿಗುತ್ತಾರೆ.  ಹೀಗೆ ನಗರದ  ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದೇಶಿ ಪ್ರಜೆಗಳೂ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳ ವಿದ್ಯಾರ್ಥಿಗಳು ಇದ್ದಾರೆ.

ಇಂಥ ವಿದ್ಯಾರ್ಥಿಗಳ ಬೇಡಿಕೆ ಪೂರೈಸಲೆಂದೇ ಚೈನೀಸ್‌ ಫುಡ್‌, ಮಾಂಸಾಹಾರಿ ಹೊಟೇಲುಗಳು ಹುಟ್ಟಿಕೊಳ್ಳುತ್ತವೆ. ಸ್ಥಳೀಯರಿಗಿಂತ ಹೊರಗಿನಿಂದ ಬಂದವರೇ ಇವುಗಳ ಪ್ರಮುಖ ಗ್ರಾಹಕರು. ಹಾಗಾಗಿ ಇಲ್ಲಿನ ರಿಯಲ್‌ ಎಸ್ಟೇಟ್‌ ವ್ಯಾಪಾರದ ಮೇಲೂ ಇವರ ಪ್ರಭಾವ  ಇದೆ ಎಂದರೆ ತಪ್ಪಾಗದು.

ನಮ್ಮವರಲ್ಲದೆಯೂ ನಮ್ಮವರಾಗಿರುವ ಇವರಿಗೆ ಬೆಂಗಳೂರಿನ ಓರೆಕೋರೆಗಳ ಬಗ್ಗೆ ಅರಿವಿದೆ. ಇಲ್ಲಿನ ಜನ ತಮ್ಮನ್ನು ಯಾವ ದೃಷ್ಟಿಯಿಂದ ನೋಡಿದ್ದಾರೆ,  ನಗರದಲ್ಲಿ ಮನೆ ಪಡೆಯುವ ಕಷ್ಟ ಇವೆಲ್ಲದರ ಬಗ್ಗೆ ಬೇರೆ ಬೇರೆ ದೇಶ, ರಾಜ್ಯಗಳಿಂದ ಬಂದವರನ್ನು ಮಾತನಾಡಿಸಿದಾಗ ಹೆಚ್ಚು ಕಡಿಮೆ ಎಲ್ಲರದೂ ಒಂದೇ ಅನುಭವ.  

ಮಾರಿಷಸ್‌ನಿಂದ ನಗರಕ್ಕೆ ಬಂದು ಮನಃಶಾಸ್ತ್ರದಲ್ಲಿ ಪದವಿ ಓದುತ್ತಿರುವ ಮಹ್ರೀನ್‌ ಮಾಂಡ್ರೆ ಅವರಿಗೆ ಇಲ್ಲಿನ ಜನರ ನಡವಳಿಕೆ ಬಗ್ಗೆ ಬೇಸರವಿದೆ. ಅವರು ಹೇಳುತ್ತಾರೆ: ‘ವಿದೇಶೀಯರೆಲ್ಲ ಇಲ್ಲಿ ಒಂದೇ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ನಮ್ಮನ್ನು ಕಂಡ ಕೂಡಲೇ ವ್ಯಾಪಾರಿಗಳಿಂದ ಹಿಡಿದು ಬಾಡಿಗೆ ಮನೆ ಮಾಲೀಕರು, ಆಟೊ ಚಾಲಕರು, ಟ್ಯಾಕ್ಸಿಯವರು ಎಲ್ಲರೂ ಮೂರು ಪಟ್ಟು ಹೆಚ್ಚು ಹಣ ಸುಲಿಗೆ ಮಾಡುತ್ತಾರೆ.

ಜಾಗತೀಕರಣ ಮಾತಿನಲ್ಲಿ ಮಾತ್ರವಿದೆ. ಸ್ಥಳೀಯವಾದವೇ ಹೆಚ್ಚು ಕಾಣಿಸುತ್ತಿದೆ. ನಮ್ಮನ್ನು ಸ್ವೀಕರಿಸುವ ಮನಸ್ಥಿತಿ ಕಾಣುವುದಿಲ್ಲ. ಅತಿಥಿಗಳನ್ನು ಗೌರವಿಸಬೇಕು ಎಂಬುದು ಜಾಹೀರಾತುಗಳಲ್ಲಿ ಮತ್ತು ನಾಯಕರ ಮಾತಿನಲ್ಲಷ್ಟೇ ಕಾಣುತ್ತಿದೆ’. ಬಿಬಿಎಂ ಓದಲು ದೂರದ ಆಫ್ಘಾನಿಸ್ತಾನದಿಂದ ನಗರಕ್ಕೆ ಬಂದಿರುವ ಹಯಾತ್‌ಉಲ್ಲಾ ಅಮೀರಿ ಹೇಳುವುದು ಹೀಗೆ...

‘ಆಟೊ ಮತ್ತು ಟ್ಯಾಕ್ಸಿ ಡ್ರೈವರ್‌ಗಳು ನಮ್ಮನ್ನು ಬೇಟೆಯಾಡುತ್ತಾರೆ. ಕೇಳಿದಷ್ಟು ಹಣ ನೀಡಿ ಬಾಡಿಗೆ ಮನೆಗಳನ್ನು  ಪಡೆದುಕೊಂಡರೂ ಯಾವುದೇ ಸೇವೆ ಒದಗಿಸುವುದಿಲ್ಲ. ನೀರು, ವಿದ್ಯುತ್‌ ಸಂಪರ್ಕದಲ್ಲಿ ತೊಂದರೆಯಾದರೂ ನಾವೇ ರಿಪೇರಿ ಮಾಡಿಸಬೇಕು. ಮನೆ ಬಿಡುವಾಗ  ಪೇಂಟ್‌, ರಿಪೇರಿ ಎಂದು ಹೇಳಿ ಮುಂಗಡ ಹಣವನ್ನು ಕೊಡುವುದೇ ಇಲ್ಲ.

ಸ್ಥಳೀಯ ಗೆಳೆಯರ ಸಹಾಯ ಪಡೆದು ಮನೆ ನೋಡಲು ಹೋದರೂ ನಮ್ಮ ಮುಖ ನೋಡಿದ ಕೂಡಲೇ ಶೋಷಣೆ ಶುರುವಾಗುತ್ತದೆ. ಬಹಳ ದೊಡ್ಡ ಕನಸಿನೊಂದಿಗೆ ಬೆಂಗಳೂರಿಗೆ ಬಂದಿದ್ದೇನೆ. ಆದರೆ ಸ್ಥಳೀಯರ ಸಹಕಾರ ಸಿಗುತ್ತಿಲ್ಲ. ನಮ್ಮನ್ನು ತಮ್ಮವರು ಎಂದು ಪರಿಗಣಿಸುತ್ತಿಲ್ಲ ಎಂಬ ಬೇಸರವಿದೆ’.

ಮುಂಬೈನ ಜೋಹೈಬ್‌ ಖಾನ್‌  ಅನುಭವ ಭಿನ್ನವಾಗಿಲ್ಲ. ‘ಹೊರಗಿನಿಂದ ಬರುವ ವಿದ್ಯಾರ್ಥಿಗಳು ಇಲ್ಲಿನ ಆರ್ಥಿಕತೆಯ ಒಂದು ಭಾಗವಾಗಿದ್ದೇವೆ. ಆದರೆ, ಇಲ್ಲಿನವರು ನಮ್ಮನ್ನು ಹಣ ಮಾಡುವ ವಸ್ತುವಾಗಿ ನೋಡುತ್ತಾರೆ. ಇದರ ನಡುವೆ ಮನೆ ಬ್ರೋಕರ್‌ಗಳು ಸುಲಿಗೆ ಮಾಡುತ್ತಾರೆ. ಹೊರ ರಾಜ್ಯದ ವಿದ್ಯಾರ್ಥಿಗಳ ವಾಹನ ಜಪ್ತಿ ಮಾಡಿ ದಂಡ ಹಾಕುವ ಪೊಲೀಸರು ನಮ್ಮನ್ನು ಹೀಗೆ ಹಗಲು ದರೋಡೆ ಮಾಡುವವರ ಬಗ್ಗೆ ಕ್ರಮ ಜರುಗಿಸುವುದಿಲ್ಲ. ಸಾರ್ವಜನಿಕರು ನಮ್ಮ ರಕ್ಷಣೆಗೆ ಬರಬೇಕು’ ಎನ್ನುತ್ತಾರೆ.

ಕೋಲ್ಕತ್ತದ ಸಿದ್ದಿಕಾ ಅನುಭವವೂ ಜೊಹೈಬ್‌ ಅಭಿಪ್ರಾಯವನ್ನು ಸಮರ್ಥಿಸುವಂತಿದೆ:  ‘ಇಲ್ಲಿ ನಮ್ಮ ಬಜೆಟ್‌ಗೆ ಸರಿಯಾದ ಮನೆ ಹುಡುಕುವುದು ದೊಡ್ಡ ಸವಾಲು. ಅದರಲ್ಲೂ ನಾವು ಕೆಲಸ ಮಾಡುವ ಜಾಗ ಅಥವಾ  ಓದುವ ಕಾಲೇಜಿನ ಬಳಿ ಮನೆ ಸಿಗುವುದು ಕಷ್ಟ. ಒಂದು ವೇಳೆ ಅಪಾರ್ಟ್‌ಮೆಂಟ್‌ ಅಥವಾ ಪಿಜಿ ಹಾಸ್ಟೆಲ್‌ ಸಿಕ್ಕಿದರೂ ಅನೇಕ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಿದೆ. ಬಾಡಿಗೆ ದರ ಗಗನಮುಖಿಯಾಗಿರುವುದು ದೊಡ್ಡ ಸವಾಲಾಗಿದೆ’.

‘ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವೇಗವಾಗಿ ಬೆಳೆಯುತ್ತಿದೆ. ಒಂದು ಕಡೆ ಮನೆ ಬಾಡಿಗೆ ಏರುತ್ತಿದೆ.  ಇನ್ನೊಂದೆಡೆ ನಮಗೆ ಬೇಕಾದ ಜಾಗದಲ್ಲಿ ಸರಿಯಾದ ಮನೆ ಸಿಗುತ್ತಿಲ್ಲ. ಇದು ಹೊರವಲಯದಲ್ಲಿ ಕಾಡುವ ಮುಖ್ಯ ಸಮಸ್ಯೆಯಾಗಿದೆ. ಆದರೆ, ಇಲ್ಲಿರುವ   ಪಿಜಿ ಹಾಸ್ಟೆಲ್‌ಗಳು ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣಗಳಾಗಿವೆ’ ಎನ್ನುವುದು ಕೇರಳದ ಸಂತೋಷ್‌ ಕುಮಾರ್‌ನ ಅಭಿಪ್ರಾಯ.

ಕೇರಳದ ಮಡೊನ್ನ,   ‘ಬೆಂಗಳೂರಿನ ಕೆಲವು ಭಾಗಗಳಲ್ಲಿ ಖಾಲಿ ಮನೆಗಳು ಸುಲಭವಾಗಿ ಸಿಗುತ್ತವೆ.   ಆದರೆ, ಬಾಡಿಗೆ, ಮುಂಗಡ ಹಣದ್ದೇ ಸಮಸ್ಯೆ. ನಾನು, ನನ್ನ ಕೆಲವು ಸ್ನೇಹಿತರು ಇದೇ ಕಾರಣದಿಂದ ತಿಂಗಳುಗಟ್ಟಲೆ ಮನೆ ಹುಡುಕುವುದರಲ್ಲೇ ಕಳೆಯುತ್ತೇವೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT