ADVERTISEMENT

ಒತ್ತಡಕ್ಕೆ ಉತ್ತರವಾಗಿ ಅರಳಿದ ಕಲಾಕೃತಿಗಳು

ಅಭಿಲಾಷ ಬಿ.ಸಿ.
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ಒತ್ತಡಕ್ಕೆ ಉತ್ತರವಾಗಿ ಅರಳಿದ ಕಲಾಕೃತಿಗಳು
ಒತ್ತಡಕ್ಕೆ ಉತ್ತರವಾಗಿ ಅರಳಿದ ಕಲಾಕೃತಿಗಳು   

ನಿತ್ಯ ಜೀವನದಲ್ಲಿ ಎದುರಾಗುವ ಒತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಸವಾಲಿನ ಸಂಗತಿಯೇ ಸರಿ. ಒತ್ತಡ ನಿಯಂತ್ರಿ
ಸಲು ಒಬ್ಬೊಬ್ಬರು ಒಂದೊಂದು ತಂತ್ರದ ಮೊರೆ ಹೋಗುತ್ತಾರೆ. ಅನುಪಯುಕ್ತ ವಸ್ತುಗಳಲ್ಲಿ ವರ್ಣಚಿತ್ರ ರಚಿಸುವ ಮೂಲಕ ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವ ಕಲೆಯನ್ನು ಅನಿತಾ ಪ್ರಿಯಾ ಕರಗತಮಾಡಿಕೊಂಡಿದ್ದಾರೆ. ಈ ವಿಶೇಷ ಕೌಶಲವನ್ನು ಅವರು ‘ಝೆನ್‌ ಆ್ಯಂಗಲ್’ ಎಂದು ಕರೆಯುತ್ತಾರೆ.

ಯಲಹಂಕ ನಿವಾಸಿ ಅನಿತಾ ಪ್ರಿಯಾ ಚಿಕ್ಕ ವಯಸ್ಸಿನಲ್ಲಿಯೇ ಕಲೆಯ ಕುರಿತು ಆಸಕ್ತಿ ಬೆಳೆಸಿಕೊಂಡವರು. ಅವರ ಕಲಾಸಕ್ತಿಯನ್ನು ಗುರುತಿಸಿದ ಪೋಷಕರು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಚಿತ್ರಕಲೆ ತರಗತಿಗೆ ಸೇರಿಸಿದರು. ಆದರೆ ಅದನ್ನೇ ವೃತ್ತಿಯಾಗಿ ಆಯ್ದುಕೊಳ್ಳಲು ಪೋಷಕರ ಸಮ್ಮತಿ ಇರಲಿಲ್ಲ. ಬಿಎಸ್ಸಿ ಹಾಗೂ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು.

‘ಎರಡನೇ ಮಗುವಿನ ಜನನದ ನಂತರ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ’ ಎನ್ನುವಾಗ ಅವರ ದನಿಯಲ್ಲಿ ಬೇಸರ ಇರಲಿಲ್ಲ. ‘ಮಗು ಹುಟ್ಟಿದ ನಂತರ ಪ್ರವೃತ್ತಿಯನ್ನೇ ವೃತ್ತಿಯಾಗಿ ಆಯ್ಕೆಮಾಡಿಕೊಳ್ಳುವ ಅವಕಾಶ ದೊರೆಯಿತು’ ಎಂದು ಹೆಮ್ಮೆಯಿಂದ ಬೀಗುತ್ತಾರೆ. ಮಕ್ಕಳ ಲಾಲನೆ ಪಾಲನೆ ಮತ್ತು ಮನೆಗೆಲಸಕ್ಕಷ್ಟೇ ಸೀಮಿತವಾಗುತ್ತೇನೆ ಎಂಬ ಭಯ ಹಾಗೂ ಮಾನಸಿಕ ಒತ್ತಡ ಕಾಡಿದಾಗ ಅದರಿಂದ ಹೊರಬರಲು ಬಹುವಿನ್ಯಾಸದ ವರ್ಣಚಿತ್ರ ರಚನೆಯ‌ಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರು. ಬಾಲ್ಯದಲ್ಲಿ ಮೊಳೆತಿದ್ದ ಕ‌ಲೆಯ ಚಿಗುರು ಹೆಮ್ಮರವಾಗಿ ಬೆಳೆಯಲು ಆ ಒತ್ತಡವೇ ಪೋಷಕಾಂಶವಾಯಿತು.

ADVERTISEMENT

ತನಗೆ ಒಲಿದ ಕಲಾ ಕೌಶಲ ನಿರಂತರ ಚಲನಶೀಲತೆಯಿಂದ ಕೂಡಿರಬೇಕು ಎಂಬ ಕಾಳಜಿ ಹೊಂದಿರುವ ಅನಿತಾ ಅನೇಕ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನೆಯ ಮೂಲೆಯಲ್ಲಿರುವ ಬೇಡದ ವಸ್ತುಗಳ ಮೇಲೆ ಸುಂದರ ಚಿತ್ತಾರ ಮೂಡಿಸುವ ಕಲೆಯನ್ನು ಬೋಧಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಕೆಲಸವಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಅವರಿಗೆ ಈಗ ಒಂದು ಕ್ಷಣವೂ ಬಿಡುವಿಲ್ಲ. 6ರಿಂದ 17 ವರ್ಷ ವಯಸ್ಸಿನ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.

ನಗರದ ವಿವಿಧ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳು ಗೀಚುವ ಗೆರೆಗಳಿಗೆ ಕಲಾತ್ಮಕತೆಯ ಅರ್ಥ ನೀಡುತ್ತಿದ್ದಾರೆ. ಮಕ್ಕಳು ಕೈಯಲ್ಲಿ ಪೆನ್ ಹಿಡಿದು ಯಾಂತ್ರಿಕವಾಗಿ ಬರೆಯುವ ಪ್ರತಿ ಚಿತ್ತಾರಕ್ಕೂ ಅರ್ಥವಿರುತ್ತದೆ. ಅವೆಲ್ಲವೂ ನಮ್ಮ ಮನಸಿನ ಆಳದಲ್ಲಿರುವ ಭಾವನೆಗಳು, ಒತ್ತಡ
ಗಳ ಅಭಿವ್ಯಕ್ತಿಯೇ ಆಗಿರುತ್ತದೆ ಎನ್ನುವ ಅವರು, ಅದೇ ಚಿತ್ತಾರವನ್ನು ಕ್ರಮಬದ್ಧವಾಗಿ ರೂಢಿಸಿಕೊಂಡರೆ ಕಲೆ ಅರಳುತ್ತದೆ ಎನ್ನುತ್ತಾರೆ.
ಘನತ್ಯಾಜ್ಯ ನಿರ್ವಹಣೆ ಹಾಗೂ ಕಡಿಮೆ ಸ್ಥಳಾವಕಾಶದಲ್ಲಿ ಮನೆ ಸಿಂಗರಿಸಬಯಸುವವರಿಗೆ ಅನಿತಾ ಅವರ ಕಲಾಕೃತಿಗಳು ಪೂರಕ.

ಸೆರಮಿಕ್‌ ಬಳಸಿ ಕಲಾಕೃತಿ ರಚಿಸುವುದು ಇವರಿಗೆ ಅಚ್ಚುಮೆಚ್ಚು. ಅವುಗಳಲ್ಲಿ ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳ ಪಾಲು ದೊಡ್ಡದಿದೆ. ನದಿ, ಕುದುರೆ, ಗಣೇಶ ಚಿತ್ರಗಳನ್ನು ಸೆರಮಿಕ್‌ ಮೇಲೆ ರಚಿಸಿದ್ದಾರೆ. ನೋಡಲು ಮರದ ಮೇಲೆ ಚಿತ್ರಿಸಿದಂತೆ ಭಾಸವಾಗುತ್ತದೆ. ಮಕ್ಕಳ ಪುಟ್ಟ ಕೈ, ಕಾಲುಗಳ ಹೆಜ್ಜೆ ಗುರುತುಗಳನ್ನು ಶಾಶ್ವತವಾಗಿ ಹಿಡಿದಿಡುವ ಪ್ರಯತ್ನಗಳಲ್ಲಿಯೂ ಅನಿತಾ ಸಫಲರಾಗಿದ್ದಾರೆ. ಸೆರಮಿಕ್‌ ಮೇಲೆ ಮಗುವಿನ ಕೈ ಹಾಗೂ ಕಾಲುಗಳ ಚಿತ್ರಗಳನ್ನು ಯಥಾವತ್ತಾಗಿ ರಚಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಈ ರೀತಿಯ ವರ್ಣಚಿತ್ರಗಳಿಗೆ ಬೇಡಿಕೆ ಹೆಚ್ಚಿದೆ. ನಾನು ರಚಿಸಿದ ಕಲಾಕೃತಿಗಳನ್ನು ಹಲವರು ಮದುವೆಗಳಿಗೆ ಉಡುಗೊರೆಯಾಗಿ ನೀಡಲು ಖರೀದಿಸುತ್ತಾರೆ. ಸದ್ಯ ಫೇಸ್‌ಬುಕ್ ಪೇಜ್‌ ಮೂಲಕ ಆನ್‌ಲೈನ್ ಮಾರಾಟ ಮಾಡುತ್ತಿದ್ದೇನೆ. ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಅಕ್ರಲಿಕ್ ಬಣ್ಣಗಳನ್ನು ಹೆಚ್ಚಾಗಿ ಬಳಸುತ್ತೇನೆ. ತಯಾರಿಸಲು ತೆಗೆದುಕೊಂಡ ಸಮಯ ಹಾಗೂ ಕಚ್ಚಾ ವಸ್ತುಗಳ ಬೆಲೆಗೆ ಅನುಗುಣವಾಗಿ ಕಲಾಕೃತಿಗಳ ದರ ನಿಗದಿಪಡಿಸುತ್ತೇನೆ. ಕನಿಷ್ಠ ₹200 ರಿಂದ ₹1,500 ರವರೆಗಿನ ಕಲಾಕೃತಿಗಳು ಲಭ್ಯವಿದೆ’ ಎನ್ನುತ್ತಾರೆ ಅನಿತಾ.

ಅನಿತಾ ಅವರ ಕಲೆಗೆ ಕುಟುಂಬದ ಸಹಕಾರವೂ ಇದೆ. ಮಕ್ಕಳ ಜವಾಬ್ದಾರಿಯನ್ನು ಅವರ ತಾಯಿ ನಿರ್ವಹಿಸಿದರೆ, ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ತಂದೆ ಸದಾ ಸಹಕರಿಸುತ್ತಾರೆ. ಕಾರ್ಯಾಗಾರಕ್ಕೆಂದು ಹೊರ ಊರುಗಳಿಗೆ ತೆರಳಿದಾಗ ಪತಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ವರ್ಣಚಿತ್ರಗಳ ನವೀನ ವಿನ್ಯಾಸಗಳ ಕಲಿಕೆಯನ್ನು ಅನಿತಾ ಎಂದಿಗೂ ನಿಲ್ಲಿಸಿಲ್ಲ. ಆಗಾಗ್ಗೆ ಹೊಸ ಮಾದರಿಯ ಕಲಿಕೆಯ ತರಬೇತಿ ಪಡೆದು, ಅವರೊಳಗಿನ ಕಲಾ ಕೌಶಲ ತುಕ್ಕು ಹಿಡಿಯದಂತೆ ಜಾಗೃತಿ ವಹಿಸುತ್ತಾರೆ.

ಅನಿತಾ ಸಂಪರ್ಕಕ್ಕೆ: 8123929629, facebook.com/aarathyramkumar896

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.