ADVERTISEMENT

ಕಟ್ಟುವರು ಇವರು ಮನೆ ಇಲ್ಲದವರು

ಡಿ.ಗರುಡ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಅದೆಷ್ಟೊಂದು ಕುಟುಂಬಗಳು ಬೆಚ್ಚಗಿರಲು ಕಾರಣವಾದ ಈ ಕೈಗಳು ಕಟ್ಟಿದ ಮನೆಗಳಿಗೆ ಲೆಕ್ಕವಿಲ್ಲ. ಮನೆ ಕಟ್ಟಿಕೊಳ್ಳುವ ಮಂದಿಯ ಕನಸು ನನಸಾಗಿಸುವ ಇವರ ಬೆವರ ಹನಿಗಳ ಬೆಲೆ ದೊಡ್ಡದು. ಆದರೂ ಈ ಜೀವಿಗಳಿಗೇ ಗಟ್ಟಿ ಸೂರಿಲ್ಲ. ಪ್ರತಿ ಕಟ್ಟಡಕ್ಕೆ ಅಡಿಪಾಯ ಇಟ್ಟಾಗ ಪುಟ್ಟದೊಂದು ಶೆಡ್‌ನಲ್ಲಿ ವಾಸ.
 
ದೊಡ್ಡ ಮನೆ ಎದ್ದು ನಿಲ್ಲುವ ಹೊತ್ತಿಗೆ ಮಣ್ಣು ಸವರಿ ಜೋಡಿಸಿಟ್ಟ ನಾಲ್ಕು ಗೋಡೆಗಳ ಆ ಆಸರೆಯೂ ನೆಲಸಮ. ಅಲ್ಲಿಗೆ ಆ ನೆಲದ ಋಣ ಮುಗಿಯಿತೆಂದು ಹುಡುಕಲು ಹೊರಡುತ್ತಾರೆ ಮತ್ತೊಂದು ಇಂಥದೇ ತಾಣ. 
                                                
ಮೂರು ಕಲ್ಲಿನ ಮೇಲಿಟ್ಟ ಪಾತ್ರೆಯಲ್ಲಿ ಒಗ್ಗರಣೆ ಸಹಿತವಾಗಿ ಬೇಯಿಸಲು ಇಟ್ಟ ಅನ್ನ ಕುದಿಯುತಿತ್ತು. ಆಗಿನ್ನೂ ಹಕ್ಕಿಗಳು ಕಣ್ಣುಜ್ಜಿಕೊಂಡು ಚಿಲಿಪಿಲಿ ಎನ್ನುವ ಹೊತ್ತು. ಕತ್ತಲು ಕಂತುವ ಮುನ್ನವೇ ಮೈತೊಳೆದುಕೊಂಡು ಸಜ್ಜಾಗುವ ಚಡಪಡಿಕೆ ಆ ಹೆಂಗಳೆಗೆ.

ಅವಸರದಲ್ಲಿ ನಾಲ್ಕು ಚೊಂಬು ನೀರು ಸುರಿದುಕೊಂಡ ಮರುಕ್ಷಣವೇ ಗಂಡನ ಸ್ನಾನದ ಸರದಿ. ಮಕ್ಕಳಿಗೆ ಮರಳಿನ ಮೇಲೆ ಹಾಸಿದ ತುಂಡು ಕವದಿ, ಹೊದಿಕೆ. ಅವರು ಕಣ್ಣು ಬಿಡುವ ಹೊತ್ತಿಗಾಗಲೇ ಹಿರಿಯರೆಲ್ಲ ಕೆಲಸಕ್ಕೆ ಸಜ್ಜು. ಸಂಜೆಯವರೆಗೆ ಮರಳು, ಕಲ್ಲು, ಇಟ್ಟಿಗೆ, ಸಿಮೆಂಟ್ ಹೊರುವ ಕಾಯಕ.

ಮನೆ ಎಂದು ಆಸರೆಗೆ ಇರುವುದು ಸಿಮೆಂಟ್ ಕಾಣದ ಇಟ್ಟಿಗೆ ಜೋಡಿಸಿಟ್ಟ ನಾಲ್ಕು ಗೋಡೆ. ಮೇಲೊಂದು ತಗಡು. ಬಾಗಿಲಂತೂ ಇಲ್ಲ. ಇವರದ್ದು ಬಯಲಿಗಿಟ್ಟ ಬದುಕು. ಇವರು ಕಟ್ಟಿದ ಮನೆಗಳು ಅದೆಷ್ಟೆಂದು ಲೆಕ್ಕವಿಲ್ಲ. ಆದರೆ ಇವರ ಪಾಲಿಗೆ ಇರುವುದು ಜೋಡಿಸಿಟ್ಟ ಇಟ್ಟಿಗೆಗಳ ಬುನಾದಿಯಿಲ್ಲದ ನಾಲ್ಕು ಗೋಡೆಗಳ ಗೂಡು ಮಾತ್ರ! ಅದೂ ತಾತ್ಕಾಲಿಕ.

ಒಂದೊಂದು ಕಟ್ಟಡ ಬುನಾದಿಯಿಂದ ಮೇಲೇರುವ ಮೊದಲೇ ಕಟ್ಟಿಕೊಳ್ಳುವ ಈ ಪುಟ್ಟ ನೆರಳಿನ ಆಯುಷ್ಯ ಬಹಳ ಕಡಿಮೆ. ಇತ್ತ ದೊಡ್ಡ ಅಪಾರ್ಟ್‌ಮೆಂಟ್ ಎದ್ದುನಿಲ್ಲುವ ಹೊತ್ತಿಗೆ ಆಸರೆಗಿದ್ದ ಈ ಅಭದ್ರ ಗೋಡೆಯೂ ಉರುಳಿ ಹೋಗುತ್ತದೆ. ಮತ್ತೆ ಹೊಸ ಆಸರೆಯ ಹುಡುಕಾಟ. ಹೊಸ ಮನೆ, ಅಪಾರ್ಟ್‌ಮೆಂಟ್, ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟುವ ಕಡೆಗೆ ಬದುಕು ಶಿಫ್ಟ್. ಅಲ್ಲಿಯೂ ಅಷ್ಟೇ `ಇಲ್ಲಿರುವುದು ಸುಮ್ಮನೆ; ಎಲ್ಲೂ ಇಲ್ಲ ನಮ್ಮನೆ~ ಎನ್ನುವಂಥ ಬದುಕು.

ಹೀಗೆ ಅಸ್ಥಿರವಾದ ಬದುಕನ್ನು ಆಶ್ರಯಿಸಿಕೊಂಡು ಬದುಕಿರುವ ಅದೆಷ್ಟೊಂದು ಜನರು ಉದ್ಯಾನನಗರಿಯಲ್ಲಿ ಇದ್ದಾರೆ. ನೂರಾರು ಮನೆಗಳನ್ನು ಕಟ್ಟಿದರೂ ಅವರಿಗೆ ತಮ್ಮದೇ ಆದ ಆಸರೆಯ ತಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ರಾಜ್ಯದ ರಾಜಧಾನಿಗೆ ಬಂದು ಮೂರು ತಲೆಮಾರು ಕಳೆದರೂ ಹೀಗೆಯೇ ಒಂದೆಡೆಯಿಂದ ಇನ್ನೊಂದೆಡೆ ಕುಟುಂಬವನ್ನು ಕಟ್ಟಿಕೊಂಡು ಸಾಗಿದವರೂ ಸಾಕಷ್ಟು. ಅಂಥ ವಲಸೆ ಬದುಕಿನ ಸಾಕ್ಷಿಯಾಗಿ ಅನೇಕ ನಿದರ್ಶನಗಳು ಬೆಂಗಳೂರಿನ ಅನೇಕ ಕಡೆಯಲ್ಲಿ ಸಿಗುತ್ತವೆ. ಫಕೀರಪ್ಪನ ಬದುಕು ಕೂಡ ಅದೇ ಪ್ರವಾಹದ ಒಂದು ಸಣ್ಣ ಕವಲು.

ಫಕೀರಪ್ಪನ ಅಜ್ಜ ಉತ್ತರ ಕರ್ನಾಟಕದಿಂದ ಬಂದವರು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕಾಡಿದ ಬರಗಾಲವೇ ವಲಸೆಗೆ ಕಾರಣ. ಆಗಿನಿಂದಲೂ ಈ ಕುಟುಂಬದ್ದು ಗಾರೆ ಕೆಲಸ. ಈಗ ಮೊಮ್ಮಗನ ಕಾಯಕವೂ ಅದೇ ಆಗಿದೆ. ಅಜ್ಜ, ಅಪ್ಪ ಹಾಗೂ ಮಗ ಹೀಗೆ ಮೂರು ತಲೆಮಾರಿನವರು ಕಟ್ಟಿದ ಮನೆಗಳು ಅದೆಷ್ಟೊ? ಆದರೆ ಈಗಲೂ ಬದುಕು ಅರ್ಧ ಬಯಲಲ್ಲಿ;ಇನ್ನರ್ಧ ಬಾಗಿಲಿಲ್ಲದ ಶೆಡ್‌ನೊಳಗೆ.

ಹೀಗಿದ್ದೂ ಒಂದಿಷ್ಟೂ ಕೊರಗದ ಫಕೀರಪ್ಪ, `ಬೇಸರ ಇಲ್ಲ; ದೇವರು ಕೊಟ್ಟಿದ್ದು ಇಷ್ಟು. ನನ್ನ ಮಕ್ಕಳು ಓದಿ ಬೇರೆ ದಾರಿ ಕಂಡುಕೊಳ್ಳಲಿ ಅಷ್ಟೇ ಸಾಕು~ ಎಂದು ಹೇಳುವಾಗ ಮುಖದ ತುಂಬಾ ಮುದ್ದು ಮಗುವಿನಂಥ ನಗು.

ಒಂದು ಕಡೆ ಕಟ್ಟಡ ನಿರ್ಮಾಣ ಕಾರ್ಯ ಮುಗಿದ ನಂತರ ಇನ್ನೊಂದೆಡೆ ಕೆಲಸ ಹುಡುಕುವ ಕಾಲದಲ್ಲಿ ಇಂಥ ವಲಸೆ ಕುಟುಂಬಗಳು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲಿಯೂ ಕುಟುಂಬದ ಹೆಣ್ಣುಮಕ್ಕಳು ಸ್ನಾನಕ್ಕೆ ಮರೆಯೂ ಇಲ್ಲದೆ ಮೈಗೆ ನೀರು ಸುರಿದುಕೊಳ್ಳುವುದನ್ನೂ ಮರೆಯಬೇಕು. ಅಂಥ ಸ್ಥಿತಿ ಎದುರಾಗುವುದು ಅಲ್ಪ ಕಾಲ.
 
ಒಂದು ಮನೆ ನಿರ್ಮಾಣ ಮುಗಿಯುವ ಮುನ್ನವೇ ಮತ್ತೊಂದು ಮನೆಯ ನೀಲನಕ್ಷೆ ಸಿದ್ಧವಾದ ನೆಲದಲ್ಲಿ ನಾಲ್ಕು ಗೋಡೆ ಕಟ್ಟಲು ವ್ಯವಸ್ಥೆ ಮಾಡಿಕೊಳ್ಳುವ ಸುರಕ್ಷಿತ ಮಾರ್ಗವೂ ಇವರಿಗೆ ಗೊತ್ತು. `ಕೆಲಸ ಬಲ್ಲವನಿಗೆ ದೇವರು ಎಲ್ಲಿಯಾದರೂ ಅನ್ನ-ನೆಲ ಕೊಡುತ್ತಾನೆ~ ಎನ್ನುವ ರವಿಶೇಖರ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದವರು.

ಅವರೀಗ ನಗರದ ಅಂಚಿನಲ್ಲಿ ಶಾಲೆಯೊಂದನ್ನು ಕಟ್ಟುತ್ತಿರುವ ಕೆಲಸಗಾರ. ಜೊತೆಗೆ ಅವರ ಕುಟುಂಬಕ್ಕೆ ಇಲ್ಲಿ ಸಿಕ್ಕಿರುವುದು ಕಾವಲು ಕಾಯುವ ಜವಾಬ್ದಾರಿ. ಹೀಗೆ ಒಂದರ ಜೊತೆಗೆ ಇನ್ನೊಂದು ಕೆಲಸ ಮಾಡಿಕೊಂಡು ತಿಂಗಳುಗಟ್ಟಲೆ ಒಂದಿಷ್ಟು ಬೆಚ್ಚನೆಯ ಗೂಡನ್ನಂತೂ ಮಾಡಿಕೊಂಡಿದ್ದಾರೆ.

ಹೀಗೆ ಗಾರೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ನೆಲೆಸಿದವರಲ್ಲಿ ಉತ್ತರ ಕರ್ನಾಟಕದವರು ಹೆಚ್ಚೆನ್ನುವ ಅಭಿಪ್ರಾಯ ಈ ಹಿಂದಿತ್ತು. ಆದರೆ ಇತ್ತೀಚೆಗೆ ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶದವರ ಸಂಖ್ಯೆ ಏರಿದೆ. ಬಿಹಾರದಿಂದ ಬಂದ ರಾಜು ಬಿಹಾರಿ ಎನ್ನುವ ಯುವಕ ವಿಜಯನಗರ ಬಡಾವಣೆಯಲ್ಲಿ ಒಂದು ಅಪಾರ್ಟ್‌ಮೆಂಟ್ ಕಟ್ಟುವಾಗ ಸಿಮೆಂಟ್ ಚೀಲ ಎತ್ತಿ ಹಾಕುವ ಕೆಲಸಕ್ಕೆ ಸೇರಿದವ.
 
ಆಗ ಶೆಡ್‌ನಲ್ಲಿ ಇದ್ದವನು ಈಗ ಅದೇ ಅಪಾರ್ಟಮೆಂಟ್‌ನಲ್ಲಿ ವಾಚ್‌ಮೆನ್ ಆಗಿದ್ದಾನೆ. ಅವನಿಗೆ ಅಲ್ಲಿಯೇ ಒಂದು ಕೋಣೆಯೂ ಸಿಕ್ಕಿದೆ. ಅಂಥ ಅದೃಷ್ಟ ವಲಸೆ ಬಂದ ಕಾರ್ಮಿಕರಿಗೆಲ್ಲ ಇರುವುದಿಲ್ಲ. ಆದ್ದರಿಂದ ಇಂದು ಇಲ್ಲಿ-ನಾಳೆ ಅಲ್ಲಿ ಎಂದು ಸಾಗುತ್ತಾರೆ.

ಹೀಗೆ ಶೆಡ್ ಕಟ್ಟಿಕೊಂಡು ಇರುವವರ ಮನೆಯಲ್ಲಿ ಯಾವುದೇ ಐಷಾರಾಮ ಇಲ್ಲದಿರಬಹುದು. ಆದರೆ ಟೆಲಿವಿಷನ್ ಸೆಟ್ ಅಂತೂ ಇದ್ದೇ ಇರುತ್ತದೆ. ಅದೇ ಅವರಿಗೆ ದೊಡ್ಡ ರಂಜನೆ. ವಾರಕ್ಕೊಂದು ರಜೆಯಲ್ಲಿ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಂತೂ ಗ್ಯಾರಂಟಿ. ವಾರ ಪೂರ್ತಿ ಕೆಲಸದ ನಡುವೆ ಅದೇ ಸಿನಿಮಾ ಕುರಿತ ಚರ್ಚೆ.

ಒಟ್ಟಿನಲ್ಲಿ ಬದುಕಂತೂ ಕಷ್ಟಗಳ ನಡುವೆಯೂ ಸಂತಸದಿಂದ ಸಾಗುತ್ತದೆ. `ಆಸೆ ಕಡಿಮೆ ನಮಗೆ; ಅದಕ್ಕೇ ತೃಪ್ತಿ ಇದೆ. ದೊಡ್ಡ ಅಂತಸ್ತಿನಲ್ಲಿರೋ ನೀವು ನಮ್ಮಷ್ಟು ಸಂತೋಷವಾಗಿಲ್ಲ~ ಎಂದು ಹೇಳುವ, ಎರಡು ಬುದ್ಧಿಮಾಂದ್ಯ ಮಕ್ಕಳ ತಂದೆ ಆಗಿದ್ದರೂ ಶೆಡ್‌ನಲ್ಲಿಯೇ ಅರಮನೆಯ ಸುಖ ಕಂಡಿರುವ ಸಗಯಿ ಮಾತು ಮನಕ್ಕೆ ತಟ್ಟಿ ಯೋಚನೆಗೆ ಹಚ್ಚುವಂತೆ ಮಾಡುತ್ತದೆ.

ಶೆಡ್ ಮುಂದಿಟ್ಟ ಮೂರು ಕಲ್ಲುಗಳ ಒಲೆಯ ಮೇಲೆ ಬೇಯಿಸಿದ ಆಲ್‌ಇನ್ ಒನ್ ಎನ್ನುವಂಥ `ರೈಸ್‌ಭಾತ್~, `ಖಾರಾಮುದ್ದೆ~, `ತಟ್ಟಿದ ರೊಟ್ಟಿ~ ಬಾಯಿಗಿಟ್ಟು ನಿಶ್ಚಿಂತೆಯಿಂದ ಸವಿದರೆ ಗೊತ್ತಾಗುತ್ತದೆ ಇಂಥ ಮನೆಯಲ್ಲಿ ಕಷ್ಟಗಳನ್ನೂ ಮರೆಸಿಬಿಡುವ ಅದೃಶ್ಯವಾದ ಶಕ್ತಿಯೊಂದಿದೆ ಎಂದು.

ದಣಿದ ದೇಹಕ್ಕೆ ಬೇಕು ಒಂದಿಷ್ಟು ಮುದ್ದೆ-ಸುಖ ನಿದ್ರೆ ಎನ್ನುವುದು ಈ ಶೆಡ್‌ಗಳಲ್ಲಿನ ಬದುಕು ನೋಡಿದಾಗ ಅನಿಸುವುದು ಸಹಜ. ಇಲ್ಲಿಯೂ ಕೆಲವೊಮ್ಮೆ ಶಾಂತಿ ಕದಡುವ ಜಗಳ ಇದ್ದರೂ ಬೆಳಿಗ್ಗೆ ಕೆಲಸಕ್ಕೆ ಎದ್ದು ಹೊರಟಾಗ ಎಲ್ಲವೂ ಪ್ರಶಾಂತ! ಮತ್ತೆ ಸಾಗುತ್ತದೆ ಕತ್ತಲೆ ಕರಗುವ ಮೊದಲೇ ಏಳುವ ಬದುಕು. ಅದೇ ಈ ಇಟ್ಟಿಗೆ ಗೂಡಿನಂಥ ಮನೆಯೊಳಗಿನ ನಿತ್ಯಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.