ADVERTISEMENT

ಕಣ್ಣಿಗೆ ಕಾಣದೆ ಮೈಮುಟ್ಟಿ ತುಟಿಮುಟ್ಟಿ ...

ಪ್ರವೀಣ ಕುಲಕರ್ಣಿ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಶಕಗಳ ಹಿಂದೆ ಮಾಗಡಿ ರಸ್ತೆಯಲ್ಲಿ ಕೆನೆತ್‌ ಆಂಡರ್ಸನ್‌ ನರಭಕ್ಷಕ ಚಿರತೆಯನ್ನು ಬೇಟೆಯಾಡಲು ಹೋದಾಗ ಭರ್ತಿ ಚಳಿಗಾಲವಂತೆ. ಮರದ ಮೇಲಿನ ಮಚಾನದಲ್ಲಿ ಕುಳಿತು ಗಡಗಡ ನಡುಗುವಾಗ ಅವರ ಸಹಾಯಕ್ಕೆ ಬಂದಿದ್ದು ಸಣ್ಣ ಬಕೆಟ್ನಲ್ಲಿ ತುಂಬಿದ್ದ ಬಿಸಿ ಚಹಾ. ಅಂದಹಾಗೆ, ಅವರು ಚಹಾ ಕುಡಿಯುತ್ತಿದ್ದುದು ಲೋಟದ ಲೆಕ್ಕದಲ್ಲಿ ಅಲ್ಲ; ಲೀಟರ್‌ ಮಾಪನದಲ್ಲಿ!

ಕೆನೆತ್‌ ಬೇಟೆಗಳ ಸಾಹಸ ಇಲ್ಲವೆ ಅವರ ಚಹಾ ಪ್ರೇಮದ ಕುರಿತು ಈಗೇನೂ ಚರ್ಚಿಸಲು ಹೊರಟಿಲ್ಲ. ಆದರೆ, ನರಭಕ್ಷಕಗಳಿಗೆ ಸಿಂಹಸ್ವಪ್ನವಾಗಿದ್ದ ಆ ಗಂಡೆದೆ ಶೂರನನ್ನೂ ನಮ್ಮ ಬೆಂಗಳೂರಿನ ಕಿಲಾಡಿ ಚಳಿ ನಡುಗಿಸದೆ ಬಿಟ್ಟಿಲ್ಲ ನೋಡಿ. ಮಂಜು ಸುರಿಯುವ ಮುಂಜಾವಿನಲ್ಲಿ ಹಬೆಯಾಡುತ್ತಿದ್ದ ಚಹಾ ಹೀರುತ್ತಾ ಚಳಿಯ ಕುರಿತು ಯೋಚಿಸುತ್ತಿದ್ದಾಗ ಥಟ್ಟನೆ ಹೊಳೆದದ್ದು ಕೆನೆತ್‌ ಕಥೆ. ಆ ನರಭಕ್ಷಕ ಬೇಟೆಗಾರ ಈಗ ಬದುಕಿದ್ದಿದ್ದರೆ ಬೆಂಗಳೂರಿನ ಚಳಿಯ ಬಗೆಗೆ ಅದೇನು ವ್ಯಾಖ್ಯಾನ ನೀಡುತ್ತಿದ್ದರೋ ಎನ್ನುವ ಕುತೂಹಲ.

 ಚಹಾದ ಆ ಕಥೆಯನ್ನು ಹಾಗೇ ಬಿಟ್ಟು ನಮ್ಮ ಸುತ್ತಲಿನ ವಿದ್ಯಮಾನಗಳ ಕಡೆಗೆ ಕಣ್ಣು ಹಾಯಿಸಿದಾಗ ಈಗ ‘ಬೀರ್‌ಬಲ್ಲ’ರ ಸಂಖ್ಯೆ ಹೆಚ್ಚಾದಂತೆ ಗೋಚರಿಸುತ್ತದೆ. ಬಾರ್‌ ಎಂಬ ಆಸ್ಥಾನದ ಗೋಷ್ಠಿಗಳಲ್ಲಿ ‘ಬೀರ್‌ಬಲ್ಲ’ರ ಹೊಸ ಹೊಸ ಕಥೆಗಳೂ ಬಿಚ್ಚಿಕೊಳ್ಳುತ್ತವೆ. ಗುಂಡು ಹಾಕದಿದ್ದರೆ ಚಳಿಗಾಲ ಬಂದಾದರೂ ಏನು ಪ್ರಯೋಜನ ಎನ್ನುವ ವಾದ ಅವರಿಂದ ಕೇಳಿಬರುತ್ತದೆ.

ಕೆನೆತ್‌ ಅವರನ್ನೂ ನಡುಗಿಸಿದ್ದ ಚಳಿರಾಯನಿಗೆ ಸುಂದರ ಯುವತಿಯರ ಮೇಲೆ ಅದೇಕೆ ಅಷ್ಟೊಂದು ಪ್ರೀತಿ? ಸಣ್ಣಗೆ ಸುರಿಯುವ ಮಂಜಿನಲ್ಲಿ ಅವರು ತುಂಡು ಬಟ್ಟೆ ತೊಟ್ಟುಕೊಂಡು ಬಂದರೂ ನಡುಗುವುದಿಲ್ಲ. ಚಳಿಗೆ ಒಂದಿನಿತು ಬೆದರುವುದೂ ಇಲ್ಲ. ಬದಲಾಗಿ ಎಂ.ಜಿ. ರಸ್ತೆಯ ಮಿಲ್ಕ್ ಬಾರ್‌ ಮುಂದೆ ನಡುರಾತ್ರಿಯಲ್ಲಿ ಐಸ್‌ಕ್ರೀಂ ತಿನ್ನುತ್ತಾ ಚಳಿರಾಯನಿಗೇ ಸೆಡ್ಡು ಹೊಡೆಯುತ್ತಾರೆ. ಯುವಕರಲ್ಲೂ ಇಲ್ಲದ ಚಳಿ ಮೆಟ್ಟಿನಿಲ್ಲುವ ಶಕ್ತಿ ಅವರಿಗೆ ಬಂದಿತಾದರೂ ಎಲ್ಲಿಂದ?

ಪ್ರತಿ ಚಳಿಗಾಲದಲ್ಲೂ ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ಗಳು ನಮ್ಮ ಬೆಂಗಳೂರಿನ ದೃಶ್ಯಕಾವ್ಯಗಳಾಗಿ ಮುದ ನೀಡುತ್ತವೆ. ಸುರಿಯುವ ಮಂಜಿಗೆ ಎಳೆಬಿಸಿಲಿನ ಎರಕ ಬಿದ್ದಾಗ ಎಂತಹ  ವ್ಯಕ್ತಿಯಲ್ಲೂ ಕವಿ ಮನಸ್ಸು ಎದ್ದು ಕೂರುತ್ತದೆ. ಮಂಜು ಮತ್ತು ಎಳೆಬಿಸಿಲು ಇಲ್ಲಿಯ ಮರಗಳ ಮೇಲೆ ಕಣ್ಣಾಮುಚ್ಚಾಲೆ ಆಟದಲ್ಲಿ ತೊಡಗಿದಾಗ ‘ಹಸಿರಿನಲ್ಲೂ ಎಷ್ಟೊಂದು ಬಣ್ಣಗಳು’ ಎನ್ನುವ ಉದ್ಗಾರ ಹೊರಡುತ್ತದೆ. ಅಬ್ಬಾ! ಚಳಿಯಿಂದ ಕಚಗುಳಿ ಅನುಭವಿಸುತ್ತಾ ಲಾಲ್‌ಬಾಗ್‌ನಲ್ಲಿ ಬೆಳಗಿನ ವಾಕಿಂಗ್‌ ಮಾಡುವುದು ಅದೆಂತಹ ಆನಂದ ಕೊಡುತ್ತದೆ.

ಸೂರ್ಯನ ಪ್ರಖರ ಬಿಸಿಲಿನಲ್ಲಿ ಮುಂಜಾವು ಕರಗಿ, ಮಧ್ಯಾಹ್ನ ಬಂದರೂ ಲಾಲ್‌ಬಾಗ್‌ ಸುತ್ತ ಮಂಜು ಕವಿದ ವಾತಾವರಣ ಇರುತ್ತದೆ. ಆದರೆ, ಜನ ಭ್ರಮಿಸುವಂತೆ ಅದು ಮಂಜಲ್ಲ, ವಾಹನಗಳು ಬಿಡುವ ಹೊಗೆ! ಹೆಬ್ಬಾಳ, ಹಲಸೂರು, ಸ್ಯಾಂಕಿ, ಮಡಿವಾಳ, ಲಾಲ್‌ಬಾಗ್‌ ಕೆರೆಗಳ ಭದ್ರತಾ ಸಿಬ್ಬಂದಿಯನ್ನು ಒಮ್ಮೆ ಕೇಳಿ ನೋಡಿ, ಈ ಕೆರೆಗಳ ದಂಡೆ ಮೇಲೆ ವಾಕಿಂಗ್‌ಗೆ ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆಯಂತೆ. ಬರುವವರ ವೇಷ–ಭೂಷಣ ಸಹ ಬದಲಾಗಿಬಿಟ್ಟಿದೆ.

ADVERTISEMENT

ಅದರೊಂದಿಗೆ ಬರುವ ಸಮಯದಲ್ಲೂ ವ್ಯತ್ಯಾಸ ಆಗಿದೆ. ಮನೆ ಅಂಗಳದಲ್ಲಿ ಎಳೆಬಿಸಿಲು ಬಿದ್ದಮೇಲೆ ಸವಾರಿಗೆ ಮುನ್ನುಡಿ ಬೀಳುತ್ತದೆ. ನಸುಕಿನಲ್ಲಿ ವಾಕಿಂಗ್‌ ಹೊರಟವರಿಗೆ ‘ನಿನಗೇನು ಹುಚ್ಚಾ’ ಎಂಬ ಪ್ರಶ್ನೆ ಎದುರಾಗುತ್ತದೆ. ಹಾಲು ತರುವ ಗವಳಿಗಳು ಮತ್ತು ಪೇಪರ್‌ ಹಾಕುವ ಹುಡುಗರ ದಿರಿಸು ಸಹ ಬದಲಾಗಿ ಬಿಟ್ಟಿದೆಯಲ್ಲ? ‘ಪೇಪರ್‌’ ಎಂದು ಕೂಗುವಾಗ ಆ ಹುಡುಗನ ಬಾಯಲ್ಲೂ ಹೊಗೆ! ಬೆಳ್ಳಂಬೆಳಿಗ್ಗೆ ದೂರದ ಊರುಗಳಿಂದ ಬರುವ ತರಕಾರಿ, ಬೇಳೆ–ಕಾಳುಗಳನ್ನು ಲಾರಿಗಳಿಂದ ಇಳಿಸುವಾಗ ಹಮಾಲಿಗಳ ಮೈಮೇಲೆ ನಡುಗಿಸುವ ಕುಳಿರ್ಗಾಳಿಯಲ್ಲೂ ಬೆವರು.

ಹೌದು, ಮೆಜಿಸ್ಟಿಕ್‌ನಲ್ಲಿ, ರೈಲು ನಿಲ್ದಾಣದಲ್ಲಿ ಚಾಯ್‌ವಾಲಾಗಳು ಎಷ್ಟೊಂದು ಹೆಚ್ಚಾಗಿದ್ದಾರೆ. ತುಂಬಿದ ಕಿತ್ತಲಿಗಳು ಎಷ್ಟು ಬೇಗ ಖಾಲಿ ಆಗುತ್ತಿವೆ. ಚಳಿಯ ಚಮತ್ಕಾರಕ್ಕೆ ಎಣೆಯುಂಟೆ? ಕಳ್ಳರು–ಕಾಕರು ನಡುರಾತ್ರಿಯಲ್ಲಿ ಕಾರ್ಯಾಚರಣೆಗೆ ಇಳಿಯುತ್ತಾರಲ್ಲ, ಅವರಿಗೇನೂ ಚಳಿ ಆಗುವುದಿಲ್ಲವೆ? ಮುಖಕ್ಕೇನೋ ಕಾಣದಂತೆ ಮಫ್ಲರ್‌ ಸುತ್ತಿರುತ್ತಾರೆ. ಗುರುತು ಸಿಗದಂತೆ ನೋಡಿಕೊಳ್ಳುವುದು ಮಾತ್ರವಲ್ಲ; ಶೀತಗಾಳಿಯಿಂದಲೂ ಅದು ರಕ್ಷಣೆ ನೀಡುತ್ತದೆ. ಆದರೆ, ದೇಹಕ್ಕೆ ರಕ್ಷಣೆ ಬೇಡವೇ? ಅವರು ಸ್ವೆಟರ್‌ ಇಲ್ಲವೆ ಜರ್ಕಿನ್‌ ಹಾಕಿರುತ್ತಾರೋ, ಇಲ್ಲವೋ? ಪೊಲೀಸರು ಸಿಸಿ ಟಿವಿಗಳ ದೃಶ್ಯಾವಳಿಗಳನ್ನು ಇಟ್ಟುಕೊಂಡು ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವುದು ಒಳಿತು!

ಚಳಿಗಾಲವೆಂದರೆ ಜಲಮಂಡಳಿಗೆ ತುಂಬಾ ಖುಷಿಯಂತೆ. ಕಳೆದುಹೋದ ಮಳೆಗಾಲ ಜಲಾಶಯಗಳನ್ನು ಭರ್ತಿ ಮಾಡುವ ಮೂಲಕ ನೀರಿನ ಸಮಸ್ಯೆಯನ್ನು ಕೊಚ್ಚಿಸಿಕೊಂಡು ಹೋಗಿರುತ್ತದೆ. ಚಳಿಗಾಲದಲ್ಲಿ ನೀರು ಹೆಚ್ಚಿಗೆ ಖರ್ಚಾಗುವುದಿಲ್ಲ (ನಗರದ ಅರ್ಧದಷ್ಟು ಮಂದಿ ಈ ಋತುವಿನಲ್ಲಿ ನಿತ್ಯ ಸ್ನಾನ ಮಾಡುವುದಿಲ್ಲ ಎನ್ನುವುದು ಜಲ ಮಂಡಳಿ ವಿಶ್ಲೇಷಣೆಯಿಂದ ಗೊತ್ತಾಗಿದೆ!) ಎಂಬ ದೃಢವಾದ ನಂಬಿಕೆಯಲ್ಲಿರುವ ಜಲಮಂಡಳಿ, ಮಳೆಗಾಲದ ಆಚೆ ಬರೀ ಚಳಿಗಾಲವೇ ಇರಬೇಕು ಎಂದು ಹರಸುತ್ತದೆ.

ಗುಡಿ–ಗುಂಡಾರಗಳಲ್ಲಿ ಚಳಿಗಾಲವೆಂದರೆ ದೇವರಿಗೂ ನಡುಕ. ಥರಗುಟ್ಟಿಸುವ ತಣ್ಣೀರಿನ ಅಭಿಷೇಕವೆಂದರೆ ಯಾರಿಗೆ ತಾನೆ ಖುಷಿ? ಅದಕ್ಕೇ ಸಂಸ್ಕೃತ ಪಂಡಿತರ ಮೊರೆಹೋಗಿ ‘ಉಷ್ಣೋದಕ ಅಭಿಷೇಕ’ಕ್ಕೆ ಅವಕಾಶ ಕಲ್ಪಿಸುವಂತೆ ಮಂತ್ರಗಳಲ್ಲಿ ತಿದ್ದುಪಡಿ ತರಿಸಿದೆಯಂತೆ ದೇವಸಂಕುಲ. ಆದರೆ, ಉದಕವನ್ನು ಉಷ್ಣಗೊಳಿಸುವಷ್ಟು ಪುರುಸೊತ್ತು ಇಲ್ಲದ ಪೂಜಾರಪ್ಪಗಳು ತಣ್ಣೀರಿನ ಅಭಿಷೇಕವನ್ನೇ ಮಾಡುತ್ತಾರೆ ಎನ್ನುವ ವರ್ತಮಾನ ಇದೆ. ಮಲ್ಲೇಶ್ವರದ ದೇವಾಲಯ ಬೀದಿಯಲ್ಲಿ ಪವಡಿಸಿರುವ ದೇವಾನುದೇವತೆಗಳು ನಿತ್ಯ ‘ಬೇಗ ಬಾರಪ್ಪ ರವಿತೇಜ’ ಎನ್ನುವ ಒಕ್ಕೊರಲ ಮನವಿ ಮಾಡುತ್ತಾರೆ.

ಈ ಮೇಲ್ಸೇತುವೆಗಳು ಚಳಿಗಾಲಕ್ಕೆ ಒಂದಿಷ್ಟೂ ಹೇಳಿ ಮಾಡಿಸಿದಂಥವಲ್ಲ ನೋಡಿ. ಹೊಸೂರಿನ ಉದ್ದದ ಫ್ಲೈಓವರ್‌ನಲ್ಲಾಗಲಿ, ಹೆಬ್ಬಾಳದ ಕೆರೆದಂಡೆ ಮೇಲಿನ ಫ್ಲೈಓವರ್‌ನಲ್ಲಾಗಲಿ ರಾತ್ರಿ ಹೊರಟು ನಿಂತರೆ ಚೂರಿಯಿಂದ ಇರಿದಷ್ಟು ಮೈಕೊರೆತ. ಅದೇ ಕೆಳಸೇತುವೆಗಳಾದರೆ ಚಳಿಯಿಂದ ನಮಗೆ ಎಷ್ಟೊಂದು ರಕ್ಷಣೆ ನೀಡುತ್ತವೆ. ಬಿಡಿಎ ಮತ್ತು ಬಿಬಿಎಂಪಿಗಳಿಗೆ ಇನ್ನುಮುಂದೆ ಕೆಳಸೇತುವೆಗಳನ್ನಷ್ಟೇ ನಿರ್ಮಿಸಬೇಕು ಎಂಬ ಮನವಿ ಸಲ್ಲಿಸಬೇಕಿದೆ.
ನಮ್ಮ ನಗರದ ವಿಮಾನಯಾನಿಗಳಿಗೆ ಡಿಸೆಂಬರ್‌ ಕಳೆದು ಜನವರಿ ಬಂತೆಂದರೆ ಚಳಿ ಶುರುವಾಗುತ್ತದೆ. ಏಕೆಂದರೆ, ದಟ್ಟ ಮಂಜಿನ ಕಿರಿಕಿರಿ ಹೆಚ್ಚಾಗಿ, ವಿಮಾನಗಳು ರದ್ದಾಗುವುದು ಆವಾಗಲೇ. ಚಳಿಯಲ್ಲೂ ಎ/ಸಿ ಕಾರಿನಲ್ಲಿ ಓಡಾಡುವ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು.

ಕತ್ತಲನ್ನು ಬಬಲ್‌ ಗಮ್‌ನಂತೆ ಹಿಗ್ಗಿಸುವ, ಹಗಲನ್ನೂ ಅಷ್ಟೇ ಸೊಗಸಾಗಿ ಕುಗ್ಗಿಸುವ ಚಳಿರಾಯ ಸೋಮಾರಿಗಳ ಮಹಾಗುರು. ಬೆಳಗಿನ ಐದು ಗಂಟೆಗೆ ಎದ್ದು ಹೊರಡಬೇಕಾದವರು ಈಗ, ಇನ್ನೈದು ನಿಮಿಷದಲ್ಲಿ ಎನ್ನುತ್ತಾ ಏಳೆಂಟು ಗಂಟೆಗೆ ಎದ್ದು ವಿಮಾನ–ರೈಲುಗಳನ್ನು ತಪ್ಪಿಸಿಕೊಂಡ ಉದಾಹರಣೆಗಳು ನಿತ್ಯವೂ ಸಿಗುತ್ತವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಅದು ಹೇಗೆ ಸಮಯಕ್ಕೆ ಸರಿಯಾಗಿ ಏಳುತ್ತಾರೋ, ಜಗತ್ತಿನ ಇನ್ನೊಂದು ಅದ್ಭುತದಂತೆ ಗೋಚರಿಸುತ್ತದೆ.
ನಮ್ಮ ರೇಸ್‌ ಕೋರ್ಸ್‌ನ ಕುದುರೆಗಳಿಗೂ ಈಗ ಬೆಳಗಾಗುವುದು ತಡವಂತೆ. ವಿಧಾನಸೌಧದಲ್ಲಿ ಕೇಳುತ್ತಿದ್ದ ಗೊರಕೆ ಸದ್ದು ಹೆಚ್ಚಾಗಿದೆಯಂತೆ. ಪಾರ್ಟಿಗಳಿಗೂ ಈಗ ಸುಗ್ಗಿ ಕಾಲವಂತೆ. ಏನೋಪ್ಪ, ಚಳಿಗಾಲವೆಂದರೆ ಎಷ್ಟೆಲ್ಲ ಅಂತೆ–ಕಂತೆಗಳು.

ಸುಂದರಾಂಗರು, ಅಂಗನೆಯರನ್ನು ಕಂಡರೆ ಚಳಿರಾಯನಿಗೆ ಎಲ್ಲಿಲ್ಲದ ಕೋಪ. ಅದಕ್ಕೇ ಮುಖ, ಮೈ–ಕೈ ನೋಡದೆ ಸ್ಪರ್ಶಕ್ಕೆ ಸಿಕ್ಕಿದ್ದನ್ನು ಸೀಳಿಯೇ ಬಿಡುತ್ತಾನೆ. ಚಳಿಗಾಲ ನಾಲ್ಕು ತಿಂಗಳ ಬದಲಿಗೆ ಇನ್ನೂ ಮೂರ್‍ ನಾಲ್ಕು ತಿಂಗಳು ಹೆಚ್ಚಾದರೆ ಏನಾಗುತ್ತದೆ? ಅಯ್ಯಯ್ಯೋ ಖಂಡಿತ ಬೇಡ. ಈಗಲೇ ಒಂದು ಕೋಟಿ ತಲುಪಿರುವ ನಗರದ ಜನಸಂಖ್ಯೆ ಇನ್ನೂ ಹೆಚ್ಚಾಗಿ, ಬೀದಿನಾಯಿಗಳ ಸಂಖ್ಯೆಯೂ ದುಪ್ಪಟ್ಟಾಗಿ, ಏಕೆ ಇಲ್ಲದ ತಾಪತ್ರಯ? ದ.ರಾ. ಬೇಂದ್ರೆಯವರ ಈ ‘ಚಳಿಯಾಕೆ’ಯನ್ನು ನೆನಪಿಸಿಕೊಳ್ಳದೆ ಚಳಿಗಾಲದ ಆಲಾಪ ಪೂರ್ಣಗೊಳ್ಳುವುದೇ ಇಲ್ಲ:

ಹೊಳೆ ಹೊಂಡದುಸಿರನ್ನೆ
ನಯವಾಗಿ ನೇಯ್ದಂಥ
ಮಂಜಿನ ಮೇಲ್ಸೆರಗು ಮೈ ತುಂಬ

ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.