ADVERTISEMENT

ಕನಸಿನ ಕುಲುಮೆಯಲಿ...

ಸತೀಶ ಬೆಳ್ಳಕ್ಕಿ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಪ್ರಕೃತಿ ಕೇವಲ ಚೆಲುವಿನ ರಾಯಭಾರಿಯಲ್ಲ. ಹೊರನೋಟಕ್ಕೆ ಸಹಜ ಸುಂದರವಾಗಿ ಕಂಡರೂ ಅದು ತನ್ನೊಳಗೆ ಹಲವು ಅಚ್ಚರಿ ಹಾಗೂ ನಿಗೂಢಗಳನ್ನು ಅಡಗಿಸಿಟ್ಟುಕೊಂಡಿದೆ.

ಕಲಾವಿದನ ಮನಸ್ಸು ಹೊಸತನಕ್ಕಾಗಿ ತುಡಿಯುತ್ತದೆ. ಈತನ ಅನ್ವೇಷಣೆಯ ಹಪಹಪಿಗೆ ನಿಸರ್ಗದ ರಮ್ಯತೆ ಹಾಗೂ ರೌದ್ರ ರಮಣೀಯತೆ ಎರಡನ್ನು ಅನಾವರಣಗೊಳಿಸುವ ಶಕ್ತಿಯಿದೆ. ಹರೆಯದ ಹುಡುಗಿಯರ ಮನಸು ಹುಚ್ಚುಕೋಡಿಯಂತೆ; ಊಹೆಗೂ ನಿಲುಕದ ಆ ವಯಸ್ಸಿನ ಹುಡುಗಿಯರ ಮನೋವ್ಯಾಪಾರಗಳನ್ನು ಕಲಾವಿದ ಮಾತ್ರ ಸೆರೆ ಹಿಡಿಯಬಲ್ಲ.

ಮನುಷ್ಯ ಸಂಬಂಧಗಳ ನಡುವಿನ ಭಾವನಾತ್ಮಕ ಎಳೆಯನ್ನು ನುಂಗಿ ನೊಣೆದಿರುವ `ಡಾಲರ್~ ಎಂಬ ಮೋಹಿನಿ, ದೇಶದ ಉದ್ದಗಲಕ್ಕೂ ಶಿಲ್ಪಗಳ ಮೇಲೆ ಝರಿಯಾಗಿ ಹರಿದಿರುವ ಕಲೆಯನ್ನು ಕಲಾವಿದ ಕುಂಚದಲ್ಲಿ ಸೆರೆಹಿಡಿವ ಪರಿ ಬೆರಗು ಹುಟ್ಟಿಸುತ್ತದೆ.

ADVERTISEMENT

ಹೀಗೆ ಜಗತ್ತಿನ ಮನೋ ವ್ಯಾಪರಗಳೆಲ್ಲವೂ ಕಲಾವಿದರ ಸೃಜನಶೀಲ ಶಕ್ತಿಗೆ ಅನುಗುಣವಾಗಿ ಕ್ಯಾನ್ವಾಸ್ ಮೇಲೆ ಮೈದಳೆಯುತ್ತವೆ. ನೋಡಿದಾಕ್ಷಣ ಮನಸ್ಸಿನಲ್ಲಿ ಅಧ್ಯಾತ್ಮ ಭಾವ ಸ್ಫುರಿಸುವ ಬುದ್ಧನ ಸ್ನಿಗ್ಧ ರೂಪ, ಮರಸಾಲುಗಳ ನಡುವೆ ಕಾಣುವಂಥ ಕಿರಿಯಗಲದ ನೀಳನೋಟ, ಕಣ್ಣಿಗೆ ಅಗೋಚರವಾದ ಭಾವಕ್ಕೆ ಮಾತ್ರವೇ ನಿಲುಕುವಂತಹ ಅಮೂರ್ತ ಭಾವ ಲಹರಿಗಳು ಇವೆಲ್ಲವೂ ಕುಂಚದಲ್ಲಿ ಸೊಗಸಾಗಿ ಅರಳಿವೆ.

ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿರುವ ಸಬ್‌ಲೈಮ್ ಗೆಲೇರಿಯಾ `ಕನಸುಗಳ ಮಾರುಕಟ್ಟೆ~. ಕಣ್ಣಿಗೆ ರಾಚುವ ಲೈಮ್ ಲೈಟ್‌ಗಳ ನಡುವೆ ನಳನಳಿಸುವ ಚಿತ್ರಕಲಾಕೃತಿಗಳು, ತುಂಡುಡುಗೆ ಧರಿಸಿ, ಹೈಹೀಲ್ಡ್ ತೊಟ್ಟು ಕೈಯಲ್ಲೊಂದು ವೈನ್ ಗ್ಲಾಸ್ ಹಿಡಿದ ಕ್ಲಾಸ್ ಮಂದಿ ಕಲಾಕೃತಿಗಳ ಮುಂದೆ ಹಾದು ಹೋದರೆ ಕಲಾವಿದನ ಕಣ್ಣುಗಳಲ್ಲಿ ಕನಸುಗಳು ಗರಿಗೆದರುತ್ತವೆ. ಅಲ್ಲಿ ನಡೆಯುವುದು ಕೇವಲ ಕನಸುಗಳ ವ್ಯಾಪಾರ. ಇಲ್ಲಿಗೆ ಬರುವ ಕಲಾರಸಿಕರು ತಮಗಿಷ್ಟವಾಗುವ ಕನಸನ್ನು ಕೊಂಡು ಇರಿಸಿಕೊಳ್ಳಬಹುದು.

ಮಾರ್ಚ್‌ವರೆಗೆ ನಡೆವ ಈ ಚಿತ್ರ ಸಂತೆಯಲ್ಲಿ ದೇಶ-ವಿದೇಶದ 18 ಕಲಾವಿದರ 100 ಚಿತ್ರಕಲಾಕೃತಿಗಳು, ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ. ಪ್ರದರ್ಶನದ ಹೆಸರು `ದಿ ಕ್ರಿಯೇಷನ್ಸ್~ ಹೆಸರೇ ಹೇಳುವಂತೆ ಜಗತ್ತಿನ ಎಲ್ಲ ವಿಷಯವೂ ಕಲಾವಿದ ಸೃಜನಶೀಲತೆಗೆ ಅನುಗುಣವಾಗಿ ಮೈದಳೆದಿವೆ. ಪ್ರದರ್ಶನದ ಜತೆಗೆ ಖರೀದಿಗೂ ಇಲ್ಲಿ ಕಲಾಕೃತಿಗಳುಂಟು. 
ಕಲಾವಿದರಾದ ಜೋಸೆಫ್, ಆದಿತಿ ಬಬೆಲ್, ಹರ್ಷಾ, ಜಯಂತ್ ಬಿ. ಹುಬ್ಳಿ, ಪ್ರಮೋದ್ ಕುಮಾರ್ ಮೊಹಂತಿ, ರಮೇಶ್ ತೇರ್‌ದಾಳ್, ರುಚಿಕಾ ಕೆ.ಸಿ, ರೂನಾ ಬಿಸ್ವಾಸ್, ಸುದೀಪ್ ಮುಖರ್ಜಿ, ಪ್ರಕಾಶ್ ಜಿ.ನಾಯಕ್, ಪ್ರದೀಪ್ ಕುಮಾರ್, ಉದಯ್ ಡಿ.ಜೈನ್, ಶೇಷು ಕಿರಣ್ ಜಿ.ಎಸ್, ಶ್ರದ್ಧಾ ರತಿ, ರಾಜು ತೇರ್‌ದಾಳ್, ಪಲ್ಲೋನ್ ದರುವಾಲ, ಅಮಿತ್ ಶರ್ಮಾ, ಅಶೀಶ್ ಅವರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.

ಕಲಾವಿದ ಕಿರಣ್ ಅವರು ತಮ್ಮ ಕಲಾಕೃತಿಗಳಲ್ಲಿ ಮರಸಾಲುಗಳ ನಡುವೆ ಕಾಣುವಂಥ ಕಿರಿಯಗಲದ ನೀಳನೋಟಗಳನ್ನು ವಿಭಿನ್ನ ಬಣ್ಣಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಹಸಿರು, ನೀಲ, ಪಚ್ಚೆ ಬಣ್ಣಗಳಲ್ಲಿ ಅವರು ಕಲ್ಪನೆ ಲಹರಿಯಾಗಿ ಹರಿದಿದೆ. ಇವರ ಕಲಾಕೃತಿಗಳು ವಾಸ್ತವವೆಂಬ ಬಿಳಿ ಕುದುರೆ ಏರಿ ಹೊರಟಿರುವುದರಿಂದ ಸಹಜವಾಗಿಯೇ ಎಲ್ಲರನ್ನು ಸೆಳೆಯುತ್ತವೆ.

ಕಲಾವಿದ ರಮೇಶ್ ತೇರ್‌ದಾಳ್ ಅವರು ಸೃಜನಶೀಲ ಕಲಾವಿದ. ತನ್ನ ಪ್ರತಿ ಕಲಾಕೃತಿಯಲ್ಲೂ ವಿಭಿನ್ನತೆ ಮೆರೆದಿದ್ದಾರೆ. ಮಾನವೀಯತೆ ಜಾಗವನ್ನು ಆಕ್ರಮಿಸಿರುವ ಡಾಲರ್‌ನ ಪ್ರಭಾವವನ್ನು ಇವರು ತಮ್ಮ ಕಲಾಕೃತಿಯಲ್ಲಿ ನಿಚ್ಚಳವಾಗಿ ಕಟ್ಟಿಕೊಟ್ಟಿದ್ದಾರೆ. ಹಣದ ಮೋಹ ಮನುಷ್ಯ ಸಂಬಂಧವನ್ನು ಚಿವುಟಿ ಹಾಕಿದೆ ಎಂಬ ಸಂದೇಶವನ್ನು ಇವು ಸಾರುತ್ತವೆ. ರಮೇಶ್ ಅವರು `ಭ್ರಮೆ~ ಎಂಬ ಸರಣಿ ಚಿತ್ರಗಳನ್ನು ರಚಿಸಿದ್ದಾರೆ.

ಭಾರತದ ಮಣ್ಣಿನಲ್ಲಿ ಅಧ್ಯಾತ್ಮದ ಸೆಲೆಯಿದೆ. ಇಲ್ಲಿನ ಜನರು ಆತ್ಮ, ಪರಮಾತ್ಮ, ಮೋಕ್ಷ ಎಂಬುದೆಲ್ಲವನ್ನು ಬಹುವಾಗಿ ನಂಬುತ್ತಾರೆ. ಜನ ಮಾನಸದಲ್ಲಿ ಸ್ಥಾಯಿಯಾಗಿರುವ ಈ ಅಧ್ಯಾತ್ಮದ ಕಲ್ಪನೆ ಇಲ್ಲಿ ದೃಶ್ಯ ರೂಪಕ್ಕೆ ಇಳಿದಿದೆ. ಹೆಣ್ಣಿನ ಆಸೆ ಆಕಾಂಕ್ಷೆ, ಕನಸುಗಳು ಕುಂಚದಲ್ಲಿ ನವಿರಾಗಿ ಮೂಡಿವೆ. ಕ್ಯಾನ್ವಾಸ್ ಮೇಲೆ ಮೈದಳೆದಿರುವ ಕಲಾಕೃತಿಗಳು ಗಂಡು-ಹೆಣ್ಣಿನ ನಡುವಿನ ಸಂಬಂಧದ ಸೂಕ್ಷ್ಮವನ್ನು ನವಿರಾಗಿ ಕಟ್ಟಿಕೊಡುತ್ತವೆ. ಗಂಡು ಹೆಣ್ಣಿನ ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಭಾವನೆಗಳು, ಮನುಷ್ಯ ಸಹಜ ಒಲವು, ಸಾಮೀಪ್ಯತೆ, ಸಂತಸ, ದುಃಖ, ಖಿನ್ನತೆ ಎಲ್ಲವೂ ರೇಖೆಯಲ್ಲಿ ರೂಪುಗೊಂಡಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.