ADVERTISEMENT

ಕಲಾ ಸಾಧಕರಿಗೆ ಕಲಾಧ್ಯಾನ್ ಗೌರವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST
ಕಲಾ ಸಾಧಕರಿಗೆ ಕಲಾಧ್ಯಾನ್ ಗೌರವ
ಕಲಾ ಸಾಧಕರಿಗೆ ಕಲಾಧ್ಯಾನ್ ಗೌರವ   

ಬೆಂಗಳೂರು ಆರ್ಟ್ ಫೌಂಡೇಷನ್ ನಾಲ್ಕು ವರ್ಷಗಳಿಂದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುತ್ತಾ ಕಲಾಕ್ಷೇತ್ರಕ್ಕೆ ಅಮೋಘ ಸೇವೆ ಸಲ್ಲಿಸುತ್ತಾ ಬಂದಿದೆ. ಅನನ್ಯ ಸಾಧನೆ ಮಾಡಿದ ಕಲಾವಿದರಿಗೆ `ಕಲಾಧ್ಯಾನ್~ ಪುರಸ್ಕಾರ ನೀಡಿ ಗೌರವಿಸುವ ಕೈಂಕರ್ಯ ಮಾಡುತ್ತಿದ್ದೆ.

ಈ ಬಾರಿ  ಖ್ಯಾತ ಕಲಾವಿದ ಡಾ.ಎಂ.ಎಸ್.ಮೂರ್ತಿ ಮತ್ತು ಎಂ.ಸಿ.ಚೆಟ್ಟಿ ಅವರಿಗೆ `ಕಲಾಧ್ಯಾನ್~ ಪುರಸ್ಕಾರ ನೀಡಲು ಮುಂದಾಗಿದೆ. ಮೂರ್ತಿ ಅವರು ಶಿಸ್ತು, ಪ್ರಯೋಗಶೀಲತೆಗೆ ಹೆಸರಾದವರು. ರೇಖಾಚಿತ್ರ, ವರ್ಣಚಿತ್ರ, ಶಿಲ್ಪ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದಾರೆ. ಕ್ಯಾನ್‌ವಾಸ್ ಮೇಲೆ ಮೂಡುವ ಜಲವರ್ಣ ಚಿತ್ರಗಳಲ್ಲಿ ಆಧುನಿಕತೆಯ ದಟ್ಟ ಛಾಯೆ ಎದ್ದು ಕಾಣುತ್ತದೆ. ಇವರ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿವೆ.

ಮತ್ತೊಬ್ಬ ಕಲಾವಿದ ಎಂ.ಸಿ.ಚೆಟ್ಟಿ ಅವರು ಸಹ ಕಲಾದೇವಿಯ ಆರಾಧಕ. ಬಣ್ಣ-ರೇಖೆಗಳ ಸಮನ್ವಯದ ರಭಸ ಇವರ ಕಲಾಕೃತಿಗಳ ವೈಶಿಷ್ಟ್ಯ. ಭಾವಚಿತ್ರ ರಚನೆಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
 
ಜಲವರ್ಣ ಹಾಗೂ ತೈಲವರ್ಣ ಚಿತ್ರಗಳನ್ನು ಚಿತ್ರಿಸುವಲ್ಲಿ ಪರಿಣತಿ ಹೊಂದಿರುವ ಚೆಟ್ಟಿ ಅವರು ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಚಿತ್ರಗಳು ದೇಶದ ಅನೇಕ ಕಡೆ ಪ್ರದರ್ಶನ ಕಂಡಿವೆ. ಈ ಇಬ್ಬರೂ ಕಲಾ ಆರಾಧಕರಿಗೆ ಬೆಂಗಳೂರು ಆರ್ಟ್ ಫೌಂಡೇಷನ್ ಶುಕ್ರವಾರ (ಜ.6) ಸನ್ಮಾನ ಹಮ್ಮಿಕೊಂಡಿದೆ.

ಬೆಳಿಗ್ಗೆ 10ಕ್ಕೆ ರಾಜ್ಯದ ನಾನಾ ಭಾಗಗಳ 25ಕ್ಕೂ ಹೆಚ್ಚಿನ ಕಲಾವಿದರನ್ನು ಒಳಗೊಂಡ ಕಲಾಶಿಬಿರ ಆಯೋಜಿಸಲಾಗಿದೆ. ಈ ಕಲಾವಿದರು ತಮ್ಮ ನೆಚ್ಚಿನ ವಿಷಯದ ಚಿತ್ರಗಳನ್ನು ಇಲ್ಲಿ ರಚಿಸಲಿದ್ದಾರೆ.

ಸಂಜೆ 6.30ಕ್ಕೆ ಪ್ರಕಾಶ ಶೆಟ್ಟಿ ಮತ್ತು ಗೆಳೆಯರಿಂದ ಪ್ರಸಿದ್ಧ ರಂಗಗೀತೆಗಳ ಗಾಯನ. ನಂತರ ಪ್ರಶಸ್ತಿ ಪ್ರದಾನ ಸಮಾರಂಭ. ಡಾ.ಎಂ.ಎಸ್.ಮೂರ್ತಿ, ಎಂ.ಸಿ. ಚೆಟ್ಟಿ ಅವರಿಗೆ `ಕಲಾಧ್ಯಾನ್~ ಪುರಸ್ಕಾರ. ಅತಿಥಿಗಳು: ಕೆ.ಮರುಳಸಿದ್ದಪ್ಪ, ಕೆ.ಟಿ.ಶಿವಪ್ರಸಾದ್, ಕಾ.ತ.ಚಿಕ್ಕಣ್ಣ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.