ADVERTISEMENT

ಕಾಡುವ ಭಾವನೆಗಳು ಹಾಡಾದಾಗ...

ಪವಿತ್ರ ಶೆಟ್ಟಿ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ನನ್ನಯ ಮಾತಿಲ್ಲದ ಮನಸಿನಲ್ಲಿ... ಸುಂದರ ಸವಿ ಸುರಿಸುವ ಕನಸಿನಲ್ಲಿ... ನಿನ್ನಿಂದಲೇ ಖುಷಿ...

ಈ ಹಾಡು ಕೇಳಿದಾಗ ವಿರಹದ ತಾಪ ಮನಸ್ಸಿಗೆ ತಟ್ಟುತ್ತದೆ. ಹಾಡುತ್ತಿರುವ ಹುಡುಗನ ಕಣ್ಣಂಚಿನಲ್ಲಿ ಸಣ್ಣಗೆ ಜಿನುಗುವ ಕಣ್ಣೀರು. ಸಂಗೀತ ತಮಗಲ್ಲ ಎಂದು ದೂರವಿದ್ದವರು ಈಗ ಸಂಗೀತವೇ ತಮಗೆಲ್ಲಾ ಎಂದು ಶರಣಾಗಿದ್ದಾರೆ, ಸಂಗೀತ ತಂಡವನ್ನು ಕಟ್ಟಿದ್ದಾರೆ.

ತಂಡದ ಹೆಸರು `ಸ್ವರಧ್ವನಿ'. ಹೆಸರಿನ ಹಿನ್ನೆಲೆಯೇನು ಕೇಳಿದರೆ ಮನಸ್ಸಿಗೆ ಈ ಹೆಸರು ಯಾಕೋ ಹಿಡಿಸಿತು ಹಾಗಾಗಿ ಇದೇ ತಂಡದ ಹೆಸರಾಯಿತು ಎಂದು ನಗುತ್ತಾರೆ ತಂಡದ ರೂವಾರಿಗಳು. ಕುಲ್‌ದೀಪ್, ಓಂಕಾರ, ಗುರುಪ್ರಸಾದ್, ಸ್ವರಧ್ವನಿ ತಂಡದ ಸದಸ್ಯರು.

ತಂಡ ಕಟ್ಟಿದ ಬಗೆ...
“ಅಂದು ಏಳು ಹೆಜ್ಜೆ ನನ್ನೊಂದಿಗೆ ನಡೆದು ಜೀವನದ ಸುಖ ದುಃಖದಲ್ಲಿ ಜತೆಯಾಗಿ ಇರುತ್ತೇನೆ ಎಂದ ನನ್ನ ಸಂಗಾತಿ `ಖುಷಿ' ಆಕ್ಸಿಡೆಂಟ್‌ನಲ್ಲಿ ಹೋಗಿಬಿಟ್ಟಳು. ಜೀವನದಲ್ಲಿ ಕತ್ತಲೆ ಕವಿಯಿತು. ನಗುವುದಕ್ಕೂ ಭಯವಾಗುತ್ತಿತ್ತು. ಜೀವನದಲ್ಲಿ ಏನೂ ಇಲ್ಲ, ಎಲ್ಲಾ ಖಾಲಿ ಎನ್ನಿಸತೊಡಗಿತು. ಸುಮ್ಮನೆ ಕುಳಿತಾಗಲೆಲ್ಲ ನಿಧಾನವಾಗಿ ಹಾಡು ಗುನುಗಲು ಶುರುಮಾಡಿದೆ.

ನನ್ನ ಹೆಂಡತಿಗೆ ಮೊದಲಿನಿಂದಲೂ ನಾನು ಹಾಡಬೇಕು, ಗಿಟಾರ್ ನುಡಿಸಬೇಕು ಎಂಬ ಆಸೆ ಇತ್ತು. ಅವಳಿದ್ದಾಗ ಅವಳ ಜತೆ ಮಳೆ ಬರುವಾಗ, ಮುಸ್ಸಂಜೆಯ ಹೊತ್ತು ಹಾಡಿದ್ದು ಬಿಟ್ಟರೆ ಸಂಗೀತದ ಗಂಧಗಾಳಿ ನನಗೆ ಗೊತ್ತಿಲ್ಲ. ಸಂಗೀತವೆಂದರೆ ಪ್ರೀತಿ ಇತ್ತು. ಆದರೆ ಅದನ್ನು ಕಲಿಯುವ ಸಾಹಸಕ್ಕೆ ನಾನು ಯಾವತ್ತೂ ಹೋಗಿಲ್ಲ. ಮಡಿದ ಮಡದಿಯ ಕನಸನ್ನು ಸಂಗೀತದ ಮೂಲಕ ಮರಳಿ ಪಡೆದ ಸಮಾಧಾನ ಈಗ ಇದೆ. ನನ್ನೆಲ್ಲಾ ಸಾಧನೆಗೆ ಅವಳೇ ಸ್ಫೂರ್ತಿ. ಅವಳಿದ್ದಾಗ ಹಾಡಲಿಲ್ಲವಲ್ಲ ಎಂಬ ಬೇಸರವಿದೆ” ಎನ್ನುತ್ತಾ ಭಾವುಕರಾಗುತ್ತಾರೆ ಕುಲ್‌ದೀಪ್.

ಈ ತಂಡ ಶುರುವಾಗಿದ್ದು 2011ರಲ್ಲಿ. ಮೊದಲು ಶುರುಮಾಡಿದಾಗ ಐದು ಜನ ಇದ್ದರು. ಈಗ ಮೂರು ಜನ ಇದ್ದಾರೆ. ತಾವೇ ಹಾಡುಗಳನ್ನು ಸಂಯೋಜನೆ ಮಾಡುತ್ತಾ ಅದಕ್ಕೆ ರಾಗವನ್ನು ನೀಡುವ ಈ ತಂಡದವರಿಗೆ ಸಂಗೀತವೆಂಬುವುದು ತಾಯಿಯಂತೆ. ಕುಲ್‌ದೀಪ್ ಹಾಡುಗಾರ, ಓಂಕಾರ ಸಂಗೀತ ರಚನೆ ಮಾಡುತ್ತಾರೆ. ಗುರುಪ್ರಸಾದ್ ತಬಲಾ ಬಾರಿಸುವುದರ ಜತೆಗೆ ಹಾಡು ಕೂಡ ಹೇಳುತ್ತಾರೆ.

ಸಂಗೀತ ತಂಡ ಕಟ್ಟಬೇಕು ಎಂಬ ಕನಸು ಕಂಡಿರದ ಈ ಮೂವರ ಭೇಟಿ ಆಗಿದ್ದು ಆಕಸ್ಮಿಕವಾಗಿ. ಜೀವನೋಪಾಯಕ್ಕೆ ಒಂದು ಉದ್ಯೋಗ ಮಾಡಿಕೊಂಡು ಇದ್ದ ಇವರು ಹಾಡುವ ಸಮಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ಕೆಲಸ ಮುಗಿಸಿ ಸಂಜೆ ಒಂದು ಕಡೆ ಭೇಟಿಯಗಿ ಅಲ್ಲಿ ಸಂಗೀತ ಅಭ್ಯಾಸ ಮಾಡುತ್ತಾರೆ. `ಯಾವುದೋ ಒಂದು ರಾಗ ಹೊಳೆದರೆ, ಪದ್ಯ ಬರೆದರೆ ಒಬ್ಬರಿಗೊಬ್ಬರು ಫೋನ್ ಮಾಡಿ ಹೇಳಿಕೊಳ್ಳುತ್ತಾರೆ. ಮಧ್ಯರಾತ್ರಿಯಾದರೂ ತಮ್ಮ ಸಂಗೀತ ಪ್ರೀತಿಗೆ ಯಾವುದೇ ತಡೆಯಿಲ್ಲ' ಎಂದು ಸ್ಪಷ್ಟವಾಗಿ ನುಡಿಯುತ್ತದೆ ತಂಡ.

ಅಪ್ಪ-ಅಮ್ಮನೇ ಸ್ಫೂರ್ತಿ
`ನನ್ನ ತಂದೆ-ತಾಯಿಗೆ ಸಂಗೀತ ತಂಡ, ಶೋ ಇವುಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಮಗ ಬರೆಯುತ್ತಾನೆ, ಏನೋ ಸಾಧನೆ ಮಾಡುತ್ತಾನೆ ಎಂಬ ನಂಬಿಕೆ ಅವರದು. ನಾನು ಬರೆದ ಕತೆ-ಕವನ, ಹಾಡುಗಳನ್ನು ಕೇಳುತ್ತಾರೆ. ಪತ್ರಿಕೆಯಲ್ಲೂ ಅವು ಪ್ರಕಟವಾದಾಗ ಖುಷಿ ಪಡುತ್ತಾರೆ. ನನ್ನೆಲ್ಲಾ ಕೆಲಸಗಳಿಗೆ ಅವರೇ ಸ್ಫೂರ್ತಿ. ಹಾಡು ಬರೆಯುವಾಗ ಸಿಗುವ ಖುಷಿ ಅಗಾಧವಾದದ್ದು' ಎಂದು ಹೇಳುತ್ತಾರೆ ತಂಡದ ಸದಸ್ಯ ಓಂಕಾರ. ಇತ್ತೀಚೆಗಷ್ಟೇ ಇವರ `ಒಲವಿನ ಕುಂಚ' ಎಂಬ ಕವನ ಸಂಕಲನ ಕೂಡ ಬಿಡುಗಡೆಯಾಗಿದೆ.

ಈ ತಂಡದ ಇನ್ನೊಬ್ಬ ಸದಸ್ಯ ಗುರುಪ್ರಸಾದ್ ಅವರಿಗೆ ಸಂಗೀತ ಯಾವತ್ತೂ ಕೆಲಸಕ್ಕೆ ಅಡ್ಡ ಬಂದಿಲ್ಲವಂತೆ. ಕೆಲಸದ ಸಮಯ ಬಿಡುವು ಸಿಕ್ಕಾಗ ಸಂಗೀತಾಭ್ಯಾಸವನ್ನು ಮಾಡುತ್ತಾರಂತೆ. ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಸಂಗೀತದ ಗಾಳಿ ಇತ್ತು ಎನ್ನುವ ಇವರು ಚಿಕ್ಕಂದಿನಿಂದಲೇ ನಿರಂತರವಾಗಿ ತಬಲಾ ಅಭ್ಯಾಸ ಮಾಡಿದ್ದಾರೆ.

ಹೆಚ್ಚು ಕಾರ್ಯಕ್ರಮ ನೀಡಿಲ್ಲ. ಆದರೆ ಅವಕಾಶ ಸಿಕ್ಕರೆ ನಮ್ಮ ಪ್ರತಿಭೆ ತೋರಿಸುತ್ತೇವೆ ಎಂದು ಹೇಳುವ ಈ ತಂಡದವರು ಕನ್ನಡ ಹಾಡುಗಳನ್ನು ಮಾತ್ರ ಹಾಡುತ್ತಾರೆ. ಜನಪದ ಸಂಗೀತ ಕೂಡ ಇವರ ಪಟ್ಟಿಯಲ್ಲಿದೆ. ಸಂಗೀತದ ಮೂಲಕ ಸಾಧನೆ ಮಾಡುವುದೇ ಇವರ ಮುಂದಿರುವ ಗುರಿಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.