ಹುಟ್ಟುತ್ತಲೇ ಅಂಧತ್ವವನ್ನೂ ಜೊತೆಗೇ ಕರೆದುಕೊಂಡು ಬಂದೆ. ಹೊರಗಿನ ಲೋಕವನ್ನು ನೋಡದಿದ್ದರೂ ನನ್ನೊಳಗಿನ ಲೋಕದಲ್ಲಿ ತಿಳಿದಂತೆ ಬದುಕಿದವನು ನಾನು. ಅಂದ ಹಾಗೆ ನನ್ನ ಹೆಸರು ವಸಂತ ಕುಮಾರ್. ನನ್ನ ಹುಟ್ಟು, ಬೆಳವಣಿಗೆ, ಬದುಕು ಎಲ್ಲಕ್ಕೂ ಬೆಂಗಳೂರೇ ಸೂರು ನೀಡಿದ್ದು.
ಹತ್ತನೇ ತರಗತಿವರೆಗೂ ಓದಿದೆ. ಆದರೆ ಪಾಸಾಗಲಿಲ್ಲ. ಜೀವನ ನಿರ್ವಹಣೆಗೆ ದುಡಿಯಲೇಬೇಕಲ್ಲ. ಬದುಕು ಕಟ್ಟಿಕೊಳ್ಳಲು ಯಾವುದಾದರೂ ಕೆಲಸ ಮಾಡಲೇಬೇಕಿತ್ತು. ಮೊಟ್ಟಮೊದಲು ಲಾಟರಿ ಟಿಕೇಟುಗಳನ್ನು ವ್ಯಾಪಾರ ಮಾಡಲು ಆರಂಭಿಸಿದ್ದೆ. ಕೆಲವೇ ವರ್ಷಗಳಲ್ಲಿ ಸರ್ಕಾರ ಲಾಟರಿ ಬ್ಯಾನ್ ಮಾಡಿತು. ಹಾಗೆಂದು ಸುಮ್ಮನೆ ಕೂತರೆ ಆಗುವುದಿಲ್ಲವೆಂದು ಟೆಲಿಫೋನ್ ಬೂತ್ ಇಟ್ಟುಕೊಂಡೆ.
ಅದೂ ಕೈಗೆ ಹತ್ತಲಿಲ್ಲ. ಸ್ವಲ್ಪ ವರ್ಷಗಳಲ್ಲೇ ಮೊಬೈಲ್ ಫೋನ್‌ಗಳು ಬಂದವು. ಮೊಬೈಲ್‌ಗಳು ಹೆಚ್ಚು ಬಳಕೆಗೆ ಬಂದ ನಂತರ ಟೆಲಿಫೋನ್ ಬೂತ್‌ಗಳತ್ತ ಹೆಜ್ಜೆ ಹಾಕುವವರ ಸಂಖ್ಯೆ ಕ್ಷೀಣಿಸುತ್ತಾ ಬಂತು. ಕೊನೆ ಕೊನೆಗೆ ಒಬ್ಬರೂ ಬರದಂತಾಯಿತು. ಮತ್ತೆ ಬದುಕಿಗೆ ಬೇರೆಯದೇ ದಾರಿ ಹಿಡಿಯಬೇಕಾದ ಅನಿವಾರ್ಯತೆ.
ಮನೆಯಲ್ಲಿ ಅಮ್ಮ, ಇಬ್ಬರು ಸೋದರಿಯರು, ಒಬ್ಬ ಅಣ್ಣ ಇದ್ದಾನೆ. ತಂಗಿ ಶಿಕ್ಷಕಿ. ಅಣ್ಣ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನನಗೂ ಸರ್ಕಾರದಿಂದ ಪೆನ್ಷನ್ ಬರುತ್ತದೆ. ಹಾಗೆಂದು ಅದನ್ನೇ ನೆಚ್ಚಿಕೊಂಡು ಕೂತರೆ ಆಗದು. ಆದ್ದರಿಂದ ಪಾಸ್ ಕವರ್‌ಗಳನ್ನು, ಪೆನ್ನು, ಪೆನ್ಸಿಲ್‌ಗಳನ್ನು ಮಾರಾಟ ಮಾಡುವ ಪುಟ್ಟ ಕೆಲಸ ಶುರುವಿಟ್ಟುಕೊಂಡೆ. ಸದ್ಯಕ್ಕೆ ಇದೇ ನನ್ನ ಜೀವನ. ಕೆಲಸ ಚಿಕ್ಕದೇ. ಬರುವ ಆದಾಯವೂ ಅಷ್ಟಕ್ಕಷ್ಟೇ. ಆದರೆ ನನಗೆ ಬೇರೆಯವರ ಮೇಲೆ ಪೂರ್ಣ ಅವಲಂಬಿತನಾಗದೆ ಸ್ವಂತ ಕೆಲಸ ಮಾಡಿ ಬದುಕುತ್ತಿರುವುದರ ಬಗ್ಗೆ ಹೆಮ್ಮೆಯಿದೆ.
ಪಾಸ್ ಕವರ್‌ಗಳನ್ನು, ಪೆನ್ನುಗಳನ್ನು ಮಾರ್ಕೆಟ್‌ನಲ್ಲಿ ಹೋಲ್‌ಸೇಲ್‌ಗೆ ಖರೀದಿಸುತ್ತೇನೆ. ನಂತರ ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡುತ್ತೇನೆ. ಮಲ್ಲೇಶ್ವರ ಸರ್ಕಲ್ ಮತ್ತು ಮೇಯೋಹಾಲ್‌ನಲ್ಲಿ ಹೆಚ್ಚು ವ್ಯಾಪಾರ ಮಾಡುವ ಜಾಗ. ಈ ಪುಟ್ಟ ಕೆಲಸದಲ್ಲಿ ದಿನಕ್ಕೆ ಇಷ್ಟೇ ವ್ಯಾಪಾರ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ತುಂಬಾ ಮಂದಿ ಖರೀದಿಸುತ್ತಾರೆ. ಕೆಲವೊಮ್ಮೆ ಒಂದೂ ವ್ಯಾಪಾರವಾಗಿರುವುದಿಲ್ಲ.
ಒಮ್ಮೊಮ್ಮೆ ದಿನದಲ್ಲಿ ಹತ್ತು, ಇಪ್ಪತ್ತು ಕವರ್‌ಗಳು ಮಾರಾಟವಾಗುತ್ತವೆ. ಒಮ್ಮೊಮ್ಮೆ ಬರಿಗೈಯಲ್ಲೇ ಮನೆಗೆ ಹಿಂದಿರುಗಬೇಕು. ಆ ರೀತಿ ಬರಿಗೈಯಲ್ಲಿ ಹಿಂದಿರುಗಿದ ದಿನಗಳು ಅವೆಷ್ಟೋ. ರಜಾ ದಿನಗಳಲ್ಲಿ ಸ್ನೇಹಿತರ ಮನೆ, ಮೈಸೂರಿಗೆಲ್ಲಾ ಹೋಗುತ್ತೇನೆ. ಪ್ರಯಾಣ ಮಾಡುವಾಗಲೂ ಮಾರಾಟ ಮಾಡುತ್ತೇನೆ.
ಒಂದೊಂದು ಬಾರಿ ಬದುಕು ಕಷ್ಟ ಅನ್ನಿಸುತ್ತದೆ. ಹೀಗೆ ಏಕೆ ಆಯಿತು ಅನ್ನಿಸುತ್ತದೆ. ಆದರೆ ಬದುಕನ್ನು ಶಪಿಸಿದರೆ ಪ್ರಯೋಜನವಿಲ್ಲ. ಎಲ್ಲವೂ ದೇವರ ಇಷ್ಟ. ನಮಗಿಂತ ಕಷ್ಟದಲ್ಲಿ ಬದುಕುತ್ತಿರುವವರು ಈ ಭೂಮಿ ಮೇಲೆ ತುಂಬಾ ಜನ ಇದ್ದಾರೆ. ನಿರಾಸೆ ಮನುಜರಿಗೆ ಸಹಜವೇ. ಆದರೆ ಅದರ ಮುಂದೆ ತಲೆ ಬಾಗಬಾರದಷ್ಟೇ. ಬೇಜಾರಾದಾಗಲೆಲ್ಲಾ ಈ ರೀತಿ ನನಗೆ ನಾನೇ ಧೈರ್ಯ ಹೇಳಿಕೊಳ್ಳುತ್ತೇನೆ.
ಬೆಳಿಗ್ಗೆ ಎಂಟು ಗಂಟೆಗೆ ಮನೆಯಿಂದ ಹೊರಡುತ್ತೇನೆ. ಮೂರು ಗಂಟೆವರೆಗೂ ವ್ಯಾಪಾರ ಮುಂದುವರೆಯುತ್ತದೆ. ಈ ಕೆಲಸ ನೆಚ್ಚಿಕೊಂಡು ಏಳೆಂಟು ವರ್ಷಗಳೇ ಕಳೆದಿವೆ. ಬದುಕಿನಲ್ಲಿ ಏಳು ಬೀಳು ನಮಗೆ ಜ್ವರ ಬಂದಷ್ಟೇ ಸಹಜ ಪ್ರಕ್ರಿಯೆ. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದಷ್ಟೇ ಮುಖ್ಯವಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.