ನಾದ- ನೃತ್ಯ
ನಗರದ ನೃತ್ಯಾಭಿಮಾನಿಗಳಿಗೆ ಪರಿಚಿತರಾದ ಶಮಾಕೃಷ್ಣ ಭರತನಾಟ್ಯ ಹಾಗೂ ಕೂಚುಪುಡಿ ಎರಡರಲ್ಲೂ ಸಾಧಕಿ. ತನ್ನದೇ ಶ್ರದ್ಧಾ ಡಾನ್ಸ್ ಸೆಂಟರ್ ಸ್ಥಾಪಿಸಿ ಕಿರಿಯರಿಗೆ ಶಿಕ್ಷಣ ನೀಡುತ್ತಿರುವ ಶಮಾಕೃಷ್ಣ, ತಾನೇ ತನಿಯಾಗಿ ನಟುವಾಂಗ ನಿರ್ವಹಿಸಿದ ರಂಗಪ್ರವೇಶ ಮೊನ್ನೆ ಭಾನುವಾರ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿದರು.
ಅವರ ಕಿರಿಯ ವಿದ್ಯಾರ್ಥಿನಿ ಅನುಹಿತ ನಾಗರಾಜ ಬಾಲ್ಯದಿಂದಲೇ ನೃತ್ಯ ಕಲಿಯುತ್ತಾ ನೃತ್ಯ ಶಾಲೆಯ ಕೆಲವು ಕಿರಿಯ ಪಾತ್ರಗಳನ್ನು ರಂಗದ ಮೇಲೆ ಮಾಡಿರುವುದೂ ಉಂಟು. ಇದರಿಂದ ರಂಗಪ್ರವೇಶದಲ್ಲಿ ನಿರ್ಭಯವಾಗಿ ನರ್ತಿಸುವಂತಾಯಿತು. ಪ್ರಾರಂಭದ `ಗಂಗಣಪತೆ~ ಯಿಂದಲೇ ಆಕೆಯ ಸ್ಥೈರ್ಯ ಸಭಿಕರ ಗಮನ ಸೆಳೆಯಿತು. ಸಂಪ್ರದಾಯಬದ್ಧವಾಗಿ ಅಲರಿಪು, ಜತಿಸ್ವರಗಳನ್ನು ಮಾಡಿ ವರ್ಣಕ್ಕೆ ಸರಿದರು. ಚಿದಂಬರ ನಟರಾಜನ ಆನಂದ ತಾಂಡವವನ್ನು ದಕ್ಷವಾಗಿ ನರ್ತಿಸಿದಳು.
ಆದರೆ ನವರಸದ ಅಭಿನಯಕ್ಕೆ ಇನ್ನೂ ಸ್ವಲ್ಪ ವಯಸ್ಸು-ಅನುಭವ ಬೇಕು! ಅದರಲ್ಲೂ ಭೀಭತ್ಸ, ರೌದ್ರ ರಸಗಳಿಗೆ ಅಭಿನಯ ಇನ್ನೂ ಗಾಢವಾಗಬೇಕು. ಎತ್ತುಗಡೆಯಿಂದ ದ್ರುತಕಾಲಕ್ಕೆ ಸರಿದಳು. ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ ಸಾಧಿಂಚೆನೆ ಸಹ ದೀರ್ಘ ರಚನೆ. ಪಾತ್ರಗಳನ್ನು ಬದಲಾಯಿಸಿಕೊಳ್ಳುತ್ತಾ ನಾಟಕೀಯವಾಗಿ ಕೃತಿಗೆ ಜೀವ ತುಂಬಿದಳು.
ಪ್ರಖ್ಯಾತವಾದ ನಟನವಾಡಿದಳ್ ತರುಣಿ ಹಾಗೂ ತಿಲ್ಲಾನಗಳನ್ನು (ವಲಚಿ ರಾಗ) ಚುರುಕು ನಡೆಯಿಂದ ಮಾಡಿದಳು. ಕಾರ್ಯಕ್ರಮದ ಉದ್ದಕ್ಕೂ ಅನುಹಿತ ಲವಲವಿಕೆಯಿಂದ, ಮಂದಸ್ಮಿತಳಾಗಿ ನರ್ತಿಸುತ್ತಾ ಸಾಗಿದಳು. ಮುಂದಿನ ದಿನಗಳಲ್ಲಿ ಪ್ರೌಢ ಶಿಕ್ಷಣ, ಸತತ ಸಾಧನೆಯಿಂದ ಗಣ್ಯ ಕಲಾವಿದೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಿದ ಶಮಾಕೃಷ್ಣ ಅವರ ನಟುವಾಂಗ ಅನುಭವ ಬೆಳೆದಂತೆ ಪ್ರೌಢವಾಗಬಲ್ಲದು. ಇದೇ ಅಭಿಪ್ರಾಯವನ್ನು ಗಾಯಕಿ ದೀಪ್ತಿ ಶ್ರಿನಾಥ್ ಅವರಿಗೂ ಹೇಳಬಹುದು. ಮೃದಂಗದಲ್ಲಿ ಗುರುಮೂರ್ತಿ, ರಿದಂ ಪ್ಯಾಡ್‌ನಲ್ಲಿ ಪ್ರಸನ್ನಕುಮಾರ್, ವೀಣೆಯಲ್ಲಿ ಶಂಕರರಾಮನ್, ಕೊಳಲಿನಲ್ಲಿ ಕೃಷ್ಣಪ್ರಸಾದ್ ಹಾಗೂ ಕಾರ್ಯಕ್ರಮ ಸಂಯೋಜನೆಯಲ್ಲಿ ವೀಣಾ ಶರ್ಮ ನೆರವಾದರು.
ಹಾರ್ಮೋನಿಯಂನಲ್ಲಿ ಕೈಚಳಕ
ನಮ್ಮ ಸಂಗೀತ ವಾದ್ಯಗಳಲ್ಲಿ ಹಾರ್ಮೋನಿಯಂಗೆ ಒಂದು ವಿಶಿಷ್ಟ ಸ್ಥಾನವಿದೆ. ಹಿಂದುಸ್ತಾನಿ ಸಂಗೀತದಲ್ಲಿ ಹಾರ್ಮೋನಿಯಂ ಒಂದು ಅನಿವಾರ್ಯ ಪಕ್ಕವಾದ್ಯವಾದರೆ, ಸುಗಮ ಸಂಗೀತದಲ್ಲಿ ಹಾರ್ಮೋನಿಯಂ ಇದ್ದರೇ ಒಂದು ಸೊಬಗು. ಹರಿಕಥೆ ಹಾಗೂ ರಂಗ ಸಂಗೀತದಲ್ಲೂ ಈಚಿನವರೆಗೂ ಹಾರ್ಮೋನಿಯಂ ಸಾಮಾನ್ಯವಾಗಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾರ್ಮೋನಿಯಂ ಇದ್ದೂ ಇಲ್ಲದಂತಿದೆ.
ಹಾರ್ಮೋನಿಯಂನಲ್ಲೇ ಪರಿಣತರಾದ ಅರುಣಾಚಲಪ್ಪ, ಎಚ್.ಭೀಮರಾವ್, ಪಲ್ಲಡಂ ವೆಂಕಟರಮಣ ರಾವ್ ಮುಂತಾದವರ ವಿನಿಕೆಯನ್ನು ಜನ ಇಂದೂ ನೆನಪಿಸಿಕೊಳ್ಳುತ್ತಾರೆ.
ಹಾಗೆಯೇ ಹಿಂದುಸ್ತಾನಿ ಸಂಗೀತದಲ್ಲಿ ವಿಠಲರಾವ್ ಕೋರೆಗಾಂವಕರ್, ಪುಟ್ಟರಾಜ ಗವಾಯಿ, ಬಿಜಾಪುರೆ, ಶೇಷಾದ್ರಿ ಗವಾಯಿ, ವಸಂತ ಕನಕಾಪುರೆ ಮುಂತಾದವರ ಕೊಡುಗೆ ಅಪಾರವಾದುದು. ಇಷ್ಟಕ್ಕೂ ಕರ್ನಾಟಕ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಹಾರ್ಮೋನಿಯಂ ಅಪರೂಪವೇ! ಇಂದಿನ ವಾದಕರಲ್ಲಿ ಆರ್. ಪರಮಶಿವನ್, ಸಿ. ರಾಮದಾಸ್. ಬಿ. ರಘುರಾಂ ಮೊದಲಾದವರು ಖ್ಯಾತರು.
ಅನೇಕ ವೇದಿಕೆಗಳಲ್ಲಿ ವಿನಿಕೆ ಮಾಡಿರುವ ಸಿ. ರಾಮದಾಸ್ ಹಾರ್ಮೋನಿಯಂನಲ್ಲಿ ಬಾನುಲಿಯ ಎ ಗ್ರೇಡ್ ಕಲಾವಿದರಲ್ಲದೆ ವಾದಕ-ಬೋಧಕರಾಗಿ ಪರಿಚಿತರು.
ಮೊನ್ನೆ ಅವರು ತಮ್ಮ ಕಛೇರಿಯಲ್ಲಿ ಪ್ರಖ್ಯಾತ ರಚನೆಗಳನ್ನು ಆಯ್ದು ರಂಜನೀಯವಾಗಿ ನಿರೂಪಿಸಿದರು.
ಸುಧಾಮಯಿ ಒಂದು ಹಸನಾದ ಕೃತಿ. ರಾಗ-ಕೃತಿಗಳೆರಡೂ ಸುಭಗವಾಗಿ ಮೂಡಿರುವ ಎಂಥ ಮುದ್ದೊ ಎಂಥ ಸೊಗಸೊ ಕೃತಿಯು ಬಿಂದು ಮಾಲಿನಿ ರಾಗದ ಅತ್ಯುತ್ತಮ ಕೃತಿಗಳಲ್ಲಿ ಒಂದು. ತ್ಯಾಗರಾಜರ ಈ ಕೀರ್ತನೆ ಅನುಪಮವಾದುದು. ಆ ರಾಗವೇ ಲಾಲಿತ್ಯಪೂರ್ಣವಾದುದು. ಅಭೇರಿ ರಾಗದ ಸುಪರಿಚಿತ ಕೃತಿಗಳಲ್ಲಿ ನಗುಮೋಮುಗೆನಲೇನಿ ಪ್ರಮುಖವಾದುದು.
ಶ್ರಿರಾಮನ ದರ್ಶನಾಭಿಲಾಷಿಯಾಗಿರುವ ತನಗೆ ಇನ್ನೂ ಏಕೆ ಸ್ವಾಮಿ ಪ್ರಸನ್ನನಾಗಲಿಲ್ಲ ಎಂದು ಪರಿತಪಿಸುವ ತ್ಯಾಗರಾಜರ ಆರ್ತನಾದ ಈ ಕೃತಿಯಲ್ಲಿ ಕೇಳಿ ಬರುತ್ತದೆ. ಇದು ಕಲಾವಿದರು ಸಾಮಾನ್ಯವಾಗಿ ವಿಸ್ತಾರಕ್ಕೆ ಆರಿಸುವ ರಚನೆ ಹಾಗೂ ರಾಗ.
ರಾಮದಾಸರು ರಾಗಾಲಾಪನೆ, ಸ್ವರ ಪ್ರಸ್ತಾರ, ನೆರವಲ್‌ಗಳಿಂದ ಕೃತಿಯನ್ನು ಬೆಳಗಿಸಿದರು. ವಾದ್ಯದ ಮೇಲೆ ತಮಗಿರುವ ಪ್ರಭುತ್ವದಿಂದ ರಾಮದಾಸ್ ಕೇಳುಗರಿಗೆ ಸುನಾದದ ಕಛೇರಿಯನ್ನು ಕೇಳಿಸಿದರು. ಎರಡು ಜನಪ್ರಿಯ ದೇವರನಾಮಗಳಾದ ಜಗದೋದ್ಧಾರನಾ ಮತ್ತು ಭಾಗ್ಯದ ಲಕ್ಷ್ಮೀ ಬಾರಮ್ಮ ಕೊನೆಯಲ್ಲಿ ಮುದಕೊಟ್ಟಿತು.
ಪಿಟೀಲಿನಲ್ಲಿ ಎಚ್. ಎಸ್. ಸ್ಮಿತಾ ಕೊಟ್ಟ ಒತ್ತಾಸೆ ಗಣನೀಯವಾದುದಾದರೆ ಲಯ ವಾದ್ಯಗಳಲ್ಲಿ ಹಿರಿಯರಾದ ಎಂ.ಟಿ. ರಾಜಕೇಸರಿ ಮತ್ತು ಯುವಕ ಫಣೀಂದ್ರ ಭಾಸ್ಕರ ಕಾವು ತುಂಬಿದರು. ಅವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶಾರದಾ ಪೀಠದ ನವರಾತ್ರಿ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.