ADVERTISEMENT

ಕೂಲಿಗಾಗಿ ಕಾದು...

ಸುರೇಖಾ ಹೆಗಡೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ಅಲ್ಲಿ ಸಾವಿರಾರು ಮುಗ್ಧ ಕಣ್ಣುಗಳು ಯಾವುದೋ ಬುಲಾವಿಗಾಗಿ ಕಾಯುತ್ತಿದ್ದವು. ದಿನದ ಕೂಲಿ ಸಿಕ್ಕರೆ ಸಾಕು ಎಂಬ ಹಪಹಪಿಯಲ್ಲಿದ್ದವು ಆ ಬಡಕಲು ಶರೀರಗಳು. ಮಣ್ಣು ಮೆತ್ತಿದ, ಅಲ್ಲಲ್ಲಿ ಹರಿದ ಬಟ್ಟೆ. ಸೂರ್ಯನ ಝಳಕ್ಕೆ ಕಳೆಗುಂದಿದ ಮೈಕಾಂತಿ... ನಿಮ್ಮ ಊಹೆ ಸರಿ. ಇವರೆಲ್ಲ ಕೂಲಿ ಆಳುಗಳು.

ಶ್ರೀನಿವಾಸನಗರ ಬಳಿಯ ಬ್ಯಾಂಕ್ ಕಾಲೊನಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ರಸ್ತೆಗಳ ಬದಿಯಲ್ಲಿ ಪ್ರತಿದಿನ ಬೆಳಿಗ್ಗೆ ಸುಮಾರು 7ರಿಂದ 10.30ರ ವರೆಗೂ ಇಂತಹುದೊಂದು ದೃಶ್ಯವನ್ನು ನೋಡಬಹುದು. ಹತ್ತಿಪ್ಪತ್ತು ಮಂದಿಯಲ್ಲ ಮಾರಾಯ್ರೆ 400ರಿಂದ 500ರಷ್ಟು! ಬಾಲಕರು, ಕಟ್ಟಾಳುಗಳು, ವಯಸ್ಸು ಮೀರಿದರೂ ದುಡಿತಕ್ಕೆ ಬಿದ್ದವರು... ಹೀಗೆ ಎಲ್ಲಾ ಬಗೆಯ ಮಂದಿಯೂ ಈ ಗುಂಪಿನಲ್ಲಿರುತ್ತಾರೆ. ದುಡಿಯುವ ಕೈಗಳಿಗೆ ಆ ದಿನದ ಕೆಲಸಕ್ಕೆ ತಮ್ಮನ್ನು ಕರೆದೊಯ್ಯುವವರು ಯಾರಿರಬಹುದು ಎಂಬ ಕುತೂಹಲ, ಪ್ರತೀಕ್ಷೆ. ಮನೆಗೆಲಸ, ಗಾರೆ ಕೆಲಸ, ಪೇಂಟಿಂಗ್ ಮುಂತಾದ ಎಲ್ಲ ರೀತಿಯ ಕೆಲಸ ಮಾಡಲಿಕ್ಕೂ ಅವರು ಸಿದ್ಧ. ಗಾರೆ ಕೆಲಸಕ್ಕೆ ದಿನಕ್ಕೆ 600 ರೂ, ಮಹಿಳೆಯರಿಗೆ 250ರೂ, ಗಂಡಸರಿಗೆ 400 ರೂಪಾಯಿಯಂತೆ ದಿನದ ಕೂಲಿ ಕೊಡುತ್ತಾರೆ. ಒಂದು ದಿನ ಕೈತುಂಬ ಕೆಲಸ ಸಿಕ್ಕರೆ ಮತ್ತೆ ಕೆಲವು ದಿನ ಖಾಲಿ ಕೈ.

ಎಲ್ಲಿಂದ ಬಂದವರು?
ಇಲ್ಲಿ ಬಂದು ಕಾಯುವ ಕೆಲಸಗಾರರಿಗೆ ಸ್ಥಳಗಳ ಮಿತಿ ಇಲ್ಲ. ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿ, ತುಮಕೂರು, ಮೈಸೂರು, ಊಟಿ ಮುಂತಾದ ಕಡೆಗೂ ಇಲ್ಲಿಂದ ಕೆಲಸಗಾರರನ್ನು ಕರೆದೊಯ್ಯುತ್ತಾರಂತೆ. ಬಸ್ ದರ ಸೇರಿದಂತೆ ದಿನಕ್ಕೆ ಸುಮಾರು 300-350 ರೂ. ಹಣ ಕೈಗೆ ಸಿಗುತ್ತದೆ.

ಹೆಚ್ಚಿನ ಮಂದಿ ಬಂದಿರುವುದು ಆಂಧ್ರಪ್ರದೇಶದಿಂದ. ಒಂದು ವರ್ಷದಿಂದೀಚೆಗೆ ಇಲ್ಲಿ ಎಲ್ಲಾ ರಾಜ್ಯದವರು ಬಂದು ಕೆಲಸಕ್ಕಾಗಿ ಕಾಯುವುದು ಮಾಮೂಲಿ. ಉತ್ತರ ಕರ್ನಾಟಕದ ಮಂದಿಯನ್ನೂ ಇಲ್ಲಿ ಕಾಣಬಹುದು. `ಅಲ್ಲಿ ಬರ ಬಂತು. ನಮ್ಮ ಜಮೀನ್ನಾಗ ಬೆಳೆ ಬೆಳೆಯಾಂಗಿಲ್ಲ ಅದಕ್ಕ ಕೆಲಸ ಹುಡಕ್ಕಂತ ಇಲ್ಲಿ ಬಂದಿವ್ರಿ~ ಎಂದು ವಿಷಾದಿಸಿದರು ಬಿಜಾಪುರದ ವ್ಯಕ್ತಿಯೊಬ್ಬರು.

ಹೀಗೆ ಬೆಂಗಳೂರಿನಲ್ಲಿ ಬದುಕಿನ ನೆಲೆ ಕಂಡುಕೊಳ್ಳುವ ಇಷ್ಟೆಲ್ಲ ಮಂದಿಗೆ ವಾಸಿಸಲು ಜಾಗ ಎಲ್ಲಿ ಕೊಡುತ್ತಾರೆ ಎಂದು ಪ್ರಶ್ನಿಸಿದರೆ ಫುಟ್‌ಪಾತ್‌ನತ್ತ ಬೆರಳು ತೋರುತ್ತಾರೆ. ಬೆಳಗಿನ ಜಾವ ಬ್ಯಾಂಕ್ ಕಾಲೊನಿಯ ಸೀತಾ ಸರ್ಕಲ್ ಸಮೀಪದ ರಸ್ತೆಬದಿಗಳಲ್ಲಿ ಸ್ಥಳೀಯರು ಕಂಡುಬರುವುದೇ ಇಲ್ಲ. ಇವರೇ ಎಲ್ಲೆಲ್ಲೂ. ಅಂದ ಹಾಗೆ ಮಕ್ಕಳೂ ಕೂಲಿ ಕೆಲಸಕ್ಕೆ ತಪ್ಪಿಸುವಂತಿಲ್ಲ. ಆದರೆ ಈ ಬಗ್ಗೆ ಮಕ್ಕಳನ್ನೇ ವಿಚಾರಿಸಿದರೆ `ನಾವು ಸ್ಕೂಲಿಗೆ ಹೋಗ್ತೀವಿ, ತುಮಕೂರಿನಲ್ಲಿ. ರಜೆ ಇದೆ ಅಂತ ನೆಂಟರ ಜೊತೆ ಇಲ್ಲಿ ಬಂದಿದ್ದೀವಿ. ಕೆಲಸಕ್ಕೆ ಹೋಗಲ್ಲ~ ಎಂಬುದು ಮಕ್ಕಳು ನೀಡುವ ಜಾಣ ಉತ್ತರ. ದುಡಿಯೋದು ಬೇಡ ಅವರು ಓದಲಿ ಎಂದೇ ಹಿರಿಯರೂ ಹೇಳುತ್ತಾರೆ.

ರೊಕ್ಕ ಪಕ್ಕಾ?
ಗುತ್ತಿಗೆದಾರರು ಒಮ್ಮಮ್ಮೆ ಹೇಳಿದಷ್ಟು ಹಣ ಕೊಡುವುದಿಲ್ಲ. ಕಾಯಂ ಕೆಲಸ ಎಂದಿಲ್ಲ. ಹೀಗಾಗಿ ದಿನದ ಕೂಲಿ ಪಡೆಯದಿದ್ದರೆ ಮರುದಿನ ಹಣ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಇನ್ನು ಕೆಲವು ಮೇಸ್ತ್ರಿಗಳು ದಿನದ ಕೂಲಿ ಕೊಟ್ಟೇ ಬಿಡುತ್ತಾರಂತೆ. ಒಂದೊಂದು ದಿನ ಒಂದೊಂದು ಕಡೆ ಕೆಲಸ ಮಾಡುವುದರಿಂದ ನಾವೂ ಹಣ ಇಸ್ಕೊಂಡು ಬಿಡ್ತೀವಿ ಎಂದು ವ್ಯವಹಾರದ ಮಾತಾಡುತ್ತಾರೆ.

`ಗಾಂಧಿ ಬಜಾರ್‌ಗೆ ಕೆಲಸಕ್ಕೆ ಕರ್ಕೊಂಡು ಹೋಗಿದ್ರು ಕಣವ್ವ. ವಾರದ ಲೆಕ್ಕ ಅಂದ್ಕೋತಾ ದುಡ್ಡೇ ಕೊಡಲಿಲ್ಲ. ಸಾವ್ರ ರೂಪಾಯಿ. ಬಡವರ ಹೊಟ್ಟೆ ಮೇಲೆ ಹೊಡದ್ರೆ ಅವರಿಗೆ ಅನ್ನ ಹುಟ್ಟಾಕಿಲ್ಲ~ ಎನ್ನುತ್ತಾ ವಯಸ್ಸಾದ ವ್ಯಕ್ತಿಯೊಬ್ಬರು ನೋವು, ಆಕ್ರೋಶ ವ್ಯಕ್ತಪಡಿಸಿದರು.
`ದಿನಾ ಇಲ್ಲೇ ಬಂದು ಕಾಯ್ತೀನಿ. ಕೆಲಸ ಸಿಕ್ಕೇ ಸಿಗುತ್ತೆ. ಅಂಗಡಿ ಸ್ವಚ್ಛ ಮಾಡಿದರೆ ಅರ್ಧ/ಒಂದು ಗಂಟೆಗೆ 200 ರೂ ಕೊಡ್ತಾರೆ. ಮೊನ್ನೆ ನನ್ನ ಮೊಮ್ಮಗ ಕೈಯಾಗೇ ಜೀವ ಬಿಟ್ಬುಟ್ಟಾ. ಕಾಯಿಲೆ ಇದ್ರೂವೇ ಮನೇಲಿ ಕೂರಕ್ಕಾಯ್ತದಾ?  ಮಗೂನ ನೀನೇ ಕೊಂದೆ ಅಂತಾನೆ ಮಗ. ಯಾರಿಗೆ ಯಾರೂ ಆಗಾಕಿಲ್ಲ~ ಅಂತ ಕಣ್ಣೀರು ಹಾಕಿದರು 60ರ ಮಹಿಳೆ ಸಂಪಂಗಿ.

ಆದರೆ ಮೇಸ್ತ್ರಿ ಹೇಳೋದು ಬೇರೆ. `ಬರ್ತೀವಿ ಅಂತ ಕಾಯಿಸ್ತಾರೆ. ಇಲ್ಲಿಂದ ಅವರು ಬಸ್ ಹತ್ತಿ ಬರೋದ್ರೊಳಗೆ ಮಧ್ಯಾಹ್ನವಾಗುತ್ತದೆ. ಸಂಜೆ 5.30ಕ್ಕೆ ವಾಪಸ್ ಹೊರಡಬೇಕು. ಒಮ್ಮಮ್ಮೆ ನಿಗದಿತ ಹಣ ನೀಡಿದರೂ ಗಲಾಟೆ ಮಾಡ್ತಾರೆ. ಕೆಲವೊಮ್ಮೆ ಕೆಲಸಗಾರರೇ ಸಿಗಲ್ಲ. ಹಾಗಾಗಿ ಈಗೀಗ ಕೆಲವರು ಸ್ವಂತ ವಾಹನ ತಂದು ಕೆಲಸಗಾರರನ್ನು ಕರೆದುಕೊಂಡು ಹೋಗ್ತಾರೆ ಎಂಬ ಮಾಹಿತಿ ನೀಡುತ್ತಾರೆ ಬಾಲಕೃಷ್ಣ ಎಂಬ ಗುತ್ತಿಗೆದಾರ.

ಬೆಂಗಳೂರಿನವರು ಎಲ್ಲಿ ಹೋಗಬೇಕು?
`ನಾವೆಲ್ಲಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದೋರು. ಬೇರೆ ರಾಜ್ಯದವರು ಹೀಗೆ ಬಂದು ತುಂಬಿದರೆ ನಾವೆಲ್ಲ ಎಲ್ಲಿ ಹೋಗೋದು? ಇಲ್ಲಿ ಮಣ್ಣಿನ ಮಕ್ಕಳಿಗೇ ಅನ್ನ ಇಲ್ಲ. ಪರವೂರಿನವರಿಗೆ ಮಣೆ ಹಾಕುತ್ತೇವೆ ನಾವು. ತಮ್ಮ ರಾಜ್ಯದವರಿಗೆ ಅಲ್ಲಿನ ಸರ್ಕಾರದವರು ಏನಾದರೂ ವ್ಯವಸ್ಥೆ ಮಾಡಬೇಕಲ್ವಾ. ಇಲ್ಲಿ ಬಂದು ನಮ್ಮ ಹೊಟ್ಟೆ ಮ್ಯಾಲೆ ಹೊಡೀತಾರೆ. ಇವರಿಗೆ ಉಳ್ಕೊಳ್ಳೋಕೆ ಜಾಗ ಕೊಡಬಾರದು~ ಎಂದು ರೋಷ ವ್ತಕ್ತಪಡಿಸುತ್ತಾರೆ ಸ್ಥಳೀಯ ಕೂಲಿ ಕಾರ್ಮಿಕರು.

ತಾವು ಕೆಲಸವಿಲ್ಲದೆ ಇರುವಾಗ ಹೊರಗಿನ ಮಂದಿ ಹೀಗೆ ತಮ್ಮ ಮೇಲೆ ಸವಾರಿ ಮಾಡುವುದನ್ನು ಸರ್ಕಾರ ನಿಯಂತ್ರಿಸಬೇಕು ಎಂಬುದು ಅವರ ಸಲಹೆ.

ಪೊಲೀಸರು ಹೊಡೀತಾರೆ
ಬ್ಯಾಂಕ್ ಕಾಲೊನಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನ ಹೊತ್ತು ದೊಡ್ಡದೊಂದು ಜನಜಂಗುಳಿ. ಯಾರು ಎಲ್ಲಿಗೆ ಹೊರಟಿದ್ದಾರೆ, ಅವರ‌್ಯಾರು ಇವರ‌್ಯಾರು ಎಂದು ಪ್ರತ್ಯೇಕಿಸಲಾಗದಷ್ಟು  ನೂಕುನುಗ್ಗಲು. ಬಸ್ಸಿಗೆ ತೆರಳಬೇಕಾದ ಸ್ಥಳೀಯರೂ ಇವರ ಮಧ್ಯೆ ಸಿಕ್ಕಿಹಾಕಿಕೊಳ್ಳುವುದುಂಟು. ಕೆಲಸದ ಆಫರ್ ಸಿಕ್ಕಿದವರು ಜಾಗ ಖಾಲಿ ಮಾಡಿದರೆ ಸಿಗದವರು ಅವರಿವರಲ್ಲಿ ಕೆಲಸ ಬೇಡುವುದೂ ಉಂಟು. ಈ ಓಡಾಟ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತದೆ.

ಇದರಿಂದ ರೋಸಿಹೋದ ಕೆಲವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಒಮ್ಮೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದೂ ಇದೆ. `ರಸ್ತೆಯಲ್ಲಿ ಹೋಗಿ ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರೆ ಹೊಡೆಯದೇ ಬಿಡ್ತಾರಾ ಅಂತ ತಮ್ಮನ್ನೇ ದೂರಿಕೊಳ್ಳುತ್ತಾರೆ ಇವರು!

ಚಿತ್ರಗಳು: ಡಿ.ಸಿ. ನಾಗೇಶ್

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.