ADVERTISEMENT

ಕೃಷಿ ಲೋಕ

ಗಾಣಧಾಳು ಶ್ರೀಕಂಠ
Published 18 ನವೆಂಬರ್ 2011, 19:30 IST
Last Updated 18 ನವೆಂಬರ್ 2011, 19:30 IST
ಕೃಷಿ ಲೋಕ
ಕೃಷಿ ಲೋಕ   

ಪಡುವಲ ಕಾಯಿ ಇಷ್ಟು ಉದ್ದ ಬೆಳೆಯುತ್ತಾ...? ಇದೇನಪ್ಪಾ, ಈ ತರಕಾರಿ `ದೊಡ್ಡ ಸ್ಟಾರ್ ಫಿಷ್~ ತರಹ ಇದೆ...? ಅರೆ, ಹೂವಿನ ಕುಂಡದಲ್ಲಿ ಟೊಮ್ಯಾಟೊ ಬೆಳೆಯಬಹುದಾ...! ಏನ್ರೀ, ನವಣೆ ಅಂದರೆ ಇದೇನಾ, ನಾನು ಅಕ್ಕಿ ತರಹ ಇರುತ್ತೆ ಅಂದುಕೊಂಡಿದ್ದೆ...!

ಕಳೆದ ವರ್ಷದ ಕೃಷಿ ಮೇಳದಲ್ಲಿ ಉದ್ಯಾನ ನಗರಿಯ ಗೃಹಿಣಿಯರು, ಶಾಲಾ ಮಕ್ಕಳು ಕೇಳಿದ ಅಚ್ಚರಿಯ ಮಾತುಗಳಿವು. ನಗರದವರಿಗೆ ಮೇಳದಲ್ಲಿ ಕಂಡಿದ್ದೆಲ್ಲವೂ ಅಚ್ಚರಿ. ಶಾಲಾ ಮಕ್ಕಳಿಗೆ ಪಠ್ಯದಲ್ಲಿ ಓದಿದ ವಿಷಯಗಳನ್ನು ಪ್ರತ್ಯಕ್ಷವಾಗಿ ಕಂಡಾಗ ಖುಷಿಯೋ ಖುಷಿ.

ಶಾಲಾ ಮಕ್ಕಳ ಹಾಗೂ ನಗರವಾಸಿಗಳ ನಾಡಿಮಿಡಿತ ಅರಿತಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷ ಕೃಷಿ ಮೇಳದಲ್ಲಿ ಪ್ರತ್ಯೇಕ ತಾಕುಗಳನ್ನು ಅವರಿಗಾಗಿ ಕಾಯ್ದಿರಿಸುತ್ತದೆ. ಅಷ್ಟೇ ಅಲ್ಲ, ತಾಕುಗಳ ಮಾಹಿತಿ ವಿವರಿಸುವ `ಮಾಹಿತಿ ಕೇಂದ್ರ~ಗಳನ್ನೂ ತೆರೆದಿರುತ್ತದೆ. ಪ್ರತಿ ಕೇಂದ್ರದಲ್ಲೂ ತಜ್ಞರನ್ನು ನಿಯೋಜಿಸಿರುತ್ತದೆ.

ಈ ಬಾರಿಯ ಕೃಷಿ ಮೇಳದಲ್ಲೂ ಗೃಹಿಣಿಯರು ಹಾಗೂ ಮಕ್ಕಳಿಗಾಗಿ 20 ರಿಂದ 25 ಮಳಿಗೆಗಳನ್ನು ತೆರೆದಿದೆ. ಮನೆಯ ಅಂಗಳದಲ್ಲಿ ಕೈತೋಟ, ತಾರಸಿ ಮೇಲೆ ತರಕಾರಿ ತೋಟ, ಮಳೆ ನೀರು ಸಂಗ್ರಹ ವಿಧಾನ, ಅಲಂಕಾರಿಕ ಮತ್ತು ಔಷಧೀಯ ಸಸ್ಯಗಳು, ಸಾವಯವ ಆಹಾರ ಪದಾರ್ಥಗಳ ಅರಿವು... ಹೀಗೆ ಕೃಷಿ ಮೇಳದ ಅಂಗಳದ ತುಂಬಾ ಮಾಹಿತಿ ಸಾರುವ ಕೇಂದ್ರಗಳಿವೆ.

ಹೊರ ರಾಜ್ಯಗಳ ಉತ್ಪನ್ನಗಳು: ಈ ವರ್ಷದ ಮೇಳವನ್ನು `ರಾಷ್ಟ್ರೀಯ ಕೃಷಿ ಮೇಳ~ ಎಂದು ಘೋಷಿಸಲಾಗಿದೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಿಂದ ಬಂದ ಕೃಷಿಕರು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಹೊರ ರಾಜ್ಯದ ತಿನಿಸುಗಳು, ಆಟಿಕೆಗಳು, ಆ ಭಾಗದ ಗ್ರಾಮೀಣ ಕರಕುಶಲ ವಸ್ತುಗಳು, ಮೌಲ್ಯವರ್ಧಿತ ಆಹಾರ ಉತ್ಪನ್ನಗಳಿವೆ. ಕೆಲವು ಮಳಿಗೆಗಳಲ್ಲಿ ಆಹಾರ ಸವಿಯುತ್ತಲೇ ಖರೀದಿಸುವ ಅವಕಾಶವಿದೆ.

ನಗರದ ಮಧ್ಯಮ ವರ್ಗದ ಮಹಿಳೆಯರಿಗೆ `ಸ್ವಾವಲಂಬಿ~ ಜೀವನಕ್ಕಾಗಿ ಸಣ್ಣ ಉದ್ದಿಮೆಗಳನ್ನು ಮೇಳದಲ್ಲಿ ಪರಿಚಯಿಸಲಾಗುತ್ತಿದೆ. ವಿ.ವಿಯ ಗೃಹ ವಿಜ್ಞಾನ ವಿಭಾಗ ರಾಗಿ, ಜೋಳ, ರಾಜಗೀರ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಮಾರಾಟ ಕುರಿತು ಮಾಹಿತಿ ನೀಡುತ್ತಿದೆ. ಬ್ಯಾಂಕ್ ಸಂಪರ್ಕ, ಸಾಲ ಸೌಲಭ್ಯ ಕುರಿತ ಮಾಹಿತಿ ನೀಡುವ ಕೇಂದ್ರಗಳಿವೆ.

ಆಹಾರ ಧಾನ್ಯಗಳ ರಕ್ಷಣೆ: ಅಕ್ಕಿ, ಬೆಳೆ, ಧಾನ್ಯಗಳಿಗೆ ಹುಳುಗಳ ಕಾಟ. ರಕ್ಷಿಸುವ ಬಗೆ ಹೇಗೆ? ಮೇಳದಲ್ಲಿ ಇಂಥ ಪ್ರಶ್ನೆಗಳಿಗೆ ಪರಿಹಾರ ನೀಡುವ ತಜ್ಞರಿದ್ದಾರೆ. ಮನೆ ಮಟ್ಟದಲ್ಲೇ ಆಹಾರ ಧಾನ್ಯಗಳ ಸಂರಕ್ಷಣೆ ಕುರಿತ ಮಾಹಿತಿಯನ್ನು ತಜ್ಞರು ನೀಡುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ವಿವಿಧ ವಯೋಮಾನಕ್ಕೆ ತಕ್ಕಂತೆ ಪೌಷ್ಠಿಕ ಆಹಾರ ಸೇವನೆ ಕುರಿತ ಸಲಹೆಯೂ ಲಭ್ಯ.

100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸ್ವಸಹಾಯ ಗುಂಪುಗಳ ಮಹಿಳಾ ಉದ್ಯಮಿಗಳು ತಯಾರಿಸಿದ ಕರಕುಶಲ ವಸ್ತುಗಳು, ಹಳ್ಳಿ ತಿಂಡಿ, ಮೌಲ್ಯವರ್ಧಿತ ಆಹಾರ ಪದಾರ್ಥಗಳ ಮಾರಾಟವಿದೆ.

ಕೇವಲ ತಿಂಡಿ-ತಿನಸು ಅಷ್ಟೇ ಅಲ್ಲ. ನಿಮ್ಮ ಮನೆಯ ಅಂಗಳಕ್ಕೆ ಬೇಕಾಗುವ ಅಲಂಕಾರಿಕ ಗಿಡಗಳು ಮಾರಾಟಕ್ಕಿವೆ. ತರಕಾರಿ ಬೀಜಗಳು, ಔಷಧೀಯ ಸಸ್ಯಗಳು, ಮನೆಯ `ಶೋಕೇಸ್~ ಶ್ರೀಮಂತಗೊಳಿಸುವ ಕರಕುಶಲ ವಸ್ತುಗಳು ಖರೀದಿಗೆ ಲಭ್ಯ.

ವಿದ್ಯಾರ್ಥಿಗಳಿಗೆ ಆಹಾರದ ಅರಿವು : ನಾವು ಸೇವಿಸುವ ಆಹಾರದ ಮೂಲ ಯಾವುದು? ರಾಗಿ, ಅಕ್ಕಿ ಏಕದಳವೋ, ದ್ವಿದಳವೋ? ಬತ್ತ ಹೇಗೆ ಬೆಳೆಯುತ್ತಾರೆ? ಸಾವಯವ ಕೃಷಿ ಆಹಾರ ಎಂದರೇನು? ಅದನ್ನು ಏಕೆ ಬಳಸಬೇಕು...? ಇವೆಲ್ಲ ಶಾಲಾ ಪಠ್ಯದ ಕೊನೆಯಲ್ಲಿರುವ ಪ್ರಶ್ನೆಗಳು. ದೇಶದ ಆಹಾರ ಪರಿಸ್ಥಿತಿ, ರೈತರ ಸಮಸ್ಯೆಗಳು, ಮಳೆ ಕೊರತೆ, ಕೃಷಿ ಕ್ಷೇತ್ರದ ಮೇಲಿನ ಆಕ್ರಮಣಗಳು; ಇವು ಪಠ್ಯದಲ್ಲಿರುವ `ಥಿಯರಿ~ಗಳು. ಇವನ್ನೆಲ್ಲ ಪ್ರತ್ಯಕ್ಷವಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಕಾಣುವ ಅವಕಾಶ ಕೃಷಿ ಮೇಳದಲ್ಲಿದೆ.

ನಗರದ ಜನರಿಗೇನು ಸಂಬಂಧ?
ಎಲ್ಲ ಸರಿ. ಬೆಂಗಳೂರಿಗರು ಕೃಷಿ ಮೇಳಕ್ಕೆ ಏಕೆ ಹೋಗಬೇಕು? ಶಾಲಾ ಮಕ್ಕಳಿಗೂ ಮೇಳಕ್ಕೂ ಏನು ಸಂಬಂಧ? ಬಹಳ ಜನ ಇಂಥ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರ ಇಲ್ಲಿದೆ.

ನಗರದವರ ಜೀವನಕ್ಕೆ ಉತ್ತಮ ಆಹಾರ ಬೇಕು. ರೈತರಿಗೆ ತಮ್ಮಉತ್ಪನ್ನ ಕೊಳ್ಳುವ ಗ್ರಾಹಕ ಬೇಕು. ಅಂಥ ಪ್ರಮುಖ ಗ್ರಾಹಕ ಸಮೂಹವಿರುವುದು ಬೆಂಗಳೂರಿನಲ್ಲಿ. ಈ ಉದ್ದೇಶದಿಂದ ಮಹಾನಗರದ ಜನ, ತಾವು ಸೇವಿಸುವ ಆಹಾರದ ಮೂಲ ತಿಳಿಯಬೇಕಾದರೆ ಕೃಷಿ ಮೇಳಕ್ಕೆ ಬರಬೇಕು.  `ನಾವು ಉಣ್ಣುವ ಅನ್ನ, ಉಡುವ ಬಟ್ಟೆ, ಬಳಸುವ ಉತ್ಪನ್ನಗಳ ಹಿಂದೆ ರೈತರ ಶ್ರಮ ಎಷ್ಟಿರುತ್ತದೆ~ ಎಂಬುದನ್ನು ಮಕ್ಕಳಿಗೆ ಮನದಟ್ಟಾಗಿಸಲು ಈ ಮೇಳ ಒಂದು ಉತ್ತಮ ಮಾಧ್ಯಮ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT