ADVERTISEMENT

ಗಮನ ಸೆಳೆದ ಸಿಗ್ನೇಚರ್‌ ಸಿನಿಮಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಗಮನ ಸೆಳೆದ ಸಿಗ್ನೇಚರ್‌ ಸಿನಿಮಾ
ಗಮನ ಸೆಳೆದ ಸಿಗ್ನೇಚರ್‌ ಸಿನಿಮಾ   

ಹತ್ತನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಉತ್ಸವಕ್ಕಾಗಿ ತಯಾರಿಸಲಾದ ‘ಸಿಗ್ನೇಚರ್‌ ಫಿಲ್ಮ್‌’ ಅನೇಕರಿಗೆ ಇಷ್ಟವಾಗಿದೆ. ಕರ್ನಾಟಕ ಸೇರಿದಂತೆ ದೇಶದ ಸಂಸ್ಕೃತಿ ಶ್ರೀಮಂತಿಕೆಯನ್ನೂ ಬಿಂಬಿಸುವ ಟ್ರೇಲರ್‌ ರೂಪದ ಪುಟಾಣಿ ಸಿನಿಮಾವನ್ನು ಚಿತ್ರೋತ್ಸವದ ಅಂಗವಾಗಿ ರೂಪಿಸಿದವರು ರಾಜೇಂದ್ರಸಿಂಗ್‌ ಬಾಬು. ಪರಿಕಲ್ಪನೆ ಹಾಗೂ ದೃಶ್ಯ ನಿರ್ದೇಶನ ಅವರದೇ.

ಆಕರ್ಷಿಸುವ ಸಂಗೀತದೊಂದಿಗೆ ವೇಗವಾಗಿ ಚಲಿಸುವ ದೃಶ್ಯ ಸರಣಿಗಳು, ಕರ್ನಾಟಕ ಸಂಸ್ಕೃತಿ ಶ್ರೀಮಂತಿಕೆಯನ್ನು ಅರುಹುತ್ತವೆ. ಜೊತೆಗೆ ಕರ್ನಾಟಕದ ಲಾಂಛನವಾಗಿಯೇ ಗುರುತಿಸಿಕೊಂಡಿರುವ ಗಂಡ ಭೇರುಂಡ ಪಕ್ಷಿ ಕರ್ನಾಟಕದ ತುಂಬೆಲ್ಲಾ ಸುತ್ತಾಡಿ, ದೇಶ ವಿದೇಶಗಳ ಚಿತ್ರವನ್ನೂ ಹೊತ್ತು ಬೆಂಗಳೂರಿಗೆ ತರುತ್ತದೆ. ಚಿತ್ರೋತ್ಸವ ಪ್ರಾರಂಭವಾಗುವುದಕ್ಕೂ ಒಂದೂವರೆ ತಿಂಗಳು ಮುಂಚಿನಿಂದಲೇ ಸಿಗ್ನೇಚರ್ ಫಿಲ್ಮ್ ಕೆಲಸ ಶುರುವಾಯಿತು. ದೃಶ್ಯಾವಳಿಯಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ರಾಜೇಂದ್ರ ಸಿಂಗ್‌ ಬಾಬು ಅವರು ಕಲ್ಪಿಸಿಕೊಳ್ಳುತ್ತಿದ್ದಂತೆ ಮೊದಲು ಅದನ್ನು ಐದಾರು ಪರಿಣಿತರ ತಂಡ ಸ್ಕೆಚ್‌ ಮೂಲಕ ದೃಢೀಕರಿಸಿತು. ಸಿಗ್ನೇಚರ್ ಫಿಲ್ಮ್‌ನ ಯಶಸ್ಸಿಗೆ ಸುಮಾರು 21 ಕಲಾವಿದರು ಶ್ರಮಿಸಿದ್ದಾರೆ.

‘ಕರ್ನಾಟಕದ ಲಾಂಛನವಾದ ಗಂಡಭೇರುಂಡ ಸಿನಿಪ್ರೇಮಿಗಳ ಮನಸನ್ನು ಸಿನಿಮೋತ್ಸವಕ್ಕೆ ತಂದು ಬಿಡುವಂತೆ ಮೊದಲು ಪರಿಕಲ್ಪನೆ ಮಾಡಿಕೊಂಡೆ. ಅದರಲ್ಲಿ ಆಧುನಿಕತೆ ತರುವ ಸಲುವಾಗಿ ರೊಬೋಟ್‌ ಹಕ್ಕಿಯನ್ನು ಸೃಷ್ಟಿಸುವಂತೆ ಮಾಡಿದ್ದೇವೆ. ಹಾಗೆ ಬಂದ ಹಕ್ಕಿ ನಮ್ಮ ರಾಜ್ಯವನ್ನು ಸುತ್ತಾಡಿಕೊಂಡು ಮುಂದೆ ಹೋಗುತ್ತದೆ. ಇದರೊಟ್ಟಿಗೆ ಕರ್ನಾಟಕದ ಸಂಸ್ಕೃತಿ, ಸಂಗೀತ, ಕಲಾ ಪ್ರಕಾರವನ್ನು ಪ್ರತಿನಿಧಿಸುತ್ತಾ ಸಾಗುತ್ತದೆ. ಅಲ್ಲಿಂದ ಸಾಗುವ ಪಕ್ಷಿ ಅಮೆರಿಕದ ಸ್ಟ್ಯಾಚು ಆಫ್‌ ಲಿಬರ್ಟಿಗೆ ಹೋಗುತ್ತದೆ. ಸ್ವಾತಂತ್ರ್ಯದ ಪ್ರಾಧಾನ್ಯ ಹೇಳುವ ಸಲುವಾಗಿ ಹಾಗೆ ಮಾಡಿದೆವು. ಅಲ್ಲಿಂದ ಹಕ್ಕಿಯು ಬೆಂಗಳೂರಿಗೆ ಬಂದಿರುವಂತೆ ತೋರಿಸಲಾಗಿದೆ. ಬೆಂಗಳೂರು ಸಿನಿಮಾ ಉತ್ಸವ ನೂರಾರು ವರ್ಷಗಳ ಕಾಲ ಗಟ್ಟಿಯಾಗಿ ನಿಲ್ಲುತ್ತದೆ ಎನ್ನುವುದನ್ನು ಸಾಲಿಡ್ ಬಾಕ್ಸ್‌ ಚಿತ್ರ ಬಳಸುವ ಮೂಲಕ ಬಿಂಬಿಸಲಾಗಿದೆ’ ಎಂದು ಮಾಹಿತಿ ನೀಡಿದರು ಬಾಬು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.