ADVERTISEMENT

ಗುಬ್ಬಚ್ಚಿಗಳೇ ಬನ್ನಿ ಗೂಡಿಗೆ

ಗಾಣಧಾಳು ಶ್ರೀಕಂಠ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST
ಗುಬ್ಬಚ್ಚಿಗಳೇ ಬನ್ನಿ ಗೂಡಿಗೆ
ಗುಬ್ಬಚ್ಚಿಗಳೇ ಬನ್ನಿ ಗೂಡಿಗೆ   

ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವುದು ಯಾರನ್ನು? ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು? 

 ದಶಕಗಳ ಹಿಂದೆ, ಕೋಣೆಯ ಬಾಗಿಲಲ್ಲಿ ಕತ್ತು ಟಂಕಿಸುತ್ತ ಕುಳಿತಿದ್ದ ಗುಬ್ಬಚ್ಚಿಗಳತ್ತ ಬೊಟ್ಟು ಮಾಡುತ್ತಾ ಮೇಷ್ಟ್ರು ಈ ಪದ್ಯ ಹೇಳುತ್ತಿದ್ದರು. ಈಗ ಆ ಪದ್ಯಗಳೂ ಇಲ್ಲ. ಶಾಲೆ ಬಳಿಗೆ ಗುಬ್ಬಚ್ಚಿಗಳೂ ಸುಳಿಯುವುದಿಲ್ಲ. ಆ ಪ್ರಮಾಣದಲ್ಲಿ ಗುಬ್ಬಚ್ಚಿಗಳು ನಮ್ಮ ನಗರದಿಂದ ನಾಪತ್ತೆಯಾಗಿವೆ. ಉದ್ಯಾನನಗರಿ ಎನಿಸಿಕೊಂಡ ಬೆಂಗಳೂರಲ್ಲಂತೂ ಗುಬ್ಬಚ್ಚಿಗಳನ್ನು ‘ದುರ್ಬಿನ್’ ಹಾಕಿ ಹುಡುಕಬೇಕು.

ಬೆಂಗಳೂರಿನಾದ್ಯಂತ ಮೇಲ್ಸೇತುವೆ, ಮೆಟ್ರೊ, ಮಾನೊ, ವಾಣಿಜ್ಯ ಸಂಕೀರ್ಣ, ಗಗನ ಚುಂಬಿ ಕಟ್ಟಡ.. ಹೀಗೆ ಅಭಿವೃದ್ಧಿಯ ಸಾಲು ಸಾಲು. ಪರಿಣಾಮ ಗುಬ್ಬಚ್ಚಿಗಳ ಆವಾಸಸ್ಥಾನವಾಗಿದ್ದ ಗಿಡಗಂಟಿಗಳು ನಾಪತ್ತೆಯಾದವು. ಹೀಗಾಗಿ ಗೂಡು ಕಟ್ಟಲು ಅವಕ್ಕೆ ಸ್ಥಳವಿದಂತಾಯಿತು.

ನೆಮ್ಮದಿಯ ವಾತಾವರಣವೂ ಮಾಯವಾಯಿತು. ಇದರ ಜೊತೆಗೆ ಸೀಸ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾತಾವರಣದಲ್ಲಿ ಮಿಥೈಲ್ ನೈಟ್ರೇಟ್ ಸೇರಿ ಗುಬ್ಬಚ್ಚಿಗಳ ಆಹಾರವಾದ ಕ್ರಿಮಿ ಕೀಟಗಳೂ ವಿಷಕಾರಿಯಾದವು. ಬೆಚ್ಚನೆಯ ಗೂಡಿಗೆ ನೆರವಾಗುತ್ತಿದ್ದ ಸಾಂಪ್ರದಾಯಿಕ ಮನೆಗಳೂ ಇಲ್ಲವಾದವು. ದಿನಸಿ ಅಂಗಡಿಗಳಲ್ಲಿ ಶುದ್ಧ ಧಾನ್ಯವೇ ಸಿಗತೊಡಗಿದ್ದರಿಂದ ಅಕ್ಕಿಯಿಂದ ಭತ್ತ ಬೇರ್ಪಡಿಸಿ ಪಕ್ಷಿಗಳಿಗೆ ಹಾಕುವ ಪದ್ಧತಿಯಂತೂ ನಿಂತೇ ಹೋಯಿತು. ಆಹಾರ, ಆವಾಸ ಎರಡೂ ಕ್ಷೀಣವಾದಾಗ ಗುಬ್ಬಚ್ಚಿ ಸಂತತಿಯೂ ನಶಿಸಿ ಹೋಯಿತು.
ಹೀಗೆ ಇನಿಸು- ಮುನಿಸಿನಿಂದ ಬೆಂಗಳೂರು ಬಿಟ್ಟು ಹೋಗಿರುವ ಗುಬ್ಬಚ್ಚಿಗಳನ್ನು ಮರಳಿ ಕರೆತರುವ ಪ್ರಯತ್ನಕ್ಕೆ ನಗರದ ಬಯೋಡೈವರ್ಸಿಟಿ ಕನ್ಸರ್‌ವೇಷನ್ ಇಂಡಿಯಾ (ಬಿಸಿಐಎಲ್) ಸಂಸ್ಥೆ ‘ಗುಬ್ಬಿ ಗೂಡು’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ 20ರ ‘ವಿಶ್ವ ಮನೆಗುಬ್ಬಿ ದಿನ’ದಂದು ‘ಮತ್ತೆ ಗೂಡಿಗೆ ಬಾ ಗುಬ್ಬಿ’ ಎಂಬ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮ ಆರಂಭವಾಗಿದೆ.

ಗುಬ್ಬಿ ಗೂಡು ಪರಿಕಲ್ಪನೆ
ಪರಿಸರಸ್ನೇಹಿ ಗೃಹ ನಿರ್ಮಾಣದಲ್ಲಿ ಮಂಚೂಣಿಯಲ್ಲಿರುವ ಬಿಸಿಐಎಲ್ - ಝೆಡ್ ಪ್ರತಿಷ್ಠಾನ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕನಸಿನ ಕೂಸು ‘ಗುಬ್ಬಿ ಗೂಡು’ ಯೋಜನೆ. ಗುಬ್ಬಿಗಳನ್ನು ನಮ್ಮ ಮನೆಯ ಅಂಗಳಕ್ಕೆ ಕರೆತಂದು ಅವುಗಳಿಗೆ ಬೆಚ್ಚಗಿನ ವಾಸ, ಇಚ್ಛೆ ಪಡುವ ಆಹಾರ ನೀಡಿ, ಅವುಗಳ ಸಂತತಿ ವೃದ್ಧಿಸುವುದು ಯೋಜನೆ ಉದ್ದೇಶ.

ಅದಕ್ಕಾಗಿ ಬಿದಿರಿನಿಂದ ವಿಶೇಷವಾದ ‘ಗುಬ್ಬಿ ಗೂಡನ್ನು’ ಸಂಸ್ಥೆ ಸಿದ್ಧಪಡಿಸಿದೆ. ಬೆಂಗಳೂರಿನ ಗುಬ್ಬಚ್ಚಿ ಪ್ರೀತಿಯ ಮನಸ್ಸುಗಳಿಗೆ ಈ ಗೂಡುಗಳನ್ನು ಉಚಿತವಾಗಿ ವಿತರಿಸುತ್ತಿದೆ. ಗೂಡಿನ ಜೊತೆಗೆ ಗುಬ್ಬಚ್ಚಿಗಳಿಗೆ ಆಹಾರ, ಪೊದೆ ನಿರ್ಮಾಣಕ್ಕೆ ಬೇಕಾದ ಹೂವು, ಹುಲ್ಲು, ಬಳ್ಳಿ.. ಇತ್ಯಾದಿಗಳನ್ನು ಒದಗಿಸುತ್ತಿದೆ. ಗುಬ್ಬಿಗಳ ಸಂತಾನ ವೃದ್ಧಿಗೆ ಯೋಗ್ಯ ವಾತಾವರಣ ಕಲ್ಪಿಸುವ ಮಾಹಿತಿಯನ್ನೂ ನೀಡುತ್ತಿದೆ.‘ಸುಮಾರು ಹತ್ತು ಸಾವಿರ ಗೂಡುಗಳನ್ನು ಸಂಸ್ಥೆ ಸಿದ್ಧಪಡಿಸಿದೆ. ಯೋಜನೆ ಕ್ಲಿಕ್ ಆದರೆ 10 ಲಕ್ಷ ಗೂಡುಗಳನ್ನು ವಿತರಿಸುವ ಗುರಿಯಿದೆ’ ಎನ್ನುತ್ತಾರೆ ಬಿಐಸಿಎಲ್ -ಝೆಡ್ ಪ್ರತಿಷ್ಠಾನದ ಸಿಇಒ ಕ್ರಿಷ್ ಮುರುಳಿ ಈಶ್ವರ್.

ಎಷ್ಟು ದಿನಗಳು ಬೇಕಾಗಬಹುದು ?
ಗೂಡು ಕಟ್ಟಿದ ಕೂಡಲೇ ಗುಬ್ಬಚ್ಚಿಗಳು ಬರುವುದಿಲ್ಲ. ಅದಕ್ಕೆ ಪಕ್ಷಿ ತಜ್ಞ ಹರೀಶ್ ಭಟ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ. ‘2003ರಿಂದ ನನ್ನ ಮನೆಗೆ ಗುಬ್ಬಚ್ಚಿ ಕರೆತರಲು ಪ್ರಯತ್ನಿಸಿದೆ. ಎರಡು ವರ್ಷಗಳ ನಂತರ ಗಂಡು-ಹೆಣ್ಣು ಗುಬ್ಬಚ್ಚಿಗಳು ಮನೆಯ ಕಾಂಪೌಂಡ್ ಒಳಗೆ ಬಂದವು. ಅಲ್ಲಿಂದ ಕಾಳು, ನೀರು ಕೊಡುತ್ತಿದ್ದೇವೆ. ಈಗ 26 ಗುಬ್ಬಚ್ಚಿಗಳಾಗಿವೆ. ಈಗ ನಮ್ಮ ಕೈಯಿಂದಲೇ ಆಹಾರ ಪಡೆಯುವಷ್ಟು ಗೆಳೆತನ ಬೆಳೆಸಿಕೊಂಡಿವೆ. ಗುಬ್ಬಚ್ಚಿಗಳು ಕೇಳುವುದು ವಾಸಕ್ಕೆ ಸುರಕ್ಷಿತವಾದ ತಾಣ, ನಿಶ್ಚಿತವಾದ ಆಹಾರ. ಇವಿದ್ದರೆ ಖಂಡಿತ ಗುಬ್ಬಚ್ಚಿಗಳು ಬರುತ್ತವೆ’ ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆ ಉದ್ಯಾನ ನಗರಿಗೆ ಗುಬ್ಬಚ್ಚಿಗಳನ್ನು ಕರೆತರುವ ಸಂಕಲ್ಪಕ್ಕೆ ನಾಂದಿ ಹಾಡಲಾಗಿದೆ. ಕಾಣೆಯಾಗಿರುವ ಗುಬ್ಬಚ್ಚಿಗಳನ್ನು ಮತ್ತೆ ಗೂಡಿಗೆ ಕರೆತರುವ ಸಂಸ್ಥೆಯ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಗುಬ್ಬಿ ಗೂಡುಗಳಿಗಾಗಿ ಸಹಾಯವಾಣಿ 84318 48224  ಗೆ ಕರೆ ಮಾಡಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.