ADVERTISEMENT

‘ಗೆಳೆಯ’ ಮೊಗೆದುಕೊಟ್ಟ ಇಟಲಿ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 19:30 IST
Last Updated 3 ಫೆಬ್ರುವರಿ 2017, 19:30 IST
‘ಗೆಳೆಯ’ ಮೊಗೆದುಕೊಟ್ಟ ಇಟಲಿ ಚಿತ್ರಗಳು
‘ಗೆಳೆಯ’ ಮೊಗೆದುಕೊಟ್ಟ ಇಟಲಿ ಚಿತ್ರಗಳು   

ಎಂಜಿನಿಯರಿಂಗ್  ಓದುತ್ತಿದ್ದಾಗಲೇ ಮೊಬೈಲ್ ಕ್ಯಾಮೆರಾ ಬಳಸಿ ಫೋಟೊ ಕ್ಲಿಕ್ಕಿಸುವ ಹವ್ಯಾಸ ಬೆಳೆಯಿತು. ಉತ್ತಮ ಕ್ಯಾಮೆರಾ ಫೋನ್ ಬಂದ ಕೂಡಲೇ ನನ್ನ ಮೊಬೈಲ್ ಕೂಡ ಬದಲಿಸುವ ಯೋಚನೆ.

ಕಂಡದ್ದು, ಇಷ್ಟಪಟ್ಟಿದ್ದು ಎಲ್ಲವನ್ನೂ ದಾಖಲಿಸುತ್ತ ಹೊರಟೆ. ಆದರೆ, ನನ್ನ ಆಸಕ್ತಿಯನ್ನು ಈಮಟ್ಟಿಗೆ ಬೆಳೆಸಿದ್ದು ಮದುವೆಯ ನಂತರ ನೀತನ್ (ಪತಿ) ಕೊಡಿಸಿದ ಡಿಎಸ್ಎಲ್ಆರ್ ಕ್ಯಾಮೆರಾ. ಅವರು ಪ್ರತಿ ಹುಟ್ಟು ಹಬ್ಬದಂದು ಒಳ್ಳೆಯ ಲೆನ್ಸ್ ಉಡುಗೊರೆಯಾಗಿ ಕೊಡ್ತಿದ್ದಾರೆ, ನನ್ನ ಫೋಟೋಗ್ರಫಿ ಆಸಕ್ತಿಯೂ ಬೆಳೆಯುತ್ತಲೇ ಇದೆ.

ನನ್ನ ಎಲ್ಲ ಟ್ರಿಪ್‌ಗಳೂ ಸಹ ಕುಟುಂಬದೊಂದಿಗೆ ಆಗುತ್ತೆ. ಇಂಥ ಸುತ್ತಾಟದಲ್ಲಿ ನಮಗೆಂದು ಸಿಗುವ ಸಮಯ ಬಹಳ ಕಡಿಮೆ ಸಮಯ. ಎಲ್ಲರಿಗಿಂತ ಬೆಳಿಗ್ಗೆ ಬೇಗ ಏಳುವುದು ಅಥವಾ ಸ್ಥಳ ತಲುಪಿದ ಕೂಡಲೇ ಸಿಕ್ಕ  ಸಮಯದಲ್ಲೇ ಉತ್ತಮ ಫೋಟೊಗಳನ್ನು  ಕ್ಲಿಕ್ಕಿಸುವುದೇ ನಮ್ಮ ಎದುರು ಇರುವ ಸವಾಲು.

ADVERTISEMENT

ಮದುವೆ ನಂತರ ದೇಶ ವಿದೇಶಗಳ ಹಲವು ಸ್ಥಳಗಳನ್ನು ಸುತ್ತಿ ಬಂದಿದ್ದೇನೆ. ಐದು ವರ್ಷಗಳ ನಂತರ ಕೌಟುಂಬಿಕ ಅನಿವಾರ್ಯದಿಂದ ಸಾಫ್ಟ್‌ವೇರ್ ಉದ್ಯೋಗಕ್ಕೆ ಗುಡ್ ಬೈ ಹೇಳಿದೆ. ಮನೆಯಿಂದಲೇ ಆಸಕ್ತಿ ಇರುವ ಕೆಲಸ ಮಾಡಲು ನಿರ್ಧರಿಸಿದೆ. ಆಗಲೇ ‘hopping miles’ ವೆಬ್‌ಸೈಟ್ ಆರಂಭಿಸಿದ್ದು. ತೆಗೆದ ಫೋಟೋಗಳು, ಪಡೆದ ಅನುಭವ, ಕಂಡ ಹೊಸ ಹಾದಿ ಎಲ್ಲವನ್ನೂ ನನ್ನಲ್ಲೇ ಸಂಗ್ರಹಿಸಿ ಇಡುವುದಕ್ಕಿಂತ ಎಲ್ಲರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಂತೋಷವಿದೆ.

ಲೇಖನಗಳನ್ನು ಓದಿರುವ ಬಹಳಷ್ಟು ಜನ ಸಂದೇಶ ಕಳಿಸಿ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದಾರೆ. ತಾವು ಭೇಟಿ ನೀಡಿದ ಇತರೆ ಸ್ಥಳದ ಮಾಹಿತಿ ಹಾಗೂ ಫೋಟೊಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಪಾರಂಪರಿಕ ತಾಣ: ದಕ್ಷಿಣ ಇಟಲಿ ಭಾಗದಲ್ಲಿ ನೂರಾರು ವರ್ಷಗಳ ಹಿಂದಿನಿಂದಲೂ ಸುಣ್ಣದ ಕಲ್ಲುಗಳಿಂದ ಕೋನಾಕೃತಿಯ ಟ್ರುಲ್ಲಿ ಕಟ್ಟಿ ಹಳ್ಳಿಗರು ವಾಸಿಸುತ್ತ ಬಂದಿದ್ದಾರೆ. ಟ್ರುಲ್ಲಿಗಳಿರುವ ಆ ರಸ್ತೆಗಳಲ್ಲಿ ಓಡಾಡುವ ಖುಷಿ ಮತ್ತು ಅದರ ವಿಸ್ತಾರವನ್ನು ಸೆರೆಹಿಡಿದಿರುವ ಚಿತ್ರಕ್ಕೆ ಬಹುಮಾನ ಸಿಕ್ಕಿದೆ.

ಒಂದು ವರ್ಷದಿಂದ ಚಿತ್ರಸಹಿತ ಲೇಖನಗಳನ್ನು ಪ್ರಕಟಿಸುತ್ತಿದ್ದರೂ ಯಾವುದೇ ಪ್ರದರ್ಶನ ಅಥವಾ ಸ್ಪರ್ಧೆಗಳಿಗೆ ಫೋಟೊಗಳನ್ನು ಕಳಿಸಿರಲಿಲ್ಲ. ಇದೇ ಮೊದಲ ಪ್ರದರ್ಶನ ಮತ್ತು ಬಹುಮಾನ.

ಅನುಭವಗಳ ಹಾದಿ: ಪ್ರತಿ ಜಾಗವೂ ಭಿನ್ನ. ಬೆಟ್ಟ, ಹಸಿರು, ನೀರು... ಎಲ್ಲವೂ ಒಂದೇ ರೀತಿ ಕಂಡರೂ ಅನುಭವ ಬೇರೆಯೇ. ಪರ್ಯಟನೆ ನಡೆಸುತ್ತಿದ್ದಂತೆ ಜಗತ್ತು ಮತ್ತಷ್ಟು ದೊಡ್ಡದಾಗುತ್ತಿದೆ. ನಾವು ಕಂಡಿರುವುದು ಅತ್ಯಲ್ಪವೇ ಸರಿ. ಭೇಟಿ ಅಥವಾ ಪಯಣದ ನಡುವೆ ಫೋಟೊ ಕ್ಲಿಕ್ಕಿಸುತ್ತೇನೆ. ಮಾತ್ರವಲ್ಲ ಆ ಸ್ಥಳವನ್ನು ಪೂರ್ಣವಾಗಿ ಆಸ್ವಾದಿಸಲೂ ಸಮಯ ನೀಡುತ್ತೇನೆ. ಕಣ್ಣು ಮುಚ್ಚಿ ಕುಳಿತರೆ ಅನುಭವದ ಪ್ರತಿ ಹಾದಿಯೂ ತೆರೆದುಕೊಳ್ಳುತ್ತದೆ. ಲಾಂಗ್ ಡ್ರೈವ್‌ನಲ್ಲಿ ಆಸಕ್ತಿ ಹೊಂದಿರುವ ನೀತನ್‌ರ ಪಯಣದ ಹಾದಿ ನನ್ನಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತಿದೆ. 

ಎಲ್ಲವೂ ಶೂನ್ಯವಾದಾಗ: ಇಟಲಿಯ ಕ್ಯಾಪ್ರಿ ದ್ವೀಪದಲ್ಲಿನ ಬ್ಲೂ ಗ್ರೊಟೊ ಸಮುದ್ರ ಗವಿ. ಒಂದು ದೋಣಿ ಮಾತ್ರ ಒಳ ನುಸುಳಿ ಬರಬಹುದಾದ ಕಿರಿದಾದ ಸಂಧಿ. ಬಂಡೆಯ ಕಿಂಡಿಯಿಂದ ಸುಳಿಯುವ ಸೂರ್ಯನ ಬೆಳಕು ನೀರಿನಲ್ಲಿ ಪ್ರತಿಫಲಿಸಿ ಅಪರೂಪದ ನೀಲಿ ಸೃಷ್ಟಿಯಾಗುತ್ತದೆ. ಕೊನೆಯ ಯಾನಿಗಳಾಗಿ ಹೊರಟ ನಮಗೆ ಕೆಲವೇ ಕ್ಷಣಗಳಲ್ಲಿ ಸಮುದ್ರದ ಅಬ್ಬರ ಭಯ ಹುಟ್ಟಿಸಿತು. ನಿಸರ್ಗದ ಮುಂದೆ ನಮ್ಮದೆಲ್ಲವು ಶೂನ್ಯ ಎನಿಸಿದ ಕ್ಷಣ ಅದು. ಮರಳಿ ಬಂದದ್ದೇ ಮ್ಯಾಜಿಕ್. ಅದು ನನ್ನ ಪಾಲಿಗೆ ಅವಿಸ್ಮರಣೀಯ ಅನುಭವ.                                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.