ADVERTISEMENT

ಗೊಂಬೆಯಾಟದ ಮುದ

ಸುರೇಖಾ ಹೆಗಡೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಭಾಗ್ಯದ ಲಕ್ಷ್ಮಿ ಬಾರಮ್ಮ  ಹಾಡಿಗೆ ಗೊಂಬೆಯಾಟದ ಗೊಂಬೆ ಕುಣಿಯುತ್ತಿದ್ದಂತೆ ಪ್ರೇಕ್ಷಕರ ಕಣ್ಣಾಲಿಗಳು ಮಂಜಾದವು. ಭಾವ, ತಾಳ, ಲಯಕ್ಕೆ ತಕ್ಕಂತೆ ಕುಣಿಯುವ ಗೊಂಬೆಯ ಬಗ್ಗೆ ಕುತೂಹಲ ಇರುವ ಎಲ್ಲರಿಗೂ ಈ ಅನುಭವವಾದದ್ದು ಹೆರಿಟೇಜ್ ಸಂಸ್ಥೆ ದೊಡ್ಡ ಬಸವಣ್ಣ ಗುಡಿಯಲ್ಲಿ ಆಯೋಜಿಸಿದ್ದ ಗೊಂಬೆಯಾಟ ಕಾರ್ಯಕ್ರಮದಲ್ಲಿ.

`ಕುಮಾರ ಸಂಭವ~ ಎಂಬ ತಾರಕಾಸುರನ ಕ್ರೌರ್ಯವನ್ನು ಆಧರಿಸಿದ ಅದ್ಭುತ ಗೊಂಬೆಯಾಟದಿಂದ ಪುಳಕಿತಗೊಂಡ ಪ್ರೇಕ್ಷಕರಿಗೆ ಅಲ್ಲಿ ಮಿಂಚಿನ ಸಂಚಾರ. ಗೊಂಬೆಗಳು ಹೇಗೆ ಕುಣಿಯುತ್ತವೆ ಎಂಬ ಬಗ್ಗೆ ನಿಮಗೆಲ್ಲ ತಿಳಿದುಕೊಳ್ಳುವ ಕುತೂಹಲವಿರಬೇಕಲ್ಲ ಎನ್ನುತ್ತಾ ತಂಡದ ಮುಖ್ಯಸ್ಥ ದತ್ತಾತ್ರೆಯ ಅರಳಿಕಟ್ಟೆ ತಮ್ಮ ಸದಸ್ಯರನ್ನೆಲ್ಲಾ ವೇದಿಕೆಗೆ ಆಹ್ವಾನಿಸಿದರು.

ದಾರ ಕಟ್ಟಿದ್ದ ಗೊಂಬೆಗಳನ್ನು ಕಲಾವಿದರು ತಮ್ಮ ತಲೆಗಳಿಗೆ ಜೋತುಬಿಟ್ಟಿದ್ದರು. ಇದು 8-10 ಕೆ.ಜಿ ಭಾರವಿರುತ್ತೆ. ಗೊಂಬೆಗೆ ಕಾಲಿಲ್ಲ, ಧ್ವನಿಯಿಲ್ಲ, ಜೀವವಿಲ್ಲ. ಆದರೆ ಹಿಂದಿರುವ ಸೂತ್ರಧಾರನೇ ಅದಕ್ಕೆ ಎಲ್ಲವೂ ಎಂದು ಅರಳಿಕಟ್ಟೆಯವರು ವಿವರಿಸುತ್ತಿದ್ದಂತೆ ಹಾಡು ಪ್ರಾರಂಭವಾಯಿತು.
 
ಗೊಂಬೆಯಾಟ ಶುರುವಿಟ್ಟುಕೊಂಡಿತು. ಇಷ್ಟು ದಿನ ಪರದೆಯ ಹಿಂದೆ ಗೊಂಬೆ ಕುಣಿಸುತ್ತಿದ್ದ ಸೂತ್ರಧಾರರು ಪರದೆಯ ಮುಂದೆ ಬಂದು ಪ್ರದರ್ಶನ ನೀಡಿದ್ದರು. ಗೊಂಬೆ ಏನೆಲ್ಲಾ ಮಾಡುತ್ತದೆಯೋ ಆ ಎಲ್ಲ ಅಭಿನಯ ನೃತ್ಯಗಳನ್ನು ಹಿಂದಿನಿಂದ ಆತನೂ ಮಾಡಬೇಕು.
 
ಈತ ಮುಖ ಕುಣಿಸಿದರೆ ಮಾತ್ರ ಗೊಂಬೆಯ ಮುಖವೂ ಕುಣಿಯುತ್ತದೆ. ಗೊಂಬೆಯ ಅಭಿನಯಕ್ಕೆ ಬೇಕಾದ ಎಲ್ಲಾ ಆಂಗಿಕ ಹಾವಭಾವವನ್ನು ಸೂತ್ರಧಾರ ಪರಿಪೂರ್ಣವಾಗಿ ಮಾಡಿದರೆ ಮಾತ್ರ ಗೊಂಬೆಗೆ ಪ್ರೇಕ್ಷಕನ ಮೆಚ್ಚುಗೆಯ ಚಪ್ಪಾಳೆ ದೊರೆಯುತ್ತದೆ.

 ಈ ಆಟಕ್ಕೆ ಬೇಕಾಗುವ ಹಲವಾರು ಪರಿಕರಗಳನ್ನು ಜೋಡಿಸುವುದರಿಂದ ಹಿಡಿದು, ಧ್ವನಿ, ಮಧ್ಯೆ ಮಧ್ಯೆ ತಾರಕಾಸುರನ ಕೋಪಾಗ್ನಿ ಬಿಂಬಿಸುವ ಬೆಂಕಿ ಉಗುಳುವ ಚಿತ್ರಣ, ಆತನ ತಪಸ್ಸು ಭಂಗಗೊಳಿಸಲು ಬರುವ ಸುಂದರಿ, ಅವಳ ನೃತ್ಯ ಹೀಗೆಯೇ ಕಾರ್ಯಕ್ರಮದ ಯಶಸ್ಸು ಸೂತ್ರಧಾರನ ಚಾಕಚಕ್ಯತೆ, ಚುರುಕುತನದ ಮೇಲೇ ನಿಂತಿದೆ.

ಇನ್ನು ಪುತ್ಥಳಿ ಕಲಾರಂಗ ಪ್ರದರ್ಶಿಸಿದ ಗೊಂಬೆಯಾಟದ ಬಗ್ಗೆ ಹೇಳುವುದಾದರೆ.....
`ಬಂದ ಬಂದ ತಾರಕ ಮೂರು ಲೋಕ ಕಂಟಕ~ ಹಾಡಿನೊಂದಿಗೆ ಪ್ರಾರಂಭವಾದ ಗೊಂಬೆಯಾಟ, ಆಕ್ರೋಶ, ದುಷ್ಟತನ, ಮೋಜು, ಅಲ್ಲಲ್ಲಿ ರೊಮ್ಯಾನ್ಸ್ ಎಲ್ಲವನ್ನು ಸಮರ್ಥವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ಹಿಡಿದಿಟ್ಟಿತು.

ತಾರಕನನ್ನು ತಪಸ್ಸಿಗೆ ಹುರಿದುಂಬಿಸುವ ನಾರದ, ಅವರಿಬ್ಬರ ನಡುವಿನ ಸಂವಾದ, ನಾರದರ ಆಣತಿಯಂತೆ ಬ್ರಹ್ಮನನ್ನು ಒಲಿಸಿಕೊಳ್ಳಲು ತಪಸ್ಸಿಗೆ  ಮುಂದಾಗುವ ಅಸುರ, ಅವನ ತಪೋಭಂಗಕ್ಕೆ ನಡೆಯುವ ಪ್ರಯತ್ನಗಳು- ಎಲ್ಲವೂ ಸಿನಿಮಾದಷ್ಟೇ ಮನರಂಜನಾತ್ಮಕವಾಗಿದ್ದವು.

`ನಂದನವನದಿಂದ ಚಂದದ ಚೆಲುವೆ, ಬಂದಿರುವೆ ನಾನು~, ಎಂದು ಹಾಡುತ್ತಾ ವೇದಿಕೆಗೆ ಬರುವ ಸ್ತ್ರೀಪಾತ್ರ ಎಲ್ಲರನ್ನೂ ನಗೆಯ ಕಡಲಲ್ಲಿ ತೇಲಿಸಿತು. ತಾರಕನ ತಪಸ್ಸಿಗೆ ಭಂಗ ತರಲು ಆಕೆ ಮಾಡುವ ಪ್ರಯತ್ನ ಯಾವ ಜೀವಂತ ಕಲಾವಿದೆಗೂ ಕಡಿಮೆ ಇರಲಿಲ್ಲ. ಹಿನ್ನಲೆ ಧ್ವನಿ, ಸೂತ್ರದಾರನ ಕೈಚಳಕ ಎರಡೂ ಅಲ್ಲಿ ಸಾರ್ಥಕವಾಗಿತ್ತು.

ತಾರಕನ ತಪಸ್ಸು ಮೆಚ್ಚುವ ಬ್ರಹ್ಮನ ಪ್ರವೇಶ ಆದದ್ದು ಮೇಲಿನಿಂದ, ನಿರ್ಗಮನದ ಹಾದಿಯೂ ಅದೇ! ಪಾರ್ವತಿಯ ಅಗ್ನಿಪ್ರವೇಶದಿಂದ ನೊಂದ ಶಿವ ಕೈಲಾಸದಲ್ಲೆಲ್ಲೊ ತಪೋನಿರತ. ಶಿವನನ್ನು ಹಂಬಲಿಸಿ ಇಲ್ಲಿ ಗಿರಿಜೆಯ ಜಪ. ಶಿವನ ಮೇಲೆ  ಕಾಮರಾಜನ ಬಾಣ ಪ್ರಯೋಗ. ಸಿಟ್ಟಿಗೆದ್ದ ಮುಕ್ಕಣ್ಣನ ಜ್ವಾಲಾಗ್ನಿಗೆ ಮನ್ಮಥನ ಬಲಿ.

ಆದರೂ ಹೂಬಾಣದ `ಇಂಪ್ಯಾಕ್ಟ್~ ಶಿವನಲ್ಲಿ ಮಿಂಚಿನ ಸಂಚಾರ ಮೂಡಿಸುತ್ತದೆ. ಪರಿಣಾಮ ಗಿರಿಜಾ ಕಲ್ಯಾಣ, ಕುಮಾರ ಸಂಭವ, ಗರ್ವಿ ತಾರಕಾಸುರ ಅಂತ್ಯ.
ಇಲ್ಲಿ ಮೆಚ್ಚಬೇಕಾದದ್ದು ಗೊಂಬೆಯಾಟದ ಪ್ರತಿ ದೃಶ್ಯದಲ್ಲೂ ಇಂಚಿಂಚೂ ಬಿಡದೆ ವ್ಯಕ್ತವಾಗುವ ಭಾವನೆಗಳು. ಸಂಗೀತ, ನೃತ್ಯ, ಭಾವಾಭಿವ್ಯಕ್ತಿಗೆ ಹೊಂದುವ ಹಿನ್ನೆಲೆ ಧ್ವನಿ, ದೃಶ್ಯದ ಉನ್ನತಿಗೆ ನೆರವಾದ ಬೆಳಕಿನ ಕಣ್ಣಾಮುಚ್ಚಾಲೆ.
 
ಇವೆಲ್ಲವೂ ಪೌರಾಣಿಕ ಕಥಾನಕವೊಂದರ ಸಾಕ್ಷಾತ್ಕಾರಕ್ಕೆ ಅನುವು ಮಾಡಿಕೊಟ್ಟವು.
ಹಿಂದಿನಿಂದ ಬೆಳೆದುಬಂದ ಕಲೆ, ಪರಂಪರೆ, ಸಂಪ್ರದಾಯಗಳಿಗೆ ವೈಜ್ಞಾನಿಕವಾದ ಅರ್ಥವಿದೆ.
 
ಹಿಂದಿನ ಕಾಲದಲ್ಲಿ ಅರಮನೆಗಳಲ್ಲಿ ವಿಜೃಂಭಿಸುತ್ತಿದ್ದ ಗೊಂಬೆಯಾಟ ಈಗ ಅಳಿವಿನ ಅಂಚಿನಲ್ಲಿದೆ. ಪುರಾತನ ಕಲೆ ಜೀವಂತವಾಗಿರೋಕೆ ಜನರು ಮನಸು ಮಾಡಬೇಕು ಎಂದು ವಿನಮ್ರವಾಗಿ ಕೇಳಿಕೊಂಡು ಅರಳಿಕಟ್ಟೆಯವರು ಮಾತಿಗೆ ವಿರಾಮ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.