ADVERTISEMENT

ಗೋಲ್‌ಕೀಪಿಂಗ್‌ಗೆ ಸ್ವಂತ ಟ್ರಿಕ್ಸ್‌ ಹೆಣೆಯುವ ಆದಿತ್ಯ

ರಮೇಶ ಕೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಆದಿತ್ಯ
ಆದಿತ್ಯ   

ಜಿಟಿಜಿಟಿಮಳೆ ಬರುತ್ತಿದ್ದರೂ ಚಾಕಚಕ್ಯತೆಯಿಂದ ಚೆಂಡನ್ನು ಗೋಲ್‌ನತ್ತ ಹೊಡೆಯುತ್ತಿದ್ದ ಬಾಲಕರ ಉತ್ಸಾಹ ಕುಂದಿರಲಿಲ್ಲ. ನೀಲಿ ಶರ್ಟ್‌ ಧರಿಸಿದ್ದ ಹುಡುಗನ ಕಣ್ಣಲ್ಲಿ ಚೆಂಡು ಎತ್ತ ನುಗ್ಗುತ್ತದೆ ಎಂಬುದರ ಕಡೆಯೇ ಚಿತ್ತವಿತ್ತು. ಗೋಲ್‌ ಕೀಪಿಂಗ್‌ ಮಾಡುತ್ತಿದ್ದ ಬಾಲಕ ಆದಿತ್ಯ ಜಿ.ತಿಲಿ.

ಟಿಯೆಂಟೊ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ತಂಡ ಈಗ ಡೆನ್ಮಾರ್ಕ್‌ಗೆ ತೆರಳಿದೆ. ಅಲ್ಲಿ ಜುಲೈ 16ರವರೆಗೆ ನಡೆಯಲಿರುವ 16 ವರ್ಷದೊಳಗಿನ ಮಕ್ಕಳ ಅಂತರರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ (ಕಪ್‌1) ಈ ತಂಡ ಭಾಗವಹಿಸಿದೆ. ಗೋಲ್‌ಕೀಪರ್‌ ಆಗಿರುವ ಕಾರಣಕ್ಕೆ ತನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂಬುದು ಆದಿತ್ಯನ ಉತ್ಸಾಹ ಹೆಚ್ಚಲು ಕಾರಣವಾಗಿತ್ತು.

ಸರ್ಜಾಪುರ ರಸ್ತೆ ಹರಳೂರಿನ ಆದಿತ್ಯ ಒಂಬತ್ತನೇ ತರಗತಿ ವಿದ್ಯಾರ್ಥಿ. ಎಂಟನೇ ವರ್ಷದಿಂದ ಫುಟ್ಬಾಲ್ ಆಡುತ್ತಿರುವ ಆದಿತ್ಯನಿಗೆ ಮುಂದೊಂದು ದಿನ ಫುಟ್ಬಾಲ್‌ ಆಟಗಾರನಾಗಿ ಹೆಸರು ಮಾಡಬೇಕೆಂಬ ಕನಸಿದೆ. ಕನಸಿಗೆ ತಕ್ಕಂತೆ ಆದಿತ್ಯ ಪರಿಶ್ರಮವನ್ನೂ ಹಾಕುತ್ತಿದ್ದಾನೆ. ಶಾಲೆಯಿಂದ ಬಂದ ತಕ್ಷಣ ಒಂದು ಗಂಟೆ ಹಾಗೂ ರಜೆ ದಿನಗಳಲ್ಲಿ ಎರಡು ಗಂಟೆ ಅಭ್ಯಾಸ ಮಾಡುತ್ತಾನೆ. ಬೆಂಗಳೂರು ಸಾಕರ್ಸ್‌ ಅಕಾಡೆಮಿಯ ಸೇತುರಾಂ ಅವರು ಮೂರು ವರ್ಷಗಳಿಂದ ಕೋಚ್‌ ಆಗಿದ್ದಾರೆ. 

ADVERTISEMENT

‘ನನಗೆ ಫುಟ್ಬಾಲ್ ಅಂದ್ರೆ ತುಂಬಾ ಇಷ್ಟ. ನಾನು ಗೋಲ್‌ಕೀಪರ್‌ ಆಗಿದ್ದೇನೆ. ಯುಟ್ಯೂಬ್‌ಗಳಲ್ಲಿ ಅಂತರರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ನೋಡುತ್ತೇನೆ. ಆದರೆ ಯಾವ ತಂತ್ರಗಳನ್ನೂ ಕಾಪಿ ಮಾಡುವುದಿಲ್ಲ. ನನ್ನದೇ ಆದ ಟ್ರಿಕ್ಸ್‌ ಉಪಯೋಗಿಸುತ್ತೇನೆ. ಗೋಲ್‌ ಕೀಪರ್‌ಗಾಗಿಯೇ ವಿಶೇಷ ತರಬೇತಿಯನ್ನೂ ಪಡೆದಿದ್ದೇನೆ. ಮೈದಾನದಲ್ಲಿ ಹತ್ತು ಸುತ್ತು ಹಾಕುತ್ತೇನೆ. ಹೊಟ್ಟೆಗೆ ವ್ಯಾಯಾಮ ಮಾಡುತ್ತೇನೆ. ಕಳೆದ ವರ್ಷ 54 ಕೆ.ಜಿ. ಇದ್ದೆ, ಈಗ 6 ಕೆ.ಜಿ. ತೂಕ ಕಡಿಮೆಯಾಗಿದೆ’ ಎನ್ನುತ್ತಾನೆ ಆದಿತ್ಯ.

‘ಆದಿ ಫುಟ್ಬಾಲ್‌ ಆಟಗಾರನಾಗಲು ನಮ್ಮ ಪ್ರೋತ್ಸಾಹವಿದೆ. ಅವನು ಅಭ್ಯಾಸಕ್ಕೆ ಹೋದ ಕಡೆಯಲ್ಲೆಲ್ಲಾ ನಾನು ಹೋಗುತ್ತೇನೆ, ಆತ್ಮಸ್ಥೈರ್ಯ ತುಂಬುತ್ತೇನೆ. ಓದುವುದರ ಜೊತೆಗೆ ಕ್ರೀಡೆ
ಯಲ್ಲೂ ಆಸಕ್ತಿ ಇರುವುದರಿಂದ ಫುಟ್ಬಾಲ್ ಆಟಗಾರನಾದರೂ ನಮಗೆ ಹೆಮ್ಮೆಯೇ’ ಎನ್ನುತ್ತಾರೆ ಆದಿತ್ಯ ತಾಯಿ ಶಿವಗೀತಾ ಚೂಡಿ.

ಆದಿತ್ಯ ಹಾಗೂ ತಂಡದ ಆಟಗಾರರು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡು ಆಟಕ್ಕೆ ಸಂಬಂಧಪಟ್ಟ ಚರ್ಚೆಗಳನ್ನು ಮಾಡುತ್ತಾರಂತೆ. ‘ಬಿಷಪ್‌ ಕಾಟನ್‌ ಸ್ಕೂಲ್‌ನಲ್ಲಿ 9ನೇ ತರಗತಿ ಓದುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಫುಟ್ಬಾಲ್ ಆಡುತ್ತಿದ್ದೇನೆ. ಆದಿತ್ಯ, ನಾನು ಇಬ್ಬರೂ ಜೊತೆಯಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ಶೂಟಿಂಗ್‌ ಹಾಗೂ ಸ್ಕಿಲ್‌ ಆಟಗಾರ ನಾನು. ಮೈದಾನದ ಮಧ್ಯೆ ಇದ್ದಾಗ ಸಹ ಆಟಗಾರರಿಗೆ ಚೆಂಡನ್ನು ಪಾಸ್‌ ಮಾಡುತ್ತೇನೆ. ಫಾರ್ವರ್ಡ್‌ನಲ್ಲಿದ್ದಾಗ ಗೋಲ್‌ ಹೊಡೆಯಲು ಪ್ರಯತ್ನಿಸುತ್ತೇನೆ’ ಎನ್ನುತ್ತಾನೆ ಆರ್ಯನ್‌.

ಊಟಿಯಲ್ಲಿ ಕಠಿಣ ಅಭ್ಯಾಸ
‘ಡೆನ್ಮಾರ್ಕ್‌ನ ದಾನಾ ಕಪ್‌1 ಹಾಗೂ ಸ್ವೀಡನ್‌ನಲ್ಲಿ ಜುಲೈ 17ರಿಂದ ನಡೆಯಲಿರುವ ಗೋಥಿಯಾ ಫುಟ್ಬಾಲ್‌ ಕಪ್‌ಗೆ ಅಭ್ಯಾಸ ನಡೆಸುತ್ತಿದ್ದೇವೆ. 42 ದೇಶಗಳಿಂದ ತಂಡಗಳು ಭಾಗವಹಿಸುತ್ತವೆ. 45 ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ಸರ್ಜಾಪುರ, ಬಿಟಿಎಂ ಲೇಔಟ್‌, ಬೆಳ್ಳಂದೂರು, ಜೆ.ಪಿ.ನಗರ ಹಾಗೂ ಟಿಯೆಂಟೊ ಕ್ಲಬ್‌ಗಳಲ್ಲಿ ಕೋಚ್‌ ಆಗಿದ್ದೇನೆ. 150 ಆಟಗಾರರಿದ್ದಾರೆ. ಅವರಲ್ಲಿ ಉತ್ತಮ ಆಟಗಾರರನ್ನು ಆಯ್ಕೆಮಾಡಿದ್ದೇವೆ. ಜನವರಿಯಿಂದ ಕಠಿಣ ಅಭ್ಯಾಸ ಮಾಡುತ್ತಿದ್ದೇವೆ.

ಡೆನ್ಮಾರ್ಕ್‌ನ ವಾತಾವರಣಕ್ಕೆ ಮಕ್ಕಳು ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಊಟಿಯಲ್ಲಿ ಒಂದು ವಾರ ಚಳಿಯಲ್ಲಿ ಅಭ್ಯಾಸ ಮಾಡಿಸಿದೆವು.ಬಿಷಪ್‌ ಕಾಟನ್‌, ಎನ್‌ಪಿಎಸ್‌, ಗುರುಕುಲಂ, ಬಿಜಿಎಸ್‌ ಇಂಟರ್‌ನ್ಯಾಷನಲ್‌ ಹಾಗೂ ನ್ಯೂ ಬಾಲ್ಡ್‌ವಿನ್‌ ಶಾಲೆಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ’ ಎನ್ನುತ್ತಾರೆ ತರಬೇತುದಾರ ಸೇತುರಾಂ.

 ಮುಂಬೈ, ದೆಹಲಿ ಹಾಗೂ ಬೆಂಗಳೂರು ತಂಡಗಳು ಡೆನ್ಮಾರ್ಕ್‌ಗೆ ಪಯಣ ಬೆಳೆಸಿವೆ. ‘ಡೆನ್ಮಾರ್ಕ್‌ ತಂಡ ಬಲಿಷ್ಠವಾಗಿರುತ್ತದೆ. ತವರಲ್ಲಿ ಆಡುವುದರಿಂದ ಆತ್ಮಸ್ಥೈರ್ಯವೂ ಹೆಚ್ಚು ಇರುತ್ತದೆ. ಫಿಟ್‌ನೆಸ್‌ ತರಬೇತಿ ನೀಡಿದ್ದೇವೆ, ಚಳಿಯಲ್ಲಿ ಆಡುವ ಸಾಮರ್ಥ್ಯವಿದೆ. ಬೇರೆ ಶಾಲೆಗಳ ತಂಡಗಳೊಂದಿಗೆ ಅಭ್ಯಾಸ ಪಂದ್ಯಗಳನ್ನು ಆಡಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಸೇತುರಾಂ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.