ADVERTISEMENT

ಗ್ಲುಕೊಮಾ ಎಂಬ ಕುರುಡು ರಾಕ್ಷಸ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:30 IST
Last Updated 7 ಮಾರ್ಚ್ 2011, 19:30 IST
ಗ್ಲುಕೊಮಾ ಎಂಬ ಕುರುಡು ರಾಕ್ಷಸ
ಗ್ಲುಕೊಮಾ ಎಂಬ ಕುರುಡು ರಾಕ್ಷಸ   

ಆಕೆ ಮಧ್ಯಮ ವರ್ಗದ ಗೃಹಿಣಿ. ವಯಸ್ಸು 50 ದಾಟಿಲ್ಲ. ಟಿವಿ ನೋಡಿದ ಮೇಲೆ ಆಗಾಗ್ಗೆ ತಲೆನೋವು, ಕಣ್ಣುನೋವು. ಮುಸ್ಸಂಜೆ ಹೊತ್ತಿನಲ್ಲಿ ಮಬ್ಬು ಕವಿದಂತೆ ಅನಿಸುತ್ತಿತ್ತು. ಚಸ್ಮಾ ನಂಬರ್ ಬದಲಾಗಿರಬಹುದೇ ? ಚಿಕ್ಕ ವಯಸ್ಸಿಗೆ ಕ್ಯಾಟರಾಕ್ಟ್ ಬಂತೇ ಎಂದುಕೊಳ್ಳುತ್ತ ಕಣ್ಣಿನ ವೈದ್ಯರ ಬಳಿ ಧಾವಿಸಿದರು.

ಎಲ್ಲ ಪರೀಕ್ಷೆಯ ನಂತರ ಕಣ್ಣಿನ ವೈದ್ಯರು ಹೇಳಿದ್ದು ಇದು ಕ್ಯಾಟರಾಕ್ಟ್ ಅಲ್ಲ. ಗ್ಲುಕೊಮಾ. ಈ ಸಮಸ್ಯೆ ಎರಡು ವರ್ಷದಿಂದ ನಿಮಗಿದೆ ಎಂದು ಹೇಳಿದಾಗ ಮತ್ತಷ್ಟು ಅಚ್ಚರಿ. ನನಗೆ ಕಣ್ಣು ಚೆನ್ನಾಗಿ ಕಾಣುತ್ತೆ ಡಾಕ್ಟರ್. ಸ್ವಲ್ಪ ನೋವು ಅಷ್ಟೇ ಅಂದು ಸುಮ್ಮನಾದರು ಆಕೆ. ವೈದ್ಯರು ‘ಗ್ಲುಕೋಮಾ’ದ ಪರಿಣಾಮ ವಿವರಿಸಿದಾಗಲಷ್ಟೇ ಅವರಿಗೆ ಅದರ ಗಂಭೀರತೆ ಅರಿವಾಗಿದ್ದು.

ಗ್ಲುಕೊಮಾ ಎಂಬುದು ಮೌನಹಂತಕ. ಅದರಿಂದ ಆದ ದೃಷ್ಟಿನಾಶವನ್ನು ಗುಣಪಡಿಸಲು ಸಾಧ್ಯವಿಲ್ಲ. ಮಂಕಾದ ದೃಷ್ಟಿಯನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ಕ್ಯಾಟರಾಕ್ಟ್ ನಂತರ ಅಂಧತ್ವಕ್ಕೆ ಇದೇ ಪ್ರಮುಖ ಕಾರಣ. ಭಾರತದಲ್ಲಿ ಪ್ರಸ್ತುತ 1.2 ಕೋಟಿ ಜನ ಗ್ಲುಕೋಮಾ ಬಾಧಿತರಿದ್ದಾರೆ. 2020ರ ಹೊತ್ತಿಗೆ ಈ ಸಮಸ್ಯೆ 1.6 ಕೋಟಿಗೆ ಏರುವ ಸಾಧ್ಯತೆಯಿದೆ.

ದೇಶದಲ್ಲಿರುವ ಅಂಧರಲ್ಲಿ ಶೇ 12.8ರಷ್ಟು ಮಂದಿಯ ಅಂಧತ್ವಕ್ಕೆ ಗ್ಲುಕೋಮಾ ಕಾರಣವಾಗಿದೆ. 40 ವರ್ಷಕ್ಕೆ ಮೇಲ್ಪಟ್ಟ ಎಂಟು ಜನರಲ್ಲಿ ಒಬ್ಬರಿಗೆ ಗ್ಲುಕೋಮಾ ಇರುವ ಸಾಧ್ಯತೆ ಇದೆ.ಮಾರ್ಚ್ 12 ವಿಶ್ವ ಗ್ಲುಕೊಮಾ ದಿನ. ವಿಶ್ವ ಗ್ಲುಕೊಮಾ ಸಂಘಟನೆ (ಡಬ್ಲುಜಿಎ) ಮತ್ತು ವಿಶ್ವ ಗ್ಲುಕೊಮಾ ರೋಗಿಗಳ ಸಂಘಟನೆ (ಡಬ್ಲುಜಿಪಿಎ) ಜೊತೆಯಾಗಿ ಮಾರ್ಚ್ 6 ರಿಂದ 12ರವರೆಗೆ ವಿಶ್ವ ಗ್ಲುಕೊಮಾ ಸಪ್ತಾಹ ಆಚರಿಸುತ್ತಿವೆ. ಈ ರೋಗದ ಬಗ್ಗೆ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಸಪ್ತಾಹದ ಉದ್ದೇಶ.

ಪಾಲಕರಲ್ಲಿ ಗ್ಲುಕೊಮಾ ಇದ್ದಲ್ಲಿ ಮಕ್ಕಳಿಗೆ ಗ್ಲುಕೊಮಾ ಬರುವ ಸಾಧ್ಯತೆ 5 ಪಟ್ಟು ಹೆಚ್ಚಾಗಿರುತ್ತದೆ. ಸಹೋದರರಲ್ಲಿ ಇದ್ದಲ್ಲಿ ಈ ಸಾಧ್ಯತೆ 9 ಪಟ್ಟು ಹೆಚ್ಚಾಗಿರುತ್ತದೆ. ಕಣ್ಣಿನಲ್ಲಿ ಒತ್ತಡದ ಕಾರಣ ಗ್ಲುಕೊಮಾ ಉಂಟಾಗುತ್ತದೆ.

ಒತ್ತಡಕ್ಕೆ ಕಾರಣ ಏನು?
ಕಣ್ಣಿನಲ್ಲಿನ ಆಂತರಿಕ ಅವಯವಗಳನ್ನು ಸ್ವಚ್ಛಗೊಳಿಸಲು ಹಾಗೂ ಪೋಷಿಸಲು ದ್ರವವಸ್ತುವೊಂದು ಉತ್ಪತ್ತಿಯಾಗುತ್ತದೆ. ಈ ದ್ರವವನ್ನು ‘ಆಕ್ಯೆಯೂಸ್ ಹ್ಯೂಮರ್’ ಎಂದು ಕರೆಯಲಾಗುತ್ತದೆ. ಇದು ಕಣ್ಣು ಗುಡ್ಡೆಯ ಆರೋಗ್ಯಕ್ಕೆ ಜೀವದ್ರವ.

ಆರೋಗ್ಯವಂತ ಕಣ್ಣುಗಳಲ್ಲಿ ಸಾಮಾನ್ಯವಾಗಿ ಈ ದ್ರವ ಸೋಸುವ ವ್ಯವಸ್ಥೆ ಮೂಲಕ ಬಸಿದು ಹೋಗುತ್ತದೆ. ಗ್ಲುಕೊಮಾ ರೋಗಿಗಳಲ್ಲಿ ಸೋಸುವ ವ್ಯವಸ್ಥೆ ಕಟ್ಟಿಕೊಳ್ಳುವುದರಿಂದ ಇದು ಸಾಮಾನ್ಯಕ್ಕಿಂತ ಕಡಿಮೆ ವೇಗದಲ್ಲಿ ಪ್ರವಹಿಸುತ್ತದೆ.ಇದರಿಂದಾಗಿ ಮುಚ್ಚಿದ ಟೊಳ್ಳಿನಂತಿರುವ ಕಣ್ಣಿನಲ್ಲಿ ದ್ರವದ ಒತ್ತಡ ಹೆಚ್ಚಾಗುತ್ತದೆ. ದೃಷ್ಟಿ ನರ ಉಬ್ಬಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ದೃಷ್ಟಿದೋಷಕ್ಕೆ ಕಾರಣವಾಗುತ್ತದೆ.

ಮುನ್ಸೂಚನೆಗಳು: ಪ್ರಾರಂಭಿಕ ಹಂತದಲ್ಲಿ ಯಾವುದೇ ಸೂಚನೆ ಕಂಡುಬರುವುದಿಲ್ಲ. ನೋವೂ ಇರುವುದಿಲ್ಲ. ರೋಗ ಪ್ರಬಲವಾದಂತೆ ದೃಷ್ಟಿ ನಿಧಾನವಾಗಿ ಕುಂದುತ್ತದೆ. ಮುಂದಿನ ವಸ್ತುಗಳು ಸ್ಪಷ್ಟವಾಗಿ ಕಂಡರೂ ಪಕ್ಕದಲ್ಲಿರುವ ವಸ್ತುಗಳು ಕಾಣುವುದಿಲ್ಲ. ಅಲ್ಲದೇ ಸುರಂಗದಿಂದ ನೋಡುವಂತೆ ಕಾಣಬಹುದು.

ಕ್ರಮೇಣ ಮಧ್ಯದ ದೃಷ್ಟಿಯೂ ಕಡಿಮೆಯಾಗಿ ಅಂಧತ್ವ ಉಂಟಾಗುತ್ತದೆ. ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ದೃಷ್ಟಿನಾಶ ತಡೆಯಬಹುದು. ಗ್ಲುಕೊಮಾ ತೀವ್ರವಾದಾಗ ಕಣ್ಣು ಕೆಂಪಾಗುವುದು. ತೀವ್ರ ತಲೆನೋವಿನ ಜೊತೆ ಕಣ್ಣಿನ ನೋವು ಹೆಚ್ಚುವುದು.40 ದಾಟಿದ ನಂತರ ವರ್ಷಕ್ಕೊಮ್ಮೆ ಕಡ್ಡಾಯ ನೇತ್ರ ತಪಾಸಣೆ ಮಾಡಿಸಬೇಕು. ಪ್ರತಿಬಾರಿ ಕಣ್ಣಿನ ಒತ್ತಡ ಪರೀಕ್ಷೆ ನಡೆಸುವಂತೆ ಕೇಳಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.