ADVERTISEMENT

ಚಂದದ `ಸೇವೆ' ಮಾವಿನ ಸೇತುವೆ!

ಪ್ರಜಾವಾಣಿ ವಿಶೇಷ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

`ನಮ್ಮ ಪಾರ್ಲರ್‌ಗೆ ಮಾವಿನೊಂದಿಗೆ ಬನ್ನಿ, ನಾವು ನಿಮಗೆ ಉಚಿತವಾಗಿ ಫೇಶಿಯಲ್ ಮಾಡುತ್ತೇವೆ. ಮಿಕ್ಕಿದ ಹಣ್ಣುಗಳನ್ನು ಸಂಗ್ರಹಿಸಿ ಅನಾಥಾಶ್ರಮಕ್ಕೆ ಕೊಡುತ್ತೇವೆ. ಸೌಂದರ್ಯ ಮತ್ತು ಸೇವೆಗೆ ಮಾವಿನ ಸೇತುವೆ ಕಟ್ಟುವ ಪ್ರಯತ್ನ ನಮ್ಮದು. ಬನ್ನಿ ಕೈಜೋಡಿಸಿ' ಎಂದು ಆಹ್ವಾನವಿತ್ತಿದ್ದಾರೆ ಗಾಂಧಿ ಬಜಾರ್‌ನ ಸೌಂದರ್ಯ ತಜ್ಞೆ ದೀಪಾ ನಾಗೇಶ್.

ಹಸಿಯಾಗಿ ಇಡಿಯಾಗಿ ತಿನ್ನಲು, ಖಾದ್ಯ, ಭಕ್ಷ್ಯ ರೂಪದಲ್ಲಿ ಮೆಲ್ಲಲು, `ರಸ'ವತ್ತಾಗಿ ಸವಿಯಲು ಬಳಕೆಯಾಗುವ ಮಾವಿನ ಹಣ್ಣಿಗೆ ಸೌಂದರ್ಯ ಚಿಕಿತ್ಸೆಯಲ್ಲೇನು ಸ್ಥಾನ ಎಂಬ ಸಂಶಯವೇ?

ಒಂದೂವರೆ ದಶಕದಿಂದ ನೈಸರ್ಗಿಕ ಸೌಂದರ್ಯ ಉತ್ಪನ್ನಗಳನ್ನಷ್ಟೇ ಬಳಸಿ ಸೌಂದರ್ಯ ಚಿಕಿತ್ಸೆ/ಸೇವೆಗಳನ್ನು ನೀಡುತ್ತಿರುವ ದೀಪಾ ನಾಗೇಶ್ ಹೇಳುತ್ತಾರೆ, `ಮಾವು ಹುಳಿಯಾಗಿರಲಿ ಸಿಹಿಯಾಗಿರಲಿ ಅದು ಬಹುಮುಖಿಯಾಗಿ ಬಳಕೆಯಾಗುತ್ತದೆ. ಹುಳಿ ಮಾವು ಅತ್ಯುತ್ತಮ ಆಸ್ಟ್ರಿಂಜೆಂಟ್ ಆಗಿ ಕೆಲಸ ಮಾಡುತ್ತದೆ. ಸಿಹಿಯಾದರೆ ಮಸಾಜ್‌ನಿಂದ ಫೇಸ್‌ಪ್ಯಾಕ್‌ವರೆಗೆ ಫೇಶಿಯಲ್‌ನ ಎಲ್ಲಾ ಹಂತಗಳಲ್ಲಿ ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ' ಎಂದು.

`ಮಾವಿನ ಋತುವಿನ ಮಧ್ಯಭಾಗದಲ್ಲಿ ಹಣ್ಣುಗಳ ಲಭ್ಯತೆ ಯಥೇಚ್ಛವಾಗಿರುತ್ತದೆ. ಆರಂಭದಲ್ಲಿ ತಿನ್ನಲು, ರಸ ಕುಡಿಯಲು ಹೆಚ್ಚು ಆದ್ಯತೆ ಕೊಡುವುದು ಸಹಜ. ಆದರೆ ಚರ್ಮದ ರಕ್ಷಣೆ ಮತ್ತು ಸೌಂದರ್ಯ ವೃದ್ಧಿಗೆ ವಿಶೇಷವಾಗಿ ಬಿಸಿಲಿನಿಂದ ಹಾನಿಗೀಡಾಗಿರುವ (ಟ್ಯಾನಿಂಗ್) ಚರ್ಮಕ್ಕೆ ನವಚೈತನ್ಯ ನೀಡುವಲ್ಲಿ ಮಾವು ವಹಿಸುವ ಪಾತ್ರ ದೊಡ್ಡದು. ರಾಸಾಯನಿಕಯುಕ್ತ ಸೌಂದರ್ಯವರ್ಧಕ ಉತ್ಪನ್ನಗಳ ಅಡ್ಡಪರಿಣಾಮದ ಬಗ್ಗೆ ಈಗೀಗ ಜನರಿಗೆ ತಿಳಿವಳಿಕೆ ಹೆಚ್ಚುತ್ತಿದೆ.

ಹಾಗಾಗಿ ಹಣ್ಣು, ಹೂವು, ಎಲೆ, ಬೇರಿನಂತಹ ನೈಸರ್ಗಿಕ ಉತ್ಪನ್ನಗಳನ್ನು ಸೌಂದರ್ಯವರ್ಧಕಗಳಾಗಿ ಬಳಸುವತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಾವಿನ ಹಣ್ಣನ್ನೂ ಸೌಂದರ್ಯ ಚಿಕಿತ್ಸೆಯಲ್ಲಿ ವಿಶೇಷವಾಗಿ ಫೇಶಿಯಲ್‌ನ ಎಲ್ಲಾ ಹಂತಗಳಲ್ಲಿ ಬಳಸಬಹುದು ಎಂಬುದು ಬೆಂಗಳೂರಿನಲ್ಲೂ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ನಾವು ಕಳೆದ ಐದು ವರ್ಷದಿಂದ ನಡೆಸುತ್ತಿರುವ `ಮಾವು ಮೇಳ'ದಿಂದಾಗಿ ಪ್ರಚಾರ ಸಿಗುತ್ತಿದೆ' ಎನ್ನುತ್ತಾರೆ, ದೀಪಾ.
ಮಾವು ಮೇಳವೆಂದರೆ...

ಮಾವು ತನ್ನಿ, ಫೇಶಿಯಲ್ ಮಾಡಿಸಿಕೊಳ್ಳಿ ಎಂಬುದು ಈ ಮೇಳದ ಮಂತ್ರ. ಗಾಂಧಿ ಬಜಾರ್‌ನಲ್ಲಿರುವ `ದಿಶಾ ಬ್ಯೂಟಿ ಸ್ಪಾಟ್' ನಡೆಸುವ ಮೂರು ದಿನಗಳ ಈ ಮಾವು ಮೇಳಕ್ಕೆ ಈಗ ಐದರ ಹರೆಯ. ಫೇಶಿಯಲ್‌ಗೆ ಬಳಸಿ ಮಿಕ್ಕಿದ ಹಣ್ಣುಗಳನ್ನು ಗಾಂಧಿ ಬಜಾರ್ ಮತ್ತು ಬಸವನಗುಡಿ ಆಸುಪಾಸಿನ ಅನಾಥ ಮಕ್ಕಳ ಪಾಲನಾ ಕೇಂದ್ರಗಳಿಗೆ ವಿತರಿಸಲಾಗುತ್ತದೆ!

`ಬೆಂಗಳೂರಿನ ಮಟ್ಟಿಗೆ ಇದು ವಿನೂತನ ಪ್ರಯೋಗ. ಮೊದಲ ವರ್ಷ ಕೇವಲ 27 ಮಂದಿ ಬಂದರು. ಐದಾರು ಕೆಜಿ ಮಾವಿನ ಹಣ್ಣು ಸಂಗ್ರಹವಾಯಿತು. ನಂದನ ಮಕ್ಕಳ ಕೇಂದ್ರಕ್ಕೆ ಕೊಟ್ಟೆವು. ಎರಡನೇ ವರ್ಷ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಲು ಕಷ್ಟವಾಯಿತು ಎಂದು ಆಟೊದಲ್ಲಿ ಒಯ್ದೆವು. ಕಳೆದ ವರ್ಷ ಟನ್‌ಗಟ್ಟಲೆ ಮಾವಿನ ಹಣ್ಣು ಸಂಗ್ರಹವಾಯಿತು. ಮಾವಿನ ಹಣ್ಣಿನ ಸೀಸನ್ ಬಂದರೆ ಪ್ರತಿದಿನವೂ ಮಾವಿನ ಹಣ್ಣು ಊಟಕ್ಕೋ ತಿನ್ನಲೋ ಬಳಕೆಯಾಗುತ್ತದೆ.

ಆದರೆ ಅದೇ ಹಣ್ಣಿನಿಂದ ಸೌಂದರ್ಯ ಚಿಕಿತ್ಸೆ ಮಾಡಿಸಿಕೊಂಡು ಉಳಿದವುಗಳನ್ನು ಅವಕಾಶ ವಂಚಿತ ಮಕ್ಕಳಿಗೆ ವಿತರಿಸುವ ವೇದಿಕೆಯನ್ನು ನಾವು ಒದಗಿಸುತ್ತಿದ್ದೇವೆ. ಕಳೆದ ಬಾರಿ ಸಾವಿರಕ್ಕೂ ಹೆಚ್ಚು ಗ್ರಾಹಕರು ಫೇಶಿಯಲ್ ಮಾಡಿಸಿಕೊಂಡರು. ವಿತರಿಸಲೆಂದೇ ಕೆಜಿಗಟ್ಟಲೆ ಕೊಟ್ಟವರೂ ಇದ್ದಾರೆ. ಈ ಬಾರಿಯೂ ಅಂತಹುದೇ ಪ್ರತಿಕ್ರಿಯೆಯ ನಿರೀಕ್ಷೆ ನಮ್ಮದು' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.

ಈ ಬಾರಿ ಶುಕ್ರವಾರ ಆರಂಭವಾಗಿರುವ ಮಾವಿನ ಫೇಶಿಯಲ್ ಮೇಳ ಶನಿವಾರ ಮತ್ತು ಭಾನುವಾರವೂ ಮುಂದುವರಿಯಲಿದೆ. ಒಬ್ಬರು ಒಂದು ಹಣ್ಣಾದರೂ ತರಬಹುದು. ಕೆಜಿಗಟ್ಟಲೆ ತಂದರೂ ಸರಿ. ಒಟ್ಟಿನಲ್ಲಿ ಹಣ್ಣೊಂದು ಲಾಭ ಎರಡು ಎಂದಾಯಿತು. ಹಾಗಿದ್ದರೆ ಮಹಿಳೆಯರು ಮಾವಿನ ಹಣ್ಣು ಖರೀದಿಸಿ ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನದ ಹಿಂಭಾಗದಲ್ಲಿರುವ ದಿಶಾ ಬ್ಯೂಟಿ ಸ್ಪಾಟ್‌ಗೆ ಲಗ್ಗೆಯಿಟ್ಟರಾಯಿತು. ಸಂಪರ್ಕ: 7411996915.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.