ADVERTISEMENT

ಚೇತೋಹಾರಿ ನೃತ್ಯ

ಎಂ.ಸೂರ್ಯ ಪ್ರಸಾದ್
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಭಾರತೀಯ ಕಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ಕೃಷ್ಣನ ಪರಿಕಲ್ಪನೆ ಸರ್ವವ್ಯಾಪಕ. ಹರಿ ಅನಂತ ಹರಿಕಥಾ ಅನಂತ ಎಂಬಂತೆ ಅವನ ಗುಣಗಾನ, ಲೀಲಾವರ್ಣನೆ ಚಿರನೂತನ.

ಕೃಷ್ಣನ ಭಜನೆ-ಆರಾಧನೆ ಹಾಗೂ ಕೃಷ್ಣ ಪ್ರಜ್ಞೆಯನ್ನು ಸಾರ್ವತ್ರಿಕಗೊಳಿಸುವ ಕೈಂಕರ್ಯದಲ್ಲಿ ತೊಡಗಿರುವ ರಾಜಾಜಿನಗರದ ಇಸ್ಕಾನ್‌ನಲ್ಲಿ ಆ ಮಹಿಮಾನ್ವಿತ ಕೃಷ್ಣನನ್ನು ನೃತ್ಯಾರಾಧನೆಯ ಮೂಲಕ ಒಲಿಸಿಕೊಳ್ಳುವಂತಹ ಉತ್ಕೃಷ್ಟ ಕಾರ್ಯಕ್ರಮ ಸರಣಿಯನ್ನು ಶ್ರೀ ಕೃಷ್ಣ ಲೀಲಾ ನೃತ್ಯ ಸೇವಾ ಎಂಬ ನಾಮಾಂಕಿತದಲ್ಲಿ ಶನಿವಾರ ಆರಂಭಿಸಲಾಯಿತು.
 
ನಾಡಿನ ಕಲಾಕ್ಷೇತ್ರದಲ್ಲಿ ಸುಪರಿಚಿತರಾಗಿರುವ ದಾರ್ಶನಿಕ, ಉತ್ತಮ ಸಾಹಿತಿ, ಕೃಷ್ಣ-ನಿಷ್ಠ, ಕಲಾ ಪೋಷಕ ಶ್ರೀ ತಿರು ಪ್ರಭುಗಳ ಕಲ್ಪನೆ ತನ್ಮೂಲಕ ಸಾಕಾರಗೊಂಡಿರುವುದು ಪ್ರಶಂಸಾರ್ಹ. ಕಾರ್ಯಕ್ರಮದ ಆಯೋಜನೆಯಲ್ಲಿ ಇಸ್ಕಾನ್‌ನ ಕಾರ್ಯಕರ್ತೆ ಗಾಯಿತ್ರಿ ಶೆಣೈ ಅವರ ಕ್ರಿಯಾಶೀಲತೆ ಮೆಚ್ಚತಕ್ಕದ್ದು.

ಇಸ್ಕಾನ್‌ನ ಮಲ್ಟಿ ವಿಷನ್ ಥಿಯೇಟರ್‌ನಲ್ಲಿ ವರ್ಷಾ ಜಯರಾಮ್‌ಅವರ ಭರತನಾಟ್ಯ ಕಾರ್ಯಕ್ರಮವು ಹಿತವಾದ ಹೊಸಗಾಳಿಯನ್ನು ಆಘ್ರಾಣಿಸಿದ ಅನುಭವ ಉಂಟುಮಾಡಿತು. ವಿಶಿಷ್ಟ ಪರಿಣತಿ ಸಾಧಿಸಿರುವ ಭರತನಾಟ್ಯ ಕಲಾವಿದ ದಂಪತಿಗಳಾದ ಕಿರಣ್ ಸುಬ್ರಹ್ಮಣ್ಯ ಮತ್ತು ಸಂಧ್ಯಾ ಸುಬ್ರಹ್ಮಣ್ಯಅವರ ಶಿಷ್ಯೆಯಾಗಿರುವ ವರ್ಷಾ ಜಯರಾಮ್ ಪ್ರಸ್ತುತಿಯಲ್ಲಿ ಅವರ ಗುರುಗಳು ಮತ್ತು ರಚನೆಗಳ ಚಿಂತನೆ, ಭಾವನೆ, ಸಂವೇದನೆ, ಕ್ರಿಯೆ ಮುಂತಾದ ನೇಸಲುಗಳು ಕಾಣಿಸಿಕೊಂಡವು.

ಎರಡು ಗಂಟೆಗಳಿಗೂ ಮಿಗಿಲಾಗಿ ನಡೆದ ಅವರ ಪ್ರದರ್ಶನದಲ್ಲಿ ಶ್ರಿಕೃಷ್ಣನ ದಿವ್ಯ ಹಾಗೂ ನವ್ಯ ದರ್ಶನವಾದುದು ಸಹಜವೇ. ಆ ಲೀಲಾಪುರುಷನ ಮಹಿಮೆಯಿಂದ ಆವರಿಸಲ್ಪಟ್ಟಿರುವ ಪರಿಸರವೇ ಅದಕ್ಕೆ ಪ್ರೇರಕ ಶಕ್ತಿಯಾಗಿತ್ತು. ಪ್ರಧಾನ ಕಲಾವಿದೆ ನರ್ತಕಿ ವರ್ಷಾ ಅವರಂತೆಯೇ ಗಾಯನ ಸಹಕಾರ ನೀಡಿದ ಡಿ.ಎಸ್. ಶ್ರೀವತ್ಸ ಗಾಯನದಲ್ಲೂ ವಿಶೇಷತೆ ತುಂಬಿತ್ತು.

ಗುರು ಕಿರಣ್ ಸುಬ್ರಹ್ಮಣ್ಯ ಅವರ ನಟುವಾಂಗ, ಮಧುಸೂದನ್ ಪಿಟೀಲು, ಜಯರಾಮ್ ಕೊಳಲು ಮತ್ತು ಶ್ರಿಹರಿ ಮೃದಂಗವಾದನ ನೃತ್ಯಪ್ರೇಮಿಗಳನ್ನೂ ನರ್ತಕಿಯನ್ನೂ ಆಳವಾಗಿ ಪ್ರಭಾವಿಸಿತು. ಕಿರಣ್ ಅವರ ಹಿರಿಯ ಶಿಷ್ಯೆ ರಮ್ಯೋ ಜಾನಕೀರಾಮನ್ ಘಂಟಾವಾದನ ಸಮಯೋಚಿತವಾಗಿತ್ತು.

ಶ್ರೀ ತಿರು ಪ್ರಭುಗಳು ಮತ್ತು ಇತರೆ ಗಣ್ಯ ಕಲಾಭಿಜ್ಞರ ಸಮ್ಮುಖದಲ್ಲಿ ವರ್ಷಾ ಪುಷ್ಪಾಂಜಲಿಯನ್ನು ಸಲ್ಲಿಸಿ ಆದಿತ್ಯ ಹೃದಯದ ಕೆಲವು ಶ್ಲೋಕಗಳನ್ನು ನಿರೂಪಿಸಿದರು. ಸಕಲ ಪಾಪಹರನೂ ಆರೋಗ್ಯದಾತನೂ ಆದ ಸೂರ್ಯನಿಗೆ ನಮನಗಳನ್ನು ಸೊಗಸಾಗಿ ಸಲ್ಲಿಸಲಾಯಿತು. ಭಾವಗಳ ಅನುಕೃತಿ, ರಚನೆಗಳ ಸಾಹಿತ್ಯದ ಅನುಕರಣ ಮತ್ತು ರಸಸೃಷ್ಟಿ ನಿರಂತರವಾಗಿ ಸಾಗಿದ ವರ್ಷಾ ಅವರ ಪ್ರದರ್ಶನದ ಎರಡನೆಯ ಕೃತಿಯಾಗಿ ಅಣ್ಣಮಾಚಾರ್ಯರ ಚಿರಪರಿಚಿತ  ಶ್ರೀಮನ್ನಾರಾಯಣನ (ಭೌಳಿ) ವರ್ಣನೆ ಮೂಡಿಬಂದಿತು.

ಕಿರಣ್ ನೃತ್ಯ ಸಂಯೋಜನೆಯಲ್ಲಿ ಹೊಸತನವಿತ್ತು. ಕೃತಿಯ ಸಾಹಿತ್ಯದಂತೆ ನಾರಾಯಣನ ಸ್ತುತಿ ಮಾಡುತ್ತಾ ಪರಮಾತ್ಮ ದಶವಿಧರೂಪ ಎಂಬ ಸಾಲಿಗನುಸಾರವಾಗಿ ಸಾರಗರ್ಭಿತವಾಗಿ ಮತ್ಸ್ಯ, ವರಾಹ, ಕೂರ್ಮ ಇತ್ಯಾದಿ ದಶಾವತಾರಗಳನ್ನು ನರ್ತಕಿಯು ತೋರಿದರು.

ಮುಂದಿನದು ವರ್ಣ ವಿಸ್ತಾರ. ಇದಕ್ಕೆ ಆಯ್ದುಕೊಂಡಿದ್ದ ವಸ್ತು ಶ್ರೀಕೃಷ್ಣನ ಅಷ್ಟೋತ್ತರ ಶತನಾಮಾವಳಿಗಳು. ಇದು ಈಗಾಗಲೇ ಸಾಕಷ್ಟು ಬಾರಿ ನಿರೂಪಿತಗೊಂಡಿದ್ದು ಬಹು ಜನಪ್ರಿಯ ಐಟಂ ಆಗಿದೆ. ರೀತಿಗೌಳ ರಾಗದ ಎಳೆಯಲ್ಲಿ ಶ್ರೀಕೃಷ್ಣ ಕಮಲಾನಾಥ ವಸುದೇವಾತ್ಮಜ ಮುಂತಾದ ನಾಮಗಳನ್ನು ಪೋಣಿಸಿ ಆಯಾನಾಮಗಳಿಗನುಸಾರವಾಗಿ ಕೃಷ್ಣನ ರೂಪ, ಸೌಂದರ್ಯ, ಕ್ರೀಡೆಗಳು ಮತ್ತು ಲೀಲೆಗಳ ಉದ್ದಿಷ್ಟ ಸನ್ನಿವೇಶಗಳ ಸರಮಾಲೆಯನ್ನೇ ಮೂಡಿಸಲಾಯಿತು.
 
ಅವರ ನಿಷ್ಪ್ರಯಾಸದ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಅಭಿನಯದ ಜೊತೆಜೊತೆಗೆ ನೃತ್ತ ಮತ್ತು ನೃತ್ಯಗಳೂ ಕಂಗೊಳಿಸಿದವು. ಕ್ಲಿಷ್ಟ ಜತಿ ಮಾದರಿಗಳು ಮತ್ತು ಅವುಗಳನ್ನು ನೃತ್ತ ರೂಪದಲ್ಲಿಮಂಡಿಸುವಾಗ ಅಲ್ಲಿಯೂ ಕಂಡು ಬಂದ ವೈವಿಧ್ಯ, ವಿಶೇಷತೆ ಮತ್ತು ಲಯ ಖಚಿತತೆ ನರ್ತಕಿ ವರ್ಷಾಅವರಿಗೂ ಗುರು ಕಿರಣ್ ಸುಬ್ರಹ್ಮಣ್ಯಅವರಿಗೂ ರಸಭಿಜ್ಞರ ಪ್ರಶಂಸೆ ಸಂದಿತು.

ಕೃಷ್ಣನ ಜನ್ಮ, ಕಾಳಿಂಗ ನರ್ತನ, ಪೂತನಾ ಸಂಹಾರ, ಗೀತೋಪದೇಶ ಮುಂತಾದ ಪ್ರಸಂಗಗಳನ್ನು ಚಿತ್ರಿಸುವಾಗ ನರ್ತಕಿಯ ಮುಖಿಜಗಳು, ಅಂಗ ವಿನ್ಯಾಸ, ಅರ್ಥಪೂರ್ಣ ಮುದ್ರೆಗಳ ವಿನಿಯೋಗ, ಕಣ್ತುಂಬಿದ ಆದರೆ ಔಚಿತ್ಯಪೂರ್ಣ ಭಂಗಿಗಳು, ಅಡುವು ವೈವಿಧ್ಯ, ಸುಲಲಿತ ಹೆಜ್ಜೆಗಾರಿಕೆ, ಪಾತ್ರಗಳನ್ನು ಆವಾಹಿಸಿ ಅನುಭವಿಸಿ ರೇಖಿತವಾದ ಬಿಂಬಗಳು ಮುದ ನೀಡಿದವು. ಸಮಯೋಚಿತವಾಗಿದ್ದ ಸಾತ್ವಿಕಾಭಿನಯ ರೋಮಾಂಚನಗೊಳಿಸಿತು.

ಚರಣ ಭಾಗವು ದ್ರುತ ಗತಿಯಲ್ಲಿ ತೆರೆದುಕೊಂಡಿತು. ಶ್ರಿವತ್ಸಅವರು ಸಂಸ್ಕೃತ ಶಬ್ದಗಳನ್ನು ಅರ್ಥಪೂರ್ಣವಾಗಿ ಬಿಡಿಸಿ ಬಿಡಿಸಿ ಹಾಡಿದುದು ಹರ್ಷಾ ಅವರ ಅಭಿನಯದ ಮೆರಗನ್ನು ಹೆಚ್ಚಿಸಿತು.

ಗುರು ಸಂಧ್ಯಾ ಕಿರಣ್ ಅವರು ಸಂಯೋಜಿಸಿದ್ದ `ಜಗದೋದ್ಧಾರನ ಆಡಿಸಿದಳೆಶೋದೆ~ (ಕಾಪಿ) ಮತ್ತು ಕನಕದಾಸರ `ಬಾರೋ ಕೃಷ್ಣಯ್ಯ~ (ರಾಗಮಾಲಿಕೆ) ಲೋಕಧರ್ಮಿಗೂ ಸಾಕಷ್ಟು ಅವಕಾಶವಿತ್ತು. ಆದ್ದರಿಂದ ವರ್ಷಾ ಅವರ ಅಭಿನಯ ಸಾಮಾನ್ಯ ರಸಿಕನಿಗೂ ಆಪ್ತವಾಯಿತು. ಮಧುವಂತಿ ತಿಲ್ಲಾನ ಮತ್ತು ಮಂಗಳದೊಂದಿಗೆ ಅವರ ಕಾರ್ಯಕ್ರಮ ಸಮಾಪ್ತಿಯಾಯಿತು.

ಮಿಶ್ರ ಫಲದ ವಿಚಾರ ಮಂಥನ
ಅಷ್ಟೇನೂ ಜನಭರಿತವಲ್ಲದ ಕಾರ್ಯಕ್ರಮ ಗಾಯನ ಸಮಾಜದ ಸಭಾಂಗಣದಲ್ಲಿ ಶ್ರೀರಾಮ ಲಲಿತ ಕಲಾ ಮಂದಿರದ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು. ಕರ್ನಾಟಕ ಸಂಗೀತದ ಅರಿವು ಮತ್ತು ಗುಣಗ್ರಹಣದ ಬಗೆಗೆ ನಡೆದ ವಿಚಾರ ಮಂಥನದಲ್ಲಿ ಹಲವಾರು ಪ್ರಶ್ನೆಗಳೆದ್ದವು.

ಕರ್ನಾಟಕ ಸಂಗೀತದ ಸಂರಚನಾತ್ಮಕ ಶಿಕ್ಷಣ ಕ್ರಮ, ವ್ಯವಸ್ಥೆ, ಉತ್ತಮ ಸಂಗೀತಗಾರನಾಗಲು ಪ್ರತಿಭೆ ಮತ್ತು ಸಂಸ್ಕಾರಗಳ ಆವಶ್ಯಕತೆ, ವೀಣಾ ವಾದ್ಯ ಕಛೇರಿಗಳ ಜನಪ್ರಿಯತೆ, ಕನ್ನಡದಲ್ಲಿ ಸಂಗೀತ ರಚನೆಗಳು, ಧ್ವನಿ ಸಂಸ್ಕರಣ, ಕಛೇರಿಗಳಲ್ಲಿ ತಂಬೂರಿಯ ಮಹತ್ವ, ವಾದ್ಯಗಳೊಂದಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ, ವಾದ್ಯ ಕಛೇರಿಗಳ ಮೂಲಕವೇ ವಿದೇಶಗಳಲ್ಲಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಬಹುದೆಂಬ ಮಾತು, ತನಿ ಆವರ್ತನ, ಫ್ಯೂಷನ್ ಸಂಗೀತ, ಗೋಷ್ಠಿ ಗಾಯನಗಳ ವಿಷಮತೆ ಮುಂತಾದವುಗಳ ಕುರಿತಾಗಿ ಪೂರ್ಣಾಸಕ್ತಿಯಿಂದ ಭಾಗವಹಿಸಿದ್ದ ಪ್ರೇಕ್ಷಕರು ಪ್ರಶ್ನೆಗಳನ್ನು ಕೇಳಿದರು.
 
ಆದರೆ ಅವುಗಳೆಲ್ಲಕ್ಕೂ ಸಮರ್ಪಕ ಉತ್ತರ ದೊರೆಯಿತೆಂದು ಹೇಳಲಾಗದು. ಹಿರಿಯ ಗಾಯಕರಾದ ಡಾ.ಆರ್.ಕೆ. ಶ್ರೀಕಂಠನ್, ಜಿ.ವಿ. ನೀಲಾ, ಎಸ್. ಶಂಕರ್, ಡಾ. ಸತ್ಯವತಿ, ಡಾ. ವರದರಂಗನ್, ಪಿಟೀಲು ವಾದಕರಾದ ಎಚ್.ಕೆ. ವೆಂಕಟರಾಂ, ಮೈಸೂರು ನಾಗರಾಜ್, ಮೈಸೂರು ಮಂಜುನಾಥ್, ಜಯಂತಿ ಕುಮರೇಶ್, ಜಿ. ರಾಜನಾರಾಯಣ್ ಮತ್ತು ಘಟ ವಾದಕರಾದ ಗಿರಿಧರ್ ಉಡುಪ ಪ್ರಮುಖರಾಗಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ಮೃದಂಗ ವಾದಕ ಆನೂರು ಅನಂತಕೃಷ್ಣ ಶರ್ಮ ಸಮರ್ಥವಾಗಿ ನಿರ್ವಹಿಸಿದರು.

ಬಹುತೇಕ ಎಲ್ಲಾ ವಿಚಾರ ಸಂಕಿರಣ, ವಿನಿಮಯ ಮತ್ತು ಮಂಥನ ಕಾರ್ಯಕ್ರಮಗಳಲ್ಲಿ ಆಗುವಂತೆ ಅದೊಂದು ಮಿಶ್ರ ಫಲ ನೀಡಿದ ಆದರೆ ನಿಜಕ್ಕೂ ಸದುದ್ದೇಶದ ಮಹತ್ವಾಕಾಂಕ್ಷಿ ಪ್ರಯತ್ನವೇ ಸರಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.