ADVERTISEMENT

ಜನಹಿತಕ್ಕೆ ಅರ್ಪಿಸಿಕೊಂಡ ದೊರೆ

ರಾಧಿಕ ಎನ್‌.ಆರ್.
Published 28 ಡಿಸೆಂಬರ್ 2017, 19:30 IST
Last Updated 28 ಡಿಸೆಂಬರ್ 2017, 19:30 IST
‘ಸಿರಿಗೆ ಸೆರೆ’ ನಾಟಕದ ದೃಶ್ಯ
‘ಸಿರಿಗೆ ಸೆರೆ’ ನಾಟಕದ ದೃಶ್ಯ   

ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿಗೆ ದೊಡ್ಡ ಇತಿಹಾಸವೇ ಇದೆ. ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಎಂದೇ ಪ್ರಸಿದ್ಧಿಯಾಗಿರುವ ಕೆಂಪೇಗೌಡರ ಕುರಿತು ಸಾಕಷ್ಟು ದಂತಕಥೆಗಳಿವೆ. ಕೆಂಪೇಗೌಡರ ಕುರಿತ ‘ಸಿರಿಗೆ ಸೆರೆ’ ನಾಟಕ ಈ ಬಾರಿಯ ‘ನಾಟಕ ಬೆಂಗ್ಳೂರು 2017’ರ ‘ದಶಮಾನೋತ್ಸವ ಸಂಭ್ರಮದಲ್ಲಿ’ ಮೊದಲ ದಿನ ಪ್ರದರ್ಶನಗೊಳ್ಳುತ್ತಿದೆ.

ಕೆಂಪೇಗೌಡರ ಕುರಿತು ಈವರೆಗೂ ಅನಾವರಣಗೊಂಡಿರದ ಅಂಶಗಳೇ ಈ ನಾಟಕದ ಕಥಾವಸ್ತು. ಇತಿಹಾಸದಲ್ಲಿ ಆಸಕ್ತಿ, ಪರಿಶ್ರಮ ಉಳ್ಳ ಜಯರಾಮ್ ರಾಯಪುರ ಅವರು ಹಲವು ಸಂಶೋಧನೆಗಳನ್ನು ನಡೆಸಿ ರಚಿಸಿರುವ ‘ಸಿರಿಗೆ ಸೆರೆ’ ಪುಸ್ತಕ ನಾಟಕದ ಪಠ್ಯ.

‘ಬೇಗೂರು ಬಳಿ ಇರುವ ಶಾಸನದಲ್ಲಿ ಬೆಂಗಾಳೂರು ಎನ್ನುವ ಪದದ ಉಲ್ಲೇಖವಿದೆ. ಬೆಂಗಾಳೂರಿನ ಪಾಳೇಗಾರ ಕೆಂಪೇಗೌಡರ ಮೇಲಿನ ಅಸೂಯೆಯಿಂದ ಪಕ್ಕದ ಚನ್ನಪಟ್ಟಣದ ಪಾಳೇಗಾರ ಜಗದೇವರಾಯನು, ವಿಜಯನಗರದ ಅರಸರನ್ನು ಕೆಂಪೇಗೌಡರ ಮೇಲೆ ಎತ್ತಿಕಟ್ಟುತ್ತಾನೆ. ಬೆಂಗಾಳೂರಿನ ಮೇಲೆ ದಂಡೆತ್ತಿ ಬರುವ ವಿಜಯನಗರದ ಸೈನ್ಯದ ಜತೆ ಯುದ್ಧ ಮಾಡುವಷ್ಟು ಸೇನಾಬಲ ಕೆಂಪೇಗೌಡರ ಬಳಿ ಇರುವುದಿಲ್ಲ. ಆಗ ತಾವು ವಿಧಿಸುವ ಮೂರು ಷರತ್ತುಗಳನ್ನು ಒಪ್ಪುವುದಾದರೆ ದಾಳಿಯಿಂದ ಹಿಂದೆಸರಿಯುವುದಾಗಿ ವಿಜಯನಗರದ ಅರಸರು ಹೇಳುತ್ತಾರೆ. ಇದನ್ನು ಒಪ್ಪುವ ಕೆಂಪೇಗೌಡರು ಷರತ್ತಿಗೆ ಬದ್ಧರಾಗಿರಲು, ಪ್ರಜೆಗಳ ಹಿತರಕ್ಷಿಸಲು ತ್ಯಾಗಗುಣ ತೋರುತ್ತಾರೆ. ಈ ಸಂದರ್ಭ ಆಧರಿಸಿಯೇ ನಮ್ಮ ನಾಟಕ ರಚನೆಯಾಗಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಎಂ. ಸುರೇಶ್ ಅವರು.

ADVERTISEMENT

ನಾಡಪ್ರಭು ಕೆಂಪೇಗೌಡರ ವಿಶಿಷ್ಟ ವ್ಯಕ್ತಿತ್ವ ಅನಾವರಣಗೊಳ್ಳುವುದನ್ನು ನಾಟಕ ನೋಡಿಯೇ ತಿಳಿಯಬೇಕು ಎನ್ನಲು ಅವರು ಮರೆಯುವುದಿಲ್ಲ.

20 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ನಿರ್ದೇಶಕ ಸುರೇಶ್ ಅವರು ನಟ, ನಾಟಕ ರಚನೆಕಾರರೂ ಹೌದು. ಐತಿಹಾಸಿಕ ನಾಟಕಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ತರಾಸು ಅವರ ದುರ್ಗಾಸ್ತಮಾನ ಕಾದಂಬರಿಗೆ ರಂಗರೂಪ ನೀಡಿದ್ದರು.

‘ಸಿರಿಗೆ ಸೆರೆ’ ನಾಟಕ ಈಚೆಗಷ್ಟೆ ಹೊಸಕೋಟೆಯಲ್ಲಿ ಮೊದಲ ಪ್ರದರ್ಶನ ಕಂಡಿದೆ. ದಶಮಾನೋತ್ಸವ ಸಂಭ್ರಮದಲ್ಲಿ ಇದು ಎರಡನೇ ಬಾರಿಗೆ ರಂಗದ ಮೇಲೆ ಪ್ರದರ್ಶನ ಕಾಣಲಿದೆ.

***
‘ನಾಟಕ ಬೆಂಗ್ಳೂರು’ ದಶಮಾನೋತ್ಸವ ಸಂಭ್ರಮ

ನಗರದಲ್ಲಿ ಪ್ರತಿವರ್ಷ ನಡೆಯುವ ಮಹತ್ವದ ರಂಗಸಂಭ್ರಮ ‘ನಾಟಕ ಬೆಂಗ್ಳೂರು’ ಈ ಬಾರಿ ಜ.1ರಿಂದ ಕಲಾಗ್ರಾಮದಲ್ಲಿ ಆರಂಭವಾಗಲಿದೆ. ಈ ಬಾರಿ ಒಟ್ಟು 18 ರಂಗತಂಡಗಳು ನಾಟಕಗಳನ್ನು ವೈವಿಧ್ಯಮಯ ನಾಟಕಗಳನ್ನು ಪ್ರದರ್ಶಿಸುತ್ತಿವೆ.

ಸೋಮವಾರ (ಜ.1) ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಂಗಕರ್ಮಿ ಪ್ರಸನ್ನ, ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ. ಮರುಳಸಿದ್ದಪ್ಪ, ನಾಟಕ ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಈ ಸಂದರ್ಭ ಉಪಸ್ಥಿತರಿರುತ್ತಾರೆ.

ನಾಟಕಗಳ ವಿವರ ಇಂತಿದೆ...

ಸಿರಿಗೆ ಸೆರೆ (ಜ.1) ಮಹಾರಾಜ ಉಬು (ಜ.2), ಗುಲಾಬಿ ಗ್ಯಾಂಗು (ಜ.4), ಮುಂದಣಕಥನ (ಜ.5), ಪ್ರತಿಜ್ಞಾ ಯೌಗಂಧರಾಯಣ (ಜ.6), ಎಂಕ್ಟನ ಪುಂಗಿ (ಜ.7), ಮುಕ್ಕಾಮ್‌ಪೋಸ್ಟ್‌ ಬೊಂಬಿಲ್ ವಾಡಿ (ಜ.8), ಪುರುಷಾರ್ಥ (ಜ.9), ಸಂದರ್ಭ (ಜ.10), ತೆರೆಗಳು (ಜ.11), ಕೊನೆಯ ಉತ್ತರ (ಜ.12), ವಿಗಡ ವಿಕ್ರಮರಾಯ (ಜ.13), ಬ್ಲಡ್ ವೆಡ್ಡಿಂಗ್ (ಜ.14), ಸಿಂಹಾಚಲಂ ಸಂಪಿಗೆ (ಜ.16), ಪರಹಿತ ಪಾಷಾಣ (ಜ.17), ಅಂಬೇಡ್ಕರ್ (ಜ.18), ಹಡೆದವ್ವ ಬರೆದ ಹಣೆಬರಹ (ಜ.22), ಹೊರಟು ಉಳಿದವನು (ಜ.23).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.