ನಗರದ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುವ ಯುವಕರ ವೀಕೆಂಡ್ ಹೇಗಿರುತ್ತದೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಮೋಜು, ಮಸ್ತಿ, ಸಿನಿಮಾ, ಸುತ್ತಾಟ, ಶಾಪಿಂಗ್ ಪಾರ್ಟಿ, ಲಾಂಗ್‌ರೈಡ್. ಇನ್ನು ಕೆಲವರು ಊರಿಗೆ ಹೋಗಬಹುದು. ಇಷ್ಟು ಬಿಟ್ಟರೆ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವವರ ಸಂಖ್ಯೆ ತೀರಾ ವಿರಳ. ಆದರೆ ಈಗೀಗ ಟೆಕ್ಕಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆ.
ಮೈಸೂರು ಮೂಲದ, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ತೇಜಸ್ವಿ ಇಂದಿರಾನಗರದ ತಮ್ಮ ಬಾಡಿಗೆ ಮನೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದುತ್ತಿರುವ ಬಡಮಕ್ಕಳಿಗೆ ಬಿಡುವಿಲ್ಲದ ಕೆಲಸದ ಮಧ್ಯೆಯೂ ಪಾಠ ಹೇಳಿಕೊಡುತ್ತಿದ್ದಾರೆ. ಆ ಮಕ್ಕಳೀಗ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಖುಷಿಯಲ್ಲಿದ್ದಾರೆ. ಕೆಲವರು ವಿಜ್ಞಾನ ವಿಷಯದಲ್ಲಿ ಪಿಯುಸಿ ಓದುತ್ತಿದ್ದಾರೆ. ವಾರಾಂತ್ಯ ತಪ್ಪದೆ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಾರೆ.
ಮೈಸೂರಿನ ತೇಜಸ್ವಿ ಐಐಟಿ ಚೆನ್ನೈಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗಲೇ ಬಡ ಮಕ್ಕಳಿಗಾಗಿ ದುಡಿದವರು. ಗೊತ್ತಿಲ್ಲದ ಊರು ಚೆನ್ನೈಯಲ್ಲಿ ಓದಲು ಹೋದವರು `ವಿವೇಕಾನಂದ ಸರ್ಕಲ್' ಎಂಬ ಗೆಳೆಯರ ಬಳಗ ಕಟ್ಟಿಕೊಂಡು ಬಿಡುವಿನ ವೇಳೆಯಲ್ಲಿ ಅಲ್ಲಿನ ಕೊಳೆಗೇರಿ ಮಕ್ಕಳಿಗೆ ಪಾಠ ಮಾಡಿದವರು. ನಂತರ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು.
ಇಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡತೊಡಗಿದಾಗ ಅವರಿಗೆ ಅರಿವಾದದ್ದು ಸರ್ಕಾರಿ ಶಾಲಾಮಕ್ಕಳು ಎಲ್ಲ ವಿಷಯದಲ್ಲೂ ಹಿಂದೆ ಇದ್ದಾರೆ ಎಂಬುದು. ಇವರಿಗೆ ಇಂಗ್ಲಿಷ್ ಹೇಳಿಕೊಟ್ಟರಷ್ಟೇ ಸಾಲದು ಎಂದು ಎನಿಸಿದ್ದೇ ಅಲ್ಲದೆ ಸಾಧ್ಯವಾಗಬೇಕಾದರೆ ಅಂತಹ ಮಕ್ಕಳ ಜೊತೆ ಹೆಚ್ಚು ಹೊತ್ತು ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ತೇಜಸ್ವಿ ಸುಮಾರು ಏಳು ವರ್ಷಗಳಿಂದ ಪ್ರತಿ ವರ್ಷ ಕಲ್ಕೆರೆ ಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಡ ಹುಡುಗರನ್ನು ತನ್ನ ಜೊತೆಗೇ ಇಟ್ಟುಕೊಂಡು ರಾತ್ರಿ ಹೊತ್ತು ಪಾಠ ಮಾಡುತ್ತಾರೆ. ಇಂಗ್ಲಿಷ್ ಅಲ್ಲದೆ ವಿಜ್ಞಾನ, ಗಣಿತ, ಸಮಾಜ, ಕನ್ನಡ, ಹಿಂದಿ ಹೀಗೆ ಎಲ್ಲ ವಿಷಯವನ್ನೂ ಹೇಳಿಕೊಡುತ್ತಾ ಉತ್ತಮ ಅಂಕ ಗಳಿಸಲು ಹುಡುಗರಿಗೆ ಪ್ರೇರಣೆಯಾಗಿದ್ದಾರೆ.
`ಪ್ರಸ್ತುತ ಶಿಕ್ಷಣ ಪದ್ಧತಿ ಕೇವಲ ಮಾಹಿತಿ ಸಂಗ್ರಹ ಅಥವಾ ಶೈಕ್ಷಣಿಕ ಕೌಶಲ್ಯಗಳ ಪಡೆಯುವಿಕೆಗೆ ಸೀಮಿತವಾಗಿದೆ.
ಶಾಲೆಗಳೆಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೆಡೆ ಸೇರುವ ಭೌತಿಕ ಕಟ್ಟಡಗಳಲ್ಲ. ಶಿಕ್ಷಣದ ವ್ಯಾಪ್ತಿ ಇನ್ನೂ ವಿಸ್ತಾರವಾಗಿದೆ. ಮಕ್ಕಳನ್ನು ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಈಗಿನ ವ್ಯವಸ್ಥೆಯಲ್ಲಿ `ಕಾಯಿಗೆ ಸಲ್ಲಬೇಕಾದ ಮಾನ ಕರಟಕ್ಕೆ ಸಲ್ಲುತ್ತಿದೆ' ಎಂಬಂತಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಣದ ಗ್ರಾಹಕರಂತೆ ಕಾಣುವುದನ್ನು ಬಿಟ್ಟು ಕಲಿಕೆಯ ಸಹಭಾಗಿಗಳು ಎಂದು ಭಾವಿಸಬೇಕಾಗಿದೆ. ಇದು ನಾವು ಮಾಡುತ್ತಿರುವ ಸಹಾಯವಲ್ಲ. ತೀರಿಸಬೇಕಾದ ಋಣ' ಎಂದು ಹೇಳುವಾಗ ಅವರಲ್ಲಿನ ಸಾಮಾಜಿಕ ಬದಲಾವಣೆಯ ತುಡಿತ ಎದ್ದು ಕಾಣುತ್ತಿತ್ತು.
ಮಕ್ಕಳ ಮಾತು
ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿ ಓದುತ್ತಿರುವ ಮನೋಜ್‌ಗೆ ತೇಜಸ್ವಿ ಎಲ್ಲ ವಿಚಾರದಲ್ಲೂ ಸ್ಫೂರ್ತಿಯಾಗಿದ್ದಾರೆ. ಆದರೆ ಅವರ ಬಗ್ಗೆ ಹೇಳು ಎಂದರೆ ಖುಷಿಯಲ್ಲಿ ಮಾತೇ ಹೊರಡುತ್ತಿರಲಿಲ್ಲ. `ತೇಜಸ್ವಿ ಅವರು ಓದಿಗೆ ಸಹಾಯ ಮಾಡುತ್ತಿರುವುದಲ್ಲದೆ, ಚೆನ್ನಾಗಿ ಅರ್ಥವಾಗುವಂತೆ ಪಾಠವನ್ನೂ ಹೇಳಿಕೊಡುತ್ತಾರೆ. ಮುಂದೆ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಹಿಡಿದು ನಾನೂ ನಾಲ್ಕಾರು ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂಬ ಆಸೆಯಿದೆ' ಎನ್ನುತ್ತಾನೆ.
ದ್ವಿತಿಯ ಪಿಯುಸಿ ಓದುತ್ತಿರುವ ನಾಗರಾಜ್ ತೇಜಸ್ವಿ ಅವರ ಮಾರ್ಗದರ್ಶನದಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾಗಿ ಅ್ಲ್ಲಲೇ ಇದ್ದು ದ್ವಿತಿಯ ಪಿಯುಸಿ ಓದುತ್ತಿದ್ದಾನೆ. ತೇಜಸ್ವಿ ಎಲ್ಲ ವಿಷಯವನ್ನೂ ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಡುತ್ತಿದ್ದಾರೆ. ಹೆತ್ತವರ ಹೊರೆಯನ್ನು ಇಳಿಸಿದ್ದಾರೆ. ಅಪ್ಪ, ಅಮ್ಮ ಕೂಡಾ ಈಗ ಶಿಕ್ಷಣದ ಮಹತ್ವ ಅರಿತುಕೊಂಡಿದ್ದಾರೆ'.
ಆತ್ಮವಿಶ್ವಾಸದ ಕೊರತೆ
`ಅಸಹಾಯಕರ ಸೇವೆ ಮಾಡಲು ಕಾರಣ ಬೇಕಾಗಿಲ್ಲ. ಅದಕ್ಕೆ ಹೆಚ್ಚು ಶ್ರಮವೂ ಪಡಬೇಕಾಗಿಲ್ಲ. ಸೇವಾ ಮನೋಭಾವ ಇರಬೇಕಷ್ಟೆ. ಅಷ್ಟಿದ್ದರೆ ನೂರಾರು ದಾರಿಗಳಿವೆ ' ಹೀಗೆ ತಮ್ಮ ಸಾಮಾಜಿಕ ಕಾಳಜಿಯನ್ನು ತೆರೆದಿಟ್ಟವರು ತೇಜಸ್ವಿ. ಸರ್ಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಏನಾದರೂ ಹೇಳಿಕೊಡಬೇಕು ಎಂದುಕೊಂಡು ಕಾರ್ಯಕ್ಕಿಳಿದಾಗ ವಾಸ್ತವ ಅರಿವಾಯಿತು. ಈ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಟ್ಟರೆ ಪ್ರಯೋಜನವಿಲ್ಲ. ಎಲ್ಲ ವಿಷಯದಲ್ಲೂ ಅವರಿಗೆ ಮಾರ್ಗದರ್ಶನದ ಅರಿವಿದೆ. ಮುಖ್ಯವಾಗಿ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇದೆ. ಅದನ್ನು ತುಂಬಬೇಕಾಗಿದೆ. ಕೆಲವು ಮಕ್ಕಳಿಗೆ ಪಾಸಾಗುವ ಉದ್ದೇಶ ಮಾತ್ರವಿದೆ.
ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕಲ್ಪನೆ ಇರಲಿಲ್ಲ. ಅವರ ಮನ ಪರಿವರ್ತನೆ ಮಾಡುವ ಸವಾಲು ನನ್ನ ಮುಂದಿತ್ತು. ಪ್ರತಿ ವರ್ಷ ಮೂರು ನಾಲ್ಕು ಮಕ್ಕಳನ್ನು ನನ್ನ ರೂಮಿನಲ್ಲಿಯೇ ಇರಿಸಿಕೊಂಡು ರಾತ್ರಿ ಹೊತ್ತು ಪಾಠ ಹೇಳಿಕೊಡುತ್ತಿದ್ದೇನೆ. ಅವರಲ್ಲಿ ಕಂಡ ಪರಿವರ್ತನೆ ಎಂದರೆ ಅವರೆಲ್ಲ ಈಗ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದಾರೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳುವ ಆಸಕ್ತಿ ತೋರಿದ್ದಾರೆ. ಶ್ರೀಹರಿ ಎಂಬ ಹುಡುಗ ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.70 ಅಂಕ ಪಡೆದಿದ್ದಾನೆ.
ಈಗ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದಾನೆ. ಈಗ ನನ್ನ ಬಳಿ ಪ್ರಥಮ ಪಿಯುಸಿ ಮತ್ತು ದ್ವಿತಿಯ ಪಿಯುಸಿ ಓದುವ ಇಬ್ಬರು ಹುಡುಗರಿದ್ದಾರೆ. ಒಬ್ಬ ಎಸ್‌ಎಸ್‌ಎಲ್‌ಸಿ ಹುಡುಗನಿದ್ದಾನೆ. ಪರೀಕ್ಷೆಯ ಸಂದರ್ಭದಲ್ಲಿ ಇನ್ನೂ ಒಂದಷ್ಟು ಹುಡುಗರು ಬರುತ್ತಾರೆ.
ಅವರಲ್ಲಿ ಈಗ ಉನ್ನತ ವ್ಯಾಸಂಗ ಮಾಡುವ ಆತ್ಮವಿಶ್ವಾಸ ಹೆಚ್ಚಿದೆ. ಕೆಲಸದ ಒತ್ತಡದಿಂದಾಗಿ ಸಮಯದ ಕೊರತೆಯಿದ್ದಾಗ ಕೆಲವೊಂದು ವಿಚಾರವನ್ನು ಕಂಪ್ಯೂಟರ್ ಮೂಲಕ ಹೇಳಿಕೊಡುತ್ತೇನೆ. ಇವರ ಹೆತ್ತವರಿಗೆ ಮಕ್ಕಳು ಎಂಜಿನಿಯರ್ ಆಗಬೇಕು ಎಂಬ ಆಸೆ. ಆದರೆ ಜೀವನದಲ್ಲಿ ಎಂಜಿನಿಯರ್ ಮತ್ತು ಡಾಕ್ಟರ್ ಆಗುವುದೇ ದೊಡ್ಡ ಸಾಧನೆ ಅಲ್ಲ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುವುದೂ ಮುಖ್ಯ ಎಂದು ಮನವರಿಕೆ ಮಾಡಿದ್ದೇನೆ. ಅವರಿಗಿರುವ ದೊಡ್ಡ ಸವಾಲೆಂದರೆ ಎಸ್‌ಎಸ್‌ಎಲ್‌ಸಿ ನಂತರ ಕಾಲೇಜು ಶಿಕ್ಷಣ ಕೊಡಿಸಬೇಕಾದರೆ ಹಣದ ಹೊರೆ. ಎಸ್‌ಎಸ್‌ಎಲ್‌ಸಿವರೆಗೂ ಉಚಿತವಾಗಿ ಓದಿದ ನಂತರ ನಿಜಕ್ಕೂ ಬಡ ಪೋಷಕರಿಗೆ ದಿಕ್ಕೇ ತೋಚದಂತಾಗುತ್ತದೆ. ಅವರೆಲ್ಲ ಶಿಕ್ಷಣಕ್ಕಾಗಿ ಹಣ ಕೂಡಿಡುವುದು ಕನಸಿನ ಮಾತು. ಇದು ಕೂಡಾ ನಮ್ಮ ಮುಂದಿರುವ ದೊಡ್ಡ ಸವಾಲು'.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.