ADVERTISEMENT

ಟ್ರಿಪ್‌ವೈರ್ ಪಯಣದಲ್ಲಿ...

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಅಬ್ಬರದ ಶಬ್ದ, ಅದಕ್ಕೆ ಪೂರಕವಾದ ಪಕ್ಕವಾದ್ಯಗಳು, ಮೀಟುವ ತಂತಿಗಳಿಂದ ವಿದ್ಯುತ್ ಸಂಚಾರವಾಗುವಂತಹ ದನಿ ವಿಶಾಲ ಮೈದಾನದಲ್ಲಿ ಮಾರ್ದನಿಸುತ್ತಿತ್ತು. ವೇದಿಕೆಗೆ ಹರಿಬಿಟ್ಟ ಕೃತಕ ಬೆಳಕಿನೊಂದಿಗೆ ರಾತ್ರಿಯ ಬೆಳದಿಂಗಳು ಸ್ಪರ್ಧೆಗಿಳಿದಂತಿತ್ತು. ಹೀಗೆ ತಂಪಾದ ಗಾಳಿಯೂ ಸಾಥ್ ನೀಡಿ ನಿಶೆಗೆ ನಶೆ ಏರಿದಂತಿತ್ತು. ಒಟ್ಟಿನಲ್ಲಿ ಅದೊಂದು ರೋಮಾಂಚನೀಯ ಸಂಜೆಯಾಗಿತ್ತು.

ದುರದೃಷ್ಟವಶಾತ್ ಆ ಸುಂದರ ಸಂಗೀತ ಸಂಜೆಗೆ ದನಿಯಾಗುವ ಕಿವಿಗಳಿರಲಿಲ್ಲ. ಹಾಡುಗಾರರಿಗೆ ಚಪ್ಪಾಳೆ ತಟ್ಟುವ ಕೈಗಳಿರಲಿಲ್ಲ. ಕಾರ್ಯಕ್ರಮಕ್ಕೆ ಸಾಕ್ಷಿಯಾದವರ ಸಂಖ್ಯೆ ನೋಡಿ ನಗರಿಗರ ರಾಕ್ ಪ್ರೀತಿ ಕುಗ್ಗುತ್ತಿದೆಯೇ ಎಂಬ ಸಂಶಯ ಒಮ್ಮೆ ಮನದಲ್ಲಿ ಮೂಡಿ ಮರೆಯಾಗಿದ್ದು ಮಾತ್ರ ಸುಳ್ಳಲ್ಲ.

ಇಷ್ಟಕ್ಕೂ ಅಲ್ಲಿ ರಾಕ್ ಕಾರ್ಯಕ್ರಮ ನಡೆಸಿದ್ದು ಮುಂಬೈನ ಟ್ರಿಪ್‌ವೈರ್ ಸಂಸ್ಥೆ. ಇತ್ತೀಚೆಗಷ್ಟೇ ಹೊರತಂದ `ಸ್ಟ್ಯಾಂಡ್‌ಬೈ~ ಆಲ್ಬಂ ದೇಶದಾದ್ಯಂತ ಭಾರೀ ಜನಮನ್ನಣೆ ಗಳಿಸಿದೆ. 2002ರಲ್ಲಿ ಮುಂಬೈನಲ್ಲಿ ಆರಂಭಗೊಂಡ ಈ ತಂಡ ಸಣ್ಣ ಅವಧಿಯಲ್ಲೇ ಅತ್ಯುತ್ತಮ ರಾಕ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಮೇಯ ಹಾಡಿನಲ್ಲಿ, ಸಾಗರ್ ಗಿಟಾರ್‌ನಲ್ಲಿ ಹಾಗೂ ಡ್ರಮ್ಸನಲ್ಲಿ ಜಾಕ್ ಮಿಂಚಿದರು.

ಬೆರಳೆಣಿಕೆಯಷ್ಟಿದ್ದ ಮಂದಿಯ ಮುಂದೆ `ಟ್ರಿಪ್‌ವೈರ್~ ಸಂಗೀತ ಕಾರ್ಯಕ್ರಮ ನಡೆಸಿತು. ಪ್ರೇಕ್ಷಕರಿಂದ ಪ್ರೋತ್ಸಾಹ ಕೋರಿದರೂ ಅವರು ನಿರೀಕ್ಷಿಸಿದ ಪ್ರತಿಕ್ರಿಯೆ ಸಿಗಲಿಲ್ಲ. `ಇನ್ನೂ ಇಪ್ಪತ್ತು ಹಾಡುಗಳನ್ನು ಹಾಡಬೇಕೆಂದಿದ್ದೇನೆ, ನೀವು ಹೀಗೆ ಸುಮ್ಮನಿದ್ದರೆ ಹೇಗೆ?

ನಮ್ಮಂದಿಗೆ ದನಿ ಸೇರಿಸಿ, ಕೈಜೋಡಿಸಿ~ ಎಂದು ಗಾಯಕ ಕೇಳಿಕೊಂಡರೂ ಪ್ರೇಕ್ಷಕರಿಂದ ಉತ್ತರವಿರಲಿಲ್ಲ. ಡ್ರಮ್ಸನಲ್ಲಿದ್ದ ಜಾಕ್ ಎದ್ದುಬಂದು `ಬೆಂಗಳೂರಿಗರು ಊಟ ಮಾಡುವುದಿಲ್ಲವೇ, ನಮ್ಮಂದಿಗೆ ನೀವೂ ಹಾಡಿದರಷ್ಟೇ ಕಾರ್ಯಕ್ರಮಕ್ಕೊಂದು ಕಳೆ. ಈಗ ನಮ್ಮಂದಿಗಿರಿ, ಬಳಿಕ ನಾನೇ ಊಟ ಕೊಡಿಸುತ್ತೇನೆ~ ಎಂದರೂ ಪ್ರೇಕ್ಷಕರಿಂದ ಉತ್ತರವಿರಲಿಲ್ಲ.

ಟ್ರಿಪ್‌ವೈರ್ ತಂಡ ಬೆಂಗಳೂರಿಗೆ ಬಂದಿದ್ದು ಇದೇ ಮೊದಲು. ಎಲ್ಲರಂತೆ ಇವರೂ ಬೆಂಗಳೂರಿನ ವಾತಾವರಣ ಬಲು ಇಷ್ಟವಾಯಿತು ಎನ್ನುತ್ತಲೇ ಮಾತಿಗಿಳಿದರು. `ಮುಂಬೈನಲ್ಲಿ ಸೆಖೆ ಜಾಸ್ತಿ. ಇಲ್ಲಿನ ತಂಪಾದ ಹವೆ ಇಷ್ಟವಾಯಿತು. ಊಟವೂ ಅಷ್ಟೇ. ಚಿಕನ್ ಬಿರಿಯಾನಿ, ಬೆಂಗಳೂರಿನ ಸ್ಪೆಶಲ್ ಚಿಕನ್-65 ಬಹಳ ಇಷ್ಟವಾಯಿತು.
 
ಇನ್ನೂ ಒಂದೆರಡು ದಿನ ನಗರದಲ್ಲಿರುತ್ತೇವೆ. ಇಲ್ಲಿನವರು ರಾಕ್‌ಪ್ರಿಯರು ಎಂದು ಕೇಳಿ ತಿಳಿದಿದ್ದೆವು. ಆದರೆ ಕಾರ್ಯಕ್ರಮದಲ್ಲಿ ನೆರೆದವರ ಸಂಖ್ಯೆ ನೋಡಿ ತುಸು ಬೇಸರವಾಯಿತು~ ಎಂದರು ಗಿಟಾರ್ ವಾದಕ ಸಾಗರ್.

ಟ್ರಿಪ್‌ವೈರ್ ತಂಡಕ್ಕೀಗ ಹತ್ತರ ಹರೆಯ. ಅದೇ ಖುಷಿಗಾಗಿ ಎರಡನೇ ಆಲ್ಬಂ `ಹೋಮ್‌ಲೆಸ್~ ಅನ್ನು ಸಿದ್ಧಪಡಿಸಿದೆ. ದಶಮಾನೋತ್ಸವ ಪ್ರಯುಕ್ತ ದೇಶದಾದ್ಯಂತ ಸಂಚರಿಸಿ ಕಾರ್ಯಕ್ರಮ ನೀಡುವ ಉಮೇದು ತಂಡಕ್ಕೆ. “ಅದರ ಭಾಗವಾಗಿಯೇ ಬೆಂಗಳೂರಿಗೆ ಬಂದಿದ್ದೇವೆ, ಮುಂದಿನ ತಿಂಗಳು ಉತ್ತರ ಭಾರತದ ಶಿಲಾಂಗ್, ಗುವಾಹಟಿಗಳಲ್ಲಿ ಕಾರ್ಯಕ್ರಮ ನಡೆಸಲಿದ್ದೇನೆ.

`ಕಂಟ್ರೀ ಟೂರ್~ ಹೆಸರಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ರಾಜ್ಯಗಳಲ್ಲೂ ರಾಕ್ ಕಾರ್ಯಕ್ರಮ ನೀಡಬೇಕೆಂದಿದ್ದೇವೆ” ಎಂದರು ಗಾಯಕ ಅಮೇಯ್.
ಹಾಗೇ ಮಾತು ತಂಡ ಕಟ್ಟಿದ ದಿನಗಳತ್ತ ಹೊರಳಿತು. `

ನಾವು ಮೂವರು ಗೆಳೆಯರಾಗಿದ್ದೆವು. ಸಂಗೀತ ಪ್ರೀತಿಯಂತೂ ಜತೆಯಲ್ಲೇ ಇತ್ತು. ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡಿದ ಅನುಭವವೂ ಬೆನ್ನಿಗಿತ್ತು. ತಡಮಾಡುವುದು ಬೇಡವೆಂದು ಸಂಗೀತ ತಂಡವೊಂದನ್ನು ಕಟ್ಟಿದೆವು. 70ರ ದಶಕದಲ್ಲಿದ್ದ ಪಂಕ್ ರಾಕ್ ಪ್ರಕಾರವು ನಮ್ಮನ್ನು ಹೆಚ್ಚಾಗಿ ಸೆಳೆಯಿತು. ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ಒಳ್ಳೆಯ ಹಾಗೂ ಕೆಟ್ಟ ಹಾಡುಗಳನ್ನು ಕೇಳುತ್ತಲೇ ಬೆಳೆದೆವು.
 
ನಾಲ್ಕು ವರ್ಷ ಕ್ಲಬ್‌ನಲ್ಲಿ ಹಾಡಿದ್ದ ಪರಿಣಾಮ `ಸ್ಟ್ಯಾಂಡ್‌ಬೈ~ ಆಲ್ಬಂ ಹೊರಬಂತು. ಪ್ರದರ್ಶನ ನೀಡುವಾಗ ಹಾಡಿನೊಂದಿಗೆ ಹಾಸ್ಯವನ್ನೂ ಬೆರೆಸುವುದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ~ ಎನ್ನುವ ಈ ತಂಡಕ್ಕೆ ಯಾವುದೇ ಗಾಡ್‌ಫಾದರ್‌ಗಳಿಲ್ಲವಂತೆ. ಯಾರನ್ನಾದರೂ ಮಾದರಿ ಎಂದು ಇಟ್ಟುಕೊಂಡರೆ ನಾವು ಅವರನ್ನೇ ಅನುಸರಿಸಬೇಕಾಗುತ್ತದೆ ಎಂಬ ಭಯ ಇವರದ್ದು.

ಪ್ರತಿ ಸಲ ಶೋ ನೀಡುವಾಗಲೂ ಕಳೆದ ಬಾರಿಗಿಂತ ಅದ್ಭುತವಾಗಿರಬೇಕು ಎಂಬುದನ್ನೇ ಮನಸ್ಸಲ್ಲಿಟ್ಟುಕೊಳ್ಳುವ ತಂಡ ಈಗಾಗಲೇ ವಿದೇಶಗಳಲ್ಲೂ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ಇದೇ ಕ್ಷೇತ್ರದಲ್ಲಿ ಮುಂದುವರಿದು ಇನ್ನಷ್ಟು ಆಲ್ಬಂ ಹೊರ ತರಬೇಕು ಎಂಬುದೇ ತಂಡದವರ ಮುಂದಿರುವ ಕನಸು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.