ADVERTISEMENT

ಡಾಕ್ಟರ್ ಜಯಲಕ್ಷ್ಮೀ!

ಆನಂದತೀರ್ಥ ಪ್ಯಾಟಿ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ನರ್ಸ್ ಆಗಿ ಉದ್ಯೋಗ ಮಾಡುತ್ತಿದ್ದ ಜಯಲಕ್ಷ್ಮೀ, ಈಗ ವೈದ್ಯೆಯಾಗಿ ಬಡ್ತಿ ಪಡೆದಿದ್ದಾರೆ!

ಅಚ್ಚರಿ ಪಡಬೇಡಿ; ಇದು ಬೆಳ್ಳಿತೆರೆ ಮೇಲೆ ಮಾತ್ರ. ‘ಕಾರಂಜಿ’ ಶ್ರೀಧರ್ ನಿರ್ದೇಶನದ ‘ಜಾಲಿ ಬಾರು ಮತ್ತು ಪೋಲಿ ಹುಡುಗರು’ ಸಿನಿಮಾದಲ್ಲಿ ವೈದ್ಯೆಯಾಗಿ ಬಣ್ಣ ಹಚ್ಚುವ ಮೂಲಕ, ಚಿತ್ರರಂಗಕ್ಕೆ ಜಯಲಕ್ಷ್ಮೀ ಕಾಲಿಟ್ಟಿದ್ದಾರೆ.

ಹರೆಯದ ಹುಡುಗರು ತಮ್ಮ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳುವ ಹಾಡೊಂದನ್ನು ಯೋಗರಾಜ ಭಟ್ ಬರೆದಿದ್ದಾರೆ. ‘ಏನ್ ಮಾಡ್ಲೀ ಡಾಕ್ಟ್ರೇ, ನಾನೇನ್ ಮಾಡ್ಲೀ ಡಾಕ್ಟ್ರೇ’ ಎಂದು ಯುವಕರು ಅಲವತ್ತುಕೊಳ್ಳುತ್ತ, ತಾವು ಅನುಭವಿಸುತ್ತಿರುವ ತೊಂದರೆಯನ್ನು ವೈದ್ಯರ ಮುಂದೆ ವಿವರಿಸುತ್ತಾರೆ. ಆ ಡಾಕ್ಟರ್ ಪಾತ್ರವನ್ನು ಯಾರು ಮಾಡಬೇಕು ಅಂತ ನಿರ್ದೇಶಕರು ಮೊದಲಿಗೆಲ್ಲ ಯೋಚಿಸಿರಲೇ ಇಲ್ಲ. ಆದರೆ ಹಾಡಿನ ಚಿತ್ರೀಕರಣ ಶುರು ಮಾಡಬೇಕು ಎನ್ನುವಾಗ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಯಿತು. ತಕ್ಷಣ ಹೊಳೆದಿದ್ದು– ಜಯಲಕ್ಷ್ಮೀ. ಶ್ರೀಧರ್ ಮನವಿಗೆ ಜಯಲಕ್ಷ್ಮೀ ‘ಓಕೆ’ ಅಂದೇಬಿಟ್ಟರು.

‘ಈ ಹಾಡನ್ನು ಚಿತ್ರೀಕರಿಸಲಾಗಿದ್ದು. ಜಯಲಕ್ಷ್ಮೀ ನಮ್ಮ ನಿರೀಕ್ಷೆಗೆ ತಕ್ಕಂತೆ ಅಭಿನಯಿಸಿದ್ದಾರೆ’ ಎಂಬ ಮೆಚ್ಚುಗೆಯ ನುಡಿ ಶ್ರೀಧರ್‌ ಅವರದು.
‘ಇದುವರೆಗೆ ನರ್ಸ್ ಆಗಿದ್ದವಳು ನಾನು. ಈಗ ಸಿನಿಮಾದಲ್ಲಿ ವೈದ್ಯೆಯಾಗಿ ಅಭಿನಯಿಸಿದ್ದೇನೆ. ಇದು ಒಂಥರಾ ಪ್ರಮೋಷನ್’ ಎಂದು ಹರ್ಷದಿಂದ ನುಡಿದರು ಜಯಲಕ್ಷ್ಮೀ. ಅಭಿನಯವೆಂದರೆ ಏನು, ಎತ್ತ ಅಂತ ಗೊತ್ತಿಲ್ಲದ ತಮಗೆ ಸಿನಿಮಾದಲ್ಲಿ ನಟಿಸಲು ಮುಖ್ಯ ಕಾರಣ, ನಿರ್ದೇಶಕ ಶ್ರೀಧರ್ ಎಂದು ಕೃತಜ್ಞತೆ ಸಲ್ಲಿಸಿದರು.

‘ಶ್ರೀಧರ್ ಬಂದು ಚಿತ್ರದ ಕಥೆ ಹೇಳಿದರು. ಮಾಮೂಲು ಸಿನಿಮಾಕ್ಕಿಂತ ಇದು ವಿಭಿನ್ನ ಅನಿಸಿತು. ಅದರಲ್ಲೂ ಯೋಗರಾಜ ಭಟ್ ಅವರ ಹಾಡಿಗೆ ನೃತ್ಯ ಮಾಡುವ ಅವಕಾಶ ನನ್ನದು ಎಂದಾಗ ಖುಷಿಯಾಯ್ತು. ಅದರಂತೆ ಚಿತ್ರೀಕರಣಕ್ಕೆ ತೆರಳಿದೆ. ಮೊದಲ ಚಿತ್ರವಾದ್ದರಿಂದ ಅಭಿನಯ– ಶೂಟಿಂಗ್ ಬಗ್ಗೆ ಏನೇನೂ ಕಲ್ಪನೆ ಇರಲಿಲ್ಲ. ಹಾಡಿನ ಚಿತ್ರೀಕರಣದ ಸಮಯದಲ್ಲಿ ನನಗೆ ನೆರವಾಗಿದ್ದು ನಾಯಕ ಕೃಷ್ಣ. ಯಾವ ಭಾವನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಹೇಳಿಕೊಟ್ಟಿದ್ದು ಕೃಷ್ಣ’ ಎಂದು ಸ್ಮರಿಸಿಕೊಂಡರು.

ಬರೀ ಹಾಡಿನಲ್ಲಷ್ಟೇ ಜಯಲಕ್ಷ್ಮೀ ಅಭಿನಯಿಸಿದ್ದಾರೆ. ಅದನ್ನು ಬಿಟ್ಟರೆ ಬೇರಾವುದೇ ದೃಶ್ಯದಲ್ಲಿ ನಟನೆಗೆ ಅವಕಾಶ ಸಿಕ್ಕಿಲ್ಲ. ಹಾಡಿಗೆ ಹೆಜ್ಜೆ ಹಾಕುವ ಮೂಲಕ ಚಿತ್ರಲೋಕಕ್ಕೆ ಬಂದಿರುವ ಅವರಿಗೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ‘ಈ ಚಿತ್ರದಲ್ಲಿ ನನ್ನ ಆ್ಯಕ್ಟಿಂಗ್ ನೋಡಿ, ಪ್ರೇಕ್ಷಕರು ಮೆಚ್ಚಿದರೆ ಮುಂದೆ ಕೂಡ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡ್ತೀನಿ’ ಅನ್ನುತ್ತಾರೆ ಜಯಲಕ್ಷ್ಮೀ.

‘ಏನ್ ಮಾಡ್ಲೀ ಡಾಕ್ಟ್ರೇ’ ಹಾಡಿಗೆ ಸಂಗೀತ ಸಂಯೋಜಿಸಿದ್ದು ವೀರ ಸಮರ್ಥ್. ‘ಈ ಸಾಂಗ್ ಧಮಾಕಾ ಆಗಬೇಕು ಅಂತ ಶ್ರೀಧರ್ ಹೇಳ್ತಾ ಇದ್ರು. ಡಾಕ್ಟರ್ ಪಾತ್ರಕ್ಕೆ ಜಯಲಕ್ಷ್ಮೀ ಅವರನ್ನು ಆರಿಸಿದ್ದು ಕರೆಕ್ಟ್ ಆಗಿದೆ’ ಅಂತ ವೀರ ಸಮರ್ಥ್ ಮೆಚ್ಚಿಕೊಂಡರು. ‘ಬಿಗ್‌ ಬಾಸ್‌’ ಮೂಲಕ ಕಿರುತೆರೆಗೆ ಲಗ್ಗೆಯಿಟ್ಟಿದ್ದ ಜಯಲಕ್ಷ್ಮೀ, ಈಗ ಬೆಳ್ಳಿತೆರೆ ಪ್ರವೇಶದ ಖುಷಿಯಲ್ಲಿ ಮುಳುಗಿರುವುದಂತೂ ನಿಜ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.