ADVERTISEMENT

ತುಂಡು ಹೈಕ್ಳ ಜತೆ ರಾಜೇಶ್ವರಿ ತುಂಟಾಟ

ಸುಮನಾ ಕೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ತುಂಡು ಹೈಕ್ಳ ಜತೆ ರಾಜೇಶ್ವರಿ ತುಂಟಾಟ
ತುಂಡು ಹೈಕ್ಳ ಜತೆ ರಾಜೇಶ್ವರಿ ತುಂಟಾಟ   

ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ರಾಜೇಶ್ವರಿ ಸದ್ಯ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ಹಾಸ್ಯ ಸರಣಿ ‘ತುಂಡುಹೈಕ್ಳ ತುಂಟಾಟ’ದಲ್ಲಿ ಭಿನ್ನಪಾತ್ರಗಳಲ್ಲಿ ನಟಿಸುತ್ತಾ ಕಿರುತೆರೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.‘ಜನರನ್ನು ಮಾತಿನಿಂದ ಖುಷಿಪಡಿಸುವ ಕೆಲಸವನ್ನು ಮಾಡಬೇಕು.

ನಗಿಸುವುದು ಒಂದು ಕಲೆ. ಇದಕ್ಕೆ ವಾಕ್ಚಾತುರ್ಯದೊಂದಿಗೆ ಹಾವ–ಭಾವವೂ ಬೇಕು. ಇಲ್ಲದಿದ್ದರೆ ಅಪಹಾಸ್ಯವಾದೀತು’ ಎಂದು ಹೇಳುವ ರಾಜೇಶ್ವರಿ ಅವರಿಗೆ ತಮಗೆ ಸಿದ್ಧಿಸಿದ ಕಲೆಯ ಬಗ್ಗೆ ಎಚ್ಚರವೂ ಇದೆ. 

ಉದಯ ಕಾಮಿಡಿ ಟಿ.ವಿಯಲ್ಲಿ  ಕೆ.ಮಂಜು ನಿರ್ದೇಶನದ ‘ತುಂಡುಹೈಕ್ಳ ತುಂಟಾಟ’ದಲ್ಲಿ ಮುಖ್ಯ ಪಾತ್ರದಲ್ಲಿ ರಾಜೇಶ್ವರಿ ಹಾಗೂ ಹಾಸ್ಯನಟ ಕೆಂಪೇಗೌಡ ನಟಿಸುತ್ತಿದ್ದಾರೆ. ಇವರಿಗೆ ಕಲಾವಿದರಾದ ಶಶಿ ಹಾಗೂ ಸೋನಾಲಿ ಸಾಥ್‌ ನೀಡುತ್ತಾರೆ. ಇದು ಬರೀ ಐದು ನಿಮಿಷದ ಕಾರ್ಯಕ್ರಮವಾಗಿದ್ದು, ಸಣ್ಣ ಹಾಸ್ಯ ಕತೆಯನ್ನು ಒಳಗೊಂಡಿರುತ್ತದೆ.

ADVERTISEMENT

2007ರಲ್ಲಿ ಬಣ್ಣದ ಲೋಕ ಪ್ರವೇಶಿಸಿದ ರಾಜೇಶ್ವರಿ ದೊಡ್ಡಬಳ್ಳಾಪುರದ ಚಿಕ್ಕಮಧುರೆಯವರು. ಕಂಪ್ಯೂಟರ್‌  ಸೆಂಟರ್‌ ಹಾಗೂ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಅವರನ್ನು ಸಿನಿಮಾ ನಿರ್ದೇಶಕ ಆನಂದ ಮೂರ್ತಿ ಹಾಗೂ ಸುಶೀಲಮ್ಮ ಎಂಬುವರು ಸಿನಿಮಾದಲ್ಲಿ ನಟಿಸುವಂತೆ ಸಲಹೆ ನೀಡಿದರು. ಇಲ್ಲಿಂದ ರಾಜೇಶ್ವರಿ ಅವರ ಜೀವನ ತಿರುವು ಪಡೆಯಿತು.

ಆದರೆ ಆಗ ರಾಜೇಶ್ವರಿ ಅವರಿಗೆ ಸಿನಿಮಾದಲ್ಲಿ ನಟಿಸಲು ಅಪ್ಪ–ಅಮ್ಮ ಪ್ರೋತ್ಸಾಹ ನೀಡಲಿಲ್ಲ. ಮದುವೆಯಾದ ಬಳಿಕ ಗಂಡ ದೇವರಾಜ್‌, ಪತ್ನಿಯ ಆಸೆಗೆ ಬೆಂಬಲ ನೀಡಿದರು.

2007ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಕುರುಡು ಕಾಂಚಾಣ’ ಧಾರಾವಾಹಿಯಲ್ಲಿ ರಾಜೇಶ್ವರಿ ಅವರು  ನಟಿಸಿದರು. ಅದಾದ ನಂತರ ‘ಚೆನ್ನಮ್ಮ ಐಪಿಎಸ್‌’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ರಾಜೇಶ್ವರಿ ಅವರಿಗೆ ಹೆಸರು ತಂದುಕೊಟ್ಟಿದ್ದು ‘ನನ್ನ ನಿನ್ನ ಪ್ರೇಮಕತೆ’.  

20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಜೇಶ್ವರಿ ಅವರು, ಸಿನಿಮಾದಲ್ಲಿ ಹಾಸ್ಯನಟಿ, ನಾಯಕಿ, ಸೊಸೆ, ಅಕ್ಕ–ತಂಗಿ ಹೀಗೆ ನಾನಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ನನ್ನ ನಿನ್ನ ಪ್ರೇಮಕತೆ’, ‘ಗಾಡ್‌ಫಾದರ್‌’, ‘ಅಚ್ಚುಮೆಚ್ಚು’, ‘ಮುಂಜಾನೆ ಹನಿ’, ‘ವೇದವಲ್ಲಿ’, ‘ಮಗಳೇ ಐ ಲವ್‌ ಯು’ ರಾಜೇಶ್ವರಿ ನಟಿಸಿದ ಚಿತ್ರಗಳು. ತಮಿಳು ಭಾಷೆಯ ಒಂದು ಚಿತ್ರದಲ್ಲಿಯೂ ನಟಿಸಿದ್ದಾರೆ.

ಕಿರುತೆರೆಯಲ್ಲಿ ಹಾಸ್ಯ ನಟಿ ಎಂದು ಗುರುತಿಸಿಕೊಳ್ಳುತ್ತಿರುವ ರಾಜೇಶ್ವರಿ ಅವರಿಗೆ ಹಾಸ್ಯಕ್ಕೆ ಆಯ್ದುಕೊಳ್ಳುವ ವಿಷಯಗಳ ಬಗ್ಗೆ ಎಚ್ಚರ ಇದೆ. ‘ಕಾಮಿಡಿ ಷೋಗಳಲ್ಲಿ ಸದಾ ಹೊಸತನವಿರಬೇಕು. ಹೀಗಾಗಿ ದಿನದಿನಕ್ಕೆ ವೈವಿಧ್ಯಮಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕಾರ್ಯಕ್ರಮ ನೀಡುವ ಸವಾಲಿರುತ್ತದೆ. ಪ್ರತಿದಿನ ಒಂದೇ ರೀತಿ ಇದ್ದರೆ ಕಾರ್ಯಕ್ರಮ ನೋಡುವವರ ಸಂಖ್ಯೆ ಕಡಿಮೆಯಾಗಬಹುದು. ಪ್ರೇಕ್ಷಕರಿಗೆ ಬೋರ್‌ ಹೊಡೆಸದಂತೆ, ನೋವಾಗದಂತೆ, ಅಶ್ಲೀಲ ಎನಿಸದಂತೆ ವಿಷಯಗಳ ಆಯ್ಕೆ ಇರಬೇಕು’ ಎಂದು ಹೇಳುತ್ತಾರೆ.

ಪಾತ್ರಗಳ ಆಯ್ಕೆಯಲ್ಲೂ ರಾಜೇಶ್ವರಿ ಮುಕ್ತವಾಗಿದ್ದಾರೆ. ‘ಅಮ್ಮ, ಅಜ್ಜಿ, ಭಿಕ್ಷುಕಿ ಎಂಥ ಪಾತ್ರಗಳನ್ನು ಬೇಕಾದರೂ ಮಾಡಲು ಸಿದ್ಧ’ ಎಂದು ನಟನೆ ಕುರಿತಾದ ತನ್ನ ಬದ್ಧತೆಯನ್ನು ತೋರಿಸುತ್ತಾರೆ.

‘ಸಾಮಾನ್ಯರಂತೆ ಕಲಾವಿದರ ಜೀವನದಲ್ಲೂ ಬೇಸರ, ಕಷ್ಟ, ಸುಖ ಇದ್ದದ್ದೇ. ಆದರೆ ಕ್ಯಾಮೆರಾ ಮುಂದೆ ನಾನು ಹಾಸ್ಯ ನಟಿ. ಪ್ರೇಕ್ಷಕರನ್ನು ನಗಿಸುವುದು ನನ್ನ ಧರ್ಮ. ಆ ಸಂದರ್ಭದಲ್ಲಿ ಯಾವುದೇ ನೋವಿದ್ದರೂ, ಅದನ್ನು ಮುಖದಲ್ಲಿ ತೋರಿಸುವುದಿಲ್ಲ. ಜನರು ಪ್ರೀತಿ ತೋರಿಸುವಾಗ ತೃಪ್ತಿ ದೊರೆಯುತ್ತದೆ’ ಎಂದು ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.