ADVERTISEMENT

ದೇಶಿ ಸಿನಿಮಾ ವಿದೇಶಿ ಸುದ್ದಿ...

ಡಿ.ಗರುಡ
Published 31 ಮೇ 2012, 19:30 IST
Last Updated 31 ಮೇ 2012, 19:30 IST

`ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್... ಎನ್ನುವ ವ್ಯತ್ಯಾಸ ಸಂಗೀತಕ್ಕೆ ಹಾಗೂ ನೃತ್ಯಕ್ಕೆ ಗೊತ್ತಿಲ್ಲ. ತಾಳ ಹಾಗೂ ಲಯ ಎನ್ನುವುದು ಮಾತ್ರ ಅಲ್ಲಿ ಸತ್ಯ. ಅದಕ್ಕೆ ಹೆಜ್ಜೆಗೂಡಿಸಿ ನಲಿಯುವುದು ಮಾತ್ರ ಗೊತ್ತು~

- ಹೀಗೆ ಹೇಳಿದ್ದು ಆಸ್ಟ್ರೇಲಿಯಾದ ನೃತ್ಯ ಕಲಾವಿದೆ ಟೀನಾ. ಬಾಲಿವುಡ್‌ನ ಖ್ಯಾತ ತಾರೆಗಳಾದ ಶಾರುಖ್‌ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಅಷ್ಟೇ ಅಲ್ಲ ದಕ್ಷಿಣದ ಕೆಲವು ನಟರ ಜೊತೆಗೂ ಸಹನರ್ತಕಿಯಾಗಿ ಹೆಜ್ಜೆ ಹಾಕಿರುವ ಪ್ರತಿಭಾವಂತೆ ಇವಳು. ಭಾರತದ ಭಾಷೆಗಳು ಅರ್ಥವಾಗದಿದ್ದರೂ ಕೆಲವು ಹಾಡುಗಳನ್ನು ಬಾಯಿಪಾಠ ಮಾಡಿಕೊಂಡಿದ್ದಾಳೆ. ಕನ್ನಡದ ಹಾಡುಗಳಿಗೂ ಡಾನ್ಸ್ ಮಾಡಲು ಸೈ. ಹಾಡು ಯಾವುದಾದರೇನು ನಲಿವ ಹೆಜ್ಜೆಗೆ? ಎನ್ನುವಂಥ ವಿಶ್ವಾಸ ಈ ಶ್ವೇತ ಸುಂದರಿಯದು.

ಭಾರತದ ವಿವಿಧ ಭಾಷೆಗಳ ಸಿನಿಮಾ ಹಾಡುಗಳಿಗೆ ಗೆಜ್ಜೆ ಕಟ್ಟದೇ ವಿದೇಶಿ ನೃತ್ಯಪ್ರಕಾರದ ಹೆಜ್ಜೆ ಹಾಕಿರುವ ಟೀನಾ ನೇತೃತ್ವದ ತಂಡಕ್ಕೆ ಭಾರಿ ಬೇಡಿಕೆ. ಸಿನಿಮಾ ಹಾಡುಗಳ ಶೂಟಿಂಗ್‌ನಲ್ಲಿ ಸಹನರ್ತಕಿಯಾಗಿ ಮಾತ್ರವಲ್ಲ ಇತರ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಹಾಗೂ ಸಿರಿವಂತರ ಪಾರ್ಟಿಗಳಲ್ಲಿಯೂ ಇದೇ ಬೆಳದಿಂಗಳ ಬಾಲೆಯ ಗ್ರೂಪ್‌ನಿಂದ ಡಾನ್ಸ್... ಡಾನ್ಸ್...!

ADVERTISEMENT

ಹೀಗೆ ಅದೆಷ್ಟೊಂದು ವಿದೇಶಿ ನೃತ್ಯಕಲಾವಿದೆಯರ ತಂಡಗಳು ಭಾರತದಲ್ಲಿನ ವಿವಿಧ ಚಿತ್ರರಂಗಗಳ ಕಡೆಗೆ ಹರಿದುಬಂದಿವೆ. ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಡುವ ಸಿನಿಮಾ ಉದ್ಯಮ ಇಲ್ಲಿನದು ಎನ್ನುವುದು ಅವರಿಗೂ ಗೊತ್ತಾಗಿದೆ. ಆದ್ದರಿಂದ ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು... ಹೀಗೆ ದೇಶದೆಲ್ಲೆಡೆ ಚಿತ್ರೋದ್ಯಮದ ಚಟುವಟಿಕೆಗಳು ಇರುವೆಡೆಯೆಲ್ಲ ಅವರು ಸಂಪರ್ಕ ಸೇತುವೆ ಕಟ್ಟಿಕೊಳ್ಳತೊಡಗಿದ್ದಾರೆ. ಬಾಲಿವುಡ್ ಹಾಡುಗಳ ನೃತ್ಯಗಳನ್ನು ಸಮರ್ಥವಾಗಿ ಅನುಕರಣೆ ಮಾಡುವ ಸಾಮರ್ಥ್ಯ ಹೊಂದಿರುವ ಈ ವಿದೇಶಿ ಬೆಡಗಿಯರಿಗೆ ಅವಕಾಶಗಳೂ ಕೈಬೀಸಿ ಕರೆಯುತ್ತಿವೆ.
ಒಂದೆಡೆ ಇಂಥ ವಿದೇಶಿ ಸಹನರ್ತಕಿಯರು ನಮ್ಮ ಸಿನಿಮಾಗಳಿಗೆ ಹರಿದು ಬರುತ್ತಿರುವುದರಿಂದ ದೇಸಿ ಕಲಾವಿದೆಯರ ಅವಕಾಶಗಳು ಕೈತಪ್ಪಿ ಹೋಗುತ್ತಿವೆ. ತಾಸುಗಳ ಲೆಕ್ಕದಲ್ಲಿ ಕೆಲಸ ಮಾಡಿ ಸಂಭಾವನೆ ಗಿಟ್ಟಿಸುವ ಇವರ ಮುಂದೆ ಪುಡಿಗಾಸಿಗೆ ದಿನವಿಡೀ ಉರಿ ಬಿಸಿಲಲ್ಲಿ ಹಾಗೂ ಪ್ರಖರ ದೀಪಗಳ ಬೆಳಕಿನಲ್ಲಿ ಕುಣಿಯಲು ಸಿದ್ಧರಿರುವ ದಕ್ಷಿಣ ಭಾರತದ ಸಹನರ್ತಕಿಯರಿಗೆ ಹೊಳಪು ಇಲ್ಲದಾಗಿದೆ ಎನ್ನುವುದಂತೂ ಕಟು ಸತ್ಯ.
ಕನ್ನಡದ ಹಿರಿಯ ನಟರೊಬ್ಬರು ವಿದೇಶಿ ನೃತ್ಯಗಾರ್ತಿಯರ ಆಮದು ವಿಷಯವಾಗಿ ಮಾತನಾಡುತ್ತಾ `ನಾವು ತಿಂಗಳುಗಟ್ಟಲೆ ಸೆಟ್‌ಗೆ ಬಂದು ಬೆವರು ಸುರಿಸಿದರೂ ಗಳಿಸಲಾಗದಷ್ಟು ಹಣವನ್ನು ಇವರು ಒಂದೇ ವಾರದಲ್ಲಿ ಗಂಟುಕಟ್ಟಿಕೊಂಡು ಹೋಗುತ್ತಾರೆ!~ ಎಂದು ಹೇಳಿದ್ದರಲ್ಲಿ ಸತ್ಯಾಂಶವಿದೆ. ಪ್ರಯಾಣ ವೆಚ್ಚ, ತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ ಹಾಗೂ ತಾಸಿನ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಇವರು. ಆದರೆ ಅದಕ್ಕೆ ತಕ್ಕಂತೆ ತರಬೇತಿ ಪಡೆದ ಇವರ ನೃತ್ಯದಲ್ಲಿ ಗುಣಮಟ್ಟಕ್ಕೆ ಕೊರತೆ ಇರುವುದಿಲ್ಲ.

ವಿದೇಶದಲ್ಲಿದ್ದರೂ ಪ್ರತಿನಿತ್ಯ ಅಭ್ಯಾಸ ಮಾಡುತ್ತಾರೆ ಇವರು. ಎಲ್ಲಕ್ಕಿಂತ ಮುಖ್ಯವಾಗಿ ಅಂಗಸೌಷ್ಠವ ಕುಂದದಂತೆ ಅವಶ್ಯ ವ್ಯಾಯಾಮ ಮಾಡುತ್ತಾರೆ. ಆದ್ದರಿಂದ ತೆರೆಯ ಮೇಲೆ ಇವರನ್ನು ನೋಡುವುದೇ ಸೊಬಗು. ನೃತ್ಯ ಚೆನ್ನಾಗಿ ಕಾಣಿಸಬೇಕು ಎಂದರೆ ದೇಹವೂ ಸೊಗಸಾಗಿ ಇರಬೇಕೆಂದು ಸ್ಪಷ್ಟವಾಗಿ ಅರಿತಿರುವ ಈ ಕಲಾವಿದೆಯರ ವೃತ್ತಿಪರತೆಯನ್ನಂತೂ ಮೆಚ್ಚಲೇಬೇಕು. ಹೇಳಿದ ಸಮಯಕ್ಕೆ ಸರಿಯಾಗಿ ಸಜ್ಜಾಗಿ ನಿಂತುಬಿಟ್ಟಿರುತ್ತಾರೆ. ಅದೂ ಒಂದು ಪ್ಲಸ್ ಪಾಯಿಂಟ್. ಸರಿಯಾಗಿ ಸಂಭಾವನೆ ಸಿಕ್ಕರೆ ಒಂದಿಷ್ಟೂ ಕಿರಿಕಿರಿ ಮಾಡುವುದಿಲ್ಲ. ಆದರೆ ತಮ್ಮಂದಿಗೆ ಅನುಚಿತವಾಗಿ ನಡೆದುಕೊಳ್ಳುವ ಸಿನಿಮಾ ಮಂದಿಗೆ ಹೇಗೆ ಬುದ್ಧಿ ಕಲಿಸಬೇಕು ಎನ್ನುವುದನ್ನೂ ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದಲೇ ದೇಶ ಯಾವುದಾದರೇನು ಧೈರ್ಯದಿಂದ ಬಂದು ನೃತ್ಯ ಪ್ರದರ್ಶನ ನೀಡುತ್ತಾರೆ.

ಯಾವುದೇ ಸಂಗೀತವಿರಲಿ, ಯಾವುದೇ ಶೈಲಿಯ ನೃತ್ಯವಿರಲಿ ಸುಲಭವಾಗಿ ಮೈಗೂಡಿಸಿಕೊಳ್ಳುವ ಸಾಮರ್ಥ್ಯ ತಮ್ಮ ಕಲಾ ತಂಡಕ್ಕಿದೆ ಎನ್ನುವುದು ಟೀನಾ ವಿಶ್ವಾಸ.
ಸಿನಿಮಾ ಸೆಟ್‌ನಲ್ಲಿ ನೃತ್ಯ ಸಂಯೋಜಕ ಹೇಳುವ ಹೆಜ್ಜೆಯನ್ನು ಅನುಕರಿಸುವಂಥ ಲಯ ಹಾಗೂ ಲಾಲಿತ್ಯವು ಇವರಿಗೆ ನಿರಂತರ ಅಭ್ಯಾಸದಿಂದ ಸಿದ್ಧಿಸಿದೆ. ವಿಶ್ವದ ಎಲ್ಲ ಪ್ರಮುಖ ನೃತ್ಯ ಪ್ರಕಾರಗಳ ವೀಡಿಯೊ ನೋಡಿ ಅದೇ ರೀತಿಯಲ್ಲಿ ತಾಲೀಮು ನಡೆಸುತ್ತಾ ಬಂದಿದ್ದಾರೆ ಈ ಹುಡುಗಿಯರು. ಅದರಲ್ಲಿಯೂ ಬಾಲಿವುಡ್ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕುವುದೆಂದರೆ ಎಲ್ಲಿಲ್ಲದ ಉತ್ಸಾಹ. ಟೀನಾ ತಮ್ಮ ಪರಿಚಯದ ಕೈಪಿಡಿಯಲ್ಲಿ `ಎಲ್ಲ ಜನಪ್ರಿಯ ಬಾಲಿವುಡ್ ನೃತ್ಯಗಳನ್ನು ಮಾಡುತ್ತೇವೆ~ ಎಂದು ದಪ್ಪಕ್ಷರದಲ್ಲಿ ಮುದ್ರಿಸಿಕೊಂಡಿರುವುದು ವಿಶೇಷ.

ಬಾಲಿವುಡ್ ನಟ-ನಟಿಯರ ದಂಡು ಹಾಗೂ ತಮಿಳು ಸಿನಿಮಾದವರ ಹಿಂಡು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸರಣಿ ಕಾರ್ಯಕ್ರಮ ನೀಡಿದ್ದಾಗ ಅವರಿಗೆ ಸಹನರ್ತಕಿಯರಾಗಿದ್ದೇ ಟೀನಾ ಅವರ `ಓರಿಯಂಟಲ್ ಫೈರ್ ಡಾನ್ಸ್~ ತಂಡದ ಬೆಡಗಿಯರು. `ಸಲ್ಲು ಮಿಯಾ~ ಜೊತೆಗೆ `ದಬಂಗ್~ ಚಿತ್ರದ ಹಾಡಿಗೆ ಮೈ ಬಳುಕಿಸಿ ಕುಣಿಸಿದ್ದು ಇವರಿಗೆ ಸ್ಮರಣೀಯ ಕ್ಷಣವಂತೆ. `ಬೆಲ್ಲಿ ಡಾನ್ಸ್‌ನಿಂದ ಆರಂಭವಾದ ನಮ್ಮ ತಂಡವು ಈಗ ಅನೇಕ ಪ್ರಕಾರದ ನೃತ್ಯಗಳನ್ನು ಮಾಡುತ್ತಿದೆ~ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಟೀನಾ. ದಕ್ಷಿಣ ಭಾರತದ ಕೆಲವು ಜನಪ್ರಿಯ ಹಾಡುಗಳಿಗೂ ತಮ್ಮದೇ ಆದ ರೀತಿಯಲ್ಲಿ ನೃತ್ಯ ಸಂಯೋಜನೆ ಮಾಡಿ ಪ್ರದರ್ಶಿಸಿದ್ದು ಈ ತಂಡದ ಇನ್ನೊಂದು ಹಿರಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.