ADVERTISEMENT

ದೊಡ್ಡರಂಗೇಗೌಡರಿಗೆ 70ರ ಹರೆಯ

ಸುಚೀಂದ್ರಪ್ರಸಾದ್
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ದೊಡ್ಡರಂಗೇಗೌಡರಿಗೆ 70ರ ಹರೆಯ
ದೊಡ್ಡರಂಗೇಗೌಡರಿಗೆ 70ರ ಹರೆಯ   

ಎಪ್ಪತ್ತು ಸಾರ್ಥಕ ವಸಂತದ ಎಲ್ಲ ಪಲ್ಲಟಗಳನ್ನೂ ಕಂಡುಂಡ ಸಾಧಕರನ್ನು ಒಮ್ಮೆ ಮಾತನಾಡಿಸಿದಾಗ ಆಶಾವಾದದ ಚಿಗುರಿನ ಹಸಿರು ಮಾಸಿರದಂತೆ ಅನಿಸುವುದು ನನಗೆ ನಿಸ್ಸಂಶಯವಾಗಿ ಕಂಡಿತ್ತು.

ನೋಡು ನೋಡುತ್ತಲೇ ನೆಲದ ಸೊಗಡನ್ನು ಸೊಬಗನ್ನು ಹಾಸು ಹೊದ್ದು ಕಾವ್ಯಕೃಷಿ ನಡೆಸಿದ ಡಾ. ದೊಡ್ಡರಂಗೇಗೌಡರಿಗೆ ಎಪ್ಪತ್ತು. ಅಭಿಮಾನದ ಸಲುಗೆಯಿಂದ, ‘ಹೊಸತೇನ ಬರೆದಿರಿ ಸಾರ್’ ಅಂತ ಮಾತಿಗಿಳಿದಾಗೆಲ್ಲಾ ತುಂಬು ಹೃದಯದಿಂದ ತಮ್ಮ ಅನೇಕ ರಚನೆಗಳನ್ನು ಉದಾಹರಿಸುತ್ತಾ, ‘ಇತಿಹಾಸ ಅರಿತಿರದವರು ಇತಿಹಾಸವನ್ನು ಸೃಷ್ಟಿಸಲು ಎಲ್ಲಿ ಸಾಧ್ಯ?’ ಎಂದು ತಮ್ಮ ಜೀವನದ ರಸಗಳಿಗೆಗಳನ್ನು ಮೆಲುಕು ಹಾಕುತ್ತಾರೆ ದೊಡ್ಡರಂಗೇಗೌಡರು.

‘ನಾ ಶೃಂಗಾರೋಪಾಸಕನೂ ಹೌದು. ಶೀಲ ಸಂವರ್ಧಕನೂ ಹೌದು. ನನ್ನ ಅಷ್ಟೂ ರಚನೆಗಳಲ್ಲಿ ಸಂಸ್ಕೃತಿಪರ ಚಿಂತನೆಗೆ ಪ್ರಾಧಾನ್ಯ ಇದೆ. ಮನಸ್ಸುಗಳ ಮಾಲಿನ್ಯ ಮಾಡಬಲ್ಲ ಒಂದು ಶಬ್ದವನ್ನೂ ನಾನು ಕನ್ನಡ ಸಮುದಾಯಕ್ಕೆ ಹರಿಯಬಿಡಲಿಲ್ಲ’ ಎನ್ನುವ ದೊಡ್ಡರಂಗೇಗೌಡರ ಮಾತಿನ ಒಳಾರ್ಥ ನೇರವಾಗಿ ಅಭಿವ್ಯಕ್ತವಾಗುತ್ತದೆ.

ಉಕ್ತಿ ವೈಚಿತ್ರ್ಯಗಳನ್ನು ಸೊಗಸಾಗಿ ದುಡಿಸಿಕೊಳ್ಳುವ ರೂಪಕಗಳೊಟ್ಟಿಗೆ ಜೀವನ ಸಂವಾದವಾಗಿ ಮೆರೆವ ಅವರ ಆಡಂಬರ ರಹಿತ ಕಾವ್ಯ ಸೃಷ್ಟಿ ಜನಜನಿತ ವಾಗಿರುವುದರ ಹಿಂದೆ ರೋಚಕ ಕತೆಯೂ ಇಲ್ಲದಿಲ್ಲ. ತಮ್ಮತನಗಳಿಗೆ ಬೆಲೆಯಿತ್ತ ಹಿರಿಯರಲ್ಲಿ ಗೌಡರೂ ಒಬ್ಬರು. ದಿಟ್ಟ ನಿಲುವುಗಳ ಬದ್ಧ ಹೆಜ್ಜೆಗಳಿಗೆ ಸಹಮತ ವ್ಯಕ್ತಪಡಿಸಿ, ಕೆಡುಕುಗಳಿಗೆ ಕಡಿವಾಣ ಹಾಕಲೆತ್ನಿಸುವ ಸಮಾನ ಮನಸ್ಕರನ್ನು ತುಂಬು ಹೃದಯದಿಂದ ನೆನೆಯುತ್ತಾರೆ ಅವರು.

ನೆಲದುಲಿಯಲ್ಲಿ ಹಾಸುಹೊಕ್ಕಾದ ನುಡಿಗಟ್ಟುಗಳು; ನಾಣ್ನುಡಿಗಳು, ಗಾದೆಮಾತುಗಳು, ಜನರ ನಾಲಗೆಯ ಮೇಲೆ ನರ್ತಿಸುವ ಪದಗಳನ್ನು ತಮ್ಮ ಕವಿತ್ವಕ್ಕೆ ದೊ.ರಂ.ಗೌ. ಶ್ರದ್ಧೆಯಿಂದ ಕಾವ್ಯಜಲವನ್ನು ಹಾಯಿಸಿಕೊಳ್ಳುತ್ತಾರೆ.

ಮಸುಕಾದ ಮನಸಿನ ಆಕಾಶಕೆ
ಮಿಂಚುವ ಚುಕ್ಕಿಯಂಗೆ ನೀ ಬಂದೆ


ಎನ್ನುತ ಅವರ ಲೇಖನಿಯಿಂದ ಹೊರಬಿದ್ದ ಸಾಂದರ್ಭಿಕ ಆಶುಕವಿತ್ವದ ಸಾಲುಗಳೆಲ್ಲವೂ ಸ್ಮರಣಯೋಗ್ಯವಾಗಿದೆ.
ಏಸು ವರ್ಸ ಆಯ್ತೇ ನಿಂಗೆ ನನ್ನ ಬಂಗಾರಿ/ ನಮ್ಮೂರ ಸಿಂಗಾರಿ
ಎಂಬ ಸಾಲುಗಳಲ್ಲಿ ಸಭ್ಯ ವಾರ್ತಾಲಾಪ ಎಲ್ಲೂ ಮರ್ಯಾದೆಯ ಚೌಕಟ್ಟನ್ನು ಮೀರುವುದಿಲ್ಲ. ಯಾವ ಒತ್ತಡಕ್ಕೂ ಒಳಗಾಗದೆ, ಗೀತರಚನಕಾರನ ಅಂತಃಸತ್ತ್ವವನ್ನು ಉಳಿಸಿಕೊಂಡಿವೆ ಇಲ್ಲಿನ ಪದಪುಂಜಗಳು.

ಅನೇಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಿ ದೊಡ್ಡ ಶಿಷ್ಯ ಸಂಪತ್ತನ್ನು ಗಳಿಸಿದ ದೊ.ರಂ.ಗೌಡರು, ಸದಾ ಕಾಲ ಒಂದಲ್ಲ ಒಂದು ಸಾಹಿತ್ಯಿಕ ಸೃಜನಶೀಲ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸತ್ಯಾನ್ವೇಷಣೆ, ಶೋಧಕ ಬುದ್ಧಿ, ಪ್ರೌಢ ಚಿಂತನೆಗಳಿಂದ ಸೂಕ್ತ ಪದ ಪ್ರಯೋಗಗಳನ್ನು ಮಾಡುತ್ತಾ ಸಾರ್ಥಕತೆಯ ಬರಹಗಳ ಕಡೆಗೆ ಸಾಗಿದವರು.

ಹಲವು ಹನ್ನೊಂದು ಮಿತಿಗಳೊಳಗೆ ಗೀತರಚನೆಕಾರ ಯಾವತ್ತೂ ಕೆಲಸ ಮಾಡಬೇಕಾಗುತ್ತದೆ. ಇದು ಕವಿಗೆ ಹತ್ತಿಕ್ಕಲಾರದ ಸವಾಲು. ಆದರೂ ಮೌಲಿಕ ಸಾಹಿತ್ಯ ರಚನೆಯ ಮಹತ್ತ್ವಾಕಾಂಕ್ಷೆಯನ್ನು ದೊ.ರಂ.ಗೌ. ಬಿಟ್ಟಿಲ್ಲ. ಉಮೇದಿನಲ್ಲೇ ಬರೆಯುತ್ತಾರೆ. ಕಷ್ಟಕರ ಕವಾಯತ್ತಿನಲ್ಲೂ ಮೌಲ್ಯಯುಕ್ತ ಪದಗಳನ್ನು ಪೋಣಿಸಿ ವಾಗರ್ಥದಾಚೆಯ ಧ್ವನಿಯನ್ನು ಸಾಧಿಸುತ್ತಾರೆ.

ರಾಗಸಂಯೋಜಕರಿಗೂ ಮಹತ್ತ್ವದ ಸ್ಥಾನವನ್ನು ನೀಡುತ್ತಾರೆ. ಸಂಗೀತದ ಸ್ವರ ಪ್ರಸ್ತಾರಗಳನ್ನು ಸೃಷ್ಟಿಸುವವರಿಗೆ ಯಶಸ್ಸಿನ ಸಮಪಾಲನ್ನು ನೀಡುತ್ತಾರೆ. ಅವರ ಒಳತೋಟಿ ಈ ನೆಲದ ಜಾಯಮಾನದ ಸೃಜನಶೀಲ ಕವಿಯ ಕವಿತೆಯನ್ನು ಅಭಿವ್ಯಕ್ತಿಸುತ್ತದೆ. ಅವರು ಗಿಮಿಕ್‌ಗಳನ್ನು ಬದಿಗಿಡುತ್ತಾರೆ. ದೂರಗಾಮಿ ಚಿಂತನೆಗಳನ್ನು ಮಾಡುತ್ತಾರೆ.

ಯಾರಿಗುಂಟು ಯಾರಿಗಿಲ್ಲ
ಬಾಳೆಲ್ಲಾ ಬೇವುಬೆಲ್ಲ
ಬಂದದ್ದೆಲ್ಲಾ ನೀಸಬೇಕಯ್ಯಾ ಗೆಣೆಯಾ
ಕಾಣದಕ್ಕೆ ಚಿಂತೆ ಯಾಕಯ್ಯಾ?

ನಿರಂತರ ಅಧ್ಯಯನ, ಪರಿಣಾಮಕಾರಿ ಅಧ್ಯಾಪನ ಇವುಗಳನ್ನು ರೂಢಿಸಿಕೊಂಡವರು ದೊ.ರಂ.ಗೌ.
ತತ್ಕಾರಕ್ಕೆ ಅನುಗುಣವಾಗಿ ಬರೆಯುವ ಗೌಡರು ಅಲ್ಲೂ ಮಹತ್ವದ ಸಾಹಿತ್ಯಾರ್ಥಗಳನ್ನು ನೀಡಿದ್ದಾರೆ. ಶ್ರೇಷ್ಠ ಪಲ್ಲವಿಗಳನ್ನು ಬರೆಯುವುದೇ ಗೀತರಚನೆಕಾರನ ಸಾಧನೆ. ಆ ಪಲ್ಲವಿಗೆ ಅನುಗುಣವಾಗಿ ಚರಣಗಳನ್ನು ವೈಭವೀಕರಿಸುವುದು ಕವಿಯ ರೂಢಿ.

ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ


ಎಂದು ಹೇಳುವುದರಲ್ಲಿ ಗೀತರಚನಕಾರನ ತುಡಿತ ಮಿಡಿತಗಳಿವೆ.
ಐನೂರಕ್ಕೂ ಹೆಚ್ಚು ಹಾಡುಗಳನ್ನು ಬರೆದ ದೊ.ರಂ.ಗೌ. ಅವರ ಹಾಡುಗಳಲ್ಲಿ 108 ಹಾಡುಗಳನ್ನು ಸಂಕಲಿಸಿ ಅವರ ಮಗ ಡಾ. ಡಿ.ಭರತ್ ಇದೇ ಜನವರಿ 16ರಂದು ಸುಂದರ ಪ್ರಕಾಶನದ ಮೂಲಕ ಲೋಕಾರ್ಪಣೆ ಮಾಡುತ್ತಿದ್ದಾರೆ. ಏಳು ದಶಕಗಳನ್ನು ಕಳೆದ ಕವಿ ಇನ್ನಷ್ಟು ಮೌಲಿಕವಾದ ಹಾಡುಗಳನ್ನು ಬರೆಯುವಂತಾಗಲಿ.
(ಲೇಖಕರು ಖ್ಯಾತ ಚಲನಚಿತ್ರ ಕಲಾವಿದರು)

ಎರಡು ಪುಸ್ತಕಗಳ ಲೋಕಾರ್ಪಣೆ ಮತ್ತು ಜನಪ್ರಿಯ ಗಾಯಕರಿಂದ ಭಾವಸಂಕ್ರಾಂತಿ ಗಾಯನ: ಬಿಡುಗಡೆಯಾಗಲಿರುವ ಪುಸ್ತಕಗಳು– ದೊಡ್ಡರಂಗೇಗೌಡರ ‘108 ಜನಪ್ರಿಯ ಚಿತ್ರಗೀತೆಗಳು’ ಮತ್ತು ನಿರ್ದೇಶಕ ಸಿ.ವಿ. ಶಿವಶಂಕರ ಅವರ ‘ಕನ್ನಡ ಕುವರ’. ಉಪಸ್ಥಿತಿ– ರಾಜೇಂದ್ರಸಿಂಗ್‌ ಬಾಬು. ಸಾ.ರಾ. ಗೋವಿಂದ, ಆರ್.ಕೆ. ಪದ್ಮನಾಭ, ವಿ. ಲಕ್ಷ್ಮೀನಾರಾಯಣ, ಟಿ.ಎಸ್‌. ನಾಗಾಭರಣ, ಎಸ್‌.ಎ. ಚಿನ್ನೇಗೌಡ, ಎನ್‌.ಎಸ್‌. ಶ್ರೀಧರಮೂರ್ತಿ, ಆರ್‌. ರಾಜಾಚಂದ್ರ. ಭಾವ ಸಂಕ್ರಾಂತಿ– ಪ್ರಸಿದ್ಧ ಗಾಯಕರಿಂದ ಗಾಯನ. ಕಲಾವಿದರು– ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದುಕೃಷ್ಣ, ರವೀಂದ್ರ ಸೊರಗಾವಿ, ಪಂಚಮ್‌ ಹಳಿಬಂಡಿ, ಬದರಿ ಪ್ರಸಾದ್‌, ಕಿಕ್ಕೇರಿ ಕೃಷ್ಣಮೂರ್ತಿ, ಎಚ್‌. ಹೊಂಬೇಗೌಡ, ಮೃತ್ಯುಂಜಯ ದೊಡ್ಡವಾಡ, ಎಂ.ಡಿ. ಪಲ್ಲವಿ, ಅರ್ಚನಾ ಉಡುಪ, ಎಸ್‌.ಸುನೀತಾ, ಮಂಗಳಾರವಿ, ನಾಗಚಂದ್ರಿಕಾ ಭಟ್. ಆಯೋಜನೆ– ಸುಂದರ ಸಾಹಿತ್ಯ. ಸ್ಥಳ: ಸಂಸ್ಕೃತಿ ಸಭಾಂಗಣ, ರೀಜನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ದೇವೇಗೌಡ ಪೆಟ್ರೋಲ್‌ ಬಂಕ್‌ ಎದುರು, ಪದ್ಮನಾಭನಗರ 2ನೇ ಹಂತ. ಬನಶಂಕರಿ. ಶನಿವಾರ ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.