ADVERTISEMENT

ದ್ರುಪದ್‌ಗೆ ಸೂಕ್ತವಾದ ಬೀನ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST
ದ್ರುಪದ್‌ಗೆ ಸೂಕ್ತವಾದ ಬೀನ್
ದ್ರುಪದ್‌ಗೆ ಸೂಕ್ತವಾದ ಬೀನ್   

ರುದ್ರವೀಣೆ ಅಥವಾ ಬೀನ್ ಎಂಬ ವಾದ್ಯ ಭಾರತೀಯ ಸಂಗೀತ ಮೂಲದ್ದೇ ಆಗಿದ್ದರೂ ವಿರಳಾತಿ ವಿರಳ ವಾದ್ಯಗಳ ಗುಂಪಿಗೆ ಸೇರಿದ್ದು. ಇದನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರವೇ ಬಳಸುತ್ತಿದ್ದು, ಬೀನ್ ನುಡಿಸುವವರೂ ಕಡಿಮೆ, ಕಲಿಸುವವರೂ ಸಿಗುವುದು ಅಪರೂಪ; ಜತೆಗೆ ವಾದ್ಯವೂ ಸುಲಭದಲ್ಲಿ ಸಿಗುವಂಥದ್ದಲ್ಲ.

ರುದ್ರವೀಣೆ ತಂತಿ ವಾದ್ಯ. ಅತ್ಯಂತ ಪ್ರಾಚೀನ ವಾದ್ಯವೂ ಹೌದು. ಬೀನ್ ಅಥವಾ ರುದ್ರವೀಣೆಯ ನಾದ ಮಾತ್ರ ಹೆಚ್ಚು ಕಡಿಮೆ ಸಿತಾರನ್ನು ಹೋಲುತ್ತದೆ. ಅಲ್ಲದೆ ರುದ್ರವೀಣೆ ನುಡಿಸಬೇಕಾದರೆ ಸಿತಾರ್ ಜ್ಞಾನ ಬಹಳ ಮುಖ್ಯ. ಎಲ್ಲ ವಾದ್ಯಗಳಂತೆ ಕಠಿಣ ಪರಿಶ್ರಮ, ಸತತ ಅಭ್ಯಾಸ ಇದ್ದರೆ ಮಾತ್ರ ಒಲಿಯುತ್ತದೆ. ಇದರಲ್ಲಿ ಪಳಗಿದರೆ ಮಾತ್ರ ಎಲ್ಲ ರಾಗಗಳನ್ನು ಸರಾಗವಾಗಿ ನುಡಿಸಬಹುದು. ಆದರೂ ಶಾಸ್ತ್ರೀಯ ಸಂಗೀತ ಪ್ರಕಾರದ ದ್ರುಪದ್ ಮತ್ತು ಖ್ಯಾಲ್‌ಗೆ ಅತ್ಯಂತ ಸೂಕ್ತವಾದ ವಾದ್ಯ ಬೀನ್.

ಭಾರತೀಯ ಶಾಸ್ತೀಯ ಸಂಗೀತದ ವೀಣೆ ಪ್ರಕಾರಗಳಲ್ಲಿ ಬರುವ ವಿಚಿತ್ರ ವೀಣೆ, ಸರಸ್ವತಿ ವೀಣೆ, ಚಿತ್ರವೀಣೆಗಳಿಗಿಂತಲೂ ಈ ರುದ್ರವೀಣೆ ನಾದ ಮತ್ತು ಸ್ವರೂಪದಲ್ಲಿ  ವಿಭಿನ್ನವಾದದ್ದು. ರುದ್ರವೀಣೆ ಮತ್ತು ವಿಚಿತ್ರ ವೀಣೆಯನ್ನು ಉತ್ತರ ಭಾರತ ಭಾಗದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಬಳಸಿದರೆ ಚಿತ್ರವೀಣೆ ಮತ್ತು ಸರಸ್ವತಿ ವೀಣೆಯನ್ನು ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತದಲ್ಲಿ ಬಳಸುವುದು ಪದ್ಧತಿ.

ADVERTISEMENT

ರುದ್ರವೀಣೆಯ ಪೌರಾಣಿಕ ಇತಿಹಾಸ ರೋಚಕ. ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿಯನ್ನು ನೋಡಿ ರೂಪಿಸಿದ ವಿಶಿಷ್ಟ ವಾದ್ಯ ಇದು ಎನ್ನುತ್ತದೆ ಪುರಾಣ. `ರುದ್ರವೀಣೆಯನ್ನು ಮಂದ್ರ, ಅತಿಮಂದ್ರ ಮತ್ತು ಮಧ್ಯ ಸಪ್ತಕದಲ್ಲಿ ನುಡಿಸಬಹುದು. ತಾರ ಸಪ್ತಕದಲ್ಲಿ ನುಡಿಸುವುದು ಬಹಳ ಅಪರೂಪ. ಅಲ್ಲದೆ ಇದು ದ್ರುಪದ್ ಶೈಲಿಯ ವಾದನಕ್ಕೆ ಸೂಕ್ತವಾದ ವಾದ್ಯ. ಖ್ಯಾಲ್ ಮತ್ತು ದ್ರುಪದ್ ಎರಡನ್ನೂ ನುಡಿಸಬಹುದು. ಖ್ಯಾಲ್ ನುಡಿಸುವಾಗ ಸಂಕ್ಷಿಪ್ತ ಆಲಾಪವೂ ಜೊತೆಗಿದ್ದರೆ ರುದ್ರವೀಣೆ ಇನ್ನೂ ರಂಜಿಸುತ್ತದೆ~ ಎನ್ನುತ್ತಾರೆ ರುದ್ರವೀಣೆಯಲ್ಲಿ ಅಪರೂಪದ ಕಲಾವಿದರಲ್ಲಿ ಒಬ್ಬರಾದ ಶಿರಸಿಯ ಪಂ. ರಾಮಚಂದ್ರ ವಿಶ್ವನಾಥ ಹೆಗಡೆ (ಆರ್.ವಿ. ಹೆಗಡೆ).

`ರುದ್ರವೀಣೆ ಜತೆಗೆ ಪಖಾವಾಜ್ ಸಾಥಿ ವಾದ್ಯ ಚೆನ್ನಾಗಿ ಒಪ್ಪುತ್ತದೆ. ಆದರೆ ಈಗ ಪಖಾವಾಜ್ ಕಲಾವಿದರು ಸಿಗದೇ ಇರುವ ಕಾರಣ ತಬಲಾ ಸಾಥಿ ಕೊಡುವುದು ರೂಢಿಯಾಗಿದೆ. ರುದ್ರವೀಣೆ ನುಡಿಸಬೇಕಾದರೆ ಮೊದಲು ಸಿತಾರ್ ಕಲಿಯಬೇಕು. ಏಕೆಂದರೆ ಸಿತಾರ್ ವಾದ್ಯದ ಅನೇಕ ಗುಣಲಕ್ಷಣಗಳನ್ನು ಬೀನ್‌ನಲ್ಲೂ ಕಾಣಬಹುದು~ ಎನ್ನುತ್ತಾರೆ ಪಂ. ಆರ್.ವಿ. ಹೆಗಡೆ.

ಈ ವಾದ್ಯ ಗಾತ್ರದಲ್ಲಿ ಉದ್ದವಾಗಿದ್ದು, ಅಂದಾಜು 54ರಿಂದ 62 ಇಂಚು ಇರುತ್ತದೆ. ಇದರ ದಂಡಿಯನ್ನು ಮರ ಅಥವಾ ಬಿದಿರಿನಿಂದ ತಯಾರಿಸಲಾಗುತ್ತದೆ. ಉರುಟಾದ ಎರಡು ಸೋರೆಕಾಯಿ ಬುರುಡೆಗಳು ಕೆಳಭಾಗದಲ್ಲಿರುತ್ತವೆ. ವ್ಯಾಕ್ಸ್‌ನ ಸಹಾಯದಿಂದ 24 ತಾಮ್ರ ಮಿಶ್ರಿತ ಮರದ ಕುಸುರಿ ಕೆಲಸದಿಂದ ಮಾಡಿದ ಟ್ಯೂಬ್‌ಗಳನ್ನು ಕೆಲವು ಬೀನ್‌ಗಳಲ್ಲಿ ಅಳವಡಿಸಲಾಗಿರುತ್ತದೆ. ಸಾಮಾನ್ಯವಾಗಿ ಎಲ್ಲ ರುದ್ರವೀಣೆಗಳಲ್ಲಿ ನಾಲ್ಕು ಮುಖ್ಯ ಮತ್ತು ಮೂರು `ಚಿಕಾರಿ~ ತಂತಿಗಳಿರುತ್ತವೆ.

ರುದ್ರವೀಣೆಯಲ್ಲಿ ದಿ. ಲಾಲ್‌ಮಣಿ ಮಿಶ್ರಾ ಅವರು ಅನೇಕ ಪ್ರಯೋಗಗಳನ್ನು ಮಾಡಿದ್ದು, ಷಡ್ಜವನ್ನು ಸೇರಿಸಿ ಒಟ್ಟು 22 ಶ್ರುತಿಗಳನ್ನು ಅಳವಡಿಸಿದ್ದರು. ಜಿಯಾ ಮೊಹಿಯುದ್ದೀನ್ ಡಾಗರ್ ರುದ್ರವೀಣೆಯನ್ನು ಅತ್ಯಂತ ಜನಪ್ರಿಯಗೊಳಿಸಿದ ಹಿರಿಯ ಕಲಾವಿದರು. ನಂತರ ಅಸಾದ್ ಅಲಿ ಖಾನ್ ಈ ವಾದ್ಯವನ್ನು ಮತ್ತಷ್ಟು ಸುಧಾರಿಸಿದರು. ಇವರ ಬಳಿಕ ಶಂಷುದ್ದೀನ್ ಫರಿದಿ ದೇಸಾಯಿ, ಬಹಾವುದ್ದೀನ್ ಡಾಗರ್ ಮತ್ತು ಬೀನ್‌ಕರ್ ಸುವಿರ್ ಮಿಶ್ರಾ ಈ ವಾದ್ಯವನ್ನು ನುಡಿಸುತ್ತಿದ್ದ ಕಲಾವಿದರು. ಕರ್ನಾಟಕದಲ್ಲಿ ಹುಬ್ಬಳ್ಳಿಯ ದಿ. ಪಂ.ಬಿಂದು ಮಾಧವ್ ಪಾಠಕ್ ಹೆಸರಾಂತ ಕಲಾವಿದರಾಗಿದ್ದರು. ಈಗ ಅವರ ಮಗ ಶ್ರೀಕಾಂತ ಪಾಠಕ್ ಬೀನ್ ವಾದ್ಯ ನುಡಿಸುತ್ತಿರುವ ಉತ್ತಮ ಕಲಾವಿದರು. ಮಹಿಳೆಯರಲ್ಲಿ ಜ್ಯೋತಿ ಹೆಗಡೆ ಒಬ್ಬರೇ ರುದ್ರವೀಣೆ ನುಡಿಸುವ ಕಲಾವಿದೆ. ಸದ್ಯ ಆರ್.ವಿ. ಹೆಗಡೆ ಅವರ ಮಗ ಸುಬ್ರಹ್ಮಣ್ಯ ಹೆಗಡೆ ಅವರೂ ರುದ್ರವೀಣೆ ಕಲಿತು ಕಛೇರಿ ಕೊಡುವಷ್ಟರ ಮಟ್ಟಿಗೆ ಪಳಗಿದ್ದಾರೆ. 

ಉತ್ತಮ ಗುಣಮಟ್ಟದ ರುದ್ರವೀಣೆ ಮೀರಜ್, ದೆಹಲಿ, ಕೋಲ್ಕತ್ತಗಳಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಈ ವಾದ್ಯ ಲಭ್ಯವಿಲ್ಲ. ಬೆಲೆ ಅಂದಾಜು 30 ಸಾವಿರ ರೂಪಾಯಿ.
ರುದ್ರವೀಣೆ ಅಥವಾ ಬೀನ್  ಕಲಿಯಬೇಕೆನ್ನುವ ಆಸಕ್ತರು ಪಂ. ಆರ್.ವಿ. ಹೆಗಡೆ ಅವರನ್ನು 08384 237787 ನಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.