ರಣ ರಣ ಬಿಸಿಲು ಸಣ್ಣಗೆ ಸರಿದು ಸಂಜೆಯ ಸುಳಿಗಾಳಿಗೆ ಬೆಂಗಳೂರು ಮೈಯೊಡ್ಡಿ ನಿಂತ ಇಳಿ ಸಂಜೆ. ನಗರದ ನವ ಕರ್ನಾಟಕ ಪ್ರಕಾಶನದಲ್ಲಿ ಪುಸ್ತಕಗಳ ರಾಶಿಯ ನಡುವೆ ಮಾತಿಗೆ ಸಿಕ್ಕರು ಖ್ಯಾತ ಲೇಖಕಿ ನೂರ್ ಜಾಹೀರ್. ಸಂಶೋಧನೆ, ಚಳವಳಿ ಹಾಗೂ ಬರವಣಿಗೆಗಳ ನಡುವಿನ ಅವರ ಭಾವ–ಬವಣೆಗಳ ಒಳನೋಟ ಇಲ್ಲಿದೆ...
ನೂರ್ ಜಾಹೀರ್ ಎಂದರೆ ನೆನಪಾಗುವುದು ‘ಮೈ ಗಾಡ್ ಈಸ್ ಎ ವುಮನ್’ ಮತ್ತು ‘ಡಿನೈಡ್ ಬೈ ಅಲ್ಲಾ’. ಲೇಖಕಿಗೆ ಹೆಸರು ತಂದು ಕೊಟ್ಟ, ಚಿಂತನೆಗೂ ಹಚ್ಚಿದ, ಅವಮಾನ, ಆತಂಕ, ದುಗುಡದ ಕಿಚ್ಚು ಹಚ್ಚಿದ ಪುಸ್ತಕಗಳಿವು.
‘ಈ ಪುಸ್ತಕಗಳ ಒಳಸುಳಿಗಳನ್ನು ಪ್ರಗತಿಪರ ಚಿಂತಕರು ಗುರುತಿಸಿದರು, ಪ್ರೋತ್ಸಾಹಿಸಿದರು, ಮೆಚ್ಚಿದರು. ಅದೇ ವೇಳೆ ಮುಸ್ಲಿ ಮುಖಂಡರಿಂದ, ಮೌಲ್ವಿಗಳಿಂದ ಸಾಕಷ್ಟು ತಿರಸ್ಕಾರ, ಅವಮಾನ ಎದುರಿಸಿದ್ದೂ ಇದೆ. ಆದರೆ ‘ಅಬ್ಬಾ’ ಯಾವಾಗಲೂ ಹೇಳುತ್ತಿದ್ದರು, ಸತ್ಯಕ್ಕೆ ತುಸು ತಡವಾಗಿಯೇ ಜಯ ಸಿಗುವುದು ಎಂದು. ಅದೇ ನನ್ನಲ್ಲಿ ಧೈರ್ಯ ತುಂಬಿ ಮುನ್ನಡೆಯುವಂತೆ ಮಾಡಿದ್ದು’ ಎನ್ನುತ್ತಾರೆ ನೂರ್.
ಪ್ರಬಲ ಸ್ತ್ರೀವಾದಿಯಾಗಿ ಗುರುತಿಸಿಕೊಂಡಿರುವ ನೂರ್ ಜಾಹೀರ್, ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಸಾಕಷ್ಟು ಸಾಹಿತ್ಯ ಪ್ರಕಾರಗಳಿಗೆ ಪೆನ್ನು ಹಿಡಿದವರು. ಸಣ್ಣ ಕಥೆಗಳ ಮೂಲಕ ಆರಂಭವಾದ ಅವರ ಬರಹ, ಬದುಕು ಮುಂದೆ ನಾಟಕ, ಕಾದಂಬರಿ, ಭಾಷಾಂತರ, ಸಂಪಾದನೆ, ಸಂಶೋಧನಾ ಬರಹಗಳ ತನಕ ಅನೇಕ ಆಯಾಮಗಳನ್ನು ಪಡೆದುಕೊಂಡಿತು.
ಅಬ್ಬಾ–ಅಮ್ಮಾ ಹಾಕಿಕೊಟ್ಟ ಅಡಿಪಾಯ
ತಮ್ಮ ಸಾಹಿತ್ಯ ಕೃಷಿ, ಚಳವಳಿ, ಸಂಶೋಧನೆಗಳೆಲ್ಲ ತಂದೆ ಸಜ್ಜಾದ್ ಜಾಹೀರ್ ಹಾಗೂ ತಾಯಿ ರಜಿಯಾ ಸಜ್ಜಾದ್ ಜಾಹೀರ್ ಹಾಕಿಕೊಟ್ಟ ಅಡಿಪಾಯದ ಮೇಲೆ ಬೆಳೆದು ನಿಂತ ಗಿಡಗಳು ಎನ್ನುತ್ತಾರೆ ನೂರ್. ಆರಂಭದಲ್ಲಿಯೇ ಸಾಹಿತ್ಯ ತಮ್ಮ ಬದುಕಿನಲ್ಲಿ ತುಂಬಿಕೊಳ್ಳುತ್ತ ಹೋದ ಬಗೆಯನ್ನು ನೂರ್ ಹೇಳಿದ್ದು ಹೀಗೆ–
‘ಆಗಿನ್ನೂ ನನಗೆ 9 ವರ್ಷವಿರಬಹುದು. ಮನೆಯಲ್ಲಿ ಮಾತು, ಕಥೆ, ಚಿಂತನೆ ಎಲ್ಲೆಲ್ಲೂ ಸಾಹಿತ್ಯವೇ. ಅಪ್ಪ ಮಾರ್ಕ್ಸ್‌ವಾದಿ ಚಿಂತಕ, ಅಮ್ಮ ಬರಹಗಾರ್ತಿ. ಮುಸ್ಲಿಂ ಕುಟುಂಬವಾಗಿದ್ದರೂ ಮನೆಯಲ್ಲಿ ಪ್ರಗತಿಪರ ವಾತಾವರಣವಿತ್ತು. ಅಬ್ಬಾ ತಮ್ಮ ನಾಲ್ಕೂ ಜನ ಹೆಣ್ಣು ಮಕ್ಕಳ ಮೇಲೆ ಯಾವತ್ತೂ ಧರ್ಮವನ್ನು ಹೇರಲಿಲ್ಲ. ಆ ಕಾಲದಲ್ಲಿಯೇ ಅಬ್ಬಾ ಬುರ್ಕಾ ಪದ್ಧತಿಯನ್ನು ವಿರೋಧಿಸುತ್ತಿದ್ದರು. ನಮ್ಮ ಸಮುದಾಯದ ಹೆಣ್ಣು ಮಕ್ಕಳಿಗೆ ಅವರಿಷ್ಟದ ಬಟ್ಟೆ ತೊಡುವ ಹಕ್ಕೂ ಇಲ್ಲವೇ ಎಂದು ಅವರು ಆಕ್ರೋಶ ಪಡುತ್ತಿದ್ದರು.
ದೆಹಲಿಯ ಆರು ಜನರಿರುವ ಪುಟ್ಟ ಮನೆಯಲ್ಲಿ ಬಂದು ಹೋಗುತ್ತಿದ್ದ ಅಬ್ಬ–ಅಮ್ಮಾ ಸ್ನೇಹಿತರೆಲ್ಲ ಸಾಹಿತಿಗಳೇ. ಖ್ಯಾತ ಸಾಹಿತಿ ಫಿರಾಕ್ ಗೋರಖ್‌ಪುರಿ ಎಂಬ ಕಾವ್ಯನಾಮದ ರಘುಪತಿ ಸಹಾಯ್, ಉರ್ದು ಲೇಖಕಿ ಇಸ್ಮತ್ ಚುಗ್ತಾಯ್, ಕವಯಿತ್ರಿ ಕೈಫಿ ಆಜ್ಮಿ, ಆರ್.ಕೆ.ನಾರಾಯಣ ಸೇರಿದಂತೆ ಅನೇಕರು ಮನೆಗೆ ಬರುತ್ತಿದ್ದರು. ಅವರ ಮಾತು, ಚರ್ಚೆ, ಸಂವಾದಗಳನ್ನು ಕೇಳುತ್ತ ಸಾಹಿತ್ಯ ಎನ್ನುವುದು ನನ್ನೊಳಗೆ ಒಂದು ಸ್ಪಷ್ಟ ರೂಪ ಪಡೆಯುತ್ತ ಹೋಯಿತು. ನನ್ನೆದುರು ಸಾಹಿತ್ಯ ಬಿಟ್ಟರೆ ಬೇರೆ ಮಾರ್ಗವೇನಿತ್ತು ಹೇಳಿ...
‘ಸತ್ಯವನ್ನು ಬರೆಯ ಹೊರಟ ದಾರಿಯಲ್ಲಿ ಅಡೆ–ತಡೆಗಳು, ಅವಮಾನಗಳು ನಿರೀಕ್ಷಿತ. ಅಂಥವುಗಳಿಗೆ ಭಯ ಪಡಬೇಡ, ಎದೆಗುಂದಬೇಡ. ನೀನು ಮಾಡುತ್ತಿರುವುದು ಸರಿ ಎನ್ನುವುದು ನಿನ್ನ ಮನಸ್ಸಿಗೆ ಗೊತ್ತಿದ್ದರೆ ಸಾಕು. ಜಗತ್ತಿಗೆ ನಿಧಾನಕ್ಕೇ ತಿಳಿಯಲಿ ಬಿಡು...’ ಎಂದ ಅಬ್ಬಾಜಾನ್ ಮಾತುಗಳು ಇಂದಿಗೂ ಕಿವಿಯಲ್ಲಿ ಧ್ವನಿಸುತ್ತವೆ. ಲಾಹೋರ್‌ನ ಅಸ್ಮಾ ಎನ್ನುವ ಹುಡುಗಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಕರೆಗಳು ಬಂದಾಗ ಅಬ್ಬಾ ಹೇಳಿದ ಮಾತುಗಳನ್ನೇ ನೆನೆಸಿಕೊಂಡು ಧೈರ್ಯ ತಂದುಕೊಂಡಿದ್ದೇನೆ’. ಹೀಗೆ ಮಾತನಾಡುವ ದಿಟ್ಟ ಲೇಖಕಿ ನೂರ್ ಮಾತಿನ ಇನ್ನಷ್ಟು ನೇರ ನುಡಿಗಳು ಪ್ರಶ್ನೋತ್ತರದಲ್ಲಿ...
ನಿಮ್ಮ ಸಾಹಿತ್ಯದ ಮೊದಲ ಹೆಜ್ಜೆ...
ಯಾವಾಗ ಬರೆಯಲು ಆರಂಭಿಸಿದೆ ಎನ್ನುವುದು ನೆನಪಿಲ್ಲ. ನಾನು ಬರೆದು ಬಿಸಾಕಿದ್ದನ್ನು ಅಮ್ಮ ಎತ್ತಿಕೊಂಡು ಓದುತ್ತಿದ್ದುದೂ ಇದೆ. ಒಂಬತ್ತನೇ ವರ್ಷದಲ್ಲಿ ಅಂದಿನ ‘ಖಿಲೋನಾ’ ಎನ್ನುವ ಮಕ್ಕಳ ನಿಯತಕಾಲಿಕೆಯೊಂದರಲ್ಲಿ ಮೊದಲ ಕಥೆ ಪ್ರಕಟವಾಗಿತ್ತು. ಆ ಹೊತ್ತಿಗೆ ಅಮ್ಮ–ಅಪ್ಪ ಸಾಕಷ್ಟು ಹೆಸರು ಮಾಡಿದ್ದರು. ನನ್ನ ಬರಹ ಹೇಗಿದೆಯೋ ಎನ್ನುವ ಅಳುಕಿತ್ತು. ಅಪ್ಪ ತುಂಬಾ ಖುಷಿ ಪಟ್ಟರು. ಅಮ್ಮ ಅದರಲ್ಲಿನ ಕೆಲವು ತಪ್ಪುಗಳನ್ನು ಹುಡುಕಿ ಹೇಳಿದರು.
ಮಾರ್ಕ್ಸ್‌ವಾದದ ಬಗ್ಗೆ ಒಲವು ಬೆಳೆದಿದ್ದು?
ನನಗಾಗ 12 ವರ್ಷ. ಅಪ್ಪ ನಿಧಾನಕ್ಕೆ ಮಾರ್ಕ್ಸ್‌ವಾದದ ಬಗ್ಗೆ ತಿಳಿಸಲು ಆರಂಭಿಸಿದ್ದರು. ಅವರು ಮಾರ್ಕ್ಸ್‌ವಾದವನ್ನು ನನ್ನ ಮೇಲೆ ಹೇರಲಿಲ್ಲ. ಮಾರ್ಕ್ಸ್‌ವಾದ ಎಂದರೆ ಏನು ಎನ್ನುವುದನ್ನು ತಿಳಿಸಿದರಷ್ಟೆ. ಮುಸ್ಲಿಂ ಮಹಿಳೆಯರ ಮೇಲೆ ಧರ್ಮದ ಹೆಸರಿನಲ್ಲಿ ಎಷ್ಟೆಲ್ಲ ಅನ್ಯಾಯ ನಡೆಯುತ್ತಿದೆ, ಹೇಗೆಲ್ಲ ಅವರ ಭಾವನೆಗಳನ್ನು, ಬದುಕನ್ನೂ ತಮ್ಮ ಅಗತ್ಯ–ಅನಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದನ್ನೂ ಹೇಳುತ್ತಿದ್ದರು. ಹೆಣ್ಣು ಮಕ್ಕಳು ಯಾವುದನ್ನು ಪ್ರಶ್ನಿಸಬಾರದು ಎಂಬ ಬಗ್ಗೆ ಮೌಲ್ವಿಗಳಲ್ಲಿ ಒಂದು ದೊಡ್ಡ ಪಟ್ಟಿಯೇ ಇದೆ. ಆದರೆ ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡ ಎಂದು ಅಪ್ಪ ಹೇಳುತ್ತಿದ್ದರು.
ದಾಂಪತ್ಯದ ನಡುವೆ ‘ಹಿಂದೂ–ಮುಸ್ಲಿಂ’ ಎನ್ನುವ ಖಳ ನುಗ್ಗಲಿಲ್ಲವೇ?
ನನ್ನ ಪತಿ ಅಮಿತಾಭ್ ದಾಸ್ ಗುಪ್ತಾ ಹಿಂದೂ. ಆದರೆ ನಮ್ಮ ಸ್ನೇಹದಲ್ಲಿ, ಪ್ರೀತಿಯಲ್ಲಿ, ಸಂಬಂಧದಲ್ಲಿ ಯಾವತ್ತೂ ಧರ್ಮ ನಡುವೆ ಬರಲಿಲ್ಲ. ಧರ್ಮ ಬೇರೆ ಬೇರೆ ಆಗಿದ್ದರೂ, ನಂಬಿಕೆ ಒಂದೇ ಆಗಿತ್ತು. ಅವರು ನನ್ನ ಮೇಲೆ ಯಾವತ್ತೂ ಒತ್ತಡ ಹೇರಲಿಲ್ಲ. ನಾನೂ ಅಷ್ಟೇ. ನನಗೆ ಇಷ್ಟವಾದಾಗ ಹಣೆಗೆ ಕುಂಕುಮವನ್ನೂ ಇಟ್ಟದ್ದಿದೆ. ಆದರೆ ನನಗೆ ಇಷ್ಟವಿದ್ದಾಗ ಮಾತ್ರ.
ಭಾರತ–ಪಾಕಿಸ್ತಾನ–ಬಾಂಗ್ಲಾದೇಶದ ಸುತ್ತಿ ಬಂದಿದ್ದೀರಿ. ಮಹಿಳೆಯರ ಸ್ಥಿತಿ–ಗತಿ ಎಲ್ಲೆಲ್ಲಿ ಹೇಗ್ಹೇಗಿದೆ?
ಭಾರತದಲ್ಲಿ ಮಹಿಳೆಯರ ಪಾಡು ನೂರು ಪಟ್ಟು ಉತ್ತಮ. ಓದುತ್ತಿದ್ದಾರೆ, ನೌಕರಿ ಮಾಡುತ್ತಾರೆ, ಸ್ವತಂತ್ರರಾಗಿದ್ದಾರೆ. ಪಾಕಿಸ್ತಾನ–ಬಾಂಗ್ಲಾದೇಶಗಳಲ್ಲಿ ಮಹಿಳೆಯರ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಸೂರ್ಯ ಸಂಪೂರ್ಣವಾಗಿ ಮುಳುಗಿ, ಕತ್ತಲು ಕವಿಯುವ ಮೊದಲು ಬದಲಾವಣೆಯ ಗಾಳಿ ಬೀಸಬೇಕು, ಅವರನ್ನು ಬೆಳಕಿನೆಡೆಗೆ ಕರೆತರಬೇಕು. ಅದಕ್ಕಾಗಿ ಮುಸ್ಲಿಮರಷ್ಟೇ ಅಲ್ಲ, ಎಲ್ಲಾ ಮಹಿಳೆಯರೂ ಚಳವಳಿಯ ರೂಪದಲ್ಲಿ ಒಗ್ಗಟ್ಟಾಗಿ ದನಿ ಎತ್ತಬೇಕು.
ನೀವು ಬುರ್ಕಾ ಧರಿಸುವುದಿಲ್ಲ?
ಇಲ್ಲ, ನನಗೆ ಸರಿ ಕಾಣದ್ದನ್ನು ನಾನು ಯಾವತ್ತೂ ಮಾಡುವುದಿಲ್ಲ. ಬುರ್ಕಾ ಇತ್ತೀಚಿನ ವರ್ಷಗಳಲ್ಲಿ ಹೊಸ ರೂಪ, ಹೊಸ ಶೈಲಿ, ಹೊಸ ಆಕಾರ ಪಡೆದು ಮರಳಿ ಬಂದಿದೆ ಎನ್ನುವುದೇ ನನ್ನ ಆತಂಕ. ಮೆಟ್ರೊ ನಗರಗಳ ಮಾಡರ್ನ್ ಯುವತಿಯರೂ ಸಹ ಬುರ್ಕಾ ಧರಿಸುತ್ತಾರೆ, ಆದರೆ ಹೊಸ ಟ್ರೆಂಡ್‌ಗಳಲ್ಲಿ. ಬುರ್ಕಾದಲ್ಲಿ ಬದಲಾವಣೆ ತಂದುಕೊಳ್ಳುವ ಬದಲು ಮನಸ್ಥಿತಿಯಲ್ಲಿ ಬದಲಾವಣೆ ತಂದುಕೊಂಡು ನೋಡಿ ಎನ್ನುವುದು ನನ್ನ ವಿನಂತಿ.
ಬೆಂಗಳೂರು ಹೇಗನ್ನಿಸುತ್ತಿದೆ?
ಸುಮಾರು ಮೂರು ದಶಕಗಳ ಹಿಂದೆ ಪತಿ ಅಮಿತಾಭ್ ಜೊತೆ ಬೆಂಗಳೂರಿಗೆ ಬಂದಿದ್ದೆ. ನೋಡಿದಲ್ಲೆಲ್ಲ ಗಿಡವೇ ಗಿಡ. ತಂಪಾದ ಗಾಳಿ. ಇಷ್ಟೊಂದು ವಾಹನ ದಟ್ಟಣೆ ಇರಲಿಲ್ಲ. ಈಗ ಬೆಂಗಳೂರು ಬದಲಾಗಿದೆ. ಆದರೂ ಇಷ್ಟವಾಗುತ್ತಿದೆ.
ಕಾನೂನು ಬೇರೆ, ಧರ್ಮ ಬೇರೆ
ಧರ್ಮವೇ ಬೇರೆ, ಕಾನೂನೇ ಬೇರೆ. ದಯವಿಟ್ಟು ಎರಡನ್ನೂ ಬೇರೆ ಮಾಡಿ ಎನ್ನುವುದೇ ನನ್ನ ಕೂಗು. ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ಕೆಟ್ಟ ರೀತಿಯ ದೌರ್ಜನ್ಯ ನಡೆಯುತ್ತಿದೆ. ‘ಧರ್ಮಕ್ಕೆ ಅವಮಾನ’ ಮಾಡಿದ ಆರೋಪದ ಮೇಲೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಇದನ್ನೆಲ್ಲ ತಡೆಯಲೇಬೇಕು. ಸಮಯ ಕೈ ಮೀರಿ ಹೋಗುವ ಮೊದಲು ಬದಲಾವಣೆ ತರೋಣ. ಅದಕ್ಕೆ ಧರ್ಮ–ಜಾತಿ, ಲಿಂಗದ ಬೇಧ ಮರೆತು ಎಲ್ಲರೂ ಕೈಜೋಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.