ಕಲಾಕೃತಿ ಒಂದು ಕಲಾಪ್ರಕಾರ ಮಾತ್ರವಲ್ಲ. ಅದು ಧ್ಯಾನಸ್ಥ ಮನಸ್ಸಿನ ಒಂದು ಆಳವಾದ ಪ್ರಾರ್ಥನೆ ಎನ್ನುವುದು ಕಲಾವಿದೆ ಅನುರಾಧಾ ಮಲಿಕ್ ಕಂಡುಕೊಂಡ ಸತ್ಯ. ದೈವ ಶಕ್ತಿಯನ್ನು ಒಲಿಸಿಕೊಳ್ಳಲು ಬೇಕಾದಂತಹ ಭಕ್ತಿ–ಪ್ರೀತಿ, ಆರಾಧನೆ ಇಲ್ಲಿಯೂ ಬೇಕು ಎನ್ನುವುದು ಅವರು ಕೊಡುವ ವಿವರಣೆ. ಚಂಡೀಗಡದವರಾದ ಅನುರಾಧಾ ಸುತ್ತಿದ ಊರುಗಳಿಗೆ, ಅಲೆದ ನಾಡುಗಳಿಗೆ ಲೆಕ್ಕವೇ ಇಲ್ಲ. ಆದರೆ ವಿವಾಹವಾದ ಮೇಲೆ ಅವರು ನೆಲೆ ಕಂಡುಕೊಂಡಿದ್ದು ಬೆಂಗಳೂರಿನಲ್ಲಿಯೇ.
‘ಚಿಕ್ಕಂದಿನಿಂದ ಚಿತ್ರ ಬಿಡಿಸುವುದರಲ್ಲಿ ಅದೇನೊ ಖುಷಿ. ಚಿತ್ರ ಬಿಡಿಸುತ್ತ ಕೂತಷ್ಟೂ ಹೊತ್ತು ಧ್ಯಾನದಲ್ಲಿ ಮುಳುಗಿದಂತಹ ತೃಪ್ತ ಭಾವ. ಅಮ್ಮ ಪೂಜೆ ಮಾಡುವ ಎಲ್ಲಾ ದೇವರನ್ನೂ ಕಣ್ಣಲ್ಲೇ ಸೆರೆಹಿಡಿದುಕೊಂಡು ಕ್ಯಾನ್ವಾಸ್‌ಗೆ ಇಳಿಸುತ್ತಿದ್ದೆ’ ಎನ್ನುವ ಅನುರಾಧಾ ಅವರಿಗೆ ಇಂದಿಗೂ ದೇವರ ಚಿತ್ರಪಟಗಳನ್ನು ರಚಿಸುವ ಕಾಯಕ ಎಂದರೆ ಭಾವಬಂಧಿ.
ಕಲೆ ಹುಟ್ಟಿನಿಂದಲೇ ಬಂದರೂ ಅದಕ್ಕೆ ನಿರ್ದಿಷ್ಟ ರೂಪುರೇಷೆ ನೀಡಿ, ಅದನ್ನೊಂದು ವಿಶಿಷ್ಟ ಕೃತಿಯಾಗಿ ರೂಪಿಸುವಲ್ಲಿ ಶಾಸ್ತ್ರಬದ್ಧ ಕಲಿಕೆಯ ಅಗತ್ಯವಿದೆ ಎನ್ನುತ್ತಾರೆ ಅವರು. ‘ಬದಲಾದ ಕಾಲಮಾನದಲ್ಲಿ ಕಲೆಗೂ ಒಂದು ತಂತ್ರಗಾರಿಕೆ ಬೇಕು. ಸರಿಯಾದ ವಿಧಾನದ ಅಗತ್ಯವೂ ಇರುತ್ತದೆ. ಅಲ್ಲದೇ ಮಾರುಕಟ್ಟೆಯ ಜ್ಞಾನವೂ ಮುಖ್ಯ. ಇವೆಲ್ಲ ನಮಗೆ ಕಲಾ ಶಾಲೆಗಳಲ್ಲಿ ಸಿಗುತ್ತವೆ. ಚಿತ್ರ ಬಿಡಿಸುವ ಪ್ರೀತಿ ತಿಳಿವಳಿಕೆ ಬರುವ ಮುನ್ನವೇ ನನ್ನೊಳಗಿತ್ತು.
ಕೆಲವು ಕಲಾ ನಿಯಮಗಳನ್ನು, ತಂತ್ರಗಳನ್ನು ಅರಿಯಲು ತರಬೇತಿಯ ಅಗತ್ಯ ಖಂಡಿತ ಇತ್ತು. ಪೇಂಟಿಂಗ್ ಮಾಡುವಾಗ ಮೊದಲು ದಪ್ಪ ‘ಕೋಟ್’ ಹಾಕಬೇಕು, ನಂತರ ತೆಳುವಾದ ‘ಕೋಟ್’ ಹಾಕಬೇಕು. ಒಂದು ವೇಳೆ ಮೊದಲೇ ತೆಳುವಾದ ‘ಕೋಟ್’ ಹಾಕಿ, ಅದರ ಮೇಲೆ ದಪ್ಪ ‘ಪೇಂಟ್’ ಹಾಕಿದರೆ ಬಹಳ ಬೇಗ ಬಿರುಕು ಬರುತ್ತದೆ. ಇಂಥವನ್ನೆಲ್ಲ ನಾವು ಪರಿಣತರಿಂದಲೇ ತಿಳಿದುಕೊಳ್ಳಲು ಸಾಧ್ಯ. ಅಂಥವರ ಸಂಪರ್ಕ ಬರುವುದು ಕಲಾ ಶಾಲೆ/ಕಾಲೇಜುಗಳಲ್ಲಿಯೇ’ ಎನ್ನುತ್ತಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ‘ಅನುಕರಣೆ ಹಾಗೂ ತದ್ರೂಪಗಳ’ ಜಿಜ್ಞಾಸೆ ಚಿತ್ರಕಲೆಯಲ್ಲಿಯೂ ಇದೆ ಎನ್ನುವ ಅವರು, ‘ಅನುಕರಣೆಯೇ ಚಿತ್ರಕಲೆಯ ಜೀವಾಳ’ ಎಂದು ನಂಬಿದ್ದಾರೆ. ಅದರಲ್ಲಿಯೇ ಸ್ವಂತಿಕೆ ಇರಬೇಕು, ವೈವಿಧ್ಯ ತರಬೇಕು ಎನ್ನುವುದು ಅವರು ನೀಡುವ ಸಲಹೆಗಳು.
‘ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಾಲ್ ಒಂದರಲ್ಲಿ ಮಾರಾಟಕ್ಕಿಟ್ಟ ಪೇಂಟಿಂಗ್‌ಗಳನ್ನು ನೋಡಿದೆ. ಅವುಗಳ ಬೆಲೆ ನೋಡಿ ನಿಜಕ್ಕೂ ದಿಗಿಲಾಯಿತು. ಅವು ಬಹುಶಃ ಮಾರುಕಟ್ಟೆಗೆಂದೇ ಸಿದ್ಧವಾದ ಪೇಂಟಿಂಗ್ ಇರಬಹುದು. ಅದರಲ್ಲಿ ಜೀವಂತಿಕೆ ಅಭಾವವಿದ್ದುದೂ ಗಮನಿಸಿದೆ. ಅನಂತರವೇ ನಾನೂ ನನ್ನ ವಿಶಿಷ್ಟ ಕಲಾಕೃತಿಗಳನ್ನು ಪ್ರದರ್ಶಿಸಬೇಕು, ಮಾರಾಟ ಮಾಡಬೇಕು ಎಂದು ನಿರ್ಧರಿಸಿದ್ದು. ನಂತರ ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್, ಪ್ರದರ್ಶನಗಳ ಮೂಲಕವೂ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆದಿದೆ’ ಇದು ಅವರು ಮಾರುಕಟ್ಟೆಯ ಕುರಿತು ಯೋಚಿಸಿದ ರೀತಿ.
ತಂಜಾವೂರು ಶೈಲಿಗೆ ಹೊಸ ಸ್ಪರ್ಶ
ಆಯಿಲ್ ಪೇಟಿಂಗ್, ಪೆನ್ಸಿಲ್ ಸ್ಕೆಚ್, ಕೊಲಾಜ್, ಪೋರ್ಟ್ರೇಟ್ ಸೇರಿದಂತೆ ಅನೇಕ ಶೈಲಿಗಳಲ್ಲಿ ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಂಡವರು ಅನುರಾಧಾ. ಆದರೆ ತಂಜಾವೂರು ಹಾಗೂ ಮೈಸೂರು ಶೈಲಿಗೆ ಹೊಸ ಸ್ಪರ್ಶ ನೀಡುವಲ್ಲಿ ಹಾಗೂ ವಿಶಿಷ್ಟವಾದ ಅಮೂರ್ತ ಚಿತ್ರಗಳಲ್ಲಿ ಅವರದ್ದು ಎತ್ತಿದ ಕೈ. ಅವರದೇ ಆದ ‘ಮೋಲ್ಟನ್ ಗೋಲ್ಡ್’ ಶೈಲಿಯಿಂದ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಮೋಲ್ಟನ್ ಗೋಲ್ಡ್ ಚಿತ್ರಗಳಲ್ಲಿ 24 ಕ್ಯಾರಟ್ ಚಿನ್ನದ ಲೇಪನದೊಂದಿಗೆ, ಅತಿವಿರಳವಾದ ಹರಳುಗಳನ್ನು ಬಳಸಲಾಗುತ್ತದೆ.
ಇದು ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಒಂದು ಪೇಂಟಿಂಗ್‌ಗೆ ಕನಿಷ್ಠ ಮೂರು ತಿಂಗಳಿಂದ ಒಂದೂವರೆ ವರ್ಷದಷ್ಟು ಸುದೀರ್ಘ ಸಮಯ ಹಿಡಿಯುವುದೂ ಇದೆ. ಇದರ ಹಿಂದಿರುವ ಮುಖ್ಯ ಉದ್ದೇಶ ಪೇಂಟಿಂಗ್‌ಗೆ ಹೆಚ್ಚಿನ ಮೌಲ್ಯ ಬರಲಿ ಎನ್ನುವುದಲ್ಲ, ಚಿತ್ರಕಲೆಗೆ ವಿಶಿಷ್ಟ ಸೌಂದರ್ಯ ಸಾರ ಒದಗಲಿ ಎನ್ನುವುದೇ ಆಗಿರುತ್ತದೆ ಎನ್ನುತ್ತಾರೆ.
ಈ ಚಿತ್ರಗಳ ಬೆಲೆ ₹20 ಸಾವಿರದಿಂದ ಆರಂಭವಾಗಿ ಸುಮಾರು ₹2.5 ಲಕ್ಷದವರೆಗೂ ಇದೆ. ಈಗಾಗಲೇ ದುಬೈ, ಬೆಂಗಳೂರು ಸೇರಿದಂತೆ ಅನೇಕ ಕಡೆ ಸುಮಾರು 50 ಗುಂಪು ಪ್ರದರ್ಶನಗಳನ್ನು ನೀಡಿರುವ ಅನುರಾಧಾ, ಇದೇ ಮೊದಲ ಬಾರಿಗೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಇತ್ತೀಚೆಗೆ ವೈಯಕ್ತಿಕ ಪ್ರದರ್ಶನ ಏರ್ಪಡಿಸಿದ್ದರು.
(ಮಾಹಿತಿಗೆ:www.justme-annuradha.com)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.