ADVERTISEMENT

ನಡುಗುವ ಕೈಗಳ ಕಲಾಕೃತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಮುಖದಲ್ಲಿ ಬದುಕಿನ ಇಳಿಸಂಜೆಯ ಹೊಂಬೆಳಕು. ನೆರಿಗೆಗಳ ಮಧ್ಯೆ ಅನುಭವಗಳ ಹೂರಣ. ಇಳಿವಯಸ್ಸಿನಲ್ಲೂ ಸುಮ್ಮನಿರಲಾರದ ಮನಸ್ಸಿನ ವೇಗಕ್ಕೆ ಸಹಕರಿಸದ ದೇಹ. ಆದರೂ ಇವರ ಹಟ, ಪರಿಶ್ರಮದ ಮುಂದೆ ಕಲೆ ಅನಾವರಣಗೊಂಡು ಬಹು ರೂಪ ಪಡೆದಿತ್ತು. ಆಕರ್ಷಕ ‘ಇಕೆಬಾನ’ ಹೂ ಗುಚ್ಛ ತಯಾರಿ, ಆಟದ ಮೂಲಕ ಗಣಿತ ಕಲಿಸುವ ‘ಮ್ಯಾಥ್‌ಮ್ಯಾಜಿಕ್’, ಚಿತ್ರ-ರಂಗೋಲಿ ಕಲೆ, ಹಳೆ ಚಿತ್ರಗೀತೆ ಪುಸ್ತಕಗಳ ಸಂಗ್ರಹ, ಹಳೆ ಪಾಕೆಟ್ ವಾಚುಗಳ ಸಂಗ್ರಹ, ವಿವಿಧ ದೇಶಗಳ ನಾಣ್ಯ ಕರೆನ್ಸಿ ಪ್ರವಾಸಿ ತಾಣಗಳ ನೋಟ... ಹೀಗೆ ಬದುಕು ನೀಡಿದ ಅನುಭವದ ಮೂಸೆಯಲ್ಲಿ ಬಟ್ಟಿ ಇಳಿಸಿ ಕಲ್ಪನೆಗೆ ದೃಶ್ಯ ಆವಿಷ್ಕಾರ ನೀಡಲಾಗಿತ್ತು.

ಹಿರಿಯ ನಾಗರಿಕರ ಕ್ಷೇಮಕಾರ್ಯ ನಡೆಸುತ್ತಿರುವ ‘ಡಿಗ್ನಿಟಿ ಫೌಂಡೇಷನ್’ ಜಯನಗರದ ‘ಬಿಇಎಸ್’ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಿಕೊಟ್ಟ ಹಿರಿಯ ನಾಗರಿಕರ ಕಲಾಪ್ರದರ್ಶನ (ಆರ್ಟ್ ಪ್ರೆಸೆಂಟೇಶನ್)ದ ನೋಟ ಇದು. ಇಕೆಬಾನ: ಜಪಾನ್ ಮೂಲದ ಈ ಕಲೆ ಈಗ ನಮ್ಮಲ್ಲೂ ಜನಪ್ರಿಯವಾಗಿದೆ. ಜಯನಗರದಲ್ಲಿ ಎನ್.ಲೀಲಾ ವೆಂಕಟಾದ್ರಿ, ಗಜಲಕ್ಷ್ಮೀ ಮುರುಗೇಶ್, ಭಾರ್ಗವಿ ಸತ್ಯ  ಇವರು ಜತೆಯಾಗಿ ನಡೆಸುತ್ತಿರುವ ’ಬ್ಲೂಮಿಂಗ್ ಬಡ್ಸ್’ ಇಕೆಬಾನ ತರಬೇತಿ ಶಾಲೆ ವಿಶೇಷ ಗಮನ ಸೆಳೆದಿದೆ. ಇವರ ಇಕೆಬಾನ ಹೂಗುಚ್ಛಗಳ ಸ್ಟಾಲ್ ಹೆಚ್ಚು ಆಕರ್ಷಕವಾಗಿತ್ತು.

ಕೇರಳ ಶೈಲಿಯ ನಾಗದೋಣಿ (ವಂಜಿ)ಯ ಮೇಲೆ ಜೋಡಿಸಿದ ಇಕೆಬಾನ ವಿಶೇಷ ಗಮನಸೆಳೆದರೆ, ಕಾಫಿ ಗಿಡದ ಒಣ ಕಾಷ್ಠ, ಸಿಂಗಪುರ ಗ್ರಾಸ್ ಇತ್ಯಾದಿ ಸೇರಿಸಿದ್ದ ತಾಜಾ ಹೂಗಳು ಮೋಹಕವಾಗಿದ್ದುವು. ಪ್ರತಿಭಾ ಪ್ರದರ್ಶನ ಅನ್ನುವುದು ಹರೆಯದವರಿಗಷ್ಟೇ ಸೀಮಿತ ಅಲ್ಲ, ಹಿರಿಯ ನಾಗರಿಕರೂ ಅವಕಾಶ ಲಭಿಸಿದರೆ ವಿಸ್ಮಯ ಕಲಾಕೃತಿ ತಯಾರಿಸಬಲ್ಲರು, ವೃತ್ತಿ-ಪ್ರವೃತ್ತಿಯೂ ಆಗಬಹುದು  ಎಂಬುದನ್ನು ಪ್ರದರ್ಶನದಲ್ಲಿದ್ದ ಇಂತಹ ಸ್ಟಾಲ್ ಸಾರಿ ಹೇಳುವಂತಿತ್ತು.

 ‘ಯುವಜನರಲ್ಲಿ  ಇಕೆಬಾನ ತೆರನಾದ  ಕಲಾಕೃತಿ ಕಲಿಯುವ ಆಸಕ್ತಿ ಇದೆ. ಆದರೆ ಇಂದಿನ ಸಾಫ್ಟ್‌ವೇರ್ ಬದುಕು ಹೊಸ ಪೀಳಿಗೆಯನ್ನು ಲಲಿತಕಲೆಗಳಿಂದ ವಿಮುಖವಾಗಿಸುತ್ತಿದೆ’ ಎಂದು ಲೀಲಾ ವೆಂಕಟಾದ್ರಿ ವಿಷಾದ ವ್ಯಕ್ತಪಡಿಸಿದರು. ಮ್ಯಾಥ್ ಮ್ಯಾಜಿಕ್: ಪ್ರದರ್ಶನದಲ್ಲಿ  ರಘುರಾಮ ಶೆಟ್ಟಿ ಅವರ ‘ಹಳೆ ಪಾಕೆಟ್ ವಾಚ್’ಗಳು, ಪರಿಮಳಾ ರಾವ್ ಅವರ ರಂಗೋಲಿ ಪುಡಿ ಬಳಸಿ ತಯಾರಿಸಿದ ಬಹುವರ್ಣ ಚಿತ್ರ, ಎಸ್.ಎ. ರಹೀಮ್ ಅವರ ಚಮತ್ಕಾರದ ಗಣಿತದ ಆಟದ ‘ಮ್ಯಾಥ್ ಮ್ಯಾಜಿಕ್’ ಚಿತ್ತಾಕರ್ಷಕವಾಗಿದ್ದುವು.

ಡಿಗ್ನಿಟಿ: ಐವತ್ತು ವಯಸ್ಸು ಮೀರಿದವರಿಗೆ ಹಾಗೂ ಹಿರಿಯ ನಾಗರಿಕರಿಗೆ ‘ಡಿಗ್ನಿಟಿ’ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್‌ಗೆ  ಅವಕಾಶ ನೀಡುತ್ತಿದೆ.ಸ್ವಾವಲಂಬನೆ, ನಿವೃತ್ತಿಯ ಬಳಿಕ ವೃತ್ತಿ, ಗಳಿಕೆ, ಸಾಮಾಜಿಕ ಸ್ಥಾನಮಾನ, ಸ್ವಾಭಿಮಾನದ ಬದುಕು, ದೈಹಿಕ ಮಾನಸಿಕ ಸ್ವಾಸ್ಥ್ಯ ಸಲಹೆ, ಚಿಕಿತ್ಸಾ ಸೌಲಭ್ಯ, ಸಮಾನ ಮನಸ್ಕರೊಂದಿಗೆ ಬೆರೆಯುವ- ನಲಿಯುವ ‘ಚಹಾ ಚಾವಡಿಯಂತಹ’ ಅವಕಾಶವನ್ನು ಕಲ್ಪಿಸುತ್ತಿದೆ. ಹೆಸರಿನಂತೆಯೇ ಸಮಾಜದಲ್ಲಿ ‘ಕಳಚಿದ ಕೊಂಡಿ’ಯಂತೆ ಬದುಕುವ ಹಿರಿಯರಿಗೆ ಬದುಕು ‘ಭಾರ’ ಆಗದಂತೆ, ಘನತೆಯಿಂದ ಕೊನೆ ತನಕ ಜೀವಿಸಲು ಅವಕಾಶ ಮಾಡಿಕೊಡುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.