ADVERTISEMENT

ನನ್ನ ಮಗಳ ಮೆಚ್ಚುವ ಹುಡುಗ ನನ್ನ ಹಾಡೇ ಹಾಡಲಿ:ಹನಿ ಸಿಂಗ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಹಿರ್ದೇಶ್‌ ಸಿಂಗ್‌ ಎಂದು ತಮ್ಮ ನಿಜ ಹೆಸರಿನಿಂದ ಕರೆದರೆ ಗುರುತೇ ಸಿಗದಷ್ಟು ಜನಪ್ರಿಯರಾಗಿರುವ ಹನಿ ಸಿಂಗ್‌ ಉರುಫ್‌ ಯೋಯೋ ಹನಿ ಸಿಂಗ್‌ ತಮ್ಮ ಪೋಲಿಗೀತೆಗಳ ಟೀಕಾಕಾರರಿಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಮುಂದೆ ನನಗೆ ಮಗಳು ಹುಟ್ಟಿ, ಅವಳಲ್ಲಿ ಪ್ರೇಮ ನಿವೇದನೆ ಮಾಡಲು ಯಾವುದೋ ಹುಡುಗ ನನ್ನ ಹಾಡನ್ನೇ ಬಳಸಿದರೆ ನಾನು ಖುಷಿಪಡುತ್ತೇನೆ’ ಎಂಬುದು ಹನಿ ನುಡಿ.

ಪಂಜಾಬಿ ಹಾಡುಗಳ ಮೂಲಕ ಸಂಗೀತ ಲೋಕಕ್ಕೆ ಪ್ರವೇಶಿಸಿದ ಭಾರತದ ಜನಪ್ರಿಯ ರ್‍ಯಾಪರ್‌ ಹನಿ ಸಿಂಗ್‌ ಅವರ ಮೇಲೆ ಹೆಣ್ಣುಮಕ್ಕಳನ್ನು ಕುರಿತೇ ಹಾಡುಗಳನ್ನು ಹೆಚ್ಚಾಗಿ ಹಾಡುತ್ತಾರೆ ಎಂಬ ಆರೋಪವಿದೆ.

‘ನಾನು ಭಗತ್‌ಸಿಂಗ್‌ ಹಿಂದಿ ಚಿತ್ರದಲ್ಲೂ ಹಾಡಿದ್ದೇನೆ. ಆ ಹಾಡನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಹುಡುಗರ ಕುರಿತೂ ಹಲವು ಹಾಡುಗಳನ್ನು ಸಂಯೋಜಿಸಿದ್ದೇನೆ. ಅವು ಹಿಟ್‌ ಆಗಲಿಲ್ಲ. ಅದೇ ಹೆಣ್ಣುಮಕ್ಕಳ ಬಗೆಗೆ ಒಂದು ಕ್ಯಾಚಿ ಸಾಲು ಬರೆದರೆ ಹಿಟ್‌ ಆಗುತ್ತದೆ. ಅದಕ್ಕೆ ನಾನು ಕಾರಣ ಅಲ್ಲ. ಜನರಿಗೆ ಅದು ಇಷ್ಟವಾಗಿದೆ ಎಂದಷ್ಟೇ ಅರ್ಥ’ ಎನ್ನುವ ಹನಿ ಸಿಂಗ್‌ ತಾವು ಮಡಿವಂತರಲ್ಲ ಎಂದಿದ್ದಾರೆ. ಕೇವಲ ಹೆಣ್ಣುಮಕ್ಕಳ ಮೇಲೆ ಪೋಲಿ ಗೀತೆಗಳನ್ನು ಬರೆಯುವುದಷ್ಟೇ ತಮ್ಮ ಕೆಲಸ ಎಂಬ ಆರೋಪವನ್ನು ಅವರು ನಿರಾಕರಿಸುತ್ತಾರೆ.

ಬಾಲಿವುಡ್‌ ಗೀತೆಗಳನ್ನು ಹಾಡುವುದು ತಮ್ಮಿಷ್ಟದ ಕೆಲಸವಲ್ಲ ಎನ್ನುವ ಅವರು, ತಾವು ಮೆಚ್ಚುವ ನಾಯಕರ ಸಿನಿಮಾಗಳಿಗೆ ಮಾತ್ರ ಹಾಡುತ್ತಾರಂತೆ. ಒಂದು ಹಾಡಿಗೆ 80 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ದುಬಾರಿ ಗಾಯಕ ಅವರು ಎಂಬ ಅಭಿಪ್ರಾಯವೂ ಬಾಲಿವುಡ್‌ನಲ್ಲಿ ಇದೆ. ‘ಚೆನ್ನೈ ಎಕ್ಸ್‌ಪ್ರೆಸ್‌’ ಹಿಂದಿ ಚಿತ್ರದ ‘ಲುಂಗಿ ಡಾನ್ಸ್‌’ ಗೀತೆಯಿಂದ ಹನಿ ಸಿಂಗ್‌ ಜನಪ್ರಿಯತೆಯ ಗ್ರಾಫ್‌ ಇನ್ನಷ್ಟು ಮೇಲೇರಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.