ADVERTISEMENT

‘ನಮ್ಮ ಮೆಟ್ರೊ ಈಗ ನನ್ನ ಮೆಟ್ರೊ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ವ್ಯಂಗ್ಯಚಿತ್ರ: ಪ್ರಕಾಶ್‌ ಶೆಟ್ಟಿ
ವ್ಯಂಗ್ಯಚಿತ್ರ: ಪ್ರಕಾಶ್‌ ಶೆಟ್ಟಿ   

ಸೂರು ರಸ್ತೆಯಿಂದ ವೈಟ್‌ಫೀಲ್ಡ್‌ಗೆ ಪ್ರತಿದಿನ ಬಿಎಂಟಿಸಿ ಬಸ್ಸಿನಲ್ಲಿ ಹೆಣಗುತ್ತಾ ಅರ್ಧ ದಿನವನ್ನು ರಸ್ತೆಯಲ್ಲೇ ಕಳೆಯುತ್ತಾ ಸಂಚರಿಸುತ್ತಿದ್ದ ನನ್ನಂತಹ ಅನೇಕರಿಗೆ 'ನಮ್ಮ ಮೆಟ್ರೊ' ಅಪದ್ಬಾಂಧವನಂತೆ ಕಂಡಿದ್ದು ಸುಳ್ಳಲ್ಲ.

ಕನಿಷ್ಠ ಮೂರು ಗಂಟೆಯ ಪ್ರಯಾಣದ ಅವಧಿಯನ್ನು ಗರಿಷ್ಠ ಒಂದೂವರೆ ಗಂಟೆಗೆ ಇಳಿಸಿದೆ ಈ ಮೆಟ್ರೊ. ಮೊದಲ ದಿನದ ಪ್ರಯಾಣದಲ್ಲಿ ಮೈಸೂರು ರಸ್ತೆಂಯಿಂದ ಬೈಯ್ಯಪ್ಪನಹಳ್ಳಿಯನ್ನು 35 ನಿಮಿಷದಲ್ಲಿ ತಲುಪಿದಾಗ ಸಂಚಾರ ದಟ್ಟಣೆಯಿಂದ ಕುಖ್ಯಾತಿ ಗಳಿಸಿದ್ದ ಬೆಂಗಳೂರಿಗೆ ಮತ್ತೆ ಒಳ್ಳೆಯ ಹೆಸರು ಬರುವ ಆಶಾಕಿರಣ ತೋರಿತು.

ನಿಗದಿತ ಸಮಯಕ್ಕೆ ಸರಿಯಾಗಿ ಬರುವ ರೈಲನ್ನು ಚಕ್ಕನೇ ಹತ್ತಿ ಜಾಗ ಹಿಡಿದು ಕುಳಿತುಕೊಂಡರೆ ಏನೋ ಸಾಧಿಸಿದ ಖುಷಿ. ಸೀಟು ಸಿಗದಿದ್ದರೆ ಸ್ವಲ್ಪ ಬೇಸರ. ನಂತರ ತಣ್ಣಗಿನ ವಾತಾವರಣಕ್ಕೆ ಹೊಂದಿಕೊಂಡು, ಕಿವಿಗೆ ಈಯರ್ ಫೋನ್ ಸಿಕ್ಕಿಸಿಕೊಂಡರೆ 35 ನಿಮಿಷದ ಪ್ರಯಾಣ.

ADVERTISEMENT

ಕೆಳಗೆ ರಸ್ತೆಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ವಾಹನಗಳನ್ನು ನೋಡುತ್ತಿದ್ದರೆ ಮೆಟ್ರೊದ ಶರವೇಗದ ಸಂಚಾರದಿಂದಾಗಿ ನಮಗೆ ಸಮಯವನ್ನೇ ಗೆದ್ದ ಜಂಬ!

ಎತ್ತರಿಸಿದ ಮಾರ್ಗದಲ್ಲಿ ಬೃಹತ್‌ ಕಟ್ಟಡಗಳನ್ನು, ಕಣ್ಣು ಹಾಯಿಸಿದಷ್ಟು ದೂರಕ್ಕೂ ವ್ಯಾಪಿಸಿರುವ ನಗರವನ್ನು, ಅಲ್ಲಲ್ಲಿ ಕಾಣುವ ಹಸಿರನ್ನು ನೋಡುತ್ತಾ ಸಾಗುವಾಗಲೇ ಸುರಂಗ ಹೊಕ್ಕುಬಿಡುತ್ತದೆ. ಈ ಸುರಂಗ ಮಾರ್ಗದ ಅನುಭವವೇ ಬೇರೆ. ಹೊರಗಿನ ಪ್ರಪಂಚವನ್ನು ಮರೆಮಾಚಿ ನಮ್ಮನ್ನೇ ನಮಗೆ ತೋರಿಸುವ ಗಾಜಿನ ಕಿಟಕಿಗಳು. ಆಗಲೇ ಕನ್ನಡಿಯಂತೆ ಬದಲಾದ ಗಾಜಿನಲ್ಲಿ ಕೆಲವು ಮಹಿಳೆಯರು ತಮ್ಮ ಮೇಕ್ ಆಪ್ ಸರಿ ಮಾಡಿಕೊಳ್ಳುವುದು, ಕೂದಲು ಸರಿಮಾಡಿಕೊಳ್ಳುವುದು.. ಯಾರಿಗುಂಟು ಯಾರಿಗಿಲ್ಲ!

ಹೊರಗಿನ ನೋಟ ಬೇಸರವೆನಿಸಿದರೆ ಒಳಗಿನ ಜನಜಂಗುಳಿಯ ಕಡೆಗೆ ಗಮನ ಕೊಟ್ಟರೆ ಆಯಿತು. ಕೆಲಸಕ್ಕೆ ಹೊರಟಿರುವ ಪೇಲವ ಮುಖಗಳು, ಕಾಲೇಜಿನ ಹುಡುಗರ ಮೋಜು ಮಸ್ತಿ, ಶಾಲಾ ಮಕ್ಕಳ ಗಲಾಟೆ, ಊರಿಗೆ ಹೊರಟಿರುವ ಸಂಸಾರ, ಮದುವೆಗೆ, ಮುಂಜಿಗೆ ತಯಾರಾಗಿ ಹೊರಟಿರುವ ಮಹಿಳೆಯರು.. ಹೀಗೆ ಗಮನಿಸುತ್ತಾ ಕುಳಿತುಕೊಳ್ಳುವುದು ಕೂಡ ಮಜಾವೇ.(ಯಾರಾದರೂ ಯಾವುದಾದರೂ ಪುಸ್ತಕ ಹಿಡಿದು ಓದುತ್ತಿದ್ದರೆ ಆ ಪುಸ್ತಕದ ಹೆಸರು ಕಾಣಿಸುವವರೆಗೂ ದಿಟ್ಟಿಸುತ್ತ ನೋಡುವ ಕೆಟ್ಟ ಚಟವು ನನ್ನಲ್ಲಿ ಉಂಟು) ಪೀಕ್ ಅವರ್‌ನಲ್ಲಿ ಉಸಿರಾಡುವುದಕ್ಕೂ ಆಗದಂತೆ ಒತ್ತರಿಸಿ ನಿಂತವರ ಮಧ್ಯೆ ನಾನೂ ತೂರಿಕೊಂಡು ಸಂಚರಿಸಿ, ಜಾಗ ಸಿಕ್ಕಾಗ ಒಂದು ನಿದ್ದೆ ಮಾಡುತ್ತೇನೆ.

ಕೆಲವು ಸಲ ಚಿಕ್ಕ ಮಕ್ಕಳನ್ನು ಎತ್ತಿಕಂಡವರಿಗೆ, ಹಿರಿಯ ನಾಗರಿಕರಿಗೆ ಜಾಗಬಿಟ್ಟು ಕೊಡುತ್ತೇನೆ. ಕೆಲವೊಮ್ಮೆ ಯಾವುದೋ ಭಾವನಾ ಪ್ರಪಂಚದಲ್ಲಿ ಮುಳುಗಿ, ಅನೇಕ ಸಲ ಮೊಬೈಲ್‌ನಲ್ಲಿ ಕಳೆದುಹೋಗುವ ಮೆಟ್ರೊ ಪಯಣ ಯಾವಾಗಲೂ ನನಗೆ ಪುಳಕವೇ.

35 ನಿಮಿಷದ ಪಯಣದ ಹಾದಿಯಲ್ಲಿ ಬೆಂಗಳೂರು ನಗರದ ಅನೇಕ ಮುಖಗಳನ್ನು, ಅನೇಕ ಆಯಾಮವನ್ನು ತೋರಿಸುವ, ಜೀವನದ ಪಾಠವನ್ನು ಕಲಿಸುತ್ತ ಗಮ್ಯವನ್ನು ತಲುಪಿಸುವ 'ನಮ್ಮ ಮೆಟ್ಟ್ರೊ’ ಈಗ ನನ್ನ ಮೆಟ್ರೊ ಆಗಿಬಿಟ್ಟಿದೆ.
–ಸಂಗೀತಾ ಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.