ಮತ್ತೊಂದು ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಈ ಮೊದಲೇ ಪ್ರೇಮ ನಿವೇದನೆ ಮಾಡಿಕೊಂಡವರು, ಅದರಿಂದ ಹೊರಬಿದ್ದವರು, ಹಲವಾರು ಹಕ್ಕಿಗಳಿಗೆ ಕಾಳು ಹಾಕುತ್ತಿರುವವರು, ಅದನ್ನೊಂದು ಮಧುರ ನೆನಪಾಗಿ ಜೋಪಾನ ಮಾಡಿಕೊಂಡವರು ಎಲ್ಲರಿಗೂ ಸೇರಿಯೇ ಈ ಪ್ರೇಮಿಗಳ ದಿನ ಎಂಬುದದು ಏನೇನೊ ಭಾವನೆಗಳ ಅಲೆಗಳನ್ನು ಎಬ್ಬಿಸುತ್ತದೆ. ಪ್ರೇಮಪತ್ರ, ಮೊಬೈಲ್ ಮೆಸೇಜ್, ಇ–ಮೇಲ್ ಎಲ್ಲದರಲ್ಲೂ ಈ ದಿನ ಅನುದಿನವೂ ಬರುತಿರಲಿ, ಪ್ರತಿ ದಿನವೂ ಪ್ರೇಮದ ದಿನ ಆಗಿರಲಿ ಎಂಬ ಸದಾಶಯ, ಶುಭಾಶಯಗಳು ಅನುರಣಿಸುತ್ತಿರುತ್ತವೆ. ಪ್ರೇಮಿಗಳಿಗೆ ಒಂದು ನೆಪ ಈ ದಿನ.
ಪ್ರೇಮ ಪತ್ರ ಬರೆಯುವ ಹುಡುಗರು ಬೆಳದಿಂಗಳೇ, ನಂದಿನಿ ಹಾಲಿನ ಬಿಳುಪೇ, ಮಾತಿನಮಲ್ಲಿಯೇ, ನನ್ನ ಹಸಿರೆ ಉಸಿರೆ, ಗುಲಾಬಿ ಹೂವೇ ಎಂದು ಸಂಬೋಧಿಸುತ್ತ, ತಮ್ಮ ಪ್ರೀತಿಗೆ ಪೀಠಿಕೆ ಹಾಕುತ್ತಿರುವವರಿಗೆ ಒಂದು ಸಂದರ್ಭ ಒದಗಿಬಂದಿದೆ. ತಮ್ಮ ಪ್ರೇಮ ನಿವೇದನೆ ವಿಶಿಷ್ಟವಾಗಿರಬೇಕು ಎಂದು ರಾತ್ರಿಯನ್ನು ಬೆಳಗು ಮಾಡಿ ಬಣ್ಣದ ಕಾಗದದಲ್ಲಿ ಪ್ರೇಮಪತ್ರಗಳನ್ನು ಕೊರೆದಿದ್ದಾರೆ. ಅದಕ್ಕೆ ಈಗಾಗಲೇ ಒಂದೆರಡು ಹುಡುಗಿಯರನ್ನು ಪಟಾಯಿಸಿ ಅವರು ದೂರವಾಗಿರುವ ಗೆಳೆಯನಿಂದ ಮಾರ್ಗದರ್ಶನ ಸಿಕ್ಕಿದೆ. ಆ ಪ್ರೇಮಪತ್ರದಲ್ಲಿ ತಪ್ಪಿಯೂ ನನ್ನ ಕಪ್ಪು ಕರಡಿಯೇ, ಸಿಂಬಳ ಸುರಕಿಯೇ, ಪ್ರಿಯ ಬಜಾರಿಯೇ, ನನ್ನ ಮುದ್ದು ಕೊಳಕಿಯೇ, ನನ್ನ ಪ್ರೀತಿಯ ಒನಕೆಯೇ, ಒಂಟೆಯೇ, ರಾಕ್ಷಸಿಯೇ ಎಂದು ಸಂಬೋಧಿಸುವುದಿಲ್ಲ. ಹಾಗೇನಾದರೂ ಬರೆದಲ್ಲಿ ಅತ್ಯಂತ ವೇಗವಾಗಿ ಹುಡುಗನಿಗೆ ಒದೆಗಳು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದರೆ, ಕವಿಯೊಬ್ಬ, ಅದರಲ್ಲೂ ಪ್ರೇಮಿಯೊಬ್ಬ ತನ್ನ ಕವಿತೆಯಲ್ಲಿ ಅದನ್ನು ಮಾಡಬಲ್ಲ. ಅಂಥ ಸ್ವಾತಂತ್ಯ್ರ, ಅವಕಾಶ ಕವಿತೆಯಲ್ಲಿ ಹೆಚ್ಚಾಗಿರುತ್ತದೆ. ಮತ್ತು ಪ್ರೇಮ ನಿವೇದನೆಗೆ ಕವಿತೆ ಸಾಕಷ್ಟು ಮುಕ್ತವಾಗದ ಸಶಕ್ತ ಜಾಗ. ಏಕೆಂದರೆ ಸ್ವತಃ ತನ್ನ ಹುಡುಗಿಗೆ ಮಾತಿನಲ್ಲಿ ಹೇಳಲಾಗದ್ದನ್ನು ಅಲ್ಲಿ ಬರೆದಿರುವ ಸಾಧ್ಯತೆ ಇರುತ್ತದೆ. ಕವಿಯೊಬ್ಬನಿಗೆ ಸಿಕ್ಕಿದ ಹುಡುಗಿ ಹೆಚ್ಚು ಕಾಡುತ್ತಾಳೋ, ಸಿಗದ ಹುಡುಗಿ ಹೆಚ್ಚು ಕಾಡುತ್ತಾಳೋ ಎಂಬುದಕ್ಕೆ ಉತ್ತರ ಸರಳವಾಗಿದೆ. ಹಾಗಾಗಿ ಸಿಗದ ಹುಡುಗಿಯ ಕುರಿತೇ ಬಹಳಷ್ಟು ಕವಿತೆಗಳು ಹುಟ್ಟಿಕೊಳ್ಳುತ್ತವೆ. ಪ್ರೀತಿಯ ಹಲವು ರೀತಿ, ಹೆಣ್ಣಿನ ಸೌಂದರ್ಯದ ಹಲವು ಬಗೆ ಇಲ್ಲಿದೆ. ಹೆಣ್ಣು ಒಲಿಯಲು ಪ್ರೇಮಿಯಾದವ ಅವಳನ್ನು ವರ್ಣಿಸಲೇ ಬೇಕಲ್ಲ? ಹುಡುಗಿಯ (ಇಲ್ಲಸಲ್ಲದ್ದನ್ನೂ ಸೇರಿಸಿ) ಸೌಂದರ್ಯವನ್ನು ಉಪಮೆಗಳಲ್ಲಿ ಹೊಗಳುವ ಕವಿತೆಗಳು ಸಾಕಷ್ಟು.
ಚೆಂದಕ್ಕಿಂತ ಚೆಂದ ನೀನೇ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ಎನ್ನುತ್ತಾರೆ ತಮ್ಮ ಶಾಯರಿಯೊಂದರಲ್ಲಿ ಇಟಗಿ ಈರಣ್ಣ. ಅವರದೇ ಇನ್ನೆರಡು ಪಂಕ್ತಿ:
ಈ ಕತ್ತಲ ರಾತ್ರಿ ನಿನ್ನ ದಾರಿ ಕಾದೂ ಕಾದೂ ನನ್ನೆದಿ ಒಂದs ಅಳತಿ ಸುಡಾಕ ಹತ್ತೇತಿ
ಕತ್ತಲಾಗೇತೆಂತ ಹೆದರಿ ಕುಂದರಬ್ಯಾಡ ನನ್ನ ಸುಡೂ ಎದಿ ನಿನ್ನ ದಾರ್ಯಾಗ ಬೆಳಕು ಚೆಲ್ಲೇತಿ
ನನಗನಸತೈತಿ ಈ ಹರಿಯೂ ಬೆಳದಿಂಗಳಾ ಹೆಪ್ಪಾಗಿ ನಿನ್ ಮೈ ಆಗಿರಬೇಕು
ಇಲ್ಲಾಂದ್ರ ನನ್ನ ಬಿಸಿ ನಿನ್ನ ಮೈಗೆ ತಾಗಿ ಅದು ಕರಗಿ ಈ ಬೆಳದಿಂಗಳಾಗಿ ಹರಡಿರಬೇಕು
ಕವಿತೆಗಳಲ್ಲಿ ಪ್ರೇಮದ ನಿವೇದನೆ ಹಲವು ಬಗೆಯದು. ಪ್ರೇಮದ ಪರಿ ಎಷ್ಟಿದೆಯೋ, ಕವಿತೆಗಳಲ್ಲಿ ಅದರ ಬಗೆ. ಇಟಗಿ ಈರಣ್ಣ ಅವರ ಕವಿತೆಯಲ್ಲಿ ಓದುಗರು ಅಪೇಕ್ಷಿಸಬಹುದಾದ ಮೆಚ್ಚಬಹುದಾದ ಪ್ರೀತಿಯ ತೀವ್ರತೆ, ಕಾತರ ಇದೆ. ಅವರೂ ಅನೇಕ ಕವಿಗಳಂತೆ ಚಂದಿರನ ಮಟ್ಟದಲ್ಲಿ ತಮ್ಮ ಕನ್ನಿಕೆಯನ್ನು ನೋಡಿದ್ದಾರೆ.
ಕನ್ನಡದಲ್ಲಿ ಅಪ್ಪಟ ಪ್ರೇಮ ಕವಿತೆಗಳು ಕಡಿಮೆ. ಪ್ರೇಮಕ್ಕಿಂತ ಹೆಚ್ಚಾಗಿ, ದಾಂಪತ್ಯ, ವಿರಹ, ಕಾಮವನ್ನು ಅಭಿವ್ಯಕ್ತಿಸುವ ಕವಿತೆಗಳು ಬಹಳಷ್ಟಿವೆ. ದಾಂಪತ್ಯ ಸಮಾಜದಲ್ಲಿ ಒಂದು ಮೌಲ್ಯವಾದ್ದರಿಂದ, ಕಾಮ ಮನುಷ್ಯ ಸಹಜ ಚಟುವಟಿಕೆಯಾದ್ದರಿಂದ ಅವು ಮುನ್ನಲೆ ಬಂದಿರಬಹುದು. ಪ್ರೇಮದಲ್ಲಿ ಸಹಜವಾದ ವಿರಹ ಗೀತೆಗಳು ಇನ್ನೂ ಅನೇಕ.
ಕೆ.ಎಸ್. ನಿಸಾರ್ ಅಹಮ್ಮದ್ ಅವರ ಅಂಥ ಒಂದು ಕವಿತೆ-
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ–
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ.
(ಮತ್ತದೇ ಬೇಸರ...)
ಮನೋರಮಾ, ಮನೋರಮಾ!
ಆಗಬಾರದೇನೆ ಒಮ್ಮ ನಮ್ಮ ಮೈಸಮಾಗಮ?
ನನ್ನ ಬಯಕೆ ನೆಲದ ಗರಿಕೆ; ನೀನೊ ಸುರ ವಿಹಂಗಮ.
ಹೆಳವನೆದುರು ಮರದ ತುದಿಯ ಹೂ ಹಣ್ಣು ಸಂಭ್ರಮ. (ಮನೋರಮಾ)
ಎನ್ನುವ ಕೆ.ಎಸ್. ನಿಸಾರ್ ಅಹಮದ್ ನೇರವಾಗಿ ‘ಅಲ್ಲಿಗೇ’ ಹೋಗುತ್ತಾರೆ! ಆದರೆ,
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ
ಎಂದ ಕೆ.ಎಸ್. ನರಸಿಂಹಸ್ವಾಮಿ ಪ್ರೇಮವನ್ನು ಮದುವೆಯಲ್ಲಿ ಮುಕ್ತಾಯಗೊಳಿಸುತ್ತಾರೆ.
ಪ್ರೇಮರೋಗವನ್ನು ವಾಸಿಮಾಡುವಂಥ ಮತ್ತೊಂದು ಆಯಾಮವೂ ಇದೆ:
‘ಅವಳು ಬರುತ್ತಿದ್ದಾಳೆ ಎಂಬ ಸುದ್ದಿಯ ತಿಳಿದು ನನ್ನ ಮುಖಾರವಿಂದ ಅರಳಿದೆ
ಸುತ್ತಮುತ್ತಲಿನವರೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ ರೋಗಿ ಚೇತರಿಸಿಕೊಳ್ಳುತ್ತಿದ್ದಾನೆಂದು’
ಎಂದು ಉರ್ದುವಿನ ದೊಡ್ಡ ಕವಿ ಮಿರ್ಜಾ ಗಾಲಿಬ್ ತನ್ನದೊಂದು ಕವಿತೆಯಲ್ಲಿ ಬರೆದುಕೊಂಡಿದ್ದಾನೆ.
ನಮ್ಮಲ್ಲಿ ಗಂಡು ಹೆಣ್ಣಿಗೆ ತಮ್ಮ ಪ್ರೇಮವನ್ನು ನಿವೇದಿಸುವ, ಅವಳನ್ನು ಸಿಕ್ಕಾಪಟ್ಟೆ ಹೊಗಳುವ ಕಾವ್ಯ ಪಂಕ್ತಿಗಳು ಧಾರಾಕಾರವಾಗಿ ಸುರಿದಿವೆ. ಅದನ್ನು ಹೆಣ್ಣೂ ನಿರೀಕ್ಷಿಸುತ್ತಾಳೆ ಎನ್ನಿ. ಏಕೆಂದರೆ ಮುಂದೆ ಎರಡು ಸೂರ್ಯಕಾಂತಿಗಳು ಅರಳಿದ, ನೆಲ ಕಾಣದ ವಯಸ್ಸೇ ಹಾಗಿರುತ್ತದೆ. ಆದರೆ, ಹೆಣ್ಣು ಗಂಡಿನ ಪ್ರೇಮಕ್ಕೆ ಏನು ಹೇಳುತ್ತಿದ್ದಾಳೆ ಎನ್ನುವುದು ಕೆಲವೊಮ್ಮೆ ಗುಟ್ಟಾಗಿ ಉಳಿದಿರುತ್ತದೆ. ಅದು ಅನೇಕ ಬಾರಿ ನಿಗೂಢ. ‘ಬಡ್ಡಿಮಗನೆ ನೀನು ಹೇಳುವುದನ್ನೆಲ್ಲ ನಾನು ಮೊದಲೇ ಬಲ್ಲೆ. ನಿನ್ನ ಕೋತಿ ಆಟ, ನೀನು ಸುಕೋಮಲೆ, ಬಾಲೆ, ಜಾಜಿಮಲ್ಲಿಗೆ, ಸುಂದರಿ ಎಂದು ಹೊಗಳುವುದೆಲ್ಲ ಯಾವುದಕ್ಕೆಂದು ನನಗೆ ಗೊತ್ತು. ಮದುವೆಯಾಗಿ, ನನ್ನನ್ನು, ನನಗೆ ಹುಟ್ಟುವ ಮಕ್ಕಳನ್ನು ಸಾಕುವ ತಾಕತ್ತಿದ್ದರೆ ಮುಂದೆ ಬಾ’ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿರುತ್ತಾಳೆ. ಆದರೆ ಅದು ಪ್ರಕಟವಾಗುವುದಿಲ್ಲ.
ಅವಳ ಮುಗುಳ್ನಗೆಯನ್ನು ನೋಡಿ ಗಂಡು ಪ್ರಾಣಿ ಬದುಕು ಪಾವನವಾಯಿತು ಎಂದು ಮುಂದುವರಿಯುತ್ತಾನೆ. ಇಲ್ಲವೇ ‘ನಿನ್ನ ಮೌನ, ಬದುಕಿನ ಕವನ’ ಎಂದು ಹಾಡು ಬರೆಯುತ್ತಾನೊ ಎಂದು ಹೇಳುವುದು ಕಷ್ಟ. ಫಲಿಸಿದ ಪ್ರೇಮದ ಬಗ್ಗೆ ಗಂಡು ಹೆಚ್ಚೇನೂ ಮಾತನಾಡಲಾರ. ಅದೇ ಫಲಿಸದ ಪ್ರೀತಿಯ ಬಗ್ಗೆ ಮರವೇ ತಲೆಮೇಲೆ ಬಿದ್ದಂತೆ ಪುಂಖಾನುಪುಂಖವಾಗಿ ಕವಿತೆಗಳು ಹೊರಬರುತ್ತವೆ. ಯಾವುದನ್ನೇ ಆದರೂ ಅವನಿಗೆ ಬರೆಯುವುದು ಅದನ್ನು ತನ್ನದೇ ರೀತಿಯಲ್ಲಿ ಬರಹದಲ್ಲಿ ಅರ್ಥೈಸುವುದು ಸುಲಭ. ಆದರೆ, ಪ್ರೇಮದ ಕುರಿತಂತೆ ಹೆಣ್ಣಿನ ದನಿಯೊಂದು ಕನ್ನಡ ಕಾವ್ಯದಲ್ಲಿ ಗುಟ್ಟಾಗಿಯೇ ಉಳಿದುಬಿಟ್ಟಿದೆ; ಮೌನವಾಗಿದೆ. ಆ ಮೌನ ಏನು ಎನ್ನುವುದು ಅನೇಕ ಸಾರಿ ಹೊರಬಂದಿಲ್ಲ. ಅಥವಾ ಹಾಗೆಯೇ ಉಳಿಯುವಂತೆ ಮಾಡಲಾಗಿದೆ. ಅದಕ್ಕೆ ಕಾರಣ ಗಂಡು ಎನ್ನುವುದು ಬೇರೆ ಹೇಳಬೇಕಿಲ್ಲ. ಅದಕ್ಕೇ ನರಸಿಂಹಸ್ವಾಮಿಯವರು ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ಎನ್ನುತ್ತಾರೆ. ಸೋ ಕನಕಾಂಗಿ ಪ್ರೇಮದ ವಿಷಯದಲ್ಲಿ ಮೂಕಾಂಗಿಯಾಗಿದ್ದಾಳೆ.
‘ದೇಹಕ್ಕೆ ಆಹಾರ ಹೇಗೆ ಬೇಕೋ ಆತ್ಮಕ್ಕೆ ಪ್ರೇಮವೂ ಅವಶ್ಯಕ. ಪ್ರೇಮದ ಅನುಭೂತಿ ಇಲ್ಲದ ಜೀವನಕ್ಕೆ ಯಾವ ಅರ್ಥ ಹಾಗೂ ಅಸ್ತಿತ್ವಗಳಿಲ್ಲ’ ಎನ್ನುತ್ತಾನೆ ದಾರ್ಶನಿಕ ಓಶೋ ರಜನೀಶ್. ‘ಪ್ರೇಮ ವಿಧೇಯವಲ್ಲ, ಪ್ರೇಮ ಕ್ರಾಂತಿಕಾರಿ, ಪ್ರೇಮವನ್ನು ಹೊಂದಲು ಸಾಧ್ಯವಿಲ್ಲ’ ಎಂದೂ ಅವನು ಹೇಳುತ್ತಾನೆ. ಹೀಗೆ ಹೇಳಿಕೆಗಳಲ್ಲಿ, ಕವಿತೆಗಳಲ್ಲಿ ಕಂಡ, ಉಲ್ಲೇಖಗೊಂಡ ಪ್ರೇಮದ ಅನುಭವನ್ನು ಖುದ್ದಾಗಿ ನೆನಪು ಮಾಡಿಕೊಳ್ಳಲು ಅನುಭವಿಸಲು ಪ್ರೇಮಿಗಳ ದಿನ ಅನುವು ಮಾಡಿಕೊಡಬಹುದು.
‘ಸಖಿ! ನಮ್ಮ ಸಖ್ಯದ ಆಖ್ಯಾನ ಕಟು–ಮಧುರ’ ಎನ್ನುವ ಬೇಂದ್ರೆಗೆ ಪ್ರೀತಿಗೆ ಬಡತನ, ಶ್ರೀಮಂತಿಕೆ ಯಾವುದೂ ಮುಖ್ಯವಾಗಿಲ್ಲ. ಅದಕ್ಕಾಗಿ ಅವವ ಕವನವೊಂದರ ನಾಯಕಿ ‘ನಾನು ಬಡವಿ ಆತ ಬಡವ/ ಒಲವೆ ನಮ್ಮ ಬದುಕು/ ಬಳಸಿಕೊಂಡೆವದನೆ ನಾವು/ ಅದಕು ಇದಕು ಎದಕು’ (ನಾನು ಬಡವಿ) ಎನ್ನುತ್ತಾಳೆ. ‘ಹಳ್ಳದs ದಂಡ್ಯಾಗ ಮೊದಲಿಗೆ ಕಂಡಾಗ/ ಏನೊಂದು ನಗಿ ಇತ್ತs/ ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ/ ಏರಿಕಿ ನಗಿ ಇತ್ತs/ ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ/ ಹೋಗೇತಿ ಎತ್ತೆತ್ತ’ (ಬಿಸಿಲುಗುದುರೆ) ಎಂದು ಕೇಳುತ್ತಾರೆ. ಇಲ್ಲಿ ಪ್ರೇಮಿಯೊಬ್ಬ ಬದುಕಿನ ಹಾದಿಯಲ್ಲಿ ಸ್ಥಿತ್ಯಂತರಗಳು ಇವೆ. ಚಿಲಿಯ ಕವಿ ಪಾಬ್ಲೊ ನೆರೂಡ ಪ್ರೇಮ ಗೀತೆಯೊಂದರಲ್ಲಿ ಹೀಗೆ ಬರೆಯುತ್ತಾನೆ: ‘ನಿನ್ನನ್ನು ಪ್ರೀತಿಸುವುದಿಲ್ಲವೆಂಬ ಒಂದೇ ಒಂದು ಕಾರಣಕ್ಕೆ ನಾನು ನಿನ್ನನ್ನು ಪ್ರೀತಿಸುತ್ತೇನೆ/ ನಿನ್ನನ್ನು ಹಾಗೆ ಪ್ರೀತಿಸುವುದರಿಂದಲೆ ಪ್ರೀತಿಸಬಾರದೆನಿಸುತ್ತದೆ’ ಎಂದ ಅವನು ಅದೇ ಕವಿತೆಯಲ್ಲಿ ಇನ್ನೊಂದೆಡೆ ಹೀಗೆ ಹೇಳುತ್ತಾನೆ: ‘ನಾನು ನಿನ್ನನ್ನು ಪ್ರೀತಿಸುತ್ತೇನೆ, ಯಾಕೆ ಗೊತ್ತ?/ ನಾನು ಪ್ರೀತಿಸುವುದು ನಿನ್ನನ್ನೇ ಎನ್ನುವ ಕಾರಣಕ್ಕೆ’ (ಅನು: ಜ.ನಾ. ತೇಜಶ್ರೀ). ಪ್ರೀತಿಗೆ ಕಾರಣ ಬೇಕಿಲ್ಲ, ನಮಗೆ ಪ್ರಿಯವಾದ ವ್ಯಕ್ತಿಗಳು ಅವರಿಗೆ ಅಂತಃಕರಣ ಇದ್ದರೆ ಸಾಕು. ಪ್ರೀತಿ ನದಿಯಂತೆ ಹರಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.