ADVERTISEMENT

ನಿರ್ಮಲ ಮನಸಿಗೆ ಕಪಾಲಭಾತಿ

ಗೋಪಾಲಕೃಷ್ಣ ದೇಲಂಪಾಡಿ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ನಿರ್ಮಲ ಮನಸಿಗೆ ಕಪಾಲಭಾತಿ
ನಿರ್ಮಲ ಮನಸಿಗೆ ಕಪಾಲಭಾತಿ   

ಯೋಗಾಭ್ಯಾಸದಲ್ಲಿ ವಿಶೇಷವಾಗಿ ಆಸನಗಳು, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳು ಇರುವ ಹಾಗೆ ಶರೀರದ ಒಳ ಭಾಗವನ್ನು ಶುದ್ಧೀಕರಣ ಮಾಡಲು ಆರು ಪ್ರಧಾನ ಕ್ರಿಯೆಗಳು ಇವೆ. ಅವುಗಳಲ್ಲಿ ಕಪಾಲಭಾತಿಯೂ ಒಂದು. ಇದೊಂದು ಸರಳ, ಸುಲಭ ಹಾಗೂ ಪರಿಣಾಮಕಾರಿ ಕ್ರಿಯೆ.

‘ಕಪಾಲ’ ಎಂದರೆ ಹಣೆ ಅಥವಾ ಮಿದುಳಿನ ಮುಂಭಾಗ. ‘ಭಾತಿ’ ಎಂದರೆ ಬೆಳಕು ಅಥವಾ ಜ್ಞಾನ. ಕಪಾಲಭತಿಯು ಉಸಿರಾಟದ ವ್ಯಾಯಾಮವೂ ಹೌದು. ಕ್ರಿಯೆಯೂ ಹೌದು. ಇದನ್ನು ಅಭ್ಯಾಸ ಮಾಡುವುದರಿಂದ ಮೆದುಳಿನ ಮುಂಭಾಗದ ನರಕೋಶಗಳು ಪುನಃಶ್ಚೇತನಗೊಳ್ಳುತ್ತವೆ.

ನಾನಾ ತರಹದ ಉಸಿರಾಟದ ತೊಂದರೆಗಳಿಗೆ ಕಪಾಲಭಾತಿಯ ನಿಯಮಿತ ನಿತ್ಯಾಭ್ಯಾಸವು ಪರಿಣಾಮಕಾರಿ. ಹಠಯೋಗಿಗಳು ದೇಹದಲ್ಲಿರುವ ಎಲ್ಲಾ ರೀತಿಯ ಕಲ್ಮಶಗಳನ್ನು ಹೊರ ಹಾಕಿ ಶುದ್ಧೀಕರಣ ಮಾಡಲು ಷಟ್ ಕ್ರಿಯೆಗಳನ್ನು ತಿಳಿಸಿದ್ದಾರೆ.

ADVERTISEMENT

ಇಲ್ಲಿ ಯೋಗದೊಂದಿಗೆ ಕ್ರಿಯೆಗಳನ್ನು ಮಾಡುವುದರಿಂದ ಶರೀರದ ವಿವಿಧ ಭಾಗಗಳು ಪಂಚಕೋಶಗಳೂ ಶುದ್ಧೀಕರಣಗೊಳ್ಳುತ್ತವೆ. ಪಂಚಪ್ರಾಣಗಳು ಹತೋಟಿಗೆ ಬರುತ್ತವೆ. ದೇಹ ಮನಸ್ಸು ನಿರ್ಮಲವಾಗಿ ಏಕಾಗ್ರತೆಗೆ ಸಹಕಾರಿಯಾಗುತ್ತದೆ.

ಅಭ್ಯಾಸ ಕ್ರಮ: ವಜ್ರಾಸನ, ಪದ್ಮಾಸನ ಅಥವಾ ಸುಖಾಸನದಲ್ಲಿ ನೇರವಾಗಿ ಹಾಯಾಗಿ ಕುಳಿತುಕೊಳ್ಳಿ. ಮೊದಲಿಗೆ ಉಸಿರನ್ನು ದೀರ್ಘವಾಗಿ ತೆಗೆದುಕೊಂಡು ಹೊಟ್ಟೆಯನ್ನು ಒಳಗೆ ಸೆಳೆದುಕೊಳ್ಳಿ. ಸ್ಫೋಟದ ರೂಪದಲ್ಲಿ ರಭಸವಾಗಿ ಉಸಿರನ್ನು ಬಿಡಬೇಕು. ಕಪಾಲಭಾತಿಯನ್ನು ಆರಂಭಿಸುವವರು ಸುಮಾರು 100 ಮಾಡಿದರೆ ಸಾಕು. ಮುಂದಿನ ಹಂತದಲ್ಲಿ 200ರವರೆಗೂ ಇದನ್ನು ಅಭ್ಯಾಸ ಮಾಡಬಹುದು.

ಪ್ರಯೋಜನಗಳು: ಕಪಾಲಭಾತಿಯ ಅಭ್ಯಾಸದಿಂದ ಮನಸ್ಸು ಮತ್ತು ಶರೀರ ಹಗುರವಾಗುತ್ತದೆ. ಉತ್ಸಾಹ – ಉಲ್ಲಾಸವನ್ನು ಹೆಚ್ಚಿಸುತ್ತದೆ. ಹೃದಯ ಮತ್ತು ಶ್ವಾಸಕೋಶಗಳು ಬಲಗೊಂಡು ಅವುಗಳ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಉಸಿರಾಟದ ದಕ್ಷತೆ ಉತ್ತಮಗೊಂಡು ರಕ್ತದ ಪರಿಚಲನೆ ಸುಗಮವಾಗುತ್ತದೆ. ದೇಹದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹೊರ ಹೋಗುತ್ತದೆ.

ದೇಹದಲ್ಲಿರುವ ಇತರ ಕಲ್ಮಶಗಳು ಬಿಡುಗಡೆಯಾಗುತ್ತದೆ. ಶ್ವಾಸಮಾರ್ಗವು ಶುಚಿಯಾಗಿ ಹೊಟ್ಟೆಯ ಒಳಗಿನ ಅಂಗಗಳು ಪುನಃಶ್ಚೇತನಗೊಳ್ಳುತ್ತವೆ.

ಕಪಾಲಭಾತಿಯ ಅಭ್ಯಾಸವು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಆಸಿಡಿಟಿ ಸಮಸ್ಯೆ ನಿವಾರಣೆಗೆ ಉತ್ತಮ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಇದು ಸಹಕಾರಿ. ದೇಹದ ಜಡತ್ವ ಹೋಗಿ ಮೃದುತ್ವ ಒದಗಿ ಬರುತ್ತದೆ. ಮಿದುಳಿನ ಜೀವಕೋಶಗಳಿಗೆ ಹೆಚ್ಚಿನ ಪ್ರಚೋದನೆ ಸಿಗುವುದರಿಂದ ನೆನಪು ಶಕ್ತಿ ಹೆಚ್ಚಾಗುತ್ತದೆ. ಮಾನಸಿಕ ಆರೋಗ್ಯವು ಉತ್ತಮಗೊಳ್ಳುತ್ತದೆ. ಅಲ್ಲದೆ ದೇಹವು ದೃಢತೆಯನ್ನು ಹೊಂದಿ ಸದೃಢವಾಗುತ್ತದೆ.

ಗಮನಿಸಿ: ಕಪಾಲಭಾತಿ ಕ್ರಿಯೆಯನ್ನು ಅಧಿಕ ರಕ್ತದೊತ್ತಡ, ಹೃದಯ ದೌರ್ಬಲ್ಯ, ಅತಿಯಾದ ಬೆನ್ನುನೋವು ಅಲ್ಲದೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದಲ್ಲಿ ಅಭ್ಯಾಸ ಮಾಡಬಾರದು. ಗುರು ಮುಖೇನ ಹೆಚ್ಚಿನ ಸಲಹೆ ಪಡೆದು ಅಭ್ಯಾಸ ಮಾಡಬೇಕು.

ಆರು ಪ್ರಧಾನ ಕ್ರಿಯೆ/ಷಟ್ ಕ್ರಿಯೆ
1. ಕಪಾಲ ಭಾತಿ – (ಶ್ವಾಸ ಮಾರ್ಗ)
2. ತ್ರಾಟಕ – (ಕಣ್ಣುಗಳಿಗೆ)
3. ನೇತಿ – (ಮೂಗಿನಿಂದ ಗಂಟಲಿನ ತನಕ)
4. ಧೌತಿ – (ಜಠರ ಅನ್ನನಾಳ)
5. ನೌಳಿ - (ಹೊಟ್ಟೆಯ ಸ್ನಾಯುಗಳಿಗೆ)
6. ಬಸ್ತಿ – ಮಲಶೋಧನ ಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.