ADVERTISEMENT

ನುಗ್ಗಿ ನಡೆವವರ ಹಾಡು ಪಾಡು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST
ನುಗ್ಗಿ ನಡೆವವರ  ಹಾಡು ಪಾಡು
ನುಗ್ಗಿ ನಡೆವವರ ಹಾಡು ಪಾಡು   

ಹೆಗಲ್ಲ್ಲಲೊಂದು ಬ್ಯಾಗ್, ಕೈಯಲ್ಲೊಂದು ನೀರಿನ ಬಾಟಲಿ ಹಿಡಿದುಕೊಂಡು ಅವರೆಲ್ಲ ನಡಿಗೆಗೆ ಸಜ್ಜಾಗಿದ್ದರು. ಬೆಳಿಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್ ಹೋಗಬೇಕು ಎಂಬ ಸಂಕಲ್ಪವನ್ನು ಎಂದೂ ಚಳಿಯ ಕಾರಣಕ್ಕೆ ಬಿಟ್ಟುಕೊಟ್ಟವರಲ್ಲ. `ಬೇಗನೆ ಎದ್ದು ವಾಕ್ ಮಾಡಿ ಸಣ್ಣಗಾಗಿದ್ದೇನೆ ನೋಡಿ' ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಿದ್ದರು ಅವರು.

ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಟ್ರೇಲ್‌ವಾಕರ್ ಎಂಬ ಲಘುನಡಿಗೆ ಕಾರ್ಯಕ್ರಮದಲ್ಲಿ ಕಂಡುಬಂದ ನೋಟಗಳಿವು. ಅಲ್ಲಿ ಮಾತಿಗೆ ಸಿಕ್ಕ ತಂಡದವರ ಅಭಿಪ್ರಾಯ ಹೀಗಿತ್ತು...

`ಆಕ್ಸ್‌ಫಾಮ್‌ನವರು ಮಾಡುತ್ತಿರುವ  ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ನಾನು ಇದೇ ಮೊದಲ ಬಾರಿ ಭಾಗವಹಿಸುತ್ತಿರುವುದು. 48 ಗಂಟೆ ಅವಧಿಯಲ್ಲಿ 100 ಕಿ.ಮೀ ನಡೆಯುವುದು ನಿಜಕ್ಕೂ ಖುಷಿ ಆಗುತ್ತಿದೆ. ನಾನು ಬೇರೆ ಕಡೆ ನಡಿಗೆ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ನಾಲ್ಕು ಜನರ ತಂಡ ಕಟ್ಟಿಕೊಂಡು ಈಗ ಹೋಗುತ್ತಿರುವುದು ಒಂದು ರೀತಿ ಮನರಂಜನೆಯಾಗಿದೆ. ಸಮಾಜ ಸೇವೆ ಕಾರ್ಯದಲ್ಲಿ ಭಾಗವಹಿಸುವ ಖುಷಿ ಇದು. ಈ ನಡಿಗೆಗಾಗಿ ನಾನು ದಿನಾ ಅಭ್ಯಾಸ ಮಾಡುತ್ತಿದ್ದೇನೆ. ದಿನಾ ಬೆಳಿಗ್ಗೆ 20ರಿಂದ 30 ಕಿ.ಮೀ ನಡೆಯುತ್ತೇನೆ. ಇದು ನನಗೆ ತುಂಬಾ ಸಹಾಯವಾಗಿದೆ. ಒಂದಿಷ್ಟು ಹಣ ಸಂಗ್ರಹಿಸಿ ಸಮಾಜ ಸೇವೆಗೆ ನೀಡಬೇಕು ಎಂಬ ಉದ್ದೇಶ ಕೂಡ ಇದೆ. ಅದು ಅಲ್ಲದೇ ಈ ನಡಿಗೆಯಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಲತಾ.

`ನಾನು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ತಂಡದಲ್ಲಿ ಇದ್ದವರು ಕಳೆದ ಬಾರಿ ಹೋಗಿದ್ದಾರೆ. ನನಗೂ ಹೋಗಬೇಕು ಎಂಬ ಆಸೆ ಆಗಲೇ ಶುರುವಾಗಿತ್ತು. ಹಾಗಾಗಿ ಈ ಸಲ ಅವಕಾಶ ಕಳೆದುಕೊಳ್ಳಬಾರದು ಎಂದು ಬಂದಿದ್ದೇನೆ. ನನ್ನ ಜತೆ ನನ್ನ ಸ್ನೇಹಿತ ಕೂಡ ಬಂದಿದ್ದಾನೆ. ಟ್ರೇಲ್ ವಾಕರ್‌ನಿಂದ ಒಂದು ತಂಡ ಬೆಳೆಯುತ್ತದೆ. ಈ ಒತ್ತಡದ ಜೀವನದ ಮಧ್ಯದಲ್ಲಿ ಈ ರೀತಿ ಹೋಗುವುದು ತುಂಬಾ ಖುಷಿ ಕೊಡುತ್ತದೆ. ಜತೆಗೆ ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಆಫೀಸ್ ಕೆಲಸ ಮುಗಿಸಿ ದಿನ ಮನೆಯ ಹತ್ತಿರ ಇರುವ ಪಾರ್ಕ್‌ನಲ್ಲಿ ಅಭ್ಯಾಸ ಮಾಡುತ್ತೇನೆ' ಎಂದು ಬೆವರನ್ನು ಒರೆಸಿಕೊಂಡರು ಜನಾರ್ದನ್.

ಇವರಿಬ್ಬರ ಮಾತು ಕೇಳುತ್ತಾ ಪ್ರತಿ ಮಾತಿಗೂ ಕಣ್ಣರಳಿಸುತ್ತಾ `ಅಚ್ಛಾ ಅಚ್ಛಾ' ಎಂದು ಉಲಿಯುತ್ತಿದ್ದ ಆಕ್ಸ್‌ಫಾಮ್ ಇಂಡಿಯಾದ ಸಿಇಒ ನಿಶಾ ಅಗರ್‌ವಾಲ್, `ಈ ವರ್ಷ ನೂರು ಕಿ.ಮೀ. ದೂರ ನಡೆಯಲಿದ್ದೇನೆ. 48 ಗಂಟೆಗಳಲ್ಲಿ 100 ಕಿ.ಮೀ. ದೂರ ನಡೆಯುವುದು ದೊಡ್ಡ ಸವಾಲೇ. ಆದರೂ ಭಾಗವಹಿಸಬೇಕು ಎಂಬ ಉದ್ದೇಶ ನನ್ನದು. ಅಭ್ಯಾಸ ಮಾಡಿಕೊಂಡಿಲ್ಲ' ಎಂದರು.

ಇಲ್ಲಿ ಸಂಗ್ರಹಿಸಿದ ನಿಧಿಯನ್ನು ಸಮಾಜಸೇವೆಗಾಗಿ ಬಳಸಿಕೊಳ್ಳುವ ಉದ್ದೇಶವಿದೆಯಂತೆ. ಈ ಹಣ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಸದಸ್ಯರು ತಿಳಿದುಕೊಳ್ಳುವ ಅವಕಾಶವಿದೆಯಂತೆ. ಟ್ರೇಲ್‌ವಾಕರ್ 2ನೇ ಆವೃತ್ತಿಗೆ 65 ತಂಡಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ.
ಟ್ರೇಲ್‌ವಾಕರ್ ಕಾರ್ಯಕ್ರಮ ಮುಂದಿನ ಜನವರಿ 25ರಿಂದ 27ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.