ADVERTISEMENT

ಪುಟ್ಟ ಪುಟ್ಟ ಮಾತು ಫುಟ್‌ಪಾತ್‌ನ ಮಾತು...

ಡಿ.ಎಂ.ಕುರ್ಕೆ ಪ್ರಶಾಂತ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

`ಬನ್ನಿ... ಬನ್ನಿ... ಈ ಬಜಾರಿಗೆ. ಇಲ್ಲಿ ಎಲ್ಲವೂ ಉಂಟು. ಎಲ್ಲರ ಆಸೆಗಳು ಈಡೇರುತ್ತವೆ. ಕನಸುಗಳು ಕೈಗೆಟಕುತ್ತವೆ.  ಇದು ಮಾಯಾಲೋಕವಲ್ಲ.

ಮಾಯಾನಗರಿಯ ಬೀದಿ ವ್ಯಾಪಾರಿಯ ಬೀಡು. `ಫುಟ್‌ಪಾತ್~ ವ್ಯಾಪಾರ.
ಕಾನೂನು ಸಮ್ಮತವೋ, ಅತಿಕ್ರಮವೋ, ಅನಧಿಕೃತವೋ ಇಂಥ ಎಲ್ಲ ವಾದವನ್ನು ಬದಿಗೊತ್ತಿ.  ಎಲ್ಲರ ಗಮನವನ್ನೂ ಸೆಳೆಯುವ ತಾಕತ್ತಿದೆ ಎಂಬುದೇ ಫುಟ್‌ಪಾತ್ ವ್ಯಾಪಾರದ ವಿಶೇಷ.

ಮಾಯಾ ನಗರಿಯ ಒಡಲು ಸೀಳಿ ಮೇಲೇಳುವ ಗಗನ ಚುಂಬಿ ಮಾಲ್‌ಗಳು ಹೊಳೆಯುವ ಬಟ್ಟಲು ಕಂಗಳಂತೆ ಕಾಣುತ್ತವೆ. ಫುಟ್‌ಪಾತ್‌ಅದೇ ಕಣ್ಣ ಬದಿ ಇಡುವ ದೃಷ್ಟಿ ಬೊಟ್ಟಿನಂತೆ. ಗಮನ ಸೆಳೆಯದೇ ಇರುವುದಿಲ್ಲ.ಮಾಲ್‌ಗೆ ಬರುವವರು ಪ್ರತಿಷ್ಠಿತರು ಮಾತ್ರ. 

ಆದರೆ ಇಲ್ಲಿ ಮಾತ್ರ ಯಾವ ಬೇಧ ಭಾವವೂ ಇಲ್ಲ. ಎಲ್ಲ ವರ್ಗದವರೂ ಬರುತ್ತಾರೆ. ಕೆಲವರಿಗೆ ಅಸಡ್ಡೆ. ಇನ್ನು ಕೆಲವರಿಗೆ ಕುತೂಹಲ. ಅಂತೂ ಆಗೀಗ ತಮ್ಮೆಲ್ಲ ಪ್ರತಿಷ್ಠೆಯನ್ನು ಬದಿಗಿರಿಸಿ ವ್ಯಾಪಾರಿಗಳಿಗೆ ಉಪಕರಿಸುವವರಂತೆ ವ್ಯಾಪಾರಕ್ಕೂ ಇಳಿಯುತ್ತಾರೆ.

ಮಕ್ಕಳಿಗೆ ಬೊಂಬೆ ಕೊಡಿಸಲು ಕಾರಿನಿಂದಿಳಿದು ಬರುತ್ತಾರೆ. ಇಲ್ಲಿ ಮಾತ್ರ ದೊರೆಯುವ ಅರ್ಧ ಬೆಲೆಯ ಪುಸ್ತಕಗಳ ನಡುವೆ ಒಮ್ಮಮ್ಮೆ ಕಳೆದುಹೋಗುತ್ತಾರೆ. ಮಾಲ್‌ಗಳಲ್ಲಿ ಸಿಗದ ಹೊಸ ವಿನ್ಯಾಸದ ಚಪ್ಪಲಿಗಳನ್ನು ಕೊಳ್ಳಲೂ ಪಾದ ಬೆಳೆಸುತ್ತಾರೆ.  

 ತಲೆ ಕೆದರಿದರೆ ಬಾಚಲು, ಮೊಗ ಒಣಗಿದರೆ ಒರೆಸಲು, ಬಣ್ಣ ಕೆಟ್ಟಿದೆ ಎಂಬುದನ್ನು ನೆನಪಿಸಿ, ಪ್ರತಿಬಿಂಬ ತೋರಿ ಕ್ರಾಪು ಸರಿಪಡಿಸಲು ಅಲಂಕಾರದ ಕಿಟ್ಟೇ ಬಿಕರಿಗಿದೆ.
ಈಗೀಗ  ಹೈ- ಫೈ ವಸ್ತುಗಳೂ ದೊರೆಯುತ್ತವೆ.  ಟ್ರಿಮ್ಮರ್, ಶೇವರ್, ಹ್ಯಾಂಡ್‌ಫ್ರೀ, ಹೆಡ್‌ಫೋನ್ ಅಷ್ಟೇ ಅಲ್ಲ, ಚಾರ್ಜರ್‌ಗಳನ್ನೂ ಮಾರಾಟಕ್ಕಿವೆ. ಎಷ್ಟೇ ಆದರೂ ಬದಲಾವಣೆ ಜಗದ ನಿಯಮ ಅಲ್ಲವೇ?

ಮನೆಯ ಅಂಗಳದ ಅಂದವನ್ನ ಹೆಚ್ಚಿಸುವ ಹೂ ಕುಂಡಗಳು, ಕೈ ಮುಗಿಯಲು ದೇವರೂ ಇಲ್ಲಿಯೇ ಸಿಗುತ್ತಾರೆ.  ಸಂಗಾತಿಯನ್ನು ಓಲೈಸಲು ಹೂ, ಸುಗಂಧ, ಎಲ್ಲವೂ ಇಲ್ಲಿವೆ.  ಆದರೆ ಕೊಳ್ಳುವುದು ಮಾತ್ರ ಅವರವರು ಚೌಕಾಸಿ ಮಾಡುವ ಕಲೆಯನ್ನು ಅವಲಂಬಿಸಿದೆ. ಡೆಬಿಟ್- ಕ್ರೆಡಿಟ್ ಕಾರ್ಡ್‌ಗಳ ಹಂಗಿಲ್ಲ.

ದಾಹ ತಣಿಸಲು ಕಬ್ಬಿನ ಹಾಲು, ಮೋಸಂಬಿ, ಪೈನಾಪಲ್ ಜೂಸು, ನಾಲಗೆ ಚಪಲ ತೀರಿಸಲು ಮೆಕ್ಕೆ ಜೋಳ, ನೆಲ್ಲಿಕಾಯಿ ಸಹ ಸಿಗುತ್ತವೆ.

ಹಸಿವು ಹಿಂಗಿಸಲು  ಅನ್ನ ಹೊತ್ತ ನೂಕು ಗಾಡಿಗಳು, ರುಚಿಯ ಕಿಣ್ವಗಳನ್ನು ತೀವ್ರಗೊಳಿಸುವ ಪಾನಿಪುರಿ, ಗೋಬಿ ಮಂಚೂರಿಯೂ ಸಿಗುತ್ತದೆ.  ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ಮೆಕ್ಕೆ ಕಾಳು, ಎಳನೀರು ಸಹ ಸಿಗುತ್ತದೆ.

ಮಾನ ಮುಚ್ಚಲು ಬಣ್ಣದ ಬಟ್ಟೆಗಳು, ಪೆನ್ನು, ಪೆನ್ಸಿಲ್ಲು, ಪರ್ಸ್, ಆಟಿಕೆಗಳು,  ಎಳೆ ನೀರು, ಕುರುಕಲು ತಿಂಡಿಗಳು, ಬಣ್ಣ ಬಣ್ಣದ ಹಣ್ಣುಗಳು, ಸಂಜೆಯಾದರೆ ವೈವಿಧ್ಯದ ಖಾದ್ಯದ  ಮತ್ತೊಂದು ಸಾಲು.

ಈಗೀಗ ಸೋಪು, ಶಾಂಪು, ಕ್ರೀಮುಗಳಿಗೂ ಪ್ರವೇಶ. ಮೆಜೆಸ್ಟಿಕ್ಕಿನ ತಲೆಗೆ ಸುತ್ತಿದ ಪೇಟದಂತಿರುವ ತೂಗು ಸೇತುವೆ, ಕೆಂಪೇಗೌಡರ ರಸ್ತೆಯ ಆಜು ಬಾಜು, ಶಿವಾಜಿನಗರದ ಗಲ್ಲಿಗಳು, ಕೆ.ಆರ್. ಮಾರುಕಟ್ಟೆ ಎಲ್ಲೆಡೆಯೂ ಫುಟ್‌ಪಾತ್ ವ್ಯಾಪಾರವೇ ಜೋರು.

ಆದರೆ ಆಗಾಗ ಪೊಲೀಸರು ಬಂದರೆ, ವ್ಯಾಪಾರಕ್ಕೊಂದು ಸಣ್ಣ ಬ್ರೇಕು. ಪಟ್ಟನೆ ಎಲ್ಲವನ್ನೂ ಜಂಗಮಜೋಗಿಯ ತೂಗುಚೀಲಕ್ಕೆ ತುಂಬಿಕೊಂಡು ಹೊರಡಬೇಕು. ಒಂದರ್ಧ ಗಂಟೆ ಬಿಡುವು. ಇಲ್ಲದಿದ್ದರೆ ಯಾರಿಗೆ ಬೇಕು ಇಲ್ಲದ ಗಲಾಟೆ? ದಂಡ!
ಒಮ್ಮೆ ಸೀಡಿ ಮಾರಾಟದಲ್ಲಿ ಸಿಕ್ಕಿಕೊಂಡ ಹುಡುಗ, ಇನ್ನೊಮ್ಮೆ ವಾಚುಗಳ ಮಾರಾಟಕ್ಕೆ ನಿಲ್ಲುತ್ತಾನೆ. ಬಿಡುವಿದ್ದಾಗ ಇಲ್ಲಿಯೇ ಕೊಳ್ಳುವ ಪೊಲೀಸರು, ಸಮವಸ್ತ್ರ ಧರಿಸಿದಾಗ ಕೋಲು ಹಿಡಿದುಕೊಂಡು ಓಡಿಸುತ್ತಾರೆ.

ಇದು ಪಬ್ಲಿಕ್. ಇದು ಫುಟ್‌ಪಾತ್. ದಿನ-ಜನ ಬದಲಾವಣೆಯೇ ಇದರ ಹೆಗ್ಗುರುತು. ಬಯಸಿದ್ದೆಲ್ಲವೂ ಎಲ್ಲರಿಗೂ ಸಿಗಲಿ ಎಂಬುದೇ ಎಲ್ಲರ ಆಶಯ.

ದಿನ ದಿನವೂ ವೇಷ ಬದಲಾಗುತ್ತವೆ, ಜಾಗವೂ. ಎಲ್ಲರಿಗೂ ದೊರೆಯಬೇಕೆಂಬ ಆಶಯ ಮಾತ್ರ ಸ್ಥಿರ. ಬೇಕಿರುವುದು ಬರೀ ಚಮತ್ಕಾರ. ಮಾತು ಮಾತು. ಇಲ್ಲಿ ಮಾತು ಬಲ್ಲವನದ್ದೇ ವ್ಯಾಪಾರ. ಸುಮ್ಮನೇ ನೋಡಿ ಹೋಗುವವರಿಗೂ ಏನಾದರೂ ಕೊಳ್ಳುವಂತೆ ಮಾಡುವ ಕಲೆ. ಇದಕ್ಕೆ ಹೆಚ್ಚು ಬಂಡವಾಳ ಬೇಕಿಲ್ಲ. ಹೆಚ್ಚು ಆದಾಯವೂ ಇಲ್ಲ. ಆದರೆ ಸ್ವಾವಲಂಬಿ ಬದುಕಿಗೆ ಕಷ್ಟವಿಲ್ಲ.

ಆದರೂ ಈ ವ್ಯಾಪಾರವನ್ನು ಕಡೆಗಣಿಸುವ ಛಾತಿ ಯಾರಲ್ಲೂ ಇಲ್ಲ. ಇದೆಲ್ಲದರ ನಡುವೆಯೇ ಬೆಳೆಯ ಬೇಕು. ಉಳಿಯಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.