ADVERTISEMENT

ಫ್ಯಾಷನ್‌ ಕ್ಷೇತ್ರದ ಕನಸು, ಸೆಲೆಬ್ರಿಟಿ ಸ್ಟೈಲಿಸ್ಟ್‌ ಆಗುವ ಮನಸು

ಅಭಿಲಾಷ ಬಿ.ಸಿ.
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಲಕ್ಷ್ಮಿ
ಲಕ್ಷ್ಮಿ   

ಬಾಲ್ಯದಿಂದಲೇ ಫ್ಯಾಷನ್‌ ಕ್ಷೇತ್ರದ ಒಲವು ಹೊತ್ತು ಬೆಳೆದ ಲಕ್ಷ್ಮಿ ಕಾಲೇಜು ದಿನಗಳಲ್ಲಾಗಲೇ ವಿವಿಧ ರ‍್ಯಾಂಪ್‌ ಮೇಲೆ ಭರವಸೆಯ ಹೆಜ್ಜೆ ಹಾಕಿದ್ದರು. ಓದುವುದರಲ್ಲಿಯೂ ಮುಂದಿದ್ದ ಚೆಲುವೆ ಜೊತೆ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಬೆಂಗಳೂರಿನ ಆರ್‌.ಟಿ. ನಗರ ನಿವಾಸಿ ಲಕ್ಷ್ಮಿ, ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ವಿಜ್ಞಾನ ಪದವಿ ಪೂರೈಸಿ ಫ್ಯಾಷನ್‌ ಕ್ಷೇತ್ರದಲ್ಲಿ ಮಿಂಚಬೇಕು ಎನ್ನುವಾಗಲೇ ಹಾಡ್ಜ್‌ಕಿನ್ಸ್‌ ಲಿಂಫೋಮ (hodgkins lymphoma) ಕ್ಯಾನರ್‌ ಕಾಡಿತ್ತು.

22ನೇ ವಯಸ್ಸಿಗೆ ರೇಡಿಯೋ ಥೆರಪಿ, ಕೀಮೋ ಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ಒಳಗಾದರು. ಜೀವನದ ಬಗೆಗೆ ಅವರಿಗಿದ್ದ ಸಕಾರಾತ್ಮಕ ಮನೋಭಾವದ ಕಾರಣದಿಂದಾಗಿ 3 ತಿಂಗಳ ಚಿಕಿತ್ಸೆಯಲ್ಲಿ ಸಂಪೂರ್ಣ ಗುಣಮುಖವಾದರು. 2017 ರ ಫೆಬ್ರುವರಿಯಲ್ಲಿ ಸೈಟ್ಕೇರ್‌ ಆಸ್ಪತ್ರೆಯ ಹರಿ ಮೆನನ್‌ ಅವರಿಂದ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಮತ್ತೆ ಅಧ್ಯಯನದಲ್ಲಿ ತೊಡಗಿಕೊಂಡರು.

ವಿಜ್ಞಾನ ಪದವಿ ಪಡೆದ ಅವರಿಗೆ ಸೂಕ್ಷ್ಮ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುವ ಆಸಕ್ತಿ ಇತ್ತು. ಅನಾರೋಗ್ಯದ ಕಾರಣದಿಂದಾಗಿ ಶಿಕ್ಷಣ ಮುಂದುವರೆಸಲು ಸಾಧ್ಯವಾಗದಿದ್ದರೂ, ಫ್ಯಾಷನ್‌ ಕ್ಷೇತ್ರದಲ್ಲಿ ಛಾಪು ಮೂಡಿಸುವ ಅವರ ಹಂಬಲ ಕುಗ್ಗಲಿಲ್ಲ. ತಮ್ಮ ಆಸಕ್ತಿಯ ಕ್ಷೇತ್ರಕ್ಕೆ ಮರಳಿದ ಅವರೀಗ ‘ಪುಣೆ ಫ್ಯಾಷನ್‌ ವೀಕ್‌’ನಲ್ಲಿ ಇಂಟರ್ನ್‌ಶಿಪ್‌ ಪಡೆಯುತ್ತಿದ್ದಾರೆ. ‘ಫ್ಯಾಷನಬಲ್‌ ಭಾರತ್‌’ ಎನ್ನುವ ಹೊಸ ವೆಬ್‌ಸೈಟ್‌ನಲ್ಲಿ ಸ್ಟೈಲಿಸ್ಟ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ‘ಲಂಡನ್‌ ಸ್ಕೂಲ್‌ ಆಫ್‌ ಫ್ಯಾಷನ್‌’ನಲ್ಲಿ ಸ್ಟೈಲಿಂಗ್‌ ಕಲಿಯಬೇಕೆನ್ನುವ ಹೆಬ್ಬಯಕೆ.

ADVERTISEMENT

ಕಾಲೇಜು ದಿನಗಳಲ್ಲಿ ಫಾರ್ ಎವರ್ 21, ಫಾರ್ ಎವರ್ ನ್ಯೂ, ರಿಲಯನ್ಸ್‌ ಟ್ರೆಂಡ್‌, ಸೋಚ್‌, ಶ್ರೀ ಕೃಷ್ಣ ಜ್ಯೂವೆಲ್ಲರ್ಸ್‌, ಮ್ಯಾಕ್ಸ್‌ ಮೊದಲಾದ ಕಂಪೆನಿಗಳ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿಯೂ ಮಿಂಚಿದ್ದರು. ಸುಧಾ ನಿಯತಕಾಲಿಕೆ, ಡೆಕ್ಕನ್‌ ಹೆರಾಲ್ಡ್‌ ‘ಮೆಟ್ರೊ ಲೈಫ್‌’ ಫ್ಯಾಷನ್‌ ಶೋಗಳಲ್ಲಿ ನಡುಬಳುಕಿಸಿದ್ದರು.

ಚಿಕ್ಕಂದಿನಿಂದಲೇ ಫ್ಯಾಷನ್‌ ಜಗತ್ತಿನ ಬಗ್ಗೆ ಆಸಕ್ತಿ ಹೊಂದಿದ್ದ ಲಕ್ಷ್ಮಿ ಕಾಲೇಜು ದಿನಗಳಲ್ಲಿ ಫ್ಯಾಷನ್‌ ಎಂದರೆ ಮಾಡೆಲಿಂಗ್‌ಗೆ ಸೀಮಿತ ಎಂದು ಭಾವಿಸಿದ್ದರಂತೆ.  ನಂತರ ಫ್ಯಾಷನ್‌ ಲೋಕದ ವಿವಿಧ ಮುಖಗಳನ್ನು ಪರಿಚಯಿಸಿಕೊಂಡ ಅವರು ಸೆಲೆಬ್ರಿಟಿ ಸ್ಟೈಲಿಸ್ಟ್‌ ಆಗುವತ್ತ ಗಮನ ಹರಿಸಿದರು. ಪದವಿ ನಂತರ ಕೆಲಕಾಲ ಎಚ್‌ಸಿಜಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದರು. 

‘ಫ್ಯಾಷನ್‌ ಕ್ಷೇತ್ರದಲ್ಲಿಯೇ ಭಿನ್ನವಾದದನ್ನು ಸಾಧಿಸಬೇಕೆಂಬ ಆಸೆ ಇದೆ. ಸೆಲೆಬ್ರಿಟಿ ಸ್ಟೈಲಿಸ್ಟ್‌ ಆಗಿ ಫ್ಯಾಷನ್‌ ಲೋಕದ ಟ್ರೆಂಡ್‌ ಸೆಟ್ಟರ್‌ ಆಗಬೇಕು. ಸೆಲೆಬ್ರಿಟಿಗಳು ಯಾವ ಕಾರ್ಯಕ್ರಮಗಳಿಗೆ ಯಾವ ಬಗೆಯ ಉಡುಗೆಗಳನ್ನು ತೊಡಬೇಕು. ಅವರ ಒಟ್ಟಾರೆ ಅಪಿಯರನ್ಸ್‌ ಹೇಗಿರಬೇಕು. ಯಾವ ಬ್ರ್ಯಾಂಡ್‌ಗಳನ್ನು ಧರಿಸಬೇಕೆಂದು ಸಲಹೆ ನೀಡುವುದು ಸ್ಟೈಲಿಸ್ಟ್‌ ಕೆಲಸ. ಕ್ರಿಯಾಶೀಲತೆಯ ಈ ವೃತ್ತಿಯ ಜೀವಾಳ. ಫ್ಯಾಷನ್‌ ಡಿಸೈನರ್‌ಗಿಂತ ಭಿನ್ನವಾದ, ಹೆಚ್ಚು ಸವಾಲಿರುವ ವೃತ್ತಿ ಇದು. ಈ ಕೌಶಲವನ್ನು ಕಲಿಯಲು ಲಂಡನ್‌ ಸ್ಕೂಲ್ ಆಫ್‌ ಫ್ಯಾಷನ್‌ಗೆ ಹೋಗುತ್ತಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿ.

ದೀಪಿಕಾ ಪಡುಕೋಣೆಯವರ ಸ್ಟೈಲಿಸ್ಟ್ ಆಗಿರುವ ‘ಶಲಿನಾ ನಟಾನಿ’ ಅವರಂತೆ ಫ್ಯಾಷನ್‌ ಕ್ಷೇತ್ರದಲ್ಲಿ ಅಸ್ಮಿತೆ ಕಂಡುಕೊಳ್ಳಬೇಕು ಎನ್ನುವ ಲಕ್ಷ್ಮಿ, ‘ಇತ್ತೀಚೆಗೆ ಸ್ಟೈಲಿಸ್ಟ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಪ್ರತಿ ಸೆಲೆಬ್ರಿಟಿಯೂ ಟ್ರೆಂಡ್‌ ಸೆಟ್ಟರ್ ಆಗ ಬಯಸುತ್ತಿರುವುದು ಹಾಗೂ ಅವರ ಪ್ರತಿ ಹೆಜ್ಜೆಯನ್ನು ಮಾಧ್ಯಮಗಳು ಗಮನಿಸುತ್ತಿರುವುದು, ಅಭಿಮಾನಿಗಳ ದೊಡ್ಡ ವಲಯವೊಂದು ಅವರನ್ನು ಅನುಸರಿಸುತ್ತಿರುವುದರಿಂದ ಸ್ಟೈಲಿಸ್ಟ್‌ ವೃತ್ತಿಯ ಬೇಡಿಕೆ ಹೆಚ್ಚಿದ್ದು, ಲಾಭದಾಯಕ ಉದ್ಯೋಗವಾಗಿದೆ’ ಎನ್ನುತ್ತಾರೆ ಲಕ್ಷ್ಮಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.