ADVERTISEMENT

ಬಂಗಾರದ ಮಿಂಚು

ಶೈಲಜಾ ಹೂಗಾರ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST

ಚಿನ್ನದ ಬಣ್ಣದ ಛಾಯೆಯ ಟಿಶ್ಯೂ ಸೀರೆಗೆ ಕೆಂಪಂಚು. ಹಾಲ್ಟರ್ ನೆಕ್‌ನ ಪಿಂಕ್ ಬ್ಲೌಸ್‌ನಲ್ಲಿ ರಮ್ಯ ಲಾಸ್ಯಯುತವಾಗಿ ನಡೆದು ಬಂದರು. ಕತ್ತಿನ ನೆಕ್ಲೇಸ್, ಕಿವಿಯೋಲೆಗಳ ಹೊಳಪಿಗೆ ಹೊಳೆ ಹೊಳೆವ ಕೆನ್ನೆ ಸ್ಪರ್ಧೆಯೊಡ್ಡಿದಂತಿತ್ತು. 

 ಆರ್ಟ್ ಆಫ್ ಜುವೆಲರಿ ಮ್ಯಾಗಜಿನ್ ಸಹಯೋಗದಲ್ಲಿ ಸೋಮವಾರ ವರೆಗೆ ನಡೆಯಲಿರುವ ಬೆಸ್ಟ್ ಆಫ್ ಇಂಡಿಯಾ ಜುವೆಲರಿ ಶೋ (ಬಿಐಜೆಎಸ್)ನ ಪ್ರಚಾರ ರಾಯಭಾರಿಯಾದ ರಮ್ಯ ಶುಕ್ರವಾರದ ಉದ್ಘಾಟನೆ ಸಮಾರಂಭಕ್ಕೂ ವಿಶೇಷ ಕಳೆ ಒದಗಿಸಿದರು. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದಿರುವ ಪ್ರದರ್ಶನದಲ್ಲಿ ಮುಂಬೈ, ಅಮೃತ್‌ಸರಗಳ ಆಭರಣಕಾರರಲ್ಲದೆ ಬೆಂಗಳೂರಿನ ಪ್ರಮುಖ ಹೆಸರುಗಳಾದ ಆಭರಣ್, ನವರತನ್, ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್, ನೀಲಕಂಠ್, ಜೋಯಾಲುಕ್ಕಾಸ್ ಮುಂತಾದವೂ ಭಾಗವಹಿಸಿವೆ.

ನಿಮಗೆಂದೇ ವಿಶೇಷ ವಿನ್ಯಾಸ

ನೂರಕ್ಕೂ ಹೆಚ್ಚು ಮಳಿಗೆಗಳಿದ್ದು ಜೈಪುರದ ಮಳಿಗೆಗಳ ಗುಂಪು ಆಕರ್ಷಕ. ವಿಶಿಷ್ಟ ಕೌಶಲದ ಹಸ್ತಕಲೆಯ ಕುಂದನ್ ಮೀನಾಕಾರಿ, ಜಡಾವ್‌ಗಳು ಇಲ್ಲಿನ ವಿಶೇಷ. ವಿಕ್ಟೋರಿಯನ್ ವಿನ್ಯಾಸ, ಮೀನಾಕಾರಿ ಕಲೆ ಹಾಗೂ ಥೇವಾ (ಗಾಜಿನ ಮೇಲೆ ಚಿನ್ನದ ಹಾಳೆಯ ಕುಸುರಿ)ಗಳೆಲ್ಲ ಒಂದರಲ್ಲೇ ಮೇಳೈಸಿದ ‘ಸೋಜೊ’ ಕುಸುರಿಯ ಸರವಂತೂ ಅತ್ಯಾಕರ್ಷಕ ವಿಭಿನ್ನ ನೋಟ ನೀಡುತ್ತದೆ. ಬೆಲೆ ನಾಲ್ಕು ಲಕ್ಷದ ಮೇಲೆ!

ದೊಡ್ಡ ದೊಡ್ಡ ಮುತ್ತು, ಪಚ್ಚೆ, ರೂಬಿ, ಅನ್‌ಕಟ್ ಹಾಗೂ ರೋಸ್ ವಜ್ರಗಳ ಆಭರಣಗಳು ಮೋಹಪಾಶದಲ್ಲಿ ಬೀಳಿಸುವಂತಿವೆ. ಬೆಳ್ಳಿಯ ಆಭರಣಕ್ಕೆ ಚಿನ್ನದ ಲೇಪದ ಅಮೂಲ್ಯ ಮಣಿ ಹರಳುಗಳ ಆಭರಣಗಳಿವೆ. ಮುಂಬೈನ ಮಳಿಗೆಯೊಂದು ಸಿಲಿಕಾನ್‌ನ ಅರಳಿದ ಪುಷ್ಪದ ವಿನ್ಯಾಸಕ್ಕೆ ಚಿನ್ನದ ಲೇಪ ಮಾಡಿಟ್ಟು ಕೇವಲ 120 ರೂಪಾಯಿಗೇ ಮಾರುತ್ತಿದೆ. ಇದನ್ನು ಸರದಲ್ಲಿ, ಇಲ್ಲವೆ ಸೀರೆಯ ಪಿನ್ ತರಹ ಬಳಸಬಹುದಾಗಿದ್ದು ಉಡುಗೊರೆ ಕೊಡಲು ಅತ್ಯಂತ ಸೂಕ್ತ. ‘ಆಮ್ರಪಾಲಿ’ ಮಳಿಗೆಯಲ್ಲಿ ಅನನ್ಯ ಗ್ರ್ಯಾನ್ಯುಲೇಶನ್ ಕುಸುರಿಯ ಗುಜರಾತಿ ಬಳೆಗಳಿವೆ. ಲಾಕ್ ಬ್ಯಾಂಗಲ್, ಕಡ, ಭಾರೀ ಆಭರಣಗಳಲ್ಲೆಲ್ಲ ಸಮಕಾಲೀನ, ಆಧುನಿಕ, ಸಾಂಪ್ರದಾಯಿಕ ಎಂದು ಅನೇಕ ಆಯ್ಕೆಗಳಿವೆ.

ಬರಲಿರುವ ಈಸ್ಟರ್, ಮದುವೆ ಸಮಯ ಮತ್ತು ಅಕ್ಷಯ ತೃತೀಯಕ್ಕಾಗೇ ವಿಶೇಷ ನೂತನ ವಿನ್ಯಾಸಗಳು ಸಿದ್ಧವಾಗಿವೆ. ಸಾರ್ವಜನಿಕರು ಮುಂಗಡ ಬುಕಿಂಗ್ ಮಾಡುವ ಸೌಲಭ್ಯವೂ ಇದೆ. 

 ರಾಣಿ ಇಂದ್ರಾಕ್ಷಿ ದೇವಿ, ಬೆಂಗಳೂರು ಜುವೆಲರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಪತಿ ಮಹೇಶ್ , ಕಾರ್ಯದರ್ಶಿ ವೆಂಕಟೇಶ ಬಾಬು, ಆರ್ಟ್ ಆಫ್ ಜುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಸುಮೇಶ್ ವಧೇರಾ ಇತರ ಗಣ್ಯರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.