ADVERTISEMENT

ಬದುಕು ಖುಷಿಯ ಕಣಜ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST
ನಟಿ ಪ್ರಿಯಾಂಕಾ ಉಪೇಂದ್ರ (ಚಿತ್ರ: ಕೆ.ಎನ್.ನಾಗೇಶ್ ಕುಮಾರ್)
ನಟಿ ಪ್ರಿಯಾಂಕಾ ಉಪೇಂದ್ರ (ಚಿತ್ರ: ಕೆ.ಎನ್.ನಾಗೇಶ್ ಕುಮಾರ್)   

ಬದುಕು ನಿಂತಿರುವುದು ಪ್ರೀತಿ, ನಂಬಿಕೆಯ ಮೇಲೆ. ನಂಬಿಕೆ ಕಳೆದುಕೊಂಡರೆ ಜೀವನೋತ್ಸಾಹ ಕಮರಿ ಹೋಗುತ್ತದೆ. ಇರುವಷ್ಟು ದಿನ ನಗುತ್ತಾ, ಖುಷಿ ಹಂಚುತ್ತಾ ಬಾಳಬೇಕು ಎಂದು ನಗುತ್ತಾ ಮಾತನಾಡುತ್ತಾರೆ ‘ಕ್ರೇಜಿಸ್ಟಾರ್‌’ ಸಿನಿಮಾದಲ್ಲಿ ಮಿಂಚಿದ ಪ್ರಿಯಾಂಕಾ ಉಪೇಂದ್ರ.

ಸಿನಿಮಾದಲ್ಲಿ ನಟಿಸುತ್ತಾ, ಇತ್ತ ಗಂಡ, ಮಕ್ಕಳು, ಮನೆ ನೋಡಿಕೊಳ್ಳುತ್ತಾ ತನ್ನ ದೇಹ ಸೌಂದರ್ಯ ಒಂದಿಷ್ಟೂ ಹಾಳಾಗದಂತೆ ಕಾಪಾಡಿಕೊಂಡಿದ್ದಾರೆ ಈ ಬೆಂಗಾಲಿ ಬೆಡಗಿ. ಡಯೆಟ್‌ಗೆ ಮೊರೆಹೋಗದೆ ಇಷ್ಟಪಟ್ಟ ಸಿಹಿ ತಿನಿಸನ್ನು ಮನಸಾರೆ ತಿನ್ನುತ್ತಾರಂತೆ. ಫಿಟ್‌ನೆಸ್‌ ಕಾಯ್ದಿಟ್ಟುಕೊಂಡ ಬಗ್ಗೆ ಬದುಕಿನ ಸಿಹಿ ಕ್ಷಣಗಳನ್ನು ಈ ಬೆಂಗಾಲಿ ವನಿತೆ ಹಂಚಿಕೊಂಡಿದ್ದು ಹೀಗೆ...

ನಿಮ್ಮ ದಿನಚರಿ ಹೇಗಿರುತ್ತದೆ?
ಬೆಳಿಗ್ಗೆ 6.30ಕ್ಕೆ ನನ್ನ ದಿನಚರಿ ಶುರುವಾಗುತ್ತದೆ. ಮಕ್ಕಳನ್ನು ಸ್ಕೂಲ್‌ಗೆ ರೆಡಿ ಮಾಡಿ, ತಿಂಡಿ ತಿನಿಸಿ ಕಳಿಸುವಾಗ ಏಳೂವರೆ ಆಗುತ್ತದೆ. ಮತ್ತೆ ಉಳಿದದ್ದು ನನ್ನ ಸಮಯ. ಒಂದು ಕಪ್‌ ಟೀ ಕುಡಿಯುತ್ತ ಅಂದಿನ ಪೇಪರ್‌ ಮೇಲೆ ಕಣ್ಣಾಡಿಸುತ್ತೇನೆ. ಜಿಮ್‌ಗೆ ಹೋಗುವುದಿಲ್ಲ. ಮನೆಯಲ್ಲಿಯೇ ಮುಕ್ಕಾಲು ಗಂಟೆ ಯೋಗ ಮಾಡುತ್ತೇನೆ. ಹದಿನೈದು ನಿಮಿಷ ಧ್ಯಾನ ಮಾಡುತ್ತೇನೆ. ಇದರಿಂದ ಮನಸ್ಸು ಆಹ್ಲಾದಕರವಾಗಿರುತ್ತದೆ. ಸ್ನಾನ ಮಾಡಿ, ಪೂಜೆ ಮುಗಿಸಿ ತಿಂಡಿ ತಿನ್ನುತ್ತೇನೆ. ಮತ್ತೆ ಮನೆ ಕೆಲಸದ ಕಡೆ, ನನ್ನ ಯೋಜನೆಗಳ ಕಡೆ ಗಮನ ಹರಿಸುತ್ತೇನೆ. ಮತ್ತೆ ಮಕ್ಕಳು ಬರುತ್ತಾರೆ. ಅವರ ಹೋಂವರ್ಕ್‌, ಊಟ ತಿಂಡಿಯಲ್ಲಿ ದಿನ ಕಳೆದುಹೋಗುತ್ತದೆ.

ನಿಮ್ಮ ಸುಂದರ ಮೈಕಟ್ಟಿನ ಗುಟ್ಟೇನು?
ಡಯೆಟ್‌ ಕಡೆ ಒಲವು ತೋರಿಸಿಲ್ಲ. ಎರಡು ಮಕ್ಕಳಾದ ಮೇಲೆ ನಾನು ಸ್ವಲ್ಪ ದಪ್ಪಗಾದೆ. ಹಾಗಂತ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ದೇಹಕ್ಕೆ ಬೇಕಾದ ಅಂಶಗಳನ್ನು ತೆಗೆದುಕೊಳ್ಳಲೇಬೇಕು. ಎಣ್ಣೆ ಪದಾರ್ಥ, ಸಿಹಿ ತಿನಿಸುಗಳ ತಿನ್ನುವುದನ್ನು ಕಡಿಮೆ ಮಾಡಿಕೊಂಡೆ. ಹಬ್ಬ ಹರಿದಿನಗಳ ಸಮಯ ಎಲ್ಲರೂ ಮನೆಗೆ ಕರೆಯುತ್ತಾರೆ. ಸಿಹಿತಿನಿಸುಗಳನ್ನು ಕೊಡುತ್ತಾರೆ. ಆಗ ತಿನ್ನುತ್ತೇನೆ. ನನಗೆ ಸಿಹಿ ಎಂದರೆ ತುಂಬಾ ಇಷ್ಟ. ಇನ್ನು ಚರ್ಮದ ವಿಷಯದಲ್ಲಿ ನಾನು ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ನನ್ನ ಸೌಂದರ್ಯ ತಂದೆ–ತಾಯಿಯಿಂದ ಬಂದ ವರ ಎನ್ನಬಹುದು. ಚೆನ್ನಾಗಿ ನೀರು ಕುಡಿಯುತ್ತೇನೆ. ಸೊಪ್ಪು, ತರಕಾರಿಯನ್ನು ಹೆಚ್ಚು ತಿನ್ನುವುದರಿಂದ ಚರ್ಮ ಮತ್ತು ಕೂದಲು ಚೆನ್ನಾಗಿ ಕಾಣಿಸುತ್ತದೆ.

ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಇರುವುದರಿಂದ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ?
ಎಲ್ಲರ ಬಳಿಯೂ ಸಮಯವಿರುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನನ್ನ ಮತ್ತು ಉಪೇಂದ್ರ ಅವರ ಮಧ್ಯೆ ಸಮಯದ ಅಭಾವ ಎಂದೂ ಕಾಡಿಲ್ಲ. ಮಕ್ಕಳು ನಮ್ಮ ಭವಿಷ್ಯ. ಪಾರ್ಟಿ, ಮೋಜಿಗೆ ನಾವು ಅಷ್ಟಾಗಿ ಹೋಗುವುದಿಲ್ಲ. ಕೆಲಸ ಮುಗಿದ ಮೇಲೆ ಮನೆಗೆ ಬಂದು ಮಕ್ಕಳ ಜೊತೆ ಕಾಲ ಕಳೆಯುತ್ತೇವೆ. ಅವರ ಶಾಲೆಯ ವಿಚಾರ, ಓದಿನ ವಿಚಾರದ ಬಗ್ಗೆ ಕೇಳುತ್ತೇವೆ. ಇದರಿಂದ ಅವರಿಗೂ ಖುಷಿಯಾಗುತ್ತದೆ. ನಾನು ಹೆಚ್ಚು ಪ್ರಾಜೆಕ್ಟ್‌ ಒಪ್ಪಿಕೊಳ್ಳುವುದಿಲ್ಲ. ಏನೇ ಕೆಲಸವಿದ್ದರೂ ಮಕ್ಕಳು ಶಾಲೆಯಿಂದ ಬರುವುದರೊಳಗೆ ನಾನು ಮನೆಯಲ್ಲಿ ಇರುತ್ತೇನೆ. ನನ್ನ ತಾಯಿ, ಅತ್ತೆ, ಮಾವ ಬೆಂಬಲಕ್ಕೆ ಇರುವುದರಿಂದ ನನಗೆ ಜೀವನ ಅಷ್ಟು ಕಷ್ಟ ಅನಿಸಿಲ್ಲ.

ನಿಮ್ಮ ಮತ್ತು ಉಪೇಂದ್ರ ಬಾಂಧವ್ಯದ ಗುಟ್ಟೇನು?
ಗುಟ್ಟೇನೂ ಇಲ್ಲ. ಎಲ್ಲರಂತೆ ನಾವೂ ಇದ್ದೇವೆ. ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಇರುವುದರಿಂದ ಜನರಿಗೆ ಸಹಜವಾದ ಕುತೂಹಲವಿರುತ್ತದೆ. ನಮ್ಮಿಬ್ಬರಿಗೂ ಸರಳವಾದ ಜೀವನ ಇಷ್ಟ. ಮೊದಲ ಬಾರಿ ನಾನು ಅವರನ್ನು ಭೇಟಿಯಾದಾಗ ತುಂಬಾ ಕುತೂಹಲವಿತ್ತು. ಅವರ ‘ಉಪೇಂದ್ರ’ ಸಿನಿಮಾ ನೋಡಿದಾಗ ಈ ಮನುಷ್ಯ ಯಾಕೆ ಈ ರೀತಿ ಬರೆಯುತ್ತಾರೆ ಎಂದೆಲ್ಲಾ ಯೋಚಿಸಿದ್ದೆ. ನಂತರ ನನಗೆ ಅವರ ವ್ಯಕ್ತಿತ್ವ ಅರ್ಥವಾಗುತ್ತಾ ಹೋಯಿತು. ಬದುಕನ್ನು ಅವರು ನೋಡುವ ದೃಷ್ಟಿ ನನಗೆ ಇಷ್ಟವಾಯಿತು. ನನ್ನ ಯಾವ ಕೆಲಸಕ್ಕೂ ಅವರು ಇಲ್ಲ ಎಂದು ಹೇಳಿಲ್ಲ. ಪ್ರೋತ್ಸಾಹ ನೀಡುತ್ತಾರೆ. ಗೆಳೆಯನಂತೆ ಸಲಹೆ ನೀಡುತ್ತಾರೆ.

ಮದುವೆ ನಂತರ ಬರುವ ಪಾತ್ರಗಳಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿತಾ?
ಹಾಗೇನೂ ಇಲ್ಲ. ನನಗೆ ಇಷ್ಟವಾಗುವ ಪಾತ್ರವನ್ನು ಮಾತ್ರ ಮಾಡುತ್ತೇನೆ. ಕತೆ ಕೇಳುತ್ತೇನೆ. ಅದು ನನ್ನಿಂದ ಸಾಧ್ಯ ಅನಿಸಿದರೆ ಮಾಡುತ್ತೇನೆ.

ನಿಮ್ಮ ಖುಷಿಯ ಮಂತ್ರವೇನು?
ಜೀವನದಲ್ಲಿ ಸಿಗುವ ಸಣ್ಣಪುಟ್ಟ ಖುಷಿಗಳನ್ನು ನಾನು ಮಿಸ್‌ ಮಾಡಿಕೊಳ್ಳದೇ ಬಾಚಿಕೊಳ್ಳುತ್ತೇನೆ. ಇವು ನನ್ನಲ್ಲಿ ಮತ್ತಷ್ಟು ಬದುಕುವ ಉತ್ಸಾಹ ತುಂಬುತ್ತದೆ. ಸಿಟ್ಟು ಬರುವುದು ಕಡಿಮೆ. ಬಂದರೂ ನಾನು, ಉಪೇಂದ್ರ ಇಬ್ಬರೂ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಕೋಪದ ಕೈಗೆ ಮನಸ್ಸು ಕೊಡುವುದಿಲ್ಲ.

ಜೀವನದಲ್ಲಿ ತುಂಬಾ ಖುಷಿ ಪಟ್ಟ ಕ್ಷಣ ಯಾವುದು?
ದಿನವೂ ಖುಷಿಯಾಗಿರುತ್ತೇನೆ. ನನ್ನ ಮದುವೆ ದಿನ ಮತ್ತು ಮಕ್ಕಳು ಹುಟ್ಟಿದ ದಿನ ನಾನು ತುಂಬಾ ಖುಷಿಟ್ಟಿದ್ದೆ.

‘ಕ್ರೇಜಿಸ್ಟಾರ್‌’ ಸಿನಿಮಾದಲ್ಲಿನ ಅನುಭವ ಹೇಗಿತ್ತು?
ರವಿ ಸರ್ ಜತೆ ಕೆಲಸ ಮಾಡುವುದೆಂದರೆ ನನಗೂ ಇಷ್ಟ. ಕತೆ ಹೇಳಿದರು. ನಿನ್ನಿಂದ ಇದು ಸಾಧ್ಯ ಎಂದು ಹೇಳಿದರು. ನಾನು ಈ ಪ್ರಯೋಗಕ್ಕೆ ಇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.