ADVERTISEMENT

ಬಾಯಿ ಚಪಲಕ್ಕೆ ಚಟ್‌ಪಟ್ ಚಾಟ್...

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಉತ್ತರ ಭಾರತದ ಮಸಾಲಾಪೂರಿ, ಪಾನಿಪೂರಿ, ದಹಿಪೂರಿ, ಭೇಲ್ ಮುಂತಾದವು ಈಗ ಎಲ್ಲೆಡೆ ಜನಪ್ರಿಯ. ಈ ಚಾಟ್‌ಗಳಿಗೆ ಮನಸೋಲದೇ ಇರುವವರು ಕಡಿಮೆ. ಯುವಜನರಿಗಂತೂ ಇವು ಪಂಚಪ್ರಾಣ. ಎಲ್ಲಾ ಕಾಲದಲ್ಲಿ ಎಲ್ಲಾ ವಯಸ್ಸಿನವರನ್ನೂ ಸೆಳೆಯುತ್ತವೆ.

ಅದರಲ್ಲೂ ಪಾನಿಪುರಿ ಬಗ್ಗೆ ಹೇಳುವಂತೆಯೇ ಇಲ್ಲ. ನಗರದಲ್ಲಂತೂ ರಸ್ತೆ ಉದ್ದಕ್ಕೂ ಹೆಜ್ಜೆ ಹೆಜ್ಜೆಗೆ ಪಾನಿಪುರಿ ಅಂಗಡಿಗಳಿವೆ. ರಸ್ತೆ ಅಂಚಿನಲ್ಲಿ ನಿಂತು ಇದರ ಸವಿ ಸವಿಯುವುದೇ ಒಂದು ರೀತಿಯ ಖುಷಿ ಜತೆಗೆ ಫ್ಯಾಷನ್ ಕೂಡ.ಸಂಜೆಯಾಗುತ್ತಿದ್ದಂತೆ ಶಾಪಿಂಗ್ ಮಾಡಲು ಜನ ಮುಗಿಬೀಳುತ್ತಾರೆ, ಇದರ ನಡುವೆ ರಸ್ತೆ ಬದಿಯಲ್ಲಿನ ಪಾನಿಪುರಿ ಅಂಗಡಿಗಳನ್ನು ಗಮನಿಸದೇ ಇದ್ದರೂ ಅದರ ಸ್ವಾದ, ಪರಿಮಳ ಮಾತ್ರ ಅವರನ್ನು ಮುಂದೆ ಹೋಗಲು ಬಿಡುವುದೇ ಇಲ್ಲ, ಶ್ರೀಮಂತರಿಂದ ಹಿಡಿದು ಸಾಮಾನ್ಯ ವರ್ಗದವರೆಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವುದೇ ಇವುಗಳ ಸ್ಪೆಷಾಲಿಟಿ.

ಪಾನಿಪುರಿ ಮೂಲತಃ ಉತ್ತರ ಭಾರತದ ತಿನಿಸು. ಅದಕ್ಕೆ ಗೋಲ್‌ಗಪ್ಪಾ ಎಂಬ ಇನ್ನೊಂದು ಹೆಸರೂ ಇದೆ. ಆದರೆ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿರುವುದು ಪಾನಿಪುರಿ ಎಂಬ ಹೆಸರಿನಿಂದಲೇ, ಹಾಗೆಯೇ ಅದರ ರುಚಿಗಳಲ್ಲಿಯೂ ಅಲ್ಪ- ಸ್ವಲ್ಪ ವ್ಯತ್ಯಾಸವೂ ಇದೆ.
ಪಾನಿಪುರಿಯ ಜೊತೆಗೆ ಮಸಾಲಾಪುರಿ, ಭೇಲ್, ಸೇವ್‌ಪುರಿಗಳೂ ಸಿಗುತ್ತವೆ. ಕೆಲವು ಕಡೆ ಬರೀ ಪಾನಿಪುರಿ ಮಾತ್ರ ಮಾರುವುದುಂಟು.

ಇತ್ತೀಚೆಗೆ ಇದೂ ಕೂಡ ಬದಲಾವಣೆ ಕಂಡಿದೆ. ನಗರದ ಪ್ರತಿಷ್ಠಿತ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ತಳ್ಳುವ ಗಾಡಿ ಮೇಲೆ ಮಾರುವ ಪಾನಿಪುರಿ ಅಂಗಡಿಗಳು ನೋಡ ಸಿಗುವುದು ವಿರಳ. ಬದಲಾಗಿ ಬಿದಿರಿನ ಸ್ಟಾಂಡ್‌ಗಳ ಮೇಲೆ ಬುಟ್ಟಿ ಇಟ್ಟು ತ್ರಿಕೋನಾಕೃತಿಯಲ್ಲಿ ಪುರಿಗಳನ್ನು ಜೋಡಿಸಿ ಜೊತೆಯಲ್ಲಿ ಪಾನಿ ಮತ್ತು ಉಪ್ಪು, ಹುಳಿ, ಖಾರ, ಸಿಹಿಗಳ ಹದವಾದ ಮಿಶ್ರಣಗಳಿಂದ ಕೂಡಿದ ಆಲೂ ಮಸಾಲೆಯನ್ನು ಇಟ್ಟುಕೊಂಡು ಜನರನ್ನು  ಸೆಳೆಯುವ ರೀತಿಯೇ ವಿಶಿಷ್ಟ.

ದೊಡ್ಡ ದೊಡ್ಡ ಹೋಟೆಲ್‌ಗಳ ಮುಂದೆಯೇ ತಳ್ಳುವ ಗಾಡಿಗಳಲ್ಲಿ ಪಾನಿಪುರಿ ಮಾರುವುದು, ಅದನ್ನು ಜನ ಸವಿಯುವುದು ಈಗ ಹೆಚ್ಚುತ್ತಿದೆ. ಹಿಂದೆಲ್ಲ ರಸ್ತೆ ಬದಿಗಳಲ್ಲಿ ನಿಂತು ತಿನ್ನುವುದು ತಮ್ಮ ಗೌರವ, ಪ್ರತಿಷ್ಠೆಗೆ ಕಡಿಮೆ  ಎಂಬ ಭಾವನೆ ಅನೇಕರಿಗಿತ್ತು. ಆದರೆ ಈಗ ಟ್ರೆಂಡ್ ಬದಲಾಗಿದೆ. ರಸ್ತೆ ಬದಿ ತಿನ್ನುವುದೇ ಒಂದು ಫ್ಯಾಷನ್ ಆಗಿದೆ. ರಸ್ತೆಗಳಲ್ಲಿ ಬೆಲೆಯೂ ಕಡಿಮೆ; ರುಚಿ ಜಾಸ್ತಿ ಎನ್ನುವುದು ಬಹುತೇಕರ ಅಭಿಪ್ರಾಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.