ADVERTISEMENT

ಬಿಎಂಟಿಸಿ ಸೇರಾದರೆ, ಜನ ಸವ್ವಾಸೇರು

ಎನ್‌.ಮಂಜುನಾಥ
Published 24 ಫೆಬ್ರುವರಿ 2015, 19:30 IST
Last Updated 24 ಫೆಬ್ರುವರಿ 2015, 19:30 IST

ಡೀಸೆಲ್‌ ದರ ಹೆಚ್ಚಾದಾಗಲೆಲ್ಲ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತಕ್ಷಣವೇ ಬಸ್‌ ಪ್ರಯಾಣ ದರ ಏರಿಕೆ ಮಾಡುತ್ತದೆ. ಅಲ್ಲದೇ ನೆರೆಯ ರಾಜ್ಯಗಳಿಗೆ ಹೋಲಿಸಿದಲ್ಲಿ ಪ್ರಯಾಣ ದರ ರಾಜ್ಯದಲ್ಲಿ ಹೆಚ್ಚು.

ಕಳೆದ ಕೆಲ ತಿಂಗಳಲ್ಲಿ ಡೀಸೆಲ್‌ ದರ ಗಣನೀಯವಾಗಿ ಇಳಿಕೆಯಾಗಿದೆ. ಆದರೆ, ಜನಸಾಮಾನ್ಯರ ಭಾರಿ ಒತ್ತಾಯದ ಮೇರೆಗೆ ಇತ್ತೀಚಿಗೆ ಬಿಎಂಟಿಸಿ ಬಸ್‌ ಪ್ರಯಾಣ ದರವನ್ನು ಇಳಿಸಿದೆ. ಆದರೆ, ಇದು ಕೂಡ ನಾಮಕಾವಾಸ್ತೆ ಎಂಬಂತಾಗಿದೆ. ಮೊದಲ ಹಂತಕ್ಕೆ ಬಸ್‌ ಪ್ರಯಾಣ ದರವನ್ನು ಪ್ರತಿ ಹಂತಕ್ಕೆ ೬ರಿಂದ ೫ಕ್ಕೆ ಇಳಿಸಿದೆ. ೨೪ ಇದ್ದ ದರವನ್ನು ೨೩ಕ್ಕೆ ಕಡಿತ ಮಾಡಿದೆ. ಇನ್ನುಳಿದಂತೆ ಟಿಕೆಟ್‌ ದರ ಹಾಗೆಯೇ ಇದೆ. ೨೪ ದರ ಕೆಲವೇ ಭಾಗಗಳಿಗೆ ಇದೆ. ಈ ಭಾಗಗಳಲ್ಲಿ ಸಂಚರಿಸುವವರು ಖಂಡಿತವಾಗಿಯೂ ತಿಂಗಳ ಪಾಸ್‌ ಹೊಂದಿರುತ್ತಾರೆ. ಬಿಎಂಟಿಸಿಯ ಈ ನಡೆ ನೋಡಿದರೆ ಇದು ಕೇವಲ ಕಣ್ಣೊರೆಸುವ ತಂತ್ರ ಎಂಬುದು ಗೊತ್ತಾಗುತ್ತದೆ.

ಇದೆ ವೇಳೆ ಕೇವಲ ಎರಡು ಹಂತಗಳಿಗೆ ಪ್ರಯಾಣ ಬೆಳೆಸುವವರು ೧೨ ಪಾವತಿಸುತ್ತಾರೆ. ಇಂತಹವರಿಗೆ ಮಾಸಿಕ ಪಾಸ್‌ ತೆಗೆದುಕೊಳ್ಳುವುದರಿಂದ ಯಾವುದೇ ಉಪಯೋಗವಿಲ್ಲ. ಪ್ರಯಾಣ ದರ ಹೆಚ್ಚಳಕ್ಕೂ ಮುನ್ನ ಈ ಪ್ರಯಾಣಿಕರು ಪ್ರತಿ ಟಿಕೆಟ್‌ಗೆ ೯ ಪಾವತಿಸುತ್ತಿದ್ದರು. ಕೆಲ ದಿನಗಳ ನಂತರ ಇದನ್ನು ೧೦ಕ್ಕೆ ಹೆಚ್ಚಿಸಲಾಯಿತು. ಕೇವಲ ಈ ಟಿಕೆಟ್‌ ದರ ಮಾತ್ರ ಹೆಚ್ಚಳ ಮಾಡಲಾಯಿತು. ಉಳಿದದ್ದು ಹಾಗೆಯೇ ಇತ್ತು. ಎರಡನೇ ಬಾರಿಗೆ ದರ ಹೆಚ್ಚಿಸಿದಾಗ ಎಲ್ಲದರ ಪ್ರಯಾಣ ದರವನ್ನು ೧೨ಕ್ಕೆ ಏರಿಸಲಾಯಿತು. ಕೆಲ ಜಾಣ ಪ್ರಯಾಣಿಕರು ಎರಡು ರೂಪಾಯಿ ಉಳಿಸಲು ಸರಳ ಮಾರ್ಗ ಕಂಡುಕೊಂಡಿದ್ದಾರೆ. ಅದೇನೆಂದರೆ, ಬಿಎಂಟಿಸಿ ಮೊದಲ ಹಂತಕ್ಕೆ ೫ ದರ ನಿಗದಿಪಡಿಸಿದೆ. ಅದೇ ಎರಡನೇ ಹಂತಕ್ಕೆ ೧೨ ಅನ್ವಯಿಸುತ್ತದೆ. ಹೀಗಾಗಿ ಕೆಲವರು ೫ ಪಾವತಿಸಿ ಮೊದಲ ಹಂತಕ್ಕೆ ಟಿಕೆಟ್‌ ಪಡೆಯುತ್ತಾರೆ. ಮೊದಲ ಹಂತ ಬರುತ್ತಿದ್ದಂತೆ ಎರಡನೇ ಹಂತಕ್ಕಾಗಿ ಮತ್ತೆ ೫ ನೀಡಿ ಇನ್ನೊಂದು ಟಿಕೆಟ್‌ ಪಡೆದುಕೊಳ್ಳುತ್ತಾರೆ. ಇದರಿಂದ ಪ್ರತಿ ಪ್ರಯಾಣದ ಸಂದರ್ಭದಲ್ಲಿ ಎರಡು ರೂಪಾಯಿ ಉಳಿತಾಯ ಮಾಡುತ್ತಾರೆ.

ನಿದರ್ಶನಕ್ಕೆ ತೆಗೆದುಕೊಳ್ಳುವುದಾದರೆ, ಒಬ್ಬ ವ್ಯಕ್ತಿ ಸ್ವಸ್ತಿಕ್‌ನಿಂದ ನವರಂಗ್‌ಗೆ ಹೋಗಬೇಕಾದರೆ ೧೨ ಪಾವತಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಹರಿಶ್ಚಂದ್ರ ಘಾಟ್‌ ನಿಲ್ದಾಣ ಮೊದಲ ಹಂತದಲ್ಲಿ ಬರುತ್ತದೆ. ಇದಕ್ಕಾಗಿ ೫ ಪಾವತಿಸಬೇಕಾಗುತ್ತದೆ. ಬಸ್‌ ಹರಿಶ್ಚಂದ್ರ ಘಾಟ್‌ಗೆ ಬರುತ್ತಿದ್ದಂತೆ ಮತ್ತೆ ೫ ನೀಡಿ ನವರಂಗ್‌ಗೆ ಇನ್ನೊಂದು ಟಿಕೆಟ್‌ ಪಡೆದುಕೊಂಡರೆ ಎರಡು ರೂಪಾಯಿ ಉಳಿಸಬಹುದು. ಅಂದರೆ ಎರಡು ಹಂತಗಳಿಗೆ ಸಂಚರಿಸಿದಾಗಲೂ ಕೇವಲ ೧೦ ಮಾತ್ರ ಪಾವತಿಸಬಹುದು. ಇದರಿಂದ ಯಾವುದೇ ನಿಯಮ ಉಲ್ಲಂಘನೆಯಾಗಲಿ ಅಥವಾ ಕಂಡಕ್ಟರ್‌ಗೆ ಲಂಚ ನೀಡಿದಂತಾಗಲಿ ಅಥವಾ ಟಿಕೆಟ್‌ ಇಲ್ಲದೇ ಪ್ರಯಾಣಿಸಿದಂತೆ ಆಗುವುದಿಲ್ಲ.

ಬಸ್‌ಗಳ ಕಳಪೆ ನಿರ್ವಹಣೆ, ದರ ಹೆಚ್ಚಳ, ಬಸ್‌ ತಂಗುದಾಣ ಇಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಜನ ತೊಂದರೆ ಅನುಭವಿಸುತ್ತಿರುವುದನ್ನು ಚೆನ್ನಾಗಿ ಅರಿತಿರುವ ಕಂಡಕ್ಟರ್‌ ಪ್ರಯಾಣಿಕರು ಈ ರೀತಿಯ ಮಾರ್ಗ ಅನುಸರಿಸುತ್ತಿರುವುದು ಗೊತ್ತಿದ್ದರೂ ಅವರೊಂದಿಗೆ ಯಾವುದೇ ತಕರಾರು ಮಾಡಲು ಹೋಗುವುದಿಲ್ಲ.
ಪ್ರತಿ ಸಲ ಬಸ್‌ ಪ್ರಯಾಣ ದರ ಹೆಚ್ಚಿಸುವಾಗ ಬಿಎಮ್‌ಟಿಸಿ, ಡೀಸೆಲ್‌ ದರ ಹೆಚ್ಚಳ, ಸಿಬ್ಬಂದಿಯ ವೇತನದ ಕಾರಣಗಳನ್ನು ಜನರ ಮುಂದಿಡುತ್ತದೆ. ಆದರೆ, ವಾಸ್ತವದಲ್ಲಿ ನೋಡುವುದಾದರೆ ಸಿಬ್ಬಂದಿಯ ವೇತನ ತುಸು ಮಾತ್ರ ಏರಿಕೆಯಾಗಿರುತ್ತದೆ. ಇದರಿಂದ ಸಿಬ್ಬಂದಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿರುತ್ತದೆ.

ಹೀಗಾಗಿಯೇ ಕಂಡಕ್ಟರ್‌ಗಳು ಈ ರೀತಿಯ ವಿಧಾನ/ಮಾರ್ಗಗಳನ್ನು ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತಿಳಿಸುತ್ತಾರೆ. ಪ್ರಯಾಣಿಕರನ್ನು ಚೆನ್ನಾಗಿ ಗುರುತಿಸುವವರಾಗಿದ್ದರೆ ಹೀಗೂ ಹೇಳಿಕೊಡುತ್ತಾರೆ. ಒಂದುವೇಳೆ ಟಿ.ಸಿ ಬಂದು ಒಂದನೇ ಹಂತಕ್ಕಾಗಿ ಪಡೆದಿರುವ ಟಿಕೆಟ್‌ ಜೊತೆ ಹಿಡಿದು ನಿಮ್ಮನ್ನು ಪ್ರಶ್ನಿಸಿದರೆ, ನನಗೆ ಇನ್ನೂ ಮುಂದೆ ಹೋಗಬೇಕಿದೆ. ಹೀಗಾಗಿ ನಾನು ಇನ್ನೊಂದು ಟಿಕೆಟ್‌ ಕೊಳ್ಳುವವನಿದ್ದೆ ಎಂಬುದಾಗಿ ಹೇಳುವಂತೆ ಸೇರಿದಂತೆ ಇತರ ಕಾರಣ ನೀಡುವಂತೆ ತಿಳಿಸುತ್ತಾರೆ.

ಒಂದು ವೇಳೆ ಬಿಎಮ್‌ಟಿಸಿಯ ಉನ್ನತ ಅಧಿಕಾರಿಗಳು ಜಾಣರಾಗಿದ್ದರೆ ಉದ್ಯಾನ ನಗರಿಯ ಜನರು ಅವರಿಗಿಂತ ತುಸು ಹೆಚ್ಚೇ ಹುಷಾರಾಗಿದ್ದಾರೆ. ನಿತ್ಯ ಪ್ರಯಾಣಿಸುವ ಪ್ರಯಾಣಿಕ ಹೋಗುವಾಗ ಮತ್ತು ಬರುವಾಗ ಸೇರಿ ಒಟ್ಟು ೪ ಉಳಿಸಿದರೆ ಆತನ ತಿಂಗಳ ಉಳಿತಾಯದಲ್ಲಿ ದೊಡ್ಡ ಮೊತ್ತ ಉಳಿಸಿದಂತಾಗುವುದಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.