ಬ್ಲಾಗಿಲನು ತೆರೆದು...
`ಬಿಳಿಮುಗಿಲು~- ಎಂಥ ಚಂದದ ಹೆಸರಲ್ಲವೇ? `ಕೈಗೆಟುಕದ ಆಗಸದಲ್ಲಿ ಜೀವಸಾರ ತುಂಬಿಕೊಂಡಂತೆ ಬಿಳಿಮುಗಿಲು. ಬೆಣ್ಣೆಯ ಮುದ್ದೆಗಳಂತೆ, ಹತ್ತಿಯ ಗುಡ್ಡೆಗಳಂತೆ ಬಾನಿಗೆ ಸಿಂಗಾರವೇ ಈ ಮೇಘಗಳು.
ಇವಿಲ್ಲದೆ ಹೋದಲ್ಲಿ ಬಾನಿಗೆಲ್ಲಿ ಆಕಾರ? ಚಿತ್ರ ಬಿಡಿಸುವ ಕಲೆಗಾರರಿಗೆಲ್ಲಿ ರೂಪ? ಕವಿಗಳಿಗೆಲ್ಲಿ ಸ್ಫೂರ್ತಿ~- ಹೀಗೆ ಗಪದ್ಯದ ಪೀಠಿಕೆ ಹಾಕಿರುವ ಬಿಳಿಮುಗಿಲಿನ ಬ್ಲಾಗಿಗರು, `ತಪ್ಪುಗಳಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ~ ಎನ್ನುವ ಅರ್ಥದ ಅಳುಕಿನ ಮಾತನ್ನೂ ಆಡುತ್ತಾರೆ. ಆದರೆ, ಇಲ್ಲಿನ ಬರಹಗಳ ನೋಡಿದರೆ ಅಳುಕಿಗೆ ಅರ್ಥವೇ ಇಲ್ಲ. ಬಿಳಿಮುಗಿಲ bilimugilu.blogspot.in ಸಂಚಾರ ಸುಲಿದ ಬಾಳೆಯ ಹಣ್ಣಿನಂದದಿ ಸರಾಗ, ಸುಲಲಿತ.
ಅನೇಕ ಬ್ಲಾಗಿಗರಂತೆ ತನ್ನ ಪರಿಚಯವನ್ನು ಅಷ್ಟೇನೂ ಬಿಟ್ಟುಕೊಡದ ಈ ಬ್ಲಾಗಿಗರನ್ನು ಅವರ ಪಾಡಿಗೆ ಬಿಟ್ಟು, ಬರಹವೊಂದರ ತುಣುಕಿನ ರುಚಿ ಸವಿಯೋಣ:
ಈ ಕಂಪನಿಯ ಇಂಟರ್‌ವ್ಯೆಗೆ ಬಂದಾಗ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಕೇಳಿದ್ದ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಹೀಗಿತ್ತು- `ಐದು ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿದ್ದು ಈಗ ಬದಲಾಯಿಸಬೇಕೆಂದು ನಿಮಗನಿಸಿದ್ದು ಏಕೆ?~. ಆಲೋಚಿಸಿ ಕೆಲವು ಉತ್ತರ ಕೊಟ್ಟಿದ್ದೆ. ಜೊತೆಗೆ ನನಗರಿವಿಲ್ಲದಂತೆ, `ಸರ್, ಐದು ವರ್ಷಗಳಲ್ಲ, ನನ್ನ ಹಳೆಯ ಎರಡು ಕಂಪನಿಗಳೂ ಸೇರಿ ಸುಮಾರು ಹತ್ತು ವರ್ಷಗಳ ಕಾಲ ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುತ್ತಿದ್ದೇನೆ.
ಬೆಳಗ್ಗೆ ಆರು ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರುವುದು ಸಂಜೆ ಆರೂವರೆಗೆ. ನನ್ನ ಅವಸರದ ಬದುಕಿನ ನಡುವೆ ನನ್ನ ಏಳು ವರ್ಷದ ಮಗಳಿಗೆ ಗಿಡ್ಡವಾಗಿ ಕೂದಲನ್ನ ಕತ್ತರಿಸಿ ಬಾಬ್ ಕಟ್ ಮಾಡಿಸಿದ್ದೇನೆ. ಅವಳಿಗೆ ಎಲ್ಲರಂತೆ ಜಡೆ ಹಾಕಿಕೊಂಡು ಶಾಲೆಗೆ ಹೋಗುವ ಆಸೆ. ನಿಮ್ಮ ಕಂಪೆನಿ ಕೆಲಸದ ವೇಳೆ 9.30ಕ್ಕೆ. ಮಗಳಿಗೆ ಜಡೆ ಹಾಕಿ ಶಾಲೆಗೆ ಕಳಿಸಿ ನಂತರ ಆಫೀಸಿಗೆ ಬರಬಹುದೆಂಬ ಒಂದು ಸಣ್ಣ ಆಸೆ ನನಗೂ ಇದೆ~ ಎಂದಿದ್ದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದರೂ, ಕೆಲಸಕ್ಕೆ ಹತ್ತಿರವಾಗುವಂತೆ ಮನೆಯನ್ನು ಬದಲಾಯಿಸಲು ಸ್ನೇಹಿತರೆಲ್ಲ ಸೂಚಿಸಿದ್ದರೂ ಅದರ ಬಗ್ಗೆ ಕಿಂಚಿತ್ತೂ ಯೋಚಿಸಲಿಲ್ಲ.
ಯಾಕೆಂದರೆ- ವಿಜಯನಗರ ನನಗೆ ಅಚ್ಚುಮೆಚ್ಚು. ಬೆಂಗಳೂರಿನ ನೇಟಿವಿಟಿ ಅಲ್ಪ ಸ್ವಲ್ಪ ಜೀವಂತವಾಗಿದೆಯೆಂದರೆ ಮಲ್ಲೇಶ್ವರಂ, ರಾಜಾಜಿನಗರ, ಬಸವನಗುಡಿ, ವಿಜಯನಗರದ ಆಸುಪಾಸಿನಲ್ಲೇ ಅಂತ ನನ್ನ ಭಾವನೆ. ಇಲ್ಲಿನ ನೆರೆಹೊರೆ, ಗುಡಿಗೋಪುರ, ಆಡುಭಾಷೆ, ಅಂಗಡಿಗಳು, ರಂಗೋಲಿ ಬಿಡಿಸಿದ ರಸ್ತೆಗಳು, ಮನೆಯಂಗಳದಿ ತುಳಸಿ, ಹಬ್ಬ-ಹರಿದಿನಗಳ ವಾತಾವರಣ, ಚೌಕಾಸಿ ವ್ಯಾಪಾರ, ರಸ್ತೆಬದಿಯ ತರಕಾರಿ, ಹೂವು, ಬಜ್ಜಿ ಬೋಂಡ, ಊರದೇವತೆ ಅಣ್ಣಮ್ಮನ ಮೆರವಣಿಗೆ, ಹಿರಿ ಮುತ್ತೈದೆಯರು, ರಾಜ್ಯೋತ್ಸವದಂದು ನಡೆವ ಆರ್ಕೆಸ್ಟ್ರಾಗಳು, ರಾಮನವಮಿಯ ಮಜ್ಜಿಗೆ ಪಾನಕ ಕೋಸಂಬರಿ, ಬೀದಿಯಲ್ಲಿ ಆಡುವ ಮಕ್ಕಳ ಗೋಲಿ-ಲಗೋರಿ... ಹೀಗೆ ನನ್ನೂರು ನನಗಿಷ್ಟ! ಇವೆಲ್ಲವನ್ನೂ ಬಿಟ್ಟು ಹೋಗುವ ಮನಸ್ಸೆಂದೂ ಆಗಲಿಲ್ಲ.
ಮೇಲಿನ ಬರಹದ ಶೀರ್ಷಿಕೆ `ಮಗಳಿಗೆ ಜಡೆ ಹೆಣೆಯಬೇಕಿದೆ~. ಈ ಬರಹ ಓದುತ್ತಾ ಹೋದರೆ ಓಡುನಡಿಗೆಯ ಬದುಕಿನ ನಮ್ಮ ದೈನಿಕಗಳು, ಆ ದೈನಿಕದೊಳಗೆ ಮಸುಕು ಮಸುಕಾಗಿ ಕಾಣಿಸುವ ಸಂಗಾತಿ, ಮಕ್ಕಳು ಕಾಣಿಸುತ್ತಾರಲ್ಲವೇ? ಸ್ಪರ್ಧೆ, ದುಡಿಮೆಯ ಯಂತ್ರಕ್ಕೆ ಸಿಕ್ಕ ನಾವು ಸಂಬಂಧಗಳ ಸಿಹಿಯನ್ನೇ ಕಳೆದುಕೊಳ್ಳುತ್ತಿದ್ದೇವೇನೊ? ಆಧುನಿಕ ಬದುಕಿನ ತಲ್ಲಣಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಚಿತ್ರಿಸುವ `ಬಿಳಿಮುಗಿಲು~ ಬ್ಲಾಗಿಗರು, ತಮ್ಮ ಬರಹದ ಬಗ್ಗೆ ಅಳುಕು ವ್ಯಕ್ತಪಡಿಸಿದರೆ ಅದು ನಂಬುವ ಮಾತೇ?
ಬೆಂಗಳೂರಿನ ಬದುಕಿನ ಬಿಡಿಬಿಡಿ ಚಿತ್ರಗಳಿರುವ ಈ ಬ್ಲಾಗಿನಲ್ಲಿ ಒಂದಷ್ಟು ಕವಿತೆಗಳೂ ಇವೆ. ಆದರೆ ಅವುಗಳಲ್ಲಿ ಕಾವ್ಯಾಂಶ ಕಡಿಮೆ. ಹಾಗೆ ನೋಡಿದರೆ ಇಲ್ಲಿನ ಗದ್ಯವೇ ಒಂದು ಕಾವ್ಯದಂತಿದೆ. ದೈನಿಕದ ಸ್ವಾರಸ್ಯಗಳನ್ನು ಕಥೆ ಹೇಳುವಂತೆ ಓದುಗರಿಗೆ ದಾಟಿಸುವ ಜಾಣ್ಮೆ ಬರಹಗಳಲ್ಲಿದೆ.
ಹೊಸತಾಗಿ ಮದುವೆಯಾದ ತರುಣನೊಬ್ಬ ತನ್ನ ಮನದನ್ನೆಯೊಂದಿಗೆ ಮನಸು ಬಿಚ್ಚಿಕೊಳ್ಳುತ್ತಾ, `ತನಗೆ ಚಿತ್ರನಟಿ ರಕ್ಷಿತಾ ಅಂದ್ರೆ ಇಷ್ಟ~ ಎಂದು ಹೇಳುತ್ತಾನೆ. ಆ ಮಾತು ಹೆಂಡತಿಯ ಮನಸ್ಸಿನಲ್ಲಿ ಉಳಿದುಹೋಗಿ, ಬೇರೆ ಬೇರೆ ರೂಪದಲ್ಲಿ ಅಸಹನೆ ವ್ಯಕ್ತವಾಗುವುದನ್ನು `(ಸು)ರಕ್ಷಿತಾ~ ಬರಹ ಒಳ್ಳೆಯ ವಿನೋದ ಬರಹದಂತಿದೆ.
ಮದುವೆಯ ಹೊಸ್ತಿಲಲ್ಲಿ ನಿಂತ ಹುಡುಗಿಯೊಬ್ಬಳು, ಹುಡುಗನ ಪ್ರವೇಶದ ನಂತರ ತನ್ನ ಬದುಕಿನಲ್ಲಿ ಆಗಬಹುದಾದ ಬದಲಾವಣೆಗಳನ್ನು ಕುರಿತು ಗೆಳತಿಗೆ ಬರೆದಿರುವ ಸೊಗಸಾದ ಪತ್ರರೂಪಿ ಬರಹ- `ಹುಡುಗ ರೆಡಿಯಂತೆ~. ತರುಣಿಯೊಬ್ಬಳ ತಳಮಳಗಳ ಈ ಪತ್ರದಲ್ಲಿ ತಮಾಷೆ, ನವಿರುತನ, ಗಾಂಭೀರ್ಯ, ವಿಷಾದ- ಏನೆಲ್ಲಾ ಇದೆ. ಬಿಳಿಮುಗಿಲೆಂದರೆ ತಮಾಷೇನಾ? ಮುಗಿಲಿಗೆ ಚೌಕಟ್ಟಿಗಳಾದರೂ ಎಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.