ಮಹಾತ್ಮ ಗಾಂಧಿ ರಸ್ತೆಯಲ್ಲಿ ಹಣ್ಣು ಮಾರುವ ಮಹಿಳೆಯ ಬಿದಿರಿನ ಬುಟ್ಟಿಯಲ್ಲಿ ವಾರದಿಂದಲೂ ಹಳ್ಳಿಯ ಹಣ್ಣಿನ ರಾಶಿ ಕಣ್ಣು ಮಿಟುಕಿಸಿ ಕರೆಯುತ್ತಿತ್ತು. ತಿಳಿಗುಲಾಬಿ ಮತ್ತು ತಿಳಿನೇರಳೆ ಬಣ್ಣದವು... ವೇಗದ ನಡಿಗೆಗೂ ಗಕ್ಕನೆ ಬ್ರೇಕು... `ಅದೇನು?~
`ವಿಚ್ ಫ್ರೂಟ್ ಈಸ್ ದಟ್?~ `ವೋ ಕ್ಯಾ ಹೈ...~ ಭಾಷಾವಾರು ಪ್ರಶ್ನೆಗೆ ಭಾಷಾವಾರು ಉತ್ತರ ಕೊಡುತ್ತಾಳೆ... ನಾನು, ನನ್ನೂರಿನ ಹಿತ್ತಲಲ್ಲಿ, ತೋಟದಾಚೆಯ ಗುಡ್ಡೆಯ ಮರಗಳ ಅಂದ ಹೆಚ್ಚಿಸುವ ಈ ಹಣ್ಣು ಸಿಲಿಕಾನ್ ಸಿಟಿಯ ಬೀದಿಯ ಬುಟ್ಟಿಯನ್ನು ಅಲಂಕರಿಸುವ ಬಗೆಯ ಬೆರಗನ್ನು ಮಾತಲ್ಲೇ ತುಂಬಿ ಕೇಳಿದೆ: ಅದ್ಯಾವ ಹಣ್ಣು?
`ಅದೊಂದು ಹಣ್ಣು~ ಮುಗುಮ್ಮಾಗಿ ಉತ್ತರಿಸಿದಳು ಹಣ್ಣಮ್ಮ. ದರ ಎಷ್ಟು? ನೂರಕ್ಕೆ ಇಪ್ಪತ್ತು... ಬಿಸಿಲಿಗೆ ಬಾಡಿದ ಹಣ್ಣುಗಳನ್ನು ಬುಟ್ಟಿಯ ಬುಡಕ್ಕೆ ತಳ್ಳುತ್ತಾ ಹೇಳಿದಳಾಕೆ.
ನೂರು ಗ್ರಾಮ್‌ಗೆ ಎಷ್ಟು ಬರ‌್ತಾವೆ?
ಮೂರೋ ನಾಲ್ಕೋ ಬರ‌್ಬೋದು...
ಅಯ್ಯಮ್ಮ! ಹೌದಾ? ಮೂರ‌್ನಾಲ್ಕು ಹಣ್ಣಿಗೆ ಇಪ್ಪತ್ತು ರೂಪಾಯಿಯಾ ಅಂತ ಹೌಹಾರಿದೆ. ಗೇರುಬೀಜದ `ಪಾಡಿ~ಯಲ್ಲಿ ತರಗೆಲೆಗಳೊಂದಿಗೆ ಮಣ್ಣು ಪಾಲಾಗಿ ಸಾವಯವ ಸತ್ವ ಹೆಚ್ಚಿಸುವ ಈ ಹಣ್ಣುಗಳನ್ನು ತಿನ್ನುವವರು ಬಹಳ ಕಡಿಮೆ.
ಇಷ್ಟಕ್ಕೂ ಅವು ಎಂಥ ಹಣ್ಣುಗಳಂತೀರಿ? ಗೇರುಬೀಜದ ಹಣ್ಣುಗಳು ಮಾರಾಯ್ರೆ. ತುಳುವಿನಲ್ಲಿ ಬೀಜದ ಪರ್‌ಂದ್ (ಬೀಜದ ಹಣ್ಣುಗಳು).
ಹೀಗೆ, ಹಣ್ಣಮ್ಮನ ಕೈಬಿಸುಪಿನಡಿ ಬಿಂಕದಿಂದ ಬುಟ್ಟಿಯಲ್ಲಿ ವಿರಾಜಮಾನವಾಗಿದ್ದ ಈ ಹಣ್ಣುಗಳ ದರ್ಶನವಾಗಿದ್ದೇ ವಿಷು ಸಂಕ್ರಮಣ ಅರ್ಥಾತ್ ಸೌರಮಾನ ಯುಗಾದಿಯ ನೆನಪುಗಳು ಮುತ್ತಿಕುತ್ತವೆ. ಹೌದಲ್ಲ? ಇಂದು ಸೌರಮಾನ ಯುಗಾದಿ.
ಸೂರ್ಯನ ಪಥಚಲನೆಯ ಮೇಲೆ ಲೆಕ್ಕಾಚಾರ ಹಾಕುವ ಮಂದಿಗೆ ಇದೇ ಮೊದಲ ಯುಗಾದಿ, ಹೊಸ ವರ್ಷಾರಂಭದ ದಿನ. ಫ್ಯಾಷನೆಬಲ್ ಆಗಿ `ವಿಷು~ ಅಂತ ವಿಷ್ ಮಾಡಿ ಸುಮ್ಮನಾಗುವ ನಗರದ ಮಂದಿಗೆ ಹಳ್ಳಿ ಯುಗಾದಿಯ ಗಮ್ಮತ್ತು ಗೊತ್ತಿರಬಹುದೇ? ಊಹೂಂ... ನೋ ವೇ...!
ಪಕ್ಕದ ಮನೆಯ ಬ್ರಾಹ್ಮಣರು ಬೆಳಗ್ಗಿನಿಂದಲೇ ತುಪ್ಪದಲ್ಲಿ ಅದೂಇದೂ ಹುರಿದು ಪರಿಸರಕ್ಕೆಲ್ಲ ತುಪ್ಪದ ಗಾಳಿ ತೂರಿ ಚಾಂದ್ರಮಾನ ಯುಗಾದಿಯನ್ನು ಇಷ್ಟಿಷ್ಟೇ ಅಂತ ಸಂಭ್ರಮಿಸ್ತಾರೆ ಅಂತ ನಮಗೆ ಮಕ್ಕಳಿಗಾಗಿ ಅಮ್ಮ ಹೆಸರುಬೇಳೆ ಪಾಯಸ ಮಾಡಿ ಉಣಿಸ್ತಿದ್ರು. ಯಾಕೆಂದರೆ ಕರಾವಳಿ ಮಂದಿಗೆ ಅಸಲಿ ಯುಗಾದಿ ಸೌರಮಾನದ್ದೇ. ನಾವು ಯುಗಾದಿ ಅನ್ನೋದೂ ಸೌರಮಾನವನ್ನೇ. ಆಡುಭಾಷೆಯಲ್ಲಿ ಬಿಸು.
ಬಿಸು ಇನ್ನೆಷ್ಟು ದೂರ ಇನ್ನೆಷ್ಟು ಹತ್ತಿರ ಅಂತ ಬೆರಳು ಮಡಚಿ ಬಿಡಿಸಿ ಲೆಕ್ಕ ಹಾಕುತ್ತಿರುವಾಗಲೇ `ಓ ನಾಳೆ ಬಿಸು~ ಅಂತ ಕುಪ್ಪಳಿಸುತ್ತಿದ್ದೆವು. ಹಳ್ಳಿಯಲ್ಲಿ ಯುಗಾದಿಗೆ ಹೊಸಬಟ್ಟೆ ಕಡ್ಡಾಯವೇನಲ್ಲ. ಉಳ್ಳವರ, ಇಲ್ಲದವರ ಬದುಕಿನ ಗಣಿತ, ಕಾಂಚಾಣದ ಕಾರುಬಾರು ಹೇಗಿರುತ್ತದೋ ಹಾಗೆ ಹಬ್ಬದ ಗ್ರಾಫು ಏರಿಳಿಯುತ್ತದೆ. ಆದರೆ ಮುಂಜಾನೆಯ ಸ್ನಾನ, ದೇವರಮನೆಗೆ ಹೂಸಿಂಗಾರ, ಯಜಮಾನ ಮತ್ತು ಮಕ್ಕಳಾದರೂ ದೇವಸ್ಥಾನಕ್ಕೆ ಹೋಗಿ ಹಣ್ಣುಕಾಯಿ ಪೂಜೆ ಮಾಡಿಸುವುದು, `ಬೀಜದ ಬೊಂಡು~ (ಗೇರುಹಣ್ಣಿನ ಬೀಜ/ಗೋಡಂಬಿ) ಪಾಯಸ ಮಾತ್ರ ತಪ್ಪಿಸುವಂತಿಲ್ಲ. ಈ ಬೀಜದ ಬೊಂಡು ಸಂಗ್ರಹಿಸುವುದು ಮಕ್ಕಳ ಹೊಣೆ.
ಹೇಳಿಕೇಳಿ ಸುಡುಬಿಸಿಲಿನ ಏಪ್ರಿಲ್ ಮಧ್ಯವಾರದಲ್ಲಿ ಬರುತ್ತದೆ ಬಿಸು. ಆಗಷ್ಟೇ ಪರೀಕ್ಷೆಯ ಫಲಿತಾಂಶಗಳು ಬಂದಿರುವುದರಿಂದ ಪಾಸಾದ ಮಕ್ಕಳ ಮನೆಯಲ್ಲಿ ನಿಜದ ಹಬ್ಬ, ಫೇಲಾದವರಿಗೂ ಮನೆಯಲ್ಲೂ ಮೋಡ ಮುಸುಕಿದ ವಾತಾವರಣ. ಪಾಸಾದವರ ಮುಂದೆ ಬೀಜದ ಬೊಂಡು ಸಂಗ್ರಹಿಸಲೂ ಫೇಲಾದವರಿಗೆ ಅಳುಕು. ಅದೇನೇ ಇದ್ದರೂ ಅಂತಹ ಬಿಸಿಲಿಗೆ ಹೊರ ಹೋಗುವುದಾಗಲಿ, ಇಡೀ ವಾತಾವರಣವೇ ಬೇಗೆಗೆ ಬಾಡಿರುವಾಗ ಗೇರುಹಣ್ಣು/ಬಲಿತ ಕಾಯಿ ಕೀಳುವುದು ನಿಷಿದ್ಧ. ಬೀಜ ಕೊಯ್ಯುವುದರಲ್ಲೂ ಎರಡು ಬಗೆ. ಪಾಯಸಕ್ಕಷ್ಟೇ ಬೀಜ ಕೊಯ್ಯುವವರದ್ದು ಒಂದು ಪಡೆ, ಪಾಯಸದ ಹೆಸರಿನಲ್ಲಿ ಬಿಸುವಿನ ಮರುದಿನ ಬೀಜ ಮಾರಿ ದುಡ್ಡು ಮಾಡುವ ದಂಧೆಯವರದ್ದು ಇನ್ನೊಂದು ಪಡೆ. ಎರಡನೇ ಪಡೆಗೆ ಮಟಮಟ ಮಧ್ಯಾಹ್ನವೇ ಆಗಬೇಕು. ಹೇಗಿದ್ದರೂ ಅವು ಸರ್ಕಾರಿ ಮರಗಳು!
ಸಾಮಾನ್ಯವಾಗಿ ಮರ ಹತ್ತುವುದು ಹುಡುಗರ ಕೆಲಸ. ಮರ ಹತ್ತುವ ಹೆಣ್ಣುಮಕ್ಕಳು... ಗಂಡುಬೀರಿಯರು! ಒಂದೇ ಮರಕ್ಕೆ ಅಕ್ಕಪಕ್ಕದ ಮನೆಯ ಮಕ್ಕಳು ಏಕಕಾಲಕ್ಕೆ ಹತ್ತಿ ಬೀಜ ಕೊಯ್ಯಲಾರಂಭಿಸಿದರೆಂದರೆ `ತ್ರಿಶಂಕುಸ್ವರ್ಗ~ದಲ್ಲಿ ಸಣ್ಣ ಜಟಾಪಟಿ ಖಾತರಿ. ಪಾಯಸಕ್ಕೆ ಎಳೆಯ ಬೀಜವೇ ರುಚಿಕರ. ಅಣ್ಣ ಮರದಿಂದ ಕಿತ್ತು ಹಾಕುವ ಬರಿಯ ಬೀಜ ಮತ್ತು ಬೀಜವಿರುವ ಹಣ್ಣಿಗಾಗಿ ಮರದ ಬುಡದಲ್ಲಿ ಹದ್ದಿನಕಣ್ಣಾಗಿ ಕಾದುನಿಂತು ಅದು ನೆಲಕ್ಕೋ, ಪೊದೆಗೋ ಬೀಳುವಷ್ಟರಲ್ಲಿ ಗಬಕ್ಕನೆ ಹಿಡಿದು ಬುಟ್ಟಿಯಲ್ಲಿ ಸಂಗ್ರಹಿಸುವುದು ನನ್ನ ಕೆಲಸ.
ಬಿಸುವಿಗೆ ಕಡಲೆಬೇಳೆ ಪಾಯಸವನ್ನೇ ಮಾಡುವುದು ಸಾಮಾನ್ಯ ಪದ್ಧತಿ. ಒಂದು ಒಲೆಯಲ್ಲಿ ಪಾಕಕ್ಕಾಗಿ ಬೆಲ್ಲ, ಇನ್ನೊಂದು ಒಲೆಯಲ್ಲಿ ಬೇಳೆ ಬೇಯಲು ಇಟ್ಟು ಬೆಳ್ತಿಗೆ ಅಕ್ಕಿ ಮತ್ತು ತೆಂಗಿನಕಾಯಿ ರುಬ್ಬಲು ಅಮ್ಮ ಕೂತರೆಂದರೆ ಅರ್ಧ ಗಂಟೆಯಲ್ಲಿ ಬೀಜ ತಂದು ಅದನ್ನು ಬಿಸಿನೀರಿಗೆ ಹಾಕಿಡುವ ಷರತ್ತು ನನಗೂ ಅಣ್ಣನಿಗೂ ಅನ್ವಯ. ಹಣ್ಣಮ್ಮ ಮಾರಲು ಕೂತಿರುವುದು ಗೇರುಬೀಜದ ಹಣ್ಣುಗಳನ್ನು. ಆದರೆ ಪಾಯಸಕ್ಕೆ ಬೇಕಿರುವುದು ಅರೆಬಲಿತ ಗೇರುಹಣ್ಣು! ತಿಳಿಹಸಿರು ಬಣ್ಣದ ಕಾಯಿಯ ತುದಿಯಲ್ಲಿ `ಫಿಕ್ಸ್~ ಆಗಿರುವ ಬೀಜಕ್ಕೂ ಹಸಿರುಬಣ್ಣ! ಅದನ್ನು ಕತ್ತಿಯಿಂದ ಕಡಿದು ಎರಡು ಸೀಳುಮಾಡಿದರೆ ಒಳಗಿನ ಬೀಜೂ ಎರಡು ಸೀಳು. ಆದರೆ ಈ ಅರೆಬಲಿತ ಬೀಜವನ್ನು ಆವರಿಸಿಕೊಂಡ ಸಣ್ಣ ಪೊರೆ ಬಿಡಿಸಿ ಬರಿಯ ಬೊಂಡು ಕೈಗೆ ಬರಬೇಕಾದರೆ ಕುದಿಯುವ ನೀರಿನಲ್ಲಿ ಹಾಕಬೇಕು. ಪೊರೆ ತೆಗೆದಾಗ ಬೀಜದ ಬೊಂಡು, ಪಾಯಸಕ್ಕೆ ಸಿದ್ಧವಾಯಿತು ಎಂದು ಅರ್ಥ. ಇಷ್ಟು ಕಠಿಣಶ್ರಮ ವಹಿಸಿ ಬೀಜ ಸಂಗ್ರಹಿಸುವ ಮಕ್ಕಳಿಗೆ ಪಾಯಸ ಬಡಿಸುವಾಗ ಕಡಲೆಬೇಳೆಗಿಂತ ಬೀಜದ ಬೊಂಡೇ ತಟ್ಟೆ ತುಂಬಿರುವುದು ಬೋನಸ್! ಉದ್ದನೆ ಸೀಳಿದ ಎಳೆತೊಂಡೆಕಾಯಿ ಒಗ್ಗರಣೆ ಪಲ್ಯಕ್ಕೂ ಬೀಜದ ಬೊಂಡು ಹಾಕಿಬಿಟ್ಟರೆ ಪಲ್ಯದ ರುಚಿ ಮುಪ್ಪಟ್ಟು!
ಬಿಸುವಿನ ಹಿಂದಿನ ದಿನ ಮಕ್ಕಳಿಗೆ ಈ ಕೆಲಸವಾದರೆ, ಕೃಷಿಕರ ಮನೆಯಲ್ಲಿ ಹಿರಿಯರಿಗೆ ಬಿಸು ಕಣಿಗೆ ಹೊಸ ಫಸಲುಗಳನ್ನು ಒಟ್ಟುಮಾಡುವ ಜರೂರತ್ತು. ಹಿತ್ತಲಲ್ಲಿ ಬೆಳೆದ ತರಕಾರಿ, ಹಣ್ಣುಹಂಪಲು, ಗದ್ದೆಯಿಂದ ಭತ್ತದ ಕೊರಳು, ಅಡಿಕೆ ಸಿರಿ, ಬೆಳಗ್ಗೆಯಷ್ಟೇ ಕೊಯ್ದು ತಂದ ಅಡಿಕೆ ಗೊಂಚಲು, ಚಿನ್ನ-ಬೆಳ್ಳಿ ಒಡವೆಗಳು, ಒಂದಷ್ಟು ದುಡ್ಡು...
ಇವಿಷ್ಟನ್ನೂ ಒಪ್ಪವಾಗಿ ಗುಡ್ಡೆಹಾಕಿದರೆ ಅದೇ ಬಿಸುಕಣಿ. ಬೆಳಿಗ್ಗೆ ಎದ್ದ ತಕ್ಷಣ ಕಣಿಯನ್ನೂ, ಅದರಲ್ಲಿಟ್ಟ ಕನ್ನಡಿಯಲ್ಲಿ ತಮ್ಮದೇ ಮುಖವನ್ನೂ ನೋಡುವುದು ಬಿಸುವಿನ ದಿನದ ವಿಶೇಷ. ಕೃಷಿಕರು/ರೈತರ ಮನೆ ಯಜಮಾನ ಮುಂಜಾನೆಯೇ ಸ್ನಾನ ಮಾಡಿ ಕಣಿಗೆ ಪೂಜೆ ಮಾಡಿ ಕನ್ನಡಿಯಲ್ಲಿ ಮುಖ ನೋಡಿಕೊಂಡು, ಭತ್ತದ ಸಿಂಗಾರವನ್ನು ತಲೆಯಲ್ಲಿ ಹೊತ್ತುಕೊಂಡು `ಓ ಪೊಲಿ ಪೊಲಿ ಪೊಲಿ ಪೊಲಿ ಪೊಲಿಯೊಚ್ಚಿ~ ಅಂತ ಮೂರು ಬಾರಿ ಕೂಗಿ ಕೂ ಅಂದು ಕಣಿಗೆ ಪ್ರದಕ್ಷಿಣೆ ಹಾಕಿ ಮನೆ ಮಂದಿಯೆಲ್ಲ ಹಸುವಿನ ಹಸಿಹಾಲು ಕುಡಿದು ಯುಗಾದಿಗೆ ಶುಭಾರಂಭ ಮಾಡುತ್ತಾರೆ.
ಇದು ದಶಕಗಳ ಹಿಂದಿನ ವರ್ಣಮಯ ಲೋಕ.... ಈಗ? ಬೆಂಗಳೂರೆಂಬ ಕಾರ್ಪೊರೇಟ್ ಕಿಂಡಿಯಿಂದ ಹಳ್ಳಿಯ ಕಡೆಗೆ ಹೊರಡುವ ಸರ್ಚ್ ಎಂಜಿನ್‌ಗೂ ಗೇರುಬೀಜದ ಮರಗಳು, ಬಿಸು ಕಣಿಗಳು ಗೋಚರಿಸುವುದಿಲ್ಲ. ತಮಾಷೆಗಾದರೂ ಮರ ಹತ್ತಿ ಬೀಜ ಕೊಯ್ಯೋಣವೆಂದರೆ ಗೇರು ಮರಗಳಿದ್ದ ನೆಲದಲ್ಲಿ ಸೈಟುಗಳು ಬಿಕರಿಯಾಗುತ್ತಿವೆ. ಅಮ್ಮ ಮಾಡುವ ಕಡಲೆಬೇಳೆ ಪಾಯಸವನ್ನು ಪ್ಲಾಸ್ಟಿಕ್ ಪೊಟ್ಟಣದೊಳಗಿನ `ಗೋಡಂಬಿ~ಗಳು ಅಲಂಕರಿಸುತ್ತವೆ. ಯಾವುದೋ ಯಂತ್ರದ ಹೊಟ್ಟೆಯಲ್ಲಿ ಒಣಗಿ, ಸತ್ವ ಬಿಟ್ಟುಕೊಟ್ಟು ಬಂದ ಈ ಗೋಡಂಬಿಗಳಿಗೆ ಆ ಮಣ್ಣಿನ ಘಮಲಿನ ಹಸಿ ರುಚಿ ಎಲ್ಲಿ ಬರಬೇಕು ಹೇಳಿ?
ಆದರೂ ಬಿಸು, ವಿಷುವಿನ ಸಂಭ್ರಮವೆಲ್ಲ ಒಂದೇ... ಅನುಭವಿಸುವ ಮನಸ್ಸುಗಳ ಭಾವ ಬೇರೆ ಬೇರೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.